ಸರ್ದಾರ್​​ಜೀ​ ಕನ್ನಡ ಪ್ರೇಮ; ಅದು ಡೋಸಾ ಅಲ್ಲ ದೋಸೆ ‘ಸಿಂಘವರು’ ಹೇಳುತ್ತಿದ್ದಾರೆ ಕೇಳಿರೈ ಕನ್ನಡಿಗರೇ

Kannada : ಇವರ ಕನ್ನಡ ಕಲಿಕೆಗೆ ಬೀದಿಯೇ ದೊಡ್ಡ ಶಾಲೆ. ತಳ್ಳುಗಾಡಿಯಲ್ಲಿ ತರಕಾರಿ, ಎಳನೀರು, ಹೂ, ಪಾತ್ರೆ ಮಾರುವ ಮತ್ತು ಈ ಕೆಲಸದಿಂದಲೇ ಹೊಟ್ಟೆ ಹೊರೆಯುವ ಶ್ರೀಸಾಮಾನ್ಯರೇ ಇವರ ಕನ್ನಡ ಗುರುಗಳು.

ಸರ್ದಾರ್​​ಜೀ​ ಕನ್ನಡ ಪ್ರೇಮ; ಅದು ಡೋಸಾ ಅಲ್ಲ ದೋಸೆ ‘ಸಿಂಘವರು’ ಹೇಳುತ್ತಿದ್ದಾರೆ ಕೇಳಿರೈ ಕನ್ನಡಿಗರೇ
ಹಾರ್ನಿತ್​ ಸಿಂಘ್ ಕೀರ್​
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Nov 23, 2022 | 1:41 PM

Viral Video : ಹಾರ್ನಿತ್ ಸಿಂಘ್ ಕೀರ್ (Haarnnit Singh Keer)  ಎಂಬ ಈ ಬ್ಲಾಗರ್​ ಪಂಜಾಬ್​ ಮೂಲದವರು. ಬೆಂಗಳೂರಿನಲ್ಲಿ ನೆಲೆಸಿರುವ ಇವರಿಗೆ ಕನ್ನಡದ ಬಗ್ಗೆ ಎಲ್ಲಿಲ್ಲದ ಕುತೂಹಲ. ಸ್ಥಳೀಯ ಭಾಷಾ ಶೈಲಿಯನ್ನು ಅನುಕರಿಸುವುದರ ಮೂಲಕ ಇವರು ಕನ್ನಡವನ್ನು ಕಲಿಯುವ ಖಯಾಲಿ ಬೆಳೆಸಿಕೊಂಡಿದ್ದಾರೆ. ಬೆಂಗಳೂರಿನ ಬೀದಿಗಳಲ್ಲಿ ತರಕಾರಿ, ಹೂ, ಹಣ್ಣು, ಸ್ಟೀಲ್​ ಪಾತ್ರೆ ಮಾರುವವರ ಧ್ವನಿಯನ್ನು ಅನುಕರಿಸಿ ಮಾಡಿರುವ ರೀಲ್ಸ್​ಗಳನ್ನು ಲಕ್ಷಗಟ್ಟಲೆ ಜನರು ಮೆಚ್ಚಿದ್ದಾರೆ. ಬೆಂಗಳೂರಿನ ಬೈಗುಳಗಳಂತೂ ಅತ್ಯಂತ ಸಹಜವಾಗಿ ಇವರಿಂದ ಹೊಮ್ಮುತ್ತವೆ. ಉಚ್ಚಾರವೂ ಮತ್ತು ವ್ಯಕ್ತಪಡಿಸುವ ರೀತಿಯೂ ಅಚ್ಚುಕಟ್ಟಾಗಿ ಆಕರ್ಷಕವಾಗಿದೆ. ಇವರೊಳಗೊಬ್ಬ ನಟನಾ ಚತುರನೂ ಇದ್ದಾನೆ. ಇದೀಗ ಮಸಾಲೆ ಸಾಮಾನುಗಳ ಮೂಲಕ ಬೈಗುಳದ ಸುರಿಮಳೆ ಸುರಿಸಿರುವ ಇವರ ವಿಡಿಯೋ ನೋಡಿ.

