6 ನಿಮಿಷ ಶೌಚಾಲಯ ಬಳಸಿದ್ದಕ್ಕೆ 800 ರೂ ಶುಲ್ಕ ವಿಧಿಸಿದ ಹೋಟೆಲ್, ತಮಗಾದ ಕಹಿ ಅನುಭವ ಹಂಚಿಕೊಂಡ ಮಹಿಳೆ
ಈಗಿನ ಕಾಲದಲ್ಲಿ ಮಾನವೀಯತೆಗೆ ಬೆಲೆಯಿಲ್ಲ ಎನ್ನುವುದಕ್ಕೆ ಸಾಕ್ಷಿಯೆನ್ನುವಂತಹ ಸಾಕಷ್ಟು ಘಟನೆಗಳನ್ನು ನೋಡಿರುತ್ತೇವೆ. ಇದೀಗ ಮಹಿಳೆಯೊಬ್ಬರು ಹೋಟೆಲ್ ಗೆ ಹೋದಾಗ ಅಲ್ಲಿ ನಡೆದ ಅಹಿತಕರ ಅನುಭವವನ್ನು ಹಂಚಿಕೊಂಡಿದ್ದಾರೆ. ಆರು ನಿಮಿಷಗಳ ಕಾಲ ಹೋಟೆಲ್‌ನ ಶೌಚಾಲಯ ಬಳಸಿದ್ದಕ್ಕಾಗಿ ತನ್ನ ತಾಯಿಗೆ 805 ರೂ. ಶುಲ್ಕ ವಿಧಿಸಲಾಗಿದ್ದು ಎನ್ನುವ ಬಗ್ಗೆ ಪೋಸ್ಟ್ ಮಾಡಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದು ವ್ಯವಹಾರ (bussiness) ದ ಜಗತ್ತು. ಎಲ್ಲವೂ ಕೂಡ ಹಣದ ಮೇಲೆಯೇ ನಿಂತಿದೆ ನೀವು ಬಳಸುವ ಅಥವಾ ಕೊಳ್ಳುವ ವಸ್ತುಗಳಿಗೆ ಪೈಸೆ ಪೈಸೆ ಹಣವನ್ನು ಪಾವತಿಸಲೇ ಬೇಕು. ಕೆಲವೊಮ್ಮೆ ಕೈಯಲ್ಲಿ ಹಣವಿಲ್ಲದೇ ವಸ್ತುಗಳನ್ನು ಕೊಂಡುಕೊಳ್ಳಲು ಹಿಂದೆ ಮುಂದೆ ಯೋಚಿಸಿರಬಹುದು. ಆದರೆ ಇದೀಗ ಮಹಿಳೆಯೊಬ್ಬರು ವ್ಯವಹಾರದ ಜಗತ್ತಿನಲ್ಲಿ ಮಾನವೀಯತೆಗೆ ಜಾಗವೇ ಇಲ್ಲ ಎನ್ನುವುದನ್ನು ತಾವು ಮಾಡಿದ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಹೌದು, ರಾಜಸ್ಥಾನದ ಖಾತು ಶ್ಯಾಮ್ ದೇವಸ್ಥಾನ (Khatu Shyam Temple in Rajasthan)ದ ಬಳಿಯಿರುವ ಹೋಟೆಲ್‌ನಲ್ಲಿ, ಕೇವಲ ಆರು ನಿಮಿಷಗಳ ಕಾಲ ನನ್ನ ತಾಯಿ ಶೌಚಾಲಯ ಬಳಸಿದ್ದಾರೆ. ಆದರೆ 800 ರೂ. ಶುಲ್ಕ ವಿಧಿಸಿದೆ ಎಂದು ತಮಗಾದ ಕಹಿ ಅನುಭವವನ್ನು ಲಿಂಕ್ಡ್ ಇನ್ (linked in) ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರrರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
Megha upadhyay ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದರಲ್ಲಿ ಮಹಿಳೆಯೊಬ್ಬರು ತಮಗಾದ ಕಹಿ ಅನುಭವವನ್ನು ವಿವರವಾಗಿ ಬರೆದುಕೊಂಡಿರುವುದನ್ನು ಕಾಣಬಹುದು. ಪೋಸ್ಟ್ ನಲ್ಲಿ, ‘ನನ್ನ ತಾಯಿಯ ಆಸೆಯಂತೆ ರಾಜಸ್ಥಾನದ ಪ್ರಸಿದ್ಧ ದೇವಾಲಯಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದೆವು. ಅಲ್ಲಿ ಎರಡು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹಿಂತಿರುಗುವಾಗ ದಾರಿಯ ಮಧ್ಯದಲ್ಲಿ ನನ್ನ ತಾಯಿ ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ವಾಕರಿಕೆ, ಹೊಟ್ಟೆ ನೋವು ಹಾಗೂ ವಾಂತಿ ಶುರುವಾಯಿತು. ಆ ವೇಳೆಯಲ್ಲಿ ಅಲ್ಲಿಯೇ ಸುತ್ತ ಮುತ್ತಲೂ ಶೌಚಾಲಯಕ್ಕಾಗಿ ಹುಡುಕಿದೆವು. ಆದರೆ ಒಂದು ಶೌಚಾಲಯವು ಸ್ವಚ್ಛವಾಗಿರಲಿಲ್ಲ. ಹೀಗಾಗಿ ದೇವಸ್ಥಾನದ ಒಂದು ಕಿಮೀ ಸುತ್ತಲಿನಲ್ಲಿ ಒಂದೇ ಒಂದು ಶೌಚಾಲಯವಿರಲಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ನನ್ನ ತಾಯಿಗೆ ನಿಲ್ಲಲು ಸಾಧ್ಯವಾಗದಂತಾಗಿತ್ತು.
