ಬೌದ್ಧ ಸನ್ಯಾಸಿನಿಯ ಆಸ್ತಿದಾನಕ್ಕೆ ಆಕೆಯ ಪೋಷಕರು ಒಪ್ಪಿದರೂ ಮಗಳು ಒಪ್ಪಲಿಲ್ಲ
Charity : ಸನ್ಯಾಸಿನಿಯು ತನ್ನ ಮನೆಯನ್ನು ಮಾರಾಟ ಮಾಡಿದಾಗ ದೊರೆತ ಹಣ ಸುಮಾರು ರೂ. 6.5 ಕೋಟಿ. ಮಗಳ ಶಿಕ್ಷಣಕ್ಕೂ ಈ ಹಣ ಖರ್ಚು ಮಾಡದ ಈಕೆಯ ನಡೆ ಸಮಂಜಸವೆನ್ನಿಸುತ್ತಿಲ್ಲ ಎಂದು ಅನೇಕರು ಟೀಕಿಸಿದ್ದಾರೆ.
Viral : ಚೀನಾದಲ್ಲಿ ವಾಸವಾಗಿರುವ ಈ ಬೌದ್ಧ ಸನ್ಯಾಸಿನಿಯ ನಿರ್ಧಾರವನ್ನು ಆಕೆಯ ಪೋಷಕರು ಬೆಂಬಲಿಸಿದ್ದಾರೆ. ಆದರೆ ಸ್ವತಃ ಮಗಳೇ ಇದಕ್ಕೆ ಸಹಕರಿಸಿಲ್ಲವೆಂದು ಸನ್ಯಾಸಿನಿ ಬೇಸರಗೊಂಡಿದ್ದಾರೆ. ಇತ್ತ ನೆಟ್ಟಿಗರೂ ಈಕೆಯನ್ನು ಟೀಕಿಸಿದ್ದಾರೆ; ಸ್ವಂತ ಮಗಳ ಶಿಕ್ಷಣಕ್ಕಾಗಿ ಹಣವನ್ನು ತೊಡಗಿಸದೆ ಹೀಗೆ ಆಸ್ತಿಯನ್ನು ಸಾರಾಸಗಟಾಗಿ ದಾನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ಧಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಶಾಂಘೈನ ಬೀದಿಯಲ್ಲಿ ಈ ಬೌದ್ಧ ಸನ್ಯಾಸಿನಿಯನ್ನು ಒಬ್ಬ ವ್ಲಾಗರ್ (Vlogger) ಸಂದರ್ಶಿಸಿದ್ದಾರೆ. ಈ ಮಹಿಳೆಯು ತಾನು 2019ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಮತ್ತು ತನ್ನೆಲ್ಲಾ ಆಸ್ತಿ, ಹಣವನ್ನು ದಾನ ಮಾಡಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ಧಾರೆ. ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತರ ವಿಷಯ ತಿಳಿದ ನೆಟ್ಟಿಗರು ಈ ಸನ್ಯಾಸಿನಿಯ ನಿರ್ಧಾರ ತಪ್ಪು ಎಂದು ವಾದಿಸುತ್ತಿದ್ದಾರೆ.
ಇದನ್ನೂ ಓದಿ : ಅಂಗನವಾಡಿ ಮಕ್ಕಳು ಮೊದಲ ಸಲ ಗ್ರಂಥಾಲಯಕ್ಕೆ ಹೋದಾಗ
ಸನ್ಯಾಸಿನಿಯು ತನ್ನ ಮನೆಯನ್ನು ಮಾರಾಟ ಮಾಡಿದಾಗ ದೊರೆತ ಹಣ ಸುಮಾರು ರೂ. 6.5 ಕೋಟಿ. ಈ ಹಣವನ್ನು ದಾನ ಮಾಡಲು ಈಕೆಯ ಪೋಷಕರು ಒಪ್ಪಿದರೂ ಮಗಳು ಮಾತ್ರ ಒಪ್ಪಲಿಲ್ಲ ಎಂಬ ಬೇಸರದಲ್ಲಿ ಈಕೆ ಇದ್ಧಾಳೆ. ‘ನಾನು ಸನ್ಯಾಸಿನಿಯಾದ ನಂತರ ನನ್ನ ಮನೆಯನ್ನು ಮಾರಿ ನನ್ನೆಲ್ಲಾ ಹಣವನ್ನು ನನ್ನ ಪೋಷಕರಿಗೂ, ಮಗಳಿಗೂ ಕೊಡದೆ ದಾನ ಮಾಡಿದ್ದೇನೆ. ನನ್ನ ಪೋಷಕರು ಈ ನಡೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅದು ನಿನ್ನ ಹಣ ನಿನ್ನ ನಿರ್ಧಾರ ಎಂದರು. ಆದರೆ ಇದನ್ನು ಮಗಳು ಮಾತ್ರ ಅರ್ಥ ಮಾಡಿಕೊಳ್ಳಲೇ ಇಲ್ಲ. ಸದ್ಯ ನನ್ನ ಬಳಿ ಹಣ ಇಲ್ಲವಾದ್ದರಿಂದ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಆಕೆ ಶಿಕ್ಷಣಸಾಲವನ್ನು ತೆಗೆದುಕೊಳ್ಳಬಹುದು. ಇನ್ನು ಪದವಿ ಪೂರೈಸಿದ ಮೇಲೆ ಕೆಲಸ ಹುಡುಕಿಕೊಳ್ಳಬಹುದು. ಬಹುಶಃ ಆಕೆಯ ಮದುವೆಗೆ ಮತ್ತು ಅಪಾರ್ಟ್ಮೆಂಟ್ ಖರೀದಿಗೆ ನಾನು ಸಹಾಯ ಮಾಡಬಹುದು ಎಂದು ಆಕೆ ಭಾವಿಸಿದ್ದಳೆನ್ನಿಸುತ್ತದೆ’ ಎಂದು ವಿಡಿಯೋದಲ್ಲಿ ಸನ್ಯಾಸಿನಿಯು ಹೇಳಿದ್ದಾರೆ.
ಇದನ್ನೂ ಓದಿ : ಭಲೇ ಬಾಹುಬಲಿ: ತಲೆಯ ಮೇಲೆ ಬೈಕ್ ಹೊತ್ತು ಸಾಗಿಸುತ್ತಿರುವ ಈ ವ್ಯಕ್ತಿಯ ವಿಡಿಯೋ ವೈರಲ್
ತನ್ನ ಕುಟುಂಬದ ಸದಸ್ಯರಲ್ಲಿ ಕೆಲವರು ನನ್ನ ಮತಾಂತರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಅವರು ಆಸ್ತಿದಾನ ಮಾಡುವ ನನ್ನ ನಿರ್ಧಾರಕ್ಕೆ ಅವರು ಸಹಕಾರ ನೀಡಲಿಲ್ಲ ಎಂದೂ ಹೇಳಿದ್ದಾರೆ.
ಈ ವಿಡಿಯೋ ಅನ್ನು ಲಕ್ಷಾಂತರ ಮಂದಿ ನೋಡಿದ್ದಾರೆ. ಈಕೆಯ ಈ ನಿರ್ಧಾರವನ್ನು ಅನೇಕರು ಟೀಕಿಸಿದ್ಧಾರೆ. ಮಗಳ ಶಿಕ್ಷಣಕ್ಕೆ ಈಕೆ ಸಹಾಯ ಮಾಡಬಹುದಿತ್ತು. ಹೀಗೇಕೆ ಮಾಡಿದಳು? ಇದು ಯಾಕೋ ಸಮಂಜಸವೆನ್ನಿಸುತ್ತಿಲ್ಲ ಎಂದಿದ್ದಾರೆ. ಮಗಳ ಜವಾಬ್ದಾರಿಯನ್ನು ತೆಗೆದುಕೊಳ್ಳದಿರಲು ಕಾರಣವೇನು? ಹೀಗೆ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿ ಅಲ್ಲ ಎಂದಿದ್ದಾರೆ ಹಲವರು. ಇದು ಅತ್ಯಂತ ಸ್ವಾರ್ಥ ಮತ್ತು ಹುಚ್ಚು ನಡೆ ಎಂದಿದ್ದಾರೆ ಕೆಲವರು. ನಿಮ್ಮ ಸ್ವಂತ ಕುಟುಂಬಕ್ಕೇ ನೀವು ಸಹಾಯ ಮಾಡದ ಮೇಲೆ ಹೀಗೆ ಸನ್ಯಾಸ ತೆಗೆದುಕೊಂಡು ಏನು ಪ್ರಯೋಜನ ಎಂದು ಪ್ರಶ್ನಿಸಿದ್ಧಾರೆ ನೆಟ್ಟಿಗರನೇಕರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಇನ್ನುಳಿದ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:41 pm, Sat, 26 November 22