Viral News: ಬಾಲಕನನ್ನು ಮೊಸಳೆ ನುಂಗಿದೆ ಎಂದುಕೊಂಡ ಜನ; ಹುಡುಗನ ಕಾಪಾಡಲು ಮಾಡಿದ ಪ್ಲಾನ್ ಏನು ಗೊತ್ತಾ?
ಮೊಸಳೆಯ ಹೊಟ್ಟೆಯನ್ನೇ ಸೀಳಿ ಆ ಬಾಲಕನನ್ನು ರಕ್ಷಿಸಲು ಮುಂದಾದ ಗ್ರಾಮಸ್ಥರು ಮೊಸಳೆಯನ್ನು ಹಗ್ಗದಿಂದ ಎಳೆದಿದ್ದಾರೆ. ಆದರೆ, ಅಲ್ಲಿ ಅಸಲಿಗೆ ಆಗಿದ್ದೇ ಬೇರೆ ಕತೆ.
ಭೂಪಾಲ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ 7 ವರ್ಷದ ಬಾಲಕನನ್ನು ಮೊಸಳೆ ನುಂಗಿದೆ ಎಂಬ ಅನುಮಾನದಿಂದ ಆ ಗ್ರಾಮದ ನಿವಾಸಿಗಳು ಮೊಸಳೆಯನ್ನು ಸೆರೆಹಿಡಿದಿದ್ದಾರೆ. 13 ಅಡಿ ಉದ್ದದ ಮೊಸಳೆಗೆ ಹಗ್ಗ ಕಟ್ಟಿ ಎಳೆದು, ಅದರ ಹೊಟ್ಟೆ ಸೀಳಲು ನಿರ್ಧರಿಸಿದ್ದರು. ಮೊಸಳೆಯ (Crocodile) ಹೊಟ್ಟೆಯನ್ನೇ ಸೀಳಿ ಆ ಬಾಲಕನನ್ನು ರಕ್ಷಿಸಲು ಮುಂದಾದ ಗ್ರಾಮಸ್ಥರು ಮೊಸಳೆಯನ್ನು ಹಗ್ಗದಿಂದ ಎಳೆಯುತ್ತಿರುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಆ ಪ್ರಾಣಿಗೆ ಅಮಾನುಷವಾಗಿ ತೊಂದರೆ ಕೊಟ್ಟಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಅಸಲಿಗೆ ಆ ಮೊಸಳೆ ಬಾಲಕನನ್ನು ನುಂಗಿಯೇ ಇರಲಿಲ್ಲ!
ಸೋಮವಾರ ರಿಜೆಂತಾ ಗ್ರಾಮದ ನಿವಾಸಿಗಳು ಸೆರೆ ಹಿಡಿದಿದ್ದ ಮೊಸಳೆಯನ್ನು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ರಕ್ಷಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ ಚಂಬಲ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆ ಅತಾರ್ ಸಿಂಗ್ ಎಂಬ 7 ವರ್ಷದ ಬಾಲಕನನ್ನು ನುಂಗಿರುವುದನ್ನು ಜನರು ನೋಡಿದ್ದಾಗಿ ಹೇಳಿದ್ದಾರೆ ಎಂದು ರಘುನಾಥಪುರ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್‌ವೀರ್ ಸಿಂಗ್ ತೋಮರ್ ಹೇಳಿದ್ದಾರೆ.
ಇದನ್ನೂ ಓದಿ: Shocking News: ರೆಸ್ಟೋರೆಂಟ್ನಲ್ಲಿ ಮೋಮೋಸ್ ತಿನ್ನುವಾಗ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಸಾವು!
