Viral: 7.3 ಕಿ.ಮೀ ಕ್ರಮಿಸಲು ನನಗೆ 73 ನಿಮಿಷಗಳು ಬೇಕೇ ಬೇಕು; ಇದು ನನ್ನ ದಿನನಿತ್ಯದ ಪಾಡು
ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಟ್ರಾಫಿಕ್‌ನದ್ದೇ ದೊಡ್ಡ ಸಮಸ್ಯೆ. ಬೆಳಗ್ಗೆ ಸಂಜೆ ಹೀಗೆ ಪೀಕ್ ಹವರ್ ನಲ್ಲಿ ನಗರ ವಾಹನಗಳಿಂದ ಗಿಜಿಗುಟ್ಟುತ್ತಿರುತ್ತದೆ. ಒಮ್ಮೆ ಟ್ರಾಫಿಕ್ ನಲ್ಲಿ ಸಿಲುಕಿಕೊಂಡರೇ ಮುಗಿದೇ ಹೋಯ್ತು. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು 7 ಕಿಲೋಮೀಟರ್ ಪ್ರಯಾಣಿಸಲು ತಾನು ತೆಗೆದುಕೊಂಡ ಸಮಯದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗೆಗಿನ ಪೋಸ್ಟ್ ಇಲ್ಲಿದೆ.

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ (Bengaluru) ಬಂದವರಿಗೆ ಹಾಗೂ ಬೆಂಗಳೂರಿನ ನಿವಾಸಿಗಳಿಗೆ ಟ್ರಾಫಿಕ್ ಸಮಸ್ಯೆಗಳಿಗೆ ಹೊಂದಿಕೊಳ್ಳುವುದು ಅನಿವಾರ್ಯ. ಮಾಯನಗರಿ ಬೆಂಗಳೂರಿನಲ್ಲಿ ಮೇಲ್ಸುತುವೆ, ಅಂಡರ್ ಪಾಸ್, ಮೆಟ್ರೋ ರೈಲು ಇದ್ದರೂ ಈ ಸಮಸ್ಯೆ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಜನರು ಕಹಿ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿದೆ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು ಈ ಟ್ರಾಫಿಕ್ ಜಾಮ್‌ನಿಂದಾಗಿ (traffic jam) ತನ್ನ ಸಮಯ ಎಷ್ಟು ವ್ಯರ್ಥವಾಗುತ್ತಿದೆ. ಕೇವಲ 7 ಕಿಲೋಮೀಟರ್ ಪ್ರಯಾಣಿಸಲು ತಾನು 73 ನಿಮಿಷಗಳು ತೆಗೆದುಕೊಂಡೆ. ಇದು ಬಹುತೇಕರ ದಿನನಿತ್ಯ ಪಾಡು ಎನ್ನುತ್ತಾ ಇಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿಸಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇವರ ಮಾತನ್ನು ಒಪ್ಪಿಕೊಂಡಿದ್ದಾರೆ.
@lefttothecentre ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಟ್ರಾಫಿಕ್ ಜಾಮ್‌ನಿಂದ ತನಗೆ ಏನೆಲ್ಲಾ ಸಮಸ್ಯೆಯಾಯಿತು ಎಂದು ಹೇಳಿಕೊಂಡಿದ್ದಾರೆ. ರೆಡ್ಡಿಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಇಂದು ಬೆಳಗ್ಗೆ 7.3 ಕಿ.ಮೀ ಓಡಿಸಲು ನನಗೆ 73 ನಿಮಿಷಗಳು ಬೇಕಾಯ್ತು. ಕಾರು ಲೀಟರ್‌ಗೆ 4.4 ಕಿ.ಮೀ ಮೈಲೇಜ್ ನೀಡಿದೆ. ಇದು ದಿನನಿತ್ಯ ಸಂಭವಿಸುತ್ತದೆ. ಆದರೆ ಅದೇ ರಸ್ತೆ, ಅದೇ ಮಣ್ಣು. ನಾವು ದೇಶದಲ್ಲೇ ಅತಿ ಹೆಚ್ಚು ರಸ್ತೆ ತೆರಿಗೆ ಪಾವತಿಸುತ್ತೇವೆ. ಯಾವುದಕ್ಕಾಗಿ? ಇಂತಹ ಮೂಲಸೌಕರ್ಯಕ್ಕಾಗಿ. ರಸ್ತೆಗಳು ಅಗೆದಂತಿರುತ್ತವೆ. ಯಾವುದೇ ಯೋಜನೆ ಇಲ್ಲ. ಅಗತ್ಯವಿರುವ ಕಡೆ ಸಂಚಾರ ಪೊಲೀಸರಿಲ್ಲ. ಬಿಬಿಎಂಪಿ, ಬಿಟಿಪಿ ಹಾಗೂ ಜವಾಬ್ದಾರಿಯುತವಾಗಿರಬೇಕಾದವರ ನಡುವೆ ಯಾವುದೇ ಸಮನ್ವಯವಿಲ್ಲ. ಮೂಲಭೂತ ವಿಷಯಗಳು ಇಲ್ಲಿ ಕೆಲಸ ಮಾಡುವುದೇ ಇಲ್ಲ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಪಾದಚಾರಿಗಳಿಗೆ ಓಡಾಡಲು ಮಾರ್ಗಗಳು ಹಾಳಾಗಿವೆ. ಲೇನ್ ಗುರುತುಗಳು ಗೋಚರಿಸುವುದಿಲ್ಲ. ಸಿಗ್ನಲ್‌ಗಳು ಸಿಂಕ್ ಆಗಿಲ್ಲ. ಪ್ರತಿಯೊಂದು ಜಂಕ್ಷನ್ ನಲ್ಲಿಯು ಒಂದೊಂದು ರೀತಿಯ ಅಡಚಣೆ. ಅವರು ಏನು ಮಾಡುತ್ತಿದ್ದಾರೆಂದು ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಅವರು ಮೌನವಾಗಿರುವುದರಲ್ಲಿ ನಾನು ಬೇಸತ್ತು ಹೋಗಿದ್ದೇನೆ. ಈ ನಗರವು ತನ್ನ ನಾಗರಿಕರನ್ನು ಎಲ್ಲಾ ತರಹದಲ್ಲೂ ನಿರಾಶೆಗೊಳಿಸುತ್ತಿದೆ. ಕಚೇರಿಯನ್ನು ತಲುಪುವಾಗ ಹಾಗೂ ಮನೆಗೆ ಹಿಂತಿರುವಾಗ ತಮ್ಮ ಅಮೂಲ್ಯ ಕ್ಷಣಗಳನ್ನು ಹೆಚ್ಚಿನವರು ಇಲ್ಲಿಯೇ ಕಳೆಯುತ್ತಿದ್ದಾರೆ. ಇದು ಸರಿಯಲ್ಲ. ನಾವು ಇದರ ಬಗ್ಗೆ ಅಸಡ್ಡೆ ತೋರಬಾರದು. ನಾನು 30 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿಲ್ಲ. ನನ್ನ ಕಚೇರಿಯಿಂದ ಕೇವಲ 10 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿ ವಾಸಿಸುತ್ತೇನೆ. ಇದನ್ನು ಯಾರು ಸರಿಪಡಿಸುತ್ತಾರೆ? ಇವರ ಯೋಜನೆ ಏನು?, ಈ ಬಗ್ಗೆ ಬೇರೆ ಯೋಜನೆ ಏನಾದ್ರು ಇದೆಯೇ? ಎಂದು ಪ್ರಶ್ನೆ ಕೇಳಿದ್ದಾರೆ.
ನಾನು ಇಲ್ಲಿ ಎಕ್ಸ್‌ಪ್ರೆಸ್‌ವೇ ಬೇಕೆಂದು ಕೇಳುತ್ತಿಲ್ಲ. ಆದರೆ ಬೆಳಗ್ಗೆ ಹತ್ತು ಗಂಟೆಯ ಮೊದಲು ನನ್ನ ಮನಸ್ಸು ಹಾಳಾಗದಂತೆ ಹಾಗೂ ನನ್ನ ಇಂಧನ ಟ್ಯಾಂಕ್ ಅರ್ಧ ತುಂಬಿಸದೆ ಸಾಮಾನ್ಯ ವೇಗದಲ್ಲಿ ವಾಹನ ಓಡಿಸಬೇಕೆನ್ನುವುದಿದೆ. ನೀವು ಬಿಬಿಎಂಪಿ ಅಥವಾ ಸಂಚಾರ ಪೊಲೀಸ್ ಅಥವಾ ನಗರ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ ಇದು ನಿಮ್ಮ ಸಮಸ್ಯೆಯಲ್ಲವೇ? ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ, ವರ್ಕ್ ಫ್ರಮ್ ಹೋಮ್ ಆಪ್ಷನ್ ಕೊಡಿ ಎಂದ ಮಹಿಳೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವಾರು ವೀಕ್ಷಣೆಗಳು ಹಾಗೂ ಕಾಮೆಂಟ್‌ಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನನಗೂ ಈ ರೀತಿಯ ಅನುಭವವಾಗಿದೆ. ಇದಕ್ಕೆ ಅಡ್ಜಸ್ಟ್ ಆಗುವುದು ಅನಿವಾರ್ಯ ಎಂದಿದ್ದಾರೆ. ಇನ್ನೊಬ್ಬರು, ಬೆಂಗಳೂರಿನಲ್ಲಿ ಈ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುವುದು ಯಾವಾಗನೋ ತಿಳಿಯದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಜನಸಾಮಾನ್ಯರ ಸಮಸ್ಯೆ ಸರ್ಕಾರಕ್ಕೆ ತಿಳಿಯುವುದಿಲ್ಲ, ನಾವೆಷ್ಟು ಹೇಳಿದ್ರೂ ನಮ್ಮ ಈ ಸಮಸ್ಯೆಯನ್ನು ನಾವೇ ಅನುಭವಿಸಬೇಕು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 am, Sun, 27 July 25








