Viral Video: ಮುನ್ನಾರ್​ ರಸ್ತೆಯಲ್ಲಿ ಬಸ್​ ಎದುರು ಬಂದು ಗಾಜು ಒಡೆದ ಕಾಡಾನೆ; ಚಾಲಕ ಮಾಡಿದ್ದೇನು?

Viral Video: ಮುನ್ನಾರ್​ ರಸ್ತೆಯಲ್ಲಿ ಬಸ್​ ಎದುರು ಬಂದು ಗಾಜು ಒಡೆದ ಕಾಡಾನೆ; ಚಾಲಕ ಮಾಡಿದ್ದೇನು?
ಆನೆಯ ವಿಡಿಯೋ ವೈರಲ್

1 ನಿಮಿಷ 34 ಸೆಕೆಂಡುಗಳ ಈ ವಿಡಿಯೋದಲ್ಲಿ ಆನೆ ಬಸ್​ನ ಹತ್ತಿರವೇ ಬಂದು ನಿಲ್ಲುತ್ತದೆ. ಇದನ್ನು ಕಂಡು ಚಾಲಕ ಶಾಕ್ ಆಗುತ್ತಾನೆ.

TV9kannada Web Team

| Edited By: Sushma Chakre

Apr 06, 2022 | 7:56 PM

ಕಾಡಿನ ಮಧ್ಯೆ ಹೋಗುವಾಗ ಇದ್ದಕ್ಕಿದ್ದಂತೆ ಆನೆ (Elephant) ಸಿಕ್ಕಿದರೆ ಏನಾಗುತ್ತದೆ? ಹೀಗೆ ವನ್ಯಜೀವಿಗಳು ಕಂಡಾಗ ನಾವು ಶಾಂತವಾಗಿ ಇರುವುದು ಬಹಳ ಮುಖ್ಯ. ಕಾಡು ಪ್ರಾಣಿಗಳಿಂದ ನಾವು ದೂರ ಇದ್ದಷ್ಟೂ ಪ್ರಾಣಿಗಳು ಹೆಚ್ಚು ನೆಮ್ಮದಿಯಾಗಿರುತ್ತವೆ. ಕೇರಳದಲ್ಲಿ ಆನೆಯೊಂದು ಬಸ್‌ ಎದುರು ಬಂದು ನಿಂತ ಭಯಾನಕ ದೃಶ್ಯದ ವಿಡಿಯೋ ವೈರಲ್ (Video Viral) ಆಗಿದೆ. ತನ್ನೆದುರು ಬಂದು ನಿಂತ ಆನೆಯನ್ನು ನೋಡಿ ಬಸ್ ಚಾಲಕ ಆಘಾತಕ್ಕೊಳಗಾಗಿದ್ದಾರೆ. ಆದರೆ, ಆತ ಆ ಕ್ಷಣದಲ್ಲಿ ತೋರಿದ ತಾಳ್ಮೆ, ಬುದ್ಧಿವಂತಿಕೆಗೆ ಅನೇಕ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಸ್‌ ಸಾಗುತ್ತಿರುವಾಗ ಕಾಡಾನೆಯೊಂದು ದೂರದಲ್ಲಿ ನಿಂತಿರುವ ದೃಶ್ಯದಿಂದ ವಿಡಿಯೋ ಶುರುವಾಗುತ್ತದೆ. 1 ನಿಮಿಷ 34 ಸೆಕೆಂಡುಗಳ ಈ ವಿಡಿಯೋದಲ್ಲಿ ಆನೆ ಬಸ್​ನ ಹತ್ತಿರವೇ ಬಂದು ನಿಲ್ಲುತ್ತದೆ. ಇದನ್ನು ಕಂಡು ಚಾಲಕ ಶಾಕ್ ಆಗುತ್ತಾನೆ. ಆದರೂ ತನ್ನ ಹೆದರಿಕೆಯನ್ನು ತೋರಿಸಿಕೊಳ್ಳದ ಆತ ಶಾಂತವಾಗಿಯೇ ಇದ್ದು, ಆನೆ ಹೋಗುವವರೆಗೂ ಕಾದಿದ್ದಾನೆ. ಬಹಳ ಹೊತ್ತು ಅಲ್ಲೇ ನಿಂತಿದ್ದ ಆನೆ ಆ ಬಸ್​ನ ಎದುರಿನ ಗಾಜನ್ನು ಒಡೆದಿದೆ. ನಂತರ ಅಲ್ಲಿಂದ ಪಕ್ಕಕ್ಕೆ ಸರಿದುಹೋಗಿದೆ.

ಆ ಚಾಲಕ ಯಾರೆಂದು ಗೊತ್ತಾಗಿಲ್ಲ. ಆದರೆ, ಆ ವಿಡಿಯೋವನ್ನು ನೋಡಿದರೆ ಅಲ್ಲಿ ಆಗಾಗ ಈ ರೀತಿ ಆನೆಗಳು ಎದುರಾಗುವುದು ಸಾಮಾನ್ಯವಾಗಿದ್ದು, ಚಾಲಕರಿಗೆ ಅದು ಅಭ್ಯಾಸವಾಗಿಬಿಟ್ಟಿದೆ ಎನಿಸುತ್ತದೆ. ಮುನ್ನಾರ್​ನಿಂದ ಉಡುಮಲ್‌ಪೇಟೆ ಮಾರ್ಗವಾಗಿ ತೆರಳುತ್ತಿದ್ದ ಕೇರಳ ರಸ್ತೆ ಸಾರಿಗೆ ಬಸ್‌ಗೆ ಮುನ್ನಾರ್‌ ಡಿವೈಎಸ್‌ಪಿ ಕಚೇರಿ ಬಳಿ ಕಾಡಾನೆಯೊಂದು ಎದುರಾಗಿದೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಚಾಲಕ, ಯಾವುದೇ ರೀತಿ ಹಾರ್ನ್ ಮಾಡದೆ​ ಆನೆ ಸ್ಥಳದಿಂದ ತೆರಳುವವರೆಗೆ ಕಾದು ಒಂಟಿ ಸಲಗ ಪಕ್ಕಕ್ಕೆ ಹೋದ ಬಳಿಕ ವಾಹನ ಚಲಾಯಿಸಿದ್ದಾರೆ.

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋ 15 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಸ್ ಚಾಲಕ ತೋರಿದ ಧೈರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Viral Video: ದೇವಸ್ಥಾನದ ಒಡವೆ ಕದಿಯಲು ತಾನೇ ಕೊರೆದು ರಂಧ್ರದಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ; ಆಮೇಲೇನಾಯ್ತು?

Viral Video: ಬಾಯಾರಿದ ಕೋತಿಗೆ ನೀರು ಕುಡಿಸಿದ ಟ್ರಾಫಿಕ್ ಪೊಲೀಸ್; ಹೃದಯಸ್ಪರ್ಶಿ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

Follow us on

Related Stories

Most Read Stories

Click on your DTH Provider to Add TV9 Kannada