ಈ ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಬಲೆ ಬಳಸಿ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಮಗು ಇನ್ನೂ ಆ ಮೊಸಳೆಯ ಹೊಟ್ಟೆಯಲ್ಲಿ ಜೀವಂತವಾಗಿದೆ ಎಮದು ಕೆಲವು ಗ್ರಾಮಸ್ಥರು ಮೊಸಳೆಯ ಹೊಟ್ಟೆಯನ್ನು ಸೀಳಲು ಮುಂದಾಗಿದ್ದಾರೆ. ಆ ಮಗುವನ್ನು ಮೊಸಳೆ ನುಂಗಿದ್ದರೂ ಆತ ಜೀವಂತವಾಗಿರಲು ಸಾಧ್ಯವಿಲ್ಲ ಎಂದು ಅರಣ್ಯ ಅಧಿಕಾರಿಗಳು ಎಷ್ಟೇ ಹೇಳಿದರೂ ಗ್ರಾಮಸ್ಥರು ಒಪ್ಪಲಿಲ್ಲ. ಕೊನೆಗೆ ಆ ಬಾಲಕನ ಅಪ್ಪ-ಅಮ್ಮ, ಕುಟುಂಬಸ್ಥರು ಜೋರಾಗಿ ಆತನ ಹೆಸರು ಹಿಡಿದು ಕೂಗಿದ್ದಾರೆ. ಅವರ ಮಗ ಮೊಸಳೆಯ ಹೊಟ್ಟೆಯೊಳಗಿನಿಂದ ತಮ್ಮ ಕರೆಗೆ ಸ್ಪಂದಿಸಬಹುದು ಎಂದು ಅವರು ಕಾದಿದ್ದಾರೆ.
ಈ ಎಲ್ಲ ಹೈಡ್ರಾಮಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಆ ಮೊಸಳೆಯನ್ನು ವಶಕ್ಕೆ ಪಡೆದಿದ್ದಾರೆ. ಆ ಮೊಸಳೆಯ ಹೊಟ್ಟೆಯಲ್ಲಿ ಯಾವುದೇ ಮನುಷ್ಯನಾಗಲಿ ಅಥವಾ ದೊಡ್ಡ ಆಹಾರವಾಗಲಿ ಇಲ್ಲ ಎಂದು ಅವರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಇದರಿಂದ ಗ್ರಾಮಸ್ಥರು ಸುಮ್ಮನಾಗಿದ್ದಾರೆ.
ಇದನ್ನೂ ಓದಿ: Shocking News: ಮಿಸ್ ಆಗಿ 43 ಸಾವಿರದ ಬದಲು 1.43 ಕೋಟಿ ರೂ. ಸಂಬಳ ನೀಡಿದ ಕಂಪನಿ; ಶಾಕ್ ಆದ ಉದ್ಯೋಗಿ ಮಾಡಿದ್ದೇನು?
ಬಳಿಕ, ಮಾರನೇ ದಿನ ಬೆಳಗ್ಗೆ ನದಿಯಲ್ಲಿ ಆ ಬಾಲಕನ ಶವ ತೇಲುತ್ತಿರುವುದನ್ನು ಕಂಡ ಗ್ರಾಮಸ್ಥರು ಆ ಬಾಲಕನ ದೇಹವನ್ನು ನದಿಯಿಂದ ಹೊರಕ್ಕೆ ತೆಗೆದಿದ್ದಾರೆ. ಶವದ ಮರಣೋತ್ತರ ಪರೀಕ್ಷೆಯ ನಂತರ ಅವನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ವಿನಾಕಾರಣ ಮೊಸಳೆಗೆ ಹಗ್ಗ ಕಟ್ಟಿ, ಅದು ಜಗಿಯದಂತೆ ತಡೆಯಲು ಆ ಮೊಸಳೆಯ ಬಾಯಿಗೆ ದೊಣ್ಣೆಗಳನ್ನು ಅಡ್ಡವಿಟ್ಟು ಹಿಂಸೆ ನೀಡಿದ್ದಕ್ಕೆ ಆ ಗ್ರಾಮಸ್ಥರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
Published On - 11:24 am, Wed, 13 July 22