ಗಾಝಿಯಾಬಾದ್ನ ಅಪಾರ್ಟ್ಮೆಂಟ್ನಲ್ಲಿ ಬೀದಿನಾಯಿಗಳಿಗಾಗಿ ಹೋರಾಟ
Dog Lover : ಸೊಸೈಟಿಯ ಆವರಣದಲ್ಲಿರುವ ಬೀದಿನಾಯಿಗಳನ್ನು ಗೋಣಿಚೀಲದಲ್ಲಿ ಕಟ್ಟಿ ಹೊರಹಾಕಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ನಾಯಿಪ್ರೇಮಿಗಳ ಗುಂಪು ಅಪಾರ್ಟ್ಮೆಂಟ್ನ ಕ್ಷೇಮಾಭಿವೃದ್ಧಿ ಸಂಘದೊಂದಿಗೆ ಹೋರಾಟಕ್ಕಿಳಿದಿದೆ.
Viral Video : ನಾಯಿಪ್ರೇಮಿಗಳಿಗೆ ಯಾವ ನಾಯಿಯಾದರೂ ಒಂದೇ. ನಿತ್ಯದ ಒಡನಾಡಿಗಳಂತೆ ಪರಸ್ಪರ ಒಂದು ಬಾಂಧವ್ಯ ವೃದ್ಧಿಯಾಗಿರುತ್ತದೆ. ಆದರೆ ಇದ್ದಕ್ಕಿದ್ದಂತೆ ನಾಳೆಯಿಂದ ಬೀದಿನಾಯಿಗಳು ಈ ಪ್ರದೇಶದಲ್ಲಿ ಪ್ರವೇಶಿಸುವಂತಿಲ್ಲ ಎಂದು ಫರಮಾನು ಹೊರಡಿಸಿದರೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಗಾಝಿಯಾಬಾದ್ನ ರಿವರ್ ಹೈಟ್ಸ್ ಅಪಾರ್ಟ್ಮೆಂಟ್ನ ಕ್ಷೇಮಾಭಿವೃದ್ಧಿ ಸಂಘವು ಬೀದಿನಾಯಿಗಳಿಗೆ ನಿಷೇಧ ಹೇರಿದ್ದಕ್ಕೆ ಅಲ್ಲಿನ ನಾಯಿಪ್ರೇಮಿಗಳು ಹೋರಾಟಕ್ಕೆ ಇಳಿದಿದ್ದಾರೆ. ಹೋರಾಟವು ಕ್ರಮೇಣ ಕೈಕೈ ಮಿಲಾಯಿಸುವ ಹಂತಕ್ಕೆ ತಿರುಗಿದೆ.
ಪೊಲೀಸರ ಪ್ರಕಾರ ರಿವರ್ ಹೈಟ್ಸ್ ಸೊಸೈಟಿಯ ನಾಯಿಪ್ರೇಮಿಗಳ ಗುಂಪು ಆಡಳಿತ ಮಂಡಳಿಯ ನಿರ್ಧಾರವನ್ನು ಖಂಡಿಸಿ ಈ ಹೋರಾಟಕ್ಕೆ ಇಳಿದಿದೆ. ಹೋರಾಟವು ಜಗಳದ ಸ್ವರೂಪ ಪಡೆದುಕೊಂಡಿದೆ. ಸೊಸೈಟಿಯ ಆವರಣದಲ್ಲಿರುವ ಬೀದಿನಾಯಿಗಳನ್ನು ಗೋಣಿಚೀಲದಲ್ಲಿ ಕಟ್ಟಿ ಹೊರಹಾಕಲಾಗುತ್ತಿದೆ ಎಂದು ವರದಿಯಾಗಿದೆ. ಪೂನಂ ಕಶ್ಯಪ್ನೇತೃತ್ವದ ನಾಯಿಪ್ರೇಮಿಗಳ ಗುಂಪು ಈ ಅಮಾನವೀಯ ಕ್ರಮವನ್ನು ವಿರೋಧಿಸಿದಾಗ ಪರಸ್ಪರ ವಾಗ್ವಾದ ಉಂಟಾಗಿದೆ. ನಂತರ ಅದು ತೀವ್ರವಾಗಿ ಹೀಗೆ ಜಗಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಸುರಿಯುತ್ತಿರುವ ಈ ಮಳೆ, ಬೀದಿನಾಯಿಗಳಿಗೆ ಆಶ್ರಯ ನೀಡಿದ ಮಹಿಳೆ, ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ವಿಡಿಯೋ
ಒಂದು ಮಹಿಳೆಯರ ಗುಂಪು ಪೂನಂ ಅವರ ಕೂದಲನ್ನು ಹಿಡಿದೆಳೆಯುವುದು, ಕಪಾಳಿಗೆ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಬೀದಿನಾಯಿಗಳನ್ನು ಹೊರಹಾಕಬಾರದು ಎಂಬ ಹೋರಾಟಕ್ಕೆ ಪೂನಂ ಕುಮ್ಮಕ್ಕು ನೀಡಿದ್ದಾರೆ ಎಂದು ಅಪಾರ್ಟ್ಮೆಂಟ್ನ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಬೋಧ ತ್ಯಾಗಿ ಆರೋಪಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪೂನಂ, ಹೌದು ನಾನು ಎನಿಮಲ್ ವೆಲ್ಫೇರ್ ಅಸೋಸಿಯೇಷನ್ನ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ. ಅಷ್ಟೇ ಅಲ್ಲ ತ್ಯಾಗಿ ವಿರುದ್ಧ ಆರೋಪಕಗಳ ಪಟ್ಟಿಯನ್ನೇ ಪೊಲೀಸರಿಗೆ ನೀಡಿದ್ದಾರೆ. ಈ ವಿಷಯವಾಗಿ ಸಮಗ್ರವಾಗಿ ತನಿಖೆ ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ದುಬೆ ಹೇಳಿದ್ದಾರೆ.
ಇದನ್ನೂ ಓದಿ : ಹಗ್ಗದಾಟದಲ್ಲಿ ಗಿನ್ನೀಸ್ ವಿಶ್ವದಾಖಲೆ ಮಾಡಿದ ಬಲು ಎಂಬ ನಾಯಿ
ಈ ಹಿಂದೆ ದೆಹಲಿಯ ಎನ್ಸಿಆರ್ ಪ್ರದೇಶದಲ್ಲಿ ಬೀದಿನಾಯಿಗಳು ಸಾರ್ವಜನಿಕರ ಮೇಲೆ ದಾಳಿ ಮಾಡಿರುವ ಪ್ರಕರಣಗಳು ಮತ್ತು ಎಲಿವೇಟರ್ನಲ್ಲಿ ಜನರನ್ನು ಕಚ್ಚಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಅಪಾರ್ಟ್ಮೆಂಟ್ ಕ್ಷೇಮಾಭಿವೃದ್ಧಿ ಸಂಘವು ಈ ತೀರ್ಮಾನವನ್ನು ತೆಗೆದುಕೊಂಡಿತ್ತು. ಆದರೆ ನಾಯಿಪ್ರೇಮಿಗಳು ಮಾತ್ರ ಈ ತೀರ್ಮಾನವನ್ನು ವಿರೋಧಿಸುತ್ತಿದ್ಧಾರೆ.
ಈ ಸುದ್ದಿ ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