ಗಿಳಿಗಳನ್ನು ಬುದ್ಧಿವಂತ ಪಕ್ಷಿ ಎಂದು ಕರೆಯಲಾಗುತ್ತದೆ. ನೋಡುವುದಕ್ಕೂ ಬಹಳ ಸುಂದರವಾಗಿರುವ ಈ ಪಕ್ಷಿಗಳು ಮನುಷ್ಯರನ್ನು ಅನುಕರಿಸುವುದರಲ್ಲೂ ಬಲು ಹುಷಾರು. ಹೌದು ಪ್ರಯತ್ನಪಟ್ಟರೆ ಅವುಗಳು ಮನುಷ್ಯರಂತೆ ಮಾತನಾಡಲು ಸಹ ಕಲಿಯುತ್ತವೆ. ಹೀಗೆ ಗಿಣಿಗಳು ಮನುಷ್ಯರಂತೆ ಮಾತನಾಡುವುದು, ಮನುಷ್ಯರನ್ನು ಅನುಕರಿಸುವುದನ್ನು ನೀವೆಲ್ಲರೂ ನೋಡಿರುತ್ತೀರಿ ಅಲ್ವಾ. ಆದ್ರೆ ನೀವೆಂದಾದರೂ ಈ ಗಿಳಿಗಳು ದಂತ ವೈದ್ಯರಂತೆ ಹಲ್ಲುಗಳನ್ನು ಕೀಳುವ ದೃಶ್ಯವನ್ನು ನೋಡಿದ್ದೀರಾ? ಈ ಕುರಿತ ಹಾಸ್ಯಮಯ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜಾಣ ಗಿಣಿಯ ಬುದ್ಧಿವಂತಿಕೆಯನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಸಾಮಾನ್ಯವಾಗಿ ಹಾಲು ಹಲ್ಲು ಎಂದು ಕರೆಯಲ್ಪಡುವ ಎಳೆ ಹಲ್ಲುಗಳು ಮಕ್ಕಳು 5 ರಿಂದ 6 ವಯಸ್ಸಿಗೆ ಬರುತ್ತಿರುವಂತೆ ಬಿದ್ದು ಶಾಶ್ವತ ಹಲ್ಲುಗಳು ಮೂಡಲು ಶುರುವಾಗುತ್ತದೆ. ಆದರೆ ಈ ಅಲುಗಾಡುತ್ತಿರುವ ಹಾಲು ಹಲ್ಲುಗಳನ್ನು ಕೀಳಲು ಬಿಡದೆ ಮಕ್ಕಳು ಸಿಕ್ಕಾಪಟ್ಟೆ ಹಠ ಮಾಡ್ತಾರೆ. ಅಲ್ಲದೆ ಭಯಪಟ್ಟು ಹಲ್ಲು ಕೀಳ್ಬೇಡಮ್ಮ ಎಂದು ಗಳಗಳನೇ ಅತ್ತು ಬಿಡ್ತಾರೆ. ಇದೇ ರೀತಿ ಹಲ್ಲು ಕೀಳಲು ಹಠ ಮಾಡುತ್ತಿದ್ದ ಬಾಲಕನೊಬ್ಬನ ಹಲ್ಲನ್ನು ಗಿಳಿಯೊಂದು ವೃತ್ತಿಪರ ದಂತ ವೈದ್ಯರಿಗೆ ನಾನೇನು ಕಮ್ಮಿಯಿಲ್ಲ ಎಂಬಂತೆ ಕಿತ್ತಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
@ntv7malaysia ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಮಲ್ಟಿಟ್ಯಾಲೆಂಟೆಡ್ ಗಿಳಿರಾಯ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಬಾಲಕನೊಬ್ಬ ಅಯ್ಯೋ ಅಮ್ಮ ಬೇಡಮ್ಮಾ ನನ್ಗೆ ಸಿಕ್ಕಾಪಟ್ಟೆ ಭಯ ಆಗ್ತಿದೆ, ಹಲ್ಲು ಕೀಳ್ಬೇಡ ಕಣಮ್ಮಾ ಎಂದು ಭಯಪಟ್ಟು ನಿಂತಿರುವುದನ್ನು ಕಾಣಬಹುದು. ಆ ಸಂದರ್ಭದಲ್ಲಿ ಬುದ್ಧಿವಂತ ಸಾಕು ಗಿಳಿಯೊಂದು ವೃತ್ತಿಪರ ವೈದ್ಯರಂತೆ ಪುಟ್ಟ ಬಾಲಕನ ಹಾಲು ಹಲ್ಲನ್ನು ಸಲೀಸಾಗಿ ಕಿತ್ತಿದೆ.
ಇದನ್ನೂ ಓದಿ: ತಮ್ಮನಿಗೆ ಲಾಲಿ ಹಾಡುತ್ತಾ ಪುಟ್ಟ ಕೈಗಳಿಂದ ತೊಟ್ಟಿಲು ತೂಗಿದ ಧ್ರುವ ಸರ್ಜಾ ಪುತ್ರಿ
ಫೆಬ್ರವರಿ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 36.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಆರುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ತರಹೇವಾರಿ ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇದು ಗಿಳಿಯಲ್ಲ ದಂತ ವೈದ್ಯʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇನ್ನು ಮುಂದೆ ಈ ಗಿಳಿರಾಯ ಇರುವಾಗ ನಮ್ಗೆ ಯಾವ ಡೆಂಟಿಸ್ಟ್ಗಳ ಅವಶ್ಯಕತೆಯೂ ಇಲ್ಲʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಈ ದೃಶ್ಯವಂತೂ ತುಂಬಾನೇ ಮುದ್ದಾಗಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಗಿಳಿರಾಯ ಬಾಲಕನ ಹಲ್ಲು ಕೀಳುವ ದೃಶ್ಯವನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Sun, 3 March 24