ಚಿಕ್ಕಮಕ್ಕಳಿದ್ದಾಗ ನೀವು ಬಹಳ ಗಲಾಟೆ ಮಾಡುತ್ತಿದ್ದರೆ ನಿಮ್ಮ ಮನೆಯಲ್ಲಿ ಅಥವಾ ಶಾಲೆಯಲ್ಲಿ ಟಂಗ್​ ಟ್ವಿಸ್ಟರ್ ಹೇಳಿಕೊಡುತ್ತಿದ್ದರಲ್ಲವೆ? ನೆನಪಿಸಿಕೊಳ್ಳಿ ಇದನ್ನು, ಸಂಪಗಪ್ಪನ ಮಗ ಮರಿಸಪ್ಪಂಗಪ್ಪ. ತುಸು ಕಷ್ಟದ ಟಂಗ್​ ಟ್ವಿಸ್ಟರ್ ತಾನೆ? ಆದರೆ ಸರ್ದಾರ್​ಜೀ ಇದನ್ನು ಅತ್ಯಂತ ಸುಲಲಿತವಾಗಿ ಹೇಳಿದ್ದಾರೆ. ಕನ್ನಡಿಗರಿಗೇ ಈ ಟ್ವಿಸ್ಟರ್ ಕಷ್ಟ. ನೀವು ಪರಭಾಷಿಕರಾಗಿ ಇದನ್ನು ತಪ್ಪಿಲ್ಲದೆ ಹೇಳಿದ್ದಿರಿ ಗ್ರೇಟ್​ ಸರ್​ಜೀ ಎಂದಿದ್ದಾರೆ ನೆಟ್ಟಿಗರು. ತರೀಕೆರೆ ಏರಿ ಮೇಲೆ ಮೂರು ಕರಿಕುರಿ ಮರಿಗಳು ಕುರು ಕುರು ಅಂತ ಮೇಯಿಸುತ್ತಿದ್ದವು. ಇದನ್ನು ಎರಡು ಸಲ ಹೇಳಿ ಸರ್ ಎಂದು ಇನ್ನೊಬ್ಬರು ಸವಾಲು ಹಾಕಿದ್ದಾರೆ.

ಇವರ ಕನ್ನಡ ಕಲಿಕೆಗೆ ಬೀದಿಯೇ ದೊಡ್ಡ ಗುರು. ಬೀದಿಯಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ಮಾಡುವವರು, ಎಳನೀರು ಮಾರುವವರು, ಹೂ ಮಾರುವವರು, ಹೂ ಮಾರುವವರು ಹೀಗೆ ಬೀದಿ ವ್ಯಾಪಾರದಿಂದ ಹೊಟ್ಟೆ ಹೊರೆಯುವ ಶ್ರೀಸಾಮಾನ್ಯರೇ ಇವರ ಕನ್ನಡ ಗುರುಗಳು. ನೋಡಿ ಈ ಕೆಳಗಿನ ವಿಡಿಯೋದಲ್ಲಿ ಎಷ್ಟು ಚೆಂದವಾಗಿ ಅವರೆಲ್ಲರುಗಳ ಧ್ವನಿಯನ್ನು ಅನುಕರಿಸಿದ್ದಾರೆ. ಕೇಳಿದ ಯಾರಿಗೂ ಇದು ಅನುಕರಿಸಿದ್ದು ಎಂದು ಅನ್ನಿಸಲು ಸಾಧ್ಯವೇ ಇಲ್ಲದಷ್ಟು ಸಹಜವಾಗಿದೆ.

ಕನ್ನಡಿಗರು ಬಹಳ ಉದಾರಿಗಳು. ಅದರಲ್ಲಿಯೂ ಬೆಂಗಳೂರಿನಲ್ಲಿ ವಾಸಿಸುವ ಕನ್ನಡಿಗರು ಪರಭಾಷಿಕರಿಗಾಗಿ ಪರಭಾಷೆ ಕಲಿತು ವ್ಯವಹರಿಸುತ್ತಾರೆ ಎಂಬ ಗೊಣಗಾಟದ ನಡುವೆ ಹಾರ್ನಿತ್​ನಂಥವರು ಕನ್ನಡದ ಬಗ್ಗೆ ಪ್ರೇಮ ಬೆಳೆಸಿಕೊಂಡಿದ್ದು ಹೊಸ ಭರವಸೆ ತರುತ್ತದೆ. ಇವರು ಕನ್ನಡದ ಇಂಥ ಕಂಟೆಂಟ್​ಗಳನ್ನು ಮತ್ತಷ್ಟು ಮಾಡಲಿ. ಭಾಷೆಯ ಕಲಿಕೆ ಎನ್ನುವುದು ಭಾವವನ್ನೂ ಬೆಸೆಯುತ್ತದೆ. ಭಾವ ಬೆಸೆದ ಮೇಲೆ ಅವರು ಇವರು ಮತ್ತವರು ಅಲ್ಲ. ಎಲ್ಲರೂ ನಮ್ಮವರೇ. ಅಲ್ಲವೆ?

ನಿಮ್ಮ ಅಭಿಪ್ರಾಯವೇನು?

ಇದನ್ನೂ ಓದಿ

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada