ಫಿಲಿಪೈನ್ಸ್ನಲ್ಲಿ ವೃದ್ಧನ ಮನೆಯನ್ನು ಹೆಗಲ ಮೇಲೆ ಹೊತ್ತೊಯ್ದ ವಿಡಿಯೋ ವೈರಲ್
Philippine : ಈ ವೃದ್ಧನ ಹೆಂಡತಿ ತೀರಿ ಹೋಗಿದ್ದಾಳೆ. ಆದರೆ ಈತನಿಗೆ ಮಗ, ಮೊಮ್ಮಕ್ಕಳೊಂದಿಗೆ ವಾಸಿಸಬೇಕು ಎನ್ನಿಸಿದೆ. ನೆರೆಹೊರೆಯವರು ಈತನ ಮನೆಯನ್ನೇ ಹೊತ್ತು ಮಗನ ಮನೆಯ ಬಳಿ ಇರಿಸಿದ್ದಾರೆ. ಹೇಗಿದೆ ಈ ಉಪಾಯ!
Viral : ಹಿರಿಯರಿಗೆ ಕಿರಿಯರ ಆಶ್ರಯ ಬೇಕು. ಕಿರಿಯರಿಗೆ ಹಿರಿಯರ ಆಶ್ರಯ ಬೇಕು. ಕುಟುಂಬ ಎನ್ನುವುದು ಹೀಗೆ ಪರಸ್ಪರ ಸಹಕಾರ, ಸಹಾನುಭೂಮಿಯಿಂದಲೇ ಚೆಂದಗೊಳ್ಳುವುದು. ಆದರೆ ಫಿಲಿಪೈನ್ಸ್ನಲ್ಲಿ ನಡೆದ ಘಟನೆ ಒಂದು ಕ್ಷಣ ವಿಚಿತ್ರ ಎನ್ನಿಸಿದರೂ ವಾಸ್ತವದಲ್ಲಿ ನೋಡಿದಾಗ ಒಳಸತ್ಯ ಅರ್ಥವಾಗುವುದು. ತನ್ನ ಮಗ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸಬೇಕೆಂದು ಇಚ್ಛಿಸಿದ ವಯೋವೃದ್ಧನ ಮನೆಯನ್ನೇ ಹೆಗಲ ಮೇಲೆ ಹೊತ್ತು ವೃದ್ಧನ ಆಸೆ ಈಡೇರಿಸಿದ್ಧಾರೆ ಫಿಲಿಪೈನ್ಸ್‌ನ ಈ ಹಳ್ಳಿಗರು. ಇವರ ಸಹಾನುಭೂತಿಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.
View this post on Instagram
2 ಮಿಲಿಯನ್ ಜನರು ಹೃದಯಸ್ಪರ್ಶಿಯಾದ ಈ ವಿಡಿಯೋ ನೋಡಿದ್ಧಾರೆ. 24 ಜನರು ಫಿಲಿಪೈನ್ಸ್‌ನ ಜಾಂಬೊಂಗಾ ಡೆಲ್ ನಾರ್ಟೆಯ ಕಚ್ಚಾರಸ್ತೆಗುಂಟ ಸುಮಾರು 7 ಅಡಿ ಎತ್ತರದ ಮನೆಯನ್ನು ತಮ್ಮ ಹೆಗಲುಗಳ ಮೇಲೆ ಹೊತ್ತೊಯ್ದು ಸಾಗಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಅನೇಕರು ಇವರ ಈ ಸಾಹಸದ ಕಾರ್ಯಕ್ಕೆ ಹುರುಪು ತುಂಬುತ್ತಿರುವುದನ್ನು ನೋಡಬಹುದು.
ಸುಮಾರು ಎರಡು ಗಂಟೆಗಳೇ ಬೇಕಾದವು ಹೀಗೆ ಈ ಮನೆಯನ್ನು ಸಾಗಿಸಲು. ಸುಲಭವಲ್ಲವಲ್ಲ? ಆಗಾಗ ವಿಶ್ರಾಂತಿ ತೆಗೆದುಕೊಂಡು ಸಾಗಣೆ ಕೆಲಸದಲ್ಲಿ ಇವರು ನಿರತರಾಗುತ್ತಿದ್ದರು. ಈ ವೃದ್ಧನ ಹೆಂಡತಿ ತೀರಿಹೋಗಿದ್ದಾರೆ. ಹಾಗಾಗಿ ಮಗ ಮತ್ತು ಸಂಬಂಧಿಕರು ಈ ವೃದ್ಧನೆಂದರೆ ಭಾರ ಎಂಬಂತೆ ವರ್ತಿಸುತ್ತಿದ್ದರು. ಆದರೆ ವೃದ್ಧನಿಗೆ ತನ್ನ ಮಗ ಮೊಮ್ಮಕ್ಕಳೊಂದಿಗೆ ವಾಸಿಸಬೇಕು ಎನ್ನಿಸುತ್ತಿತ್ತು. ಈತನ ಅಳಲು ಕೇಳಿಸಿಕೊಂಡ ನೆರೆಹೊರೆಯವರು ಹೀಗೊಂದು ಉಪಾಯ ಮಾಡಿ ಯಶಸ್ವಿಯಾದರು. ನಂತರ ವೃದ್ಧ ಇವರೆಲ್ಲರಿಗೂ ಊಟೋಪಚಾರ ಮಾಡಿ ಹಬ್ಬದಂತೆ ಇದನ್ನು ಸಂಭ್ರಮಿಸಿದರು.
ನೆಟ್ಟಿಗರು ಈ ನಡೆಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಹೀಗೆ ಮನೆಯನ್ನೇ ಸಾಗಿಸುವ ದೃಶ್ಯವನ್ನು ಮೊದಲ ಬಾರಿಗೆ ನೋಡುತ್ತಿರುವುದು ಎನ್ನುತ್ತಿದ್ದಾರೆ.
ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 9:22 am, Sat, 3 December 22