ವಿದ್ಯಾರ್ಥಿಗಳಿಗೆ ಭಾವಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮ : ಕೈ ಮುಗಿದು ಮನಸಾರೆ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು, ಪೋಷಕರು
ಬದುಕು ನಿಂತ ನೀರಲ್ಲ, ಸದಾ ಹರಿಯುತ್ತಿರಬೇಕು. ಈ ಮಾತು ಬದುಕಿಗೂ ಅನ್ವಯಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ಹಂತವನ್ನು ದಾಟಲೇಬೇಕು. ಹೀಗೆ ತಮ್ಮ ಮುಂದಿನ ಭವಿಷ್ಯ ಕಟ್ಟಿಕೊಳ್ಳಲು ಕಾಲೇಜು ಶಿಕ್ಷಣ ಪಡೆಯಲು ತೆರೆಳುವ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸುವುದು ಸರ್ವೇ ಸಾಮಾನ್ಯ. ಇದೀಗ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿದ್ದು, ಈ ವಿಡಿಯೋವೊಂದು ವೈರಲ್ ಆಗಿದೆ.

ಪುತ್ತೂರು, ಮಾ 15 : ಶಿಕ್ಷಕ (Teachers) ರೆಂದರೆ ಪಾಠ ಬೋಧಿಸುವವರು ಮಾತ್ರವಲ್ಲ. ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯವನ್ನು ಕಟ್ಟಿಕೊಡುವುದರ ಜೊತೆಗೆ ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು ಇವರಾಗಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆಗೆ ಆತ್ಮೀಯ ಬಾಂಧವ್ಯ ಬೆಸೆದುಕೊಂಡಿರುತ್ತಾರೆ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಮುಂದುವರೆಸಿ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕೆಂದರೆ ಶಾಲೆಗೆ ವಿದಾಯ ಹೇಳಿ ಕಾಲೇಜು ಮೆಟ್ಟಿಲು ಹತ್ತಲೇಬೇಕು. ಈ ಸಂದರ್ಭದಲ್ಲಿ ಹತ್ತನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ (Farewell ceremony) ವನ್ನು ಆಯೋಜಿಸಲಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುತ್ತೂರಿ (Puttur) ನ ವಿವೇಕಾನಂದ ವಿದ್ಯಾಸಂಸ್ಥೆ (Vivekananda Institution) ಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕಾರ್ಯಕ್ರಮವು ಬಹಳಷ್ಟು ಅರ್ಥ ಪೂರ್ಣವಾಗಿತ್ತು. ವಿದಾಯ ಹೇಳುವ ಕ್ಷಣದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ತಿದ್ದಿ ಬುದ್ಧಿ ಹೇಳಿ ಶಿಕ್ಷಣ ಹೇಳಿಕೊಟ್ಟ ಶಿಕ್ಷಕ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಚಿನ್ ಜೈನ್ ಹಳೆಯೂರ್ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯಂದಿರೊಂದಿಗೆ ಈ ಆಗಮಿಸಿರುವುದನ್ನು ಕಾಣಬಹುದು. ವಿಡಿಯೋದ ಪ್ರಾರಂಭದಲ್ಲಿ ಶಾಲಾ ಶಿಕ್ಷಕರೆಲ್ಲರು ವೇದಿಕೆಯ ಮೇಲೆ ನಿಂತಿದ್ದಾರೆ. ವಿದ್ಯಾರ್ಥಿಗಳು ಪೋಷಕರು ತಮ್ಮ ಎರಡು ಕೈಗಳನ್ನು ಜೋಡಿಸಿ ನಿಂತಿದ್ದಾರೆ. ವೇದಿಕೆಯ ಮೇಲೆ ಆಸೀನಾರಾಗಿದ್ದ ಶಾಲಾ ಆಡಳಿತ ಮಂಡಳಿಯ ವ್ಯಕ್ತಿಯೊಬ್ಬರು, ‘ಮನೆಯ ಅಂಗಳ ದಾಟಿ ಶಾಲೆಗೆ ಕಳುಹಿಸಿದ ಮೇಲೆ ನೀವು ಕೊಟ್ಟ ಪ್ರೀತಿಯನ್ನೇ ಈ ಶಾಲೆಯಲ್ಲಿ ಕೊಟ್ಟು ನಿಮ್ಮ ಮಕ್ಕಳನ್ನು ನೋಡಿಕೊಂಡವರು ಈ ಶಿಕ್ಷಕರು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ನಿಸ್ವಾರ್ಥ ಪ್ರೀತಿ ನೀಡಿ ಸಂಸ್ಕಾರ ನೀಡಿ ಮಕ್ಕಳ ಭವಿಷ್ಯಕ್ಕೆ ಒಳ್ಳೆಯ ದಾರಿ ತೋರಿದ್ದಾರೆ. ಇಂತಹ ಸಂಸ್ಥೆಯಲ್ಲಿ ದುಡಿಯುವಂತಹವರು ಆರ್ಥಿಕ ಫಲಾಪೇಕ್ಷೆಯ ನಿರೀಕ್ಷೆಯಲ್ಲಿ ಇರುವುದಿಲ್ಲ. ಸಿಕ್ಕಿದ್ದರಲ್ಲಿ ಸಂತೃಪ್ತಿ ಪಟ್ಟು ಈ ನಾಡಿಗೆ ಆದರ್ಶಪ್ರಾಯರಾಗಿರುವ ಮಕ್ಕಳನ್ನು ನೀಡಬೇಕೆನ್ನುವ ಶಿಕ್ಷಕರು ಈ ವೇದಿಕೆಯ ಮೇಲಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ದುಡಿದಿರುತ್ತಾರೆ. ಬಂಧುಗಳೇ ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿ ನಮ್ಮ ಮಕ್ಕಳಿಗೆ ಇಷ್ಟು ವರ್ಷ ಕೊಟ್ಟಿದ್ದೀರಿ ಒಳ್ಳೆಯ ಭವಿಷ್ಯ ಕೊಟ್ಟಿದ್ದೀರಿ. ಹೀಗಾಗಿ ಅವರಿಗೆ ನಿಮ್ಮ ಮನಸ್ಸುಪೂರ್ವಕ ಕೃತಜ್ಞತೆ ಎಂದು ಸಲ್ಲಿಸಿ’ ಎಂದು ಹೇಳಿದ್ದಾರೆ. ಅವರ ಪ್ರತಿಯೊಂದು ಮಾತುಗಳು ಹೃದಯ ತಟ್ಟಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರು ಕೈ ಮುಗಿದು ಕೃತಜ್ಞತೆ ಸಲ್ಲಿಸುವ ಮೂಲಕ ಕಣ್ಣೀರು ಹಾಕಿರುವುದು ಕಾಣಬಹುದು.
ಈ ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ‘ಈ ನುಡಿಗಳನ್ನು ಕೇಳುವಾಗ ಕಣ್ಣಂಚಿನಲ್ಲಿ ಅರಿಯದೆ ಕಣ್ಣೀರ ಧಾರೆ. ಧನ್ಯ. ಒಬ್ಬ ಶಿಕ್ಷಕಿಯಾಗಿ ಮಕ್ಕಳ ಏಳಿಗೆಯನ್ನು ಹೃದಯಪೂರ್ವಕವಾಗಿ ಬಯಸುತ್ತೇನೆ’ ಎಂದು ಹೇಳಿದ್ದಾರೆ. ಮತ್ತೊಬ್ಬರು, ‘ಇವತ್ತಿನ ಶಿಕ್ಷಣ ವ್ಯವಸ್ಥೆ ಯಲ್ಲಿ ಸಂಸ್ಕಾರದ ಪಾಠ ಇಲ್ಲವಾಗಿದೆ. ಕನಿಷ್ಟ ಇವತ್ತಿನ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ದ ಪ್ರವಚನ, ಪಾಠದ ಅವಶ್ಯಕತೆ ಇದೆ. ವಿವೇಕಾನಂದ ಶಾಲೆಯಲ್ಲಿ ಈ ಕಾರ್ಯಕ್ರಮ ಮಾಡಿಕೊಂಡ ಶಾಲಾ ಆಡಳಿತ ಮಂಡಳಿಗೆ ಅಭಿನಂದನೆ ಹೇಳಲೇಬೇಕು. ಗುರುಭ್ಯೋ ನಮಃ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹನಿಮೂನ್ ನಲ್ಲಿದ್ದಾಗ ಹಡಗು ಮುಳುಗಡೆ, ಒಂದೇ ಒಂದು ಲೈಫ್ ಜಾಕೆಟ್‌ನಿಂದ ಬದುಕುಳಿದ ಬ್ರೆಜಿಲಿಯನ್ ದಂಪತಿಗಳು
ಇನ್ನೊಬ್ಬ ಬಳಕೆದಾರರು, ‘ಮಕ್ಕಳಿಗೆ, ಪಾಲಕ ಪೋಷಕರಿಗೆ ಎಂದೆಂದಿಗೂ ಮರೆಯಲಾರದ ಬೀಳ್ಕೊಡುಗೆ. ಶಿಕ್ಷಕರ ಗೌರವದ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸುವ ಹಾಗೂ ಮಕ್ಕಳಲ್ಲಿ ಉತ್ತಮ ನಡೆ ಹಾಗೂ ನುಡಿಯ ಸಂಸ್ಕಾರದ ಬೀಜವನ್ನು ಬಿತ್ತಿ ತಮ್ಮ ಅಮೋಘ ಭಾಷಣದಿಂದ ನೀರೇರೆದ ಅಮೋಘ ಅತಿಥಿ ಭಾಷಣಕಾರರಿಗೆ ಹೃದಯಪೂರ್ವಕ ನಮನಗಳು. ನಿವೃತ್ತ ಶಿಕ್ಷಕ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




