Video: ಯಕ್ಷಗಾನಕ್ಕೂ ಬಂದ ಬಾವ, ಹೇಗಿದೆ ನೋಡಿ ಕಲಾವಿದರ ಸಂಭಾಷಣೆ
ಸು ಫ್ರಮ್ ಸೋ ಸಿನಿಮಾದ ಬಂದರೋ ಬಂದರೋ ಬಾವ ಬಂದರು ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎಲ್ಲರ ಬಾಯಲ್ಲಿ ಬಾವ ಬಂದದ್ದೇ ಸುದ್ದಿ. ಇದೀಗ ಯಕ್ಷಗಾನಕ್ಕೂ ಬಾವ ಬಂದರು ಹಾಡು ಲಗ್ಗೆ ಇಟ್ಟಿದೆ. ಹೌದು ಕಲಾವಿದರೊಬ್ಬರು ಯಕ್ಷರಂಗದಲ್ಲಿ ಬಾವ ಬಂದರು ಹಾಡನ್ನು ಹಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕರಾವಳಿ ಗಂಡು ಕಲೆಯೆಂದೇ ಪ್ರಸಿದ್ಧವಾಗಿರುವ ಯಕ್ಷಗಾನವನ್ನು (Yakshagana) ನೋಡುವುದೇ ಚಂದ. ಭಾಗವತಿಕೆ ಹಾಡಿಗೆ ಕಲಾವಿದರ ಹೆಜ್ಜೆಗಾರಿಕೆ ಅಲ್ಲಲ್ಲಿ ತಮಾಷೆಭರಿತವಾದ ಸಂಭಾಷಣೆಗಳು. ಹೀಗಾಗಿ ಯಕ್ಷಗಾನವು ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಯಕ್ಷಗಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪೌರಾಣಿಕ ಪ್ರಸಂಗದ ನಡುವೆ ಪ್ರಸಕ್ತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳು ಹಾಗೂ ಹೈಪ್ ಸೃಷ್ಟಿರುವ ಸಿನಿಮಾದ ಹಾಡುಗಳನ್ನು ಕಲಾವಿದರು (Artist) ಸಂಭಾಷಣೆಯ ನಡುವೆ ಸೇರಿಸಿಕೊಂಡು ವೀಕ್ಷಕ ವರ್ಗವನ್ನು ರಂಜಿಸುವ ಪ್ರಯತ್ನದಲ್ಲಿದ್ದಾರೆ. ಇದೀಗ ಸ್ರುಫ್ರಮ್ ಸೋ ಸಿನಿಮಾದ ಬಂದರೋ ಬಂದರೋ ಬಾವ ಬಂದರು ಹಾಡು ಯಕ್ಷರಂಗಕ್ಕೆ ಕಾಲಿಟ್ಟಿದೆ. ಕಲಾವಿದರೊಬ್ಬರು ವೇದಿಕೆಯ ಮೇಲೆ ಬಾವ ಬಂದರು ಹಾಡು ಹಾಡುತ್ತಾ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರ ಗಮನ ಸೆಳೆದಿದೆ.
Vijay Kumar Yalanthur ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯಕ್ಷಗಾನದಲ್ಲಿ ಬಾವ ಬಂದರು ಹಾಡಿನ ಹವಾ ಹೇಗಿದೆ ಎನ್ನುವುದನ್ನು ನೋಡಬಹುದು. ರಂಗದ ಮೇಲೆ ಕಲಾವಿದರಿಬ್ಬರ ಸಂಭಾಷಣೆಯೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ. ನಾವು ಬಂದದ್ದೆಲ್ಲಿಗೆ, ಅಕ್ಕನ ಅಂತಪುರಕ್ಕೆ. ನಮ್ಮ ಸ್ವಾಗತಿಸುವುದಕ್ಕೆ ಎಷ್ಟೆಲ್ಲಾ ಮಂದಿ ಕೂಡಿದ್ದಾರೆ. ಮೇಲಿಂದ ನೋಡು ನಮಗೆ ಹೂವಿನ ಸ್ವಾಗತ ಎಂದು ಕಲಾವಿದರೊಬ್ಬರು ಸಂಭಾಷಣೆಯನ್ನು ಶುರು ಮಾಡುತ್ತಿದ್ದರೆ, ಮತ್ತೊಬ್ಬ ಕಲಾವಿದ ಬಂದರೋ ಬಂದರೋ ಬಾವ ಬಂದರು ಎಂದು ಹಾಡುತ್ತಿರುವುದನ್ನು ನೀವಿಲ್ಲಿ ಕಾಣಬಹುದು. ಅಲ್ಲಿಂದ ಬಾವ ಬಂದರು ಎಂದು ಬೊಬ್ಬೆ ಹಾಕುವುದು ನೋಡಿ ಎಂದು ಕಲಾವಿದರು ಸಿನಿಮಾದ ಹಾಡನ್ನು ತಮಾಷೆಯಾಗಿ ಸಂಭಾಷಣೆಯಲ್ಲಿ ಸೇರಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:Video: ಯುವತಿಯ ಚಿತ್ರ ಬರೆದ ಯುವಕಲಾವಿದ, ನೇಲ್ ಆರ್ಟಿಸ್ಟ್ ರಿಯಾಕ್ಷನ್ಗೆ ಮನಸೋತ ಯುವಕ
ಈ ವಿಡಿಯೋ 2.2 ಕೆ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಯಕ್ಷಗಾನ ಪ್ರಸಂಗದ ಸಂಭಾಷಣೆಯ ನಡುವೆ ಸಿನಿಮಾದ ಹಾಡನ್ನು ತರುವುದು ಸರಿಯಲ್ಲ ಎಂದಿದ್ದಾರೆ. ಒಬ್ಬ ಬಳಕೆದಾರರು, ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಯಾವ ಪ್ರಸಂಗ ಎಂದು ಕೇಳಿದ್ದಾರೆ. ಇಷ್ಟೊಂದು ಜ್ಞಾನವನ್ನು ಪಡೆದು ಆ ಸಿನಿಮಾವನ್ನು ಯಕ್ಷಗಾನಕ್ಕೆ ತರ್ತಿರಲ್ಲ, ಯಕ್ಷಗಾನಕ್ಕೆ ಅಪಹಾಸ್ಯ ಇದು. ಯಕ್ಷಗಾನದ ಪಾವಿತ್ರ್ಯತೆ ಯಕ್ಷಗಾನ ಕಲಾವಿದರಿಗೆ ಅರಿಯದ್ದೇ ಹೋದದ್ದು ಮಾತ್ರ ದುರದೃಷ್ಟಕರವಾದ ವಿಷಯ. ಸಾಮಾಜಿಕ ಪ್ರಸಂಗಗಳಲ್ಲಿ ಇಂತಹ ಹಾಸ್ಯಗಳು ಬೇಡ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Tue, 5 August 25








