ಎಂಟು ತಾಸಿನ ವಿಮಾನ ಪ್ರಯಾಣದಲ್ಲಿ ಈ ಮಗು ಅವರಿಗೆಲ್ಲ ದುಃಸ್ವಪ್ನದಂತೆ ಕಾಡಿತೆ?
Flight Journey : ಅಷ್ಟು ದೀರ್ಘಪ್ರಯಾಣ ದೊಡ್ಡವರಿಗೇ ಕಷ್ಟ. ಇನ್ನು ಮಗುವಿಗೆ? ಪಾಪ ಮಗುವಿನದೇನು ತಪ್ಪು ಎಂದಿದ್ದಾರೆ ಕೆಲವರು. ಇನ್ನುಳಿದವರು ಪೋಷಕರನ್ನು ಹೀಗಳೆದಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
Viral Video : ‘ದುಃಸ್ವಪ್ನ’ ಮಗುವಿನ ವಿಷಯವಾಗಿ ಹೀಗೆ ಹೇಳುವುದು ಕೂಡ ಅಸೂಕ್ಷ್ಮವೆಂದೆನ್ನಿಸಿಕೊಳ್ಳುತ್ತದೆ. ಆದರೆ ಏನು ಮಾಡುವುದು ಎಂಟು ತಾಸು ವಿಮಾನ ಪ್ರಯಾಣವೆಂದರೆ ಯಾರಿಗೂ ಕಿರಿಕಿರಿ ಸಹಜವೇ. ಇನ್ನು ಮಗುವಿಗೆ ಹೇಗಾಗಿರಬೇಡ? ಅದು ತನ್ನ ಸಜವಾದ ಪ್ರತಿಭೆಯನ್ನು ಪ್ರದರ್ಶಿಸಿಯೇ ಬಿಟ್ಟಿದೆ. ಕೊನೆಗೊಬ್ಬ ಪ್ರಯಾಣಿಕರು ಮಗುವಿನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿ ಸಿಹಿಯಾಗಿ ಸೇಡು ತೀರಿಸಿಕೊಂಡುಬಿಟ್ಟಿದ್ದಾರೆ. ಅದೀಗ ವೈರಲ್ ಆಗುತ್ತಿದೆ.
ಒಂದು ತಾಸಿನ ವಿಮಾನ ಪ್ರಯಾಣವನ್ನೇ ಪುಟ್ಟಮಕ್ಕಳು ಸಹಿಸುವುದು ಕಷ್ಟಕರ. ಅದರಲ್ಲೂ 8 ತಾಸಿನ ಪ್ರಯಾಣ ಪ್ರಯಾಸವೇ. ಅಮೆರಿಕದಿಂದ ಹೊರಟ ಈ ವಿಮಾನದಲ್ಲಿ ಈ ಹೆಣ್ಣುಮಗುವಿಗೆ ಈ ಪ್ರಯಾಣ ಕಿರಿಕಿರಿ ಎನ್ನಿಸಿದೆ. ಮನಬಂದಂತೆ ಕಿರುಚಾಡುವುದು, ಕುಣಿದಾಡುವುದು, ಕುಪ್ಪಳಿಸುವುದು ಎಲ್ಲವನ್ನೂ ಮಾಡಿದೆ. ಪೋಷಕರಾದರೂ ಎಷ್ಟಂತ ಸಂಭಾಳಿಸಿಯಾರು? ಕೊನೆಗೆ ಸುಮ್ಮನಾಗಿದ್ದಾರೆ. ಉಳಿದ ಪ್ರಯಾಣಿಕರ ಪರಿಸ್ಥಿತಿ ಅವರವರಿಗೇ ಗೊತ್ತು. ಆದರೆ ಈ ವಿಡಿಯೋ ನೋಡಿದ ನೆಟ್ಟಿಗರಂತೂ ಮಗುವಿನ ತಂದೆತಾಯಿಯ ಮೇಲೆ ಕಿಡಿಕಾರಿದ್ದಾರೆ. ಇಷ್ಟಾದರೂ ಪೋಷಕರು ಮಗುವನ್ನು ಸಂಭಾಳಿಸಲಿಲ್ಲವಲ್ಲ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ಅಳುತ್ತಿದ್ದ ಪ್ರಯಾಣಿಕರ ಮಗುವನ್ನು ಎತ್ತಿಕೊಂಡು ಸಮಾಧಾನಿಸಿದ ಗಗನಸಖಿ: ವಿಡಿಯೋ ವೈರಲ್
ನನ್ನ ಮಗು ಏನಾದರೂ ಹೀಗೆ ವರ್ತಿಸಿದ್ದರೆ ಅದು ನನ್ನದೇ ತಪ್ಪು, ಮಗುವನ್ನು ಸರಿಯಾಗಿ ಬೆಳೆಸುವಲ್ಲಿ ನಾನು ವೈಫಲ್ಯ ಕಂಡಿದ್ದೇನೆ ಎಂದು ಒಪ್ಪಿಕೊಳ್ಳುತ್ತಿದ್ದೆ ಎಂದಿದ್ದಾರೆ ಒಬ್ಬರು. ನಾನೇನಾದರೂ ಹೀಗೆ ಆಡಿದ್ದರೆ ವಿಮಾನಪ್ರಯಾಣದ ಮಧ್ಯೆಯೇ ನನ್ನನ್ನು ನನ್ನ ಪೋಷಕರು ಹೊರಕ್ಕೆ ಎಸೆದುಬಿಡುತ್ತಿದ್ದರು ಎಂದಿದ್ದಾರೆ ಮತ್ತೊಬ್ಬರು. ಮಕ್ಕಳೆಂದಮೇಲೆ ಮಕ್ಕಳೇ, ಇಲ್ಲಿ ಪೋಷಕರನ್ನು ಹೀಗೆ ದೂಷಿಸುವುದು ಸರಿ ಅಲ್ಲ ಎಂದಿದ್ದಾರೆ ಇನ್ನೊಬ್ಬರು. ಗಗನಸಖಿಯರೆಲ್ಲ ಏನು ಮಾಡುತ್ತಿದ್ದರು ಎಂದಿದ್ದಾರೆ ಮಗದೊಬ್ಬರು.
ಇದೇ ಬಸ್ಸಿನಲ್ಲೋ ರೈಲಿನಲ್ಲೋ ಆಗಿದ್ದರೆ ಹೇಗಿರುತ್ತಿತ್ತು? ಖಂಡಿತವಾಗಲೂ ಈ ಮಗು ಎಲ್ಲರ ಮಡಿಲೊಳಗೆ ಆಡಿ ಪ್ರಯಾಣವನ್ನು ಸಂಭ್ರಮಿಸುತ್ತಿತ್ತು. ಪ್ರೀತಿಯಿಂದ ಕರೆದವರ ಬಳಿ ಹೋಗುವುದು ಮಗುವಿನ ಸ್ವಭಾವ ಅಲ್ಲವೆ? ಯಾರೂ ಸ್ಪಂದಿಸದೆ ತಮ್ಮ ಪಾಡಿಗೆ ತಾವು ಕುಳಿತಿರುವಾಗ ಮಗು ಇನ್ನೇನು ಮಾಡೀತು?
ಈ ವಿಡಿಯೋ ನೋಡಿದ ನಿಮಗೆ ಏನನ್ನಿಸಿತು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:27 am, Mon, 28 November 22