ಈ ವೇಳೆಯಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಹೋಟೆಲ್‌ಗೆ ಹೋಗಿ ನಮಗೆ ರೂಮ್ ಬೇಡ, ಐದು ಹತ್ತು ನಿಮಿಷಗಳ ಕಾಲ ಶೌಚಾಲಯ ಮಾತ್ರ ಅಗತ್ಯವಿದೆ ದಯವಿಟ್ಟು ಕೊಡಿ ಎಂದು ಕೇಳಿಕೊಂಡೆವು. ಆಕೆಯನ್ನು ನೋಡಿದ ಹೋಟೆಲ್ ಸಿಬ್ಬಂದಿಯೂ ಇದಕ್ಕೆ ಒಪ್ಪಿತು. ಆ ಬಳಿಕ ಬಿಲ್ ಕೊಡಲು ಕೇಳಿದ್ದಕ್ಕೆ ನನ್ನ ಜೊತೆಗೆ ಏರುಧ್ವನಿಯಲ್ಲಿ ಮಾತನಾಡಲು ಶುರು ಮಾಡಿದರು. ನೂರು ರೂಪಾಯಿ ಕೊಡಿ ಬಿಲ್ ಕೊಡುವೆ ಎಂದರು.
ಕೊನೆಗೆ ಬಿಲ್ ಕೊಟ್ಟರಾದರೂ, ಆರು ನಿಮಿಷಗಳ ಶೌಚಾಲಯ ಬಳಸಿದ್ದಕ್ಕೆ 800 ರೂ ಶುಲ್ಕ ವಿಧಿಸಿದ್ದನ್ನು ನೋಡಿ ಶಾಕ್ ಆಯಿತು. ಅದಲ್ಲದೇ ಈ ಹೋಟೆಲ್ ಸಿಬ್ಬಂದಿಗಳಲ್ಲಿ ಶುಲ್ಕದ ಕೇಳಿಕೊಂಡರೂ ಮಾನವೀಯತೆ ತೋರಲೇ ಇಲ್ಲ. ಅಷ್ಟು ಮೊತ್ತವನ್ನು ಪಾವತಿಸುವಂತೆ ಹೇಳಿದರು. ಕೊನೆಗೆ ನನ್ನ ತಂದೆ 805 ರೂ. ಬಿಲ್ ಹಣ ಕಟ್ಟಿದರು, ಆ ಬಳಿಕ ಅಲ್ಲಿಂದ ಹೊರಟೆವು. ಆದರೆ, ಆರು ನಿಮಿಷಗಳ ಕಾಲ ಶೌಚಾಲಯ ಬಳಸಿದ್ದಕ್ಕಾಗಿ 805 ರೂ. ನಾನು ಈ ಬಗ್ಗೆ ಸಹಾನುಭೂತಿಗಾಗಿ ಬರೆಯುತ್ತಿಲ್ಲ.
ನಾನು ಇನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಇದನ್ನು ಬರೆಯುತ್ತಿದ್ದೇನೆ. ನೋವಿನಲ್ಲಿರುವ ಮಹಿಳೆಯನ್ನು ಯಾರಾದರೂ ಹೇಗೆ ನೋಡಬಹುದೇ? ಇದೆನಾ ಮೂಲಭೂತ ಮಾನವೀಯತೆಗೆ ಕೊಡುವ ಬೆಲೆಯೇ? ನಾವು ಏನಾಗಿದ್ದೇವೆ? ನಾವು ಮನುಷ್ಯರಾಗಿ ಪ್ರಗತಿ ಹೊಂದುತ್ತಿದ್ದೇವೆಯೇ? ಅಥವಾ ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದೇವೆಯೇ?’ ಎಂದು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಎಂಟು ನೂರಕ್ಕೂ ಹೆಚ್ಚು ಕಾಮೆಂಟ್ ಗಳು ಬಂದಿವೆ. ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಇದು ಮಾನವೀಯತೆ ಇಲ್ಲದ ಪ್ರಪಂಚ, ಇಲ್ಲಿ ಮನುಷ್ಯರಿಗಿಂತ ದುಡ್ಡಿಗೆ ಬೆಲೆ ಎಂದಿದ್ದಾರೆ.
ಇದನ್ನೂ ಓದಿ : ಚಿನ್ನ ಕರಗಿಸಿ ಹಣವನ್ನು ನೇರ ಖಾತೆಗೆ ಜಮಾ ಮಾಡುತ್ತೆ ಗೋಲ್ಡ್ ಎಟಿಎಂ ಮೆಷಿನ್
ಮತ್ತೊಬ್ಬರು, ದೊಡ್ಡ ದೊಡ್ಡ ಹೋಟೆಲ್ ಹೆಚ್ಚುವರಿ ಶುಲ್ಕ ವಿಧಿಸಿ ಜನರಿಂದ ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿದೆ. ಆದರೆ ಈ ಬಗ್ಗೆ ಯಾರು ಕೂಡ ಧ್ವನಿ ಎತ್ತುವುದೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ರೀತಿ ಅನುಭವ ನನಗೂ ಕೂಡ ಆಗಿದೆ. ಆದರೆ ಕೆಲವೊಮ್ಮೆ ಹೆಚ್ಚುವರಿ ಹಣ ಪಾವತಿಸಿ ಹೋಟೆಲ್ ನಲ್ಲಿ ಇರುವುದು ಅನಿವಾರ್ಯ ಎಂದಿದ್ದಾರೆ. ಇನ್ನು ಕೆಲವರು ಈ ಹೋಟೆಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








