1985ರ ರೆಸ್ಟೋರೆಂಟ್ ಬಿಲ್ ನೋಡಿ ಹೌಹಾರುತ್ತಿರುವ ನೆಟ್ಟಿಗರು
Restaurant Bill :1985ರ ರೆಸ್ಟೋರೆಂಟ್ನ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಬಹಳೇ ಸದ್ದು ಮಾಡುತ್ತಿದೆ. ಆಗ ಒಂದು ಊಟದ ಬೆಲೆ ಬರೀ ರೂ. 26! ಅಂದರೆ ಈಗಿದು ಒಂದು ಚಿಪ್ಸ್ ಪ್ಯಾಕೆಟಿಗೆ ಸಮ ಎನ್ನುತ್ತಿದ್ದಾರೆ ನೆಟ್ಟಿಗರು.
Viral Video : ಹೋಟೆಲ್, ರೆಸ್ಟೋರೆಂಟ್ ಎಂದರೆ ಎರಡು ಹೊಟ್ಟೆಗಳಾಗುತ್ತವೆ ಹೌದು ತಾನೆ? ಮನೆಗಿಂತ ಹೊರತಾದ ರುಚಿ ಅಲ್ಲಿ ಲಭ್ಯ ಎನ್ನುವ ಸತ್ಯವನ್ನು ಯಾರೂ ಮರೆಮಾಚಲು ಸಾಧ್ಯವೇ ಇಲ್ಲ. ಎಷ್ಟೇ ದುಡ್ಡು ತೆತ್ತಾದರೂ ಸರಿ ಆ ರುಚಿಯನ್ನು ಸವಿಯಲೇಬೇಕೆನ್ನುವ ಮನಸ್ಸು ನಿಮ್ಮದಾಗುತ್ತದೆ. ಇದೀಗ ವೈರಲ್ ಆಗಿರುವ ಪೋಸ್ಟ್ ನೋಡಿ, ನಾಲ್ಕು ಐಟಮ್ಗಳ ಬೆಲೆ ಕೇವಲ ರೂ. 26! ಎಂದರೆ ಈಗಿನ ಚಿಪ್ಸ್ ಪ್ಯಾಕೇಟಿನ ಬೆಲೆಗೆ ಸಮ. ರೆಸ್ಟೋರೆಂಟ್ ಒಂದು 1985 ಬಿಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನೆಟ್ಟಿಗರು ಹುಬ್ಬೇರಿಸಿ ಇದನ್ನು ನೋಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ.
ಎಷ್ಟೇ ಕಡಿಮೆ ಎಂದರೂ ಇಂದು ಒಂದು ಊಟದ ಬೆಲೆ ರೆಸ್ಟೋರೆಂಟ್ನಲ್ಲಿ ರೂ. 1,000-2,000. ಆದರೆ 37 ವರ್ಷಗಳ ಹಿಂದೆ ಉತ್ತರ ಭಾರತೀಯ ಊಟದ ಬೆಲೆ ಬರೀ ರೂ. 26. ಅಂದಿಗೂ ಇಂದಿಗೂ ಅಜಗಜಾಂತರ. ಈ ಪೋಸ್ಟ್ ಅನ್ನು 2013ರ ಆಗಸ್ಟ್ 12ರಂದು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ ಇದೀಗ ಮತ್ತೆ ವೈರಲ್ ಆಗಿದೆ. ದೆಹಲಿಯ ಲಜಪತ್ನ ಲಾಝೀಜ್ ರೆಸ್ಟೋರೆಂಟ್ನಲ್ಲಿ 1985ರ ಡಿಸೆಂಬರ್ 20ರಂದು ಹರಿಯಲಾದ ಬಿಲ್ ಇದು. ಈ ಬಿಲ್ ಅನ್ನು ಸ್ವತಃ ರೆಸ್ಟೋರೆಂಟ್ ಹಂಚಿಕೊಂಡಿದೆ. ಶಾಹೀ ಪನೀರ್, ದಾಲ್ ಮಖನೀ, ರಾಯ್ತಾ, ಚಪಾತಿಯನ್ನು ಯಾರೋ ಗ್ರಾಹಕರು ಅಂದು ಆರ್ಡರ್ ಮಾಡಿದ್ದರು. ನಾಲ್ಕೂ ಖಾದ್ಯಗಳ ಬೆಲೆ ಎರಡಂಕಿಯನ್ನು ದಾಟಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ : ‘ಅಭಿಷೇಕ್ ಆ್ಯಬಿ’ ಭಾರತೀಯ ಮೂಲದ ಈ ಗಾಯಕನ ಕಂಠಸಿರಿಗೆ ಮರುಳಾಗದವರಿಲ್ಲ
1,800 ಜನರು ಈ ಪೋಸ್ಟ್ ಇಷ್ಟಪಟ್ಟಿದ್ದಾರೆ. ಸುಮಾರು 540 ಜನರು ಇದನ್ನು ಹಂಚಿಕೊಂಡಿದ್ದಾರೆ. ಈತನಕ 287 ಜನರು ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ಹಳೆಯ ಬಿಲ್ ಅನ್ನು ಇನ್ನೂ ಇಟ್ಟುಕೊಂಡಿದ್ದೀರಿ ಧನ್ಯವಾದ ಎಂದಿದ್ದಾರೆ ಒಬ್ಬರು. ಆಹಾ ಆ ದಿನಗಳು ಎಂಥ ಚೆಂದ. ನಾನು ಒಂದು ಊಟಕ್ಕೆ ರೂ. 18 ವ್ಯಯಿಸುತ್ತಿದ್ದೆ ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು 1970ರ ಮುಂಚಿನ ಪೆಟ್ರೋಲ್ ಬೆಲೆ, ತಮ್ಮ ಸಂಬಳ ಮತ್ತು ಊಟಕ್ಕೆ ಖರ್ಚು ಮಾಡುತ್ತಿದ್ದ ವಿವರವನ್ನು ಹಂಚಿಕೊಂಡಿದ್ದಾರೆ.
ಆ ಕಾಲವೇ ಮತ್ತೆ ಮರಳುವುದೇ ಎಂದು ನೀವು ಕನಸು ಕಾಣುತ್ತಿದ್ದೀರಾ? ಸಾಧ್ಯವೇ ಇಲ್ಲ!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:18 am, Wed, 23 November 22