Viral: 1.5 ಲಕ್ಷ ಮೌಲ್ಯದ ಐಫೋನ್ ಕೊಡಿಸಲು ನಿರಾಕರಿಸಿದ ಪೋಷಕರು; ಮನನೊಂದು ಕೈ ಕೊಯ್ದುಕೊಂಡ 18 ರ ಯುವತಿ
ಈ ಹಿಂದೆ ತಾಯಿ ಐಫೋನ್ ಕೊಡಿಸಿಲ್ಲವೆಂದು ಹದಿಹರೆಯದ ಯುವಕನೊಬ್ಬ ಊಟ ಮಾಡದೆ ಉಪವಾಸ ಕುಳಿತಂತಹ ಘಟನೆ ನಡೆದಿತ್ತು. ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, 18 ರ ಹರೆಯದ ಯುವತಿಯೊಬ್ಬಳು ಪೋಷಕರು ಐಫೋನ್ ಕೊಡಿಸಲಿಲ್ಲವೆಂದು ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. 1.5 ಲಕ್ಷ ಮೌಲ್ಯದ ಐಫೋನ್ ಕೊಡಿಸಲು ಪೋಷಕರು ಒಲ್ಲೆ ಎಂದಿದ್ದು, ಇದರಿಂದ ಕೋಪಗೊಂಡ ಯುವತಿ ಕೈ ಕೊಯ್ದುಕೊಂಡು ಆಸ್ಪತ್ರೆಗೆ ಸೇರಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ದುಬಾರಿ ಬೆಲೆಯ ಐಫೋನ್ (I Phone) ಅಂದ್ರೆ ಸಾಕು ಹೆಚ್ಚಿನವರಿಗೆ ಸಿಕ್ಕಾಪಟ್ಟೆ ಕ್ರೇಜ್ (Craze). ಸಾಲ (Loan) ಮಾಡಿಯಾದ್ರೂ ಈ ದುಬಾರಿ ಫೋನನ್ನು ಖರೀದಿಸುವವರಿದ್ದಾರೆ. ಅಷ್ಟೇ ಯಾಕೆ ಐಫೋನ್ ಖರೀದಿಸಲು ತನ್ನ ಕಿಡ್ನಿಯನ್ನೇ ಮಾರಿದವನ ಕಥೆಯನ್ನು ಕೇಳಿರುತ್ತೀರಿ ಅಲ್ವಾ. ಹೀಗೆ ಕೆಲವರು ಹೇಗಾದ್ರೂ ಸರ್ಕಸ್ ಮಾಡಿ ಐಫೋನ್ ಖರೀದಿ ಮಾಡ್ತಾರೆ. ಆದ್ರೆ ಬಿಹಾರದಲ್ಲೊಂದು (Bihar) ವಿಚಿತ್ರ ಘಟನೆ ನಡೆದಿದ್ದು, ಪೋಷಕರು (Parents) ಐಫೋನ್ ಕೊಡಿಸಿಲ್ಲವೆಂದು 18 ರ ಹರೆಯದ ಯುವತಿಯೊಬ್ಬಳು (Young girl) ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಾಯ್‌ಫ್ರೆಂಡ್ ಜೊತೆ ಮಾತನಾಡುವ ಸಲುವಾಗಿ ಆಕೆ ತನ್ನ ಪೋಷಕರ ಬಳಿ 1.5 ಲಕ್ಷ ಮೌಲ್ಯದ ಐಫೋನ್ ಕೊಡಿಸುವಂತೆ ಕೇಳಿದ್ದು, ಇದಕ್ಕೆ ಒಲ್ಲೆ ಎಂದಿದ್ದಕ್ಕೆ ಆಕೆ ಕೋಪದಲ್ಲಿ ಬ್ಲೇಡ್‌ನಿಂದ ಕೈ ಕೊಯ್ದುಕೊಂಡಿದ್ದಾಳೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ಬಿಹಾರದ ಮುಂಗೇರ್ ಎಂಬಲ್ಲಿ ನಡೆದಿದ್ದು, ತನ್ನ ಹೆತ್ತವರು ದುಬಾರಿ ಬೆಲೆಯ ಐಫೋನ್ ಕೊಡಿಸಲು ನಿರಾಕರಿಸಿದ್ದಕ್ಕೆ ಮನನೊಂದ 18 ವರ್ಷ ವಯಸ್ಸಿನ ಯುವತಿಯೊಬ್ಬಳು ಕೈ ಕೊಯ್ದುಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ :
Daughter Cuts her wrist after her Parents refused to buy IPhone for her: pic.twitter.com/wMk8ALz9RX
— Ghar Ke Kalesh (@gharkekalesh) March 30, 2025
ಇಂಡಿಯಾ ಟುಡೇ ವರದಿಯ ಪ್ರಕಾರ, ಯುವತಿ ತನ್ನ ಬಾಯ್‌ಫ್ರೆಂಡ್ ಜೊತೆ ಮಾತನಾಡುವ ಸಲುವಾಗಿ 1.5 ಲಕ್ಷ ಮೌಲ್ಯದ ಐಫೋನ್ ಕೊಡಿಸುವಂತೆ ಪೋಷಕರ ಬಳಿ ಕೇಳಿದ್ದಳು. ಮೂರು ತಿಂಗಳಿನಿಂದ ಆಕೆ ತನ್ನ ತಾಯಿಯ ಬಳಿ ಫೋನ್ ಕೊಡಿಸಿ ಎಂದು ಪೀಡಿಸುತ್ತಿದ್ದು, ಫೋನ್ ಕೊಡಿಸಿಲ್ಲ ಅಂದ್ರೆ ಬಾಯ್‌ಫ್ರೆಂಡ್ ಜೊತೆ ಓಡಿ ಹೋಗುವುದಾಗಿ ಕೂಡಾ ಹೇಳಿದ್ದಳು. ತಮ್ಮ ಬಳಿ ಅಷ್ಟು ಹಣ ಇಲ್ಲದಿದ್ದ ಕಾರಣ ಪೋಷಕರು ಆಕೆಗೆ ಫೋನ್ ಕೊಡಿಸಲು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಆಕೆ ಕೋಣೆಗೆ ಬೀಗ ಹಾಕಿ ಬ್ಲೇಡ್‌ನಿಂದ ತನ್ನ ಎಡಗೈ ಮಣಿಕಟ್ಟನ್ನು ಕೊಯ್ದುಕೊಂಡಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಬಳಿಕ ಆಕೆ ಇನ್ನು ಮುಂದೆ ಇಂತಹ ಹುಚ್ಚು ಕೆಲಸಗಳನ್ನು ಮಾಡಲ್ಲ ಎಂದು ಭರವಸೆ ನೀಡಿದ್ದಾಳೆ.
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೈ ಕೊಯ್ದುಕೊಂಡು ಆಸ್ಪತ್ರೆಗೆ ದಾಖಲಾದ ಯುವತಿ ನನಗೆ ಜೀವನದಲ್ಲಿ ಬೇರೆ ಯಾವುದೇ ಸಮಸ್ಯೆ ಇಲ್ಲ, ನನಗೆ ದುಬಾರಿ ಬೆಲೆಯ ಐಫೋನ್ ಮಾತ್ರ ಬೇಕು ಅಷ್ಟೆ ಎಂದು ಹೇಳಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ನಾಯಿಯನ್ನು ಮುದ್ದಾಡಲು ಹೋದ ವಾಚ್‌ಮ್ಯಾನ್ ಮೇಲೆ ಏಕಾಏಕಿ ದಾಳಿ ನಡೆಸಿದ ಮತ್ತೊಂದು ಶ್ವಾನ
ಮಾರ್ಚ್ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನಗೆ ಉತ್ತಮ ಸಂಬಳ ಬರುವ ಕೆಲಸವಿದೆ, ಆದ್ರೆ ನನಗೆ ಐಫೋನ್ ಖರೀದಿಸಲು ಸಾಧ್ಯವಾಗುತ್ತಿಲ್ಲʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಂತಹ ಮೂರ್ಖತನ, ಕೆಲವರು ಐಫೋನ್ ಖರೀದಿಸಲು ಆಸ್ತಿ, ಚಿನ್ನವನ್ನೇ ಮಾರುತ್ತಾರೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂದಿನ ಪೀಳಿಗೆ ಸಂಪೂರ್ಣ ಹಾಳಾಗಿ ಹೋಗಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