Viral Video: ಈ ಭೂಪ ರೈಲ್ವೇ ಹಳಿಗಳ ಮೇಲೆ ಪಟಾಕಿ ಸುಟ್ಟಿದ್ದು ಈ ಕಾರಣಕ್ಕೆ; ಜೈಪುರದ ರೈಲ್ವೇ ಅಧಿಕಾರಿ ಪ್ರತಿಕ್ರಿಯೆ
Rajasthan: ದೀಪಾವಳಿ ಇನ್ನೇನು ಹೊಸ್ತಿಲಲ್ಲಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವಿ ವ್ಯಕ್ತಿಗಳು ಪಟಾಕಿ ಮತ್ತು ಅದರಿಂದ ಉಂಟಾಗುವ ವಾಯುಮಾಲಿನ್ಯದ ಕುರಿತು ಜನಜಾಗೃತಿ ಮೂಡಿಸುವಲ್ಲಿ ಭಯಂಕರವಾಗಿ ತೊಡಗಿಕೊಂಡಿದ್ದಾರೆ. ಅದೆಷ್ಟು ಭಯಂಕರ ಎಂದರೆ ಇದೀಗ ವೈರಲ್ ಆಗಿರುವ ಈ ವಿಡಿಯೋನೇ ಇದಕ್ಕೆ ಸಾಕ್ಷಿ. ಈ ಭೂಪನ ಕೃತ್ಯವನ್ನು ಗಮನಿಸಿದ ನೆಟ್ಟಿಗರು ಪೊಲೀಸರ ಗಮನಕ್ಕೆ ತಂದಿದ್ದಾರೆ.
Jaipur: ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವವನ್ನು ಗಳಿಸಲು ಇಂದು ಏನೇನೆಲ್ಲ ಸರ್ಕಸ್ ಮಾಡುತ್ತಿದ್ದಾರೆ ಎಂದು ನೋಡುತ್ತಿದ್ದೀರಿ. ಏನೇ ಆದರೂ ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆಯಾಗದಂತೆ ವರ್ತಿಸಬೇಕು ಎನ್ನುವುದು ಅವರಿಗೆ ಅರ್ಥವಾಗುತ್ತಲೇ ಇಲ್ಲ. ಮೆಟ್ರೋ ಮತ್ತು ರೈಲುಗಳಲ್ಲಿ ರೀಲಿಗರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನೆಟ್ಟಿಗರು ಈ ಬಗ್ಗೆ ರೋಸಿಹೋಗಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋ ರೈಲಿನೊಳಗಿನದ್ದಲ್ಲ, ರೈಲು ಹಳಿಗಳ (Railway Track) ಮೇಲಿನದು. ಜೈಪುರದ ರೈಲುಹಳಿಗಳ ಮೇಲೆ ಯೂಟ್ಯೂಬರ್ನೊಬ್ಬ ಪಟಾಕಿ ಸುಟ್ಟಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಗಮನಿಸಿದ ಜೈಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : Viral Video: ರೈಲಿನಲ್ಲಿ ಭೋಜ್ಪುರಿ ಹಾಡಿಗೆ ಯುವತಿಯ ನೃತ್ಯ; ರೋಸಿಹೋದ ನೆಟ್ಟಿಗರು
ಟ್ರೇನ್ ಆಫ್ ಇಂಡಿಯಾ ಎಂಬ X ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಫುಲೇರಾ-ಅಜ್ಮೀರ್ ವಿಭಾಗದ ದಾಂತ್ರಾ ನಿಲ್ದಾಣದ ಬಳಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎನ್ನುವುದು ಈ ಪೋಸ್ಟ್ ಮೂಲಕ ತಿಳಿದುಬಂದಿದೆ. ಹೀಗೆ ಪಟಾಕಿ ಸುಟ್ಟಿದ್ದನ್ನು ನೋಡಿ ಭಯವಾಗುತ್ತಿದೆ. ಇದು ಇನ್ನೇನೋ ಅನಾಹುತಕ್ಕೆ ಎಡೆಮಾಡಿಕೊಡಬಹುದು, ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪ್ರತಿಕ್ರಿಯಿಸಿದ್ದಾರೆ. ಟ್ಯಾಗ್ ಗಮನಿಸಿದ ಜೈಪುರದ ವಾಯುವ್ಯ ರೈಲ್ವೆ ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ರೈಲ್ವೇ ಹಳಿಗಳ ಮೇಲೆ ಪಟಾಕಿ ಸಿಡಿಸುತ್ತಿರುವ ವಿಡಿಯೋ
YouTuber bursting crackers on Railway Tracks!!
Such acts may lead to serious accidents in form of fire, Please take necessary action against such miscreants. Location: 227/32 Near Dantra Station on Phulera-Ajmer Section.@NWRailways @rpfnwraii @RpfNwr @DrmAjmer @GMNWRailway pic.twitter.com/mjdNmX9TzQ
— Trains of India 🇮🇳 (@trainwalebhaiya) November 7, 2023
ಪಟಾಕಿಗಳು ಹೇಗೆ ಮಾಲಿನ್ಯವನ್ನುಂಟು ಮಾಡುತ್ತವೆ ಎನ್ನುವುದನ್ನು ತೋರಿಸುವುದು ಈ ವಿಡಿಯೋದ ಉದ್ದೇಶವಾಗಿದೆ. ನೋಡಿ ಪಟಾಕಿ ಹೇಗೆ ಲಾವಾದಂತೆ ತೋರುತ್ತಿವೆ ಎಂದೂ ಯೂಟ್ಯೂಬರ್ ಹೇಳಿದ್ದಾನೆ. ಅನೇಕರು ಕೂಡಲೇ ಈ ಯೂಟ್ಯೂಬರ್ನನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ವಿಡಿಯೋದಡಿ ಜೈಪುರದ ವಿಭಾಗೀಯ ರೈಲ್ವೇ ವ್ಯವಸ್ಥಾಪಕರು, ‘ನಿಮ್ಮ ಕಾಳಜಿಯನ್ನು ನಾವು ಪ್ರಶಂಸಿಸುತ್ತೇವೆ. ಪ್ರಕರಣ ಸಂಖ್ಯೆ 716/23 ಅಡಿಯಲ್ಲಿ (ಸೆಕ್ಷನ್ 145-147 ಭಾರತೀಯ ರೈಲ್ವೆ ಕಾಯ್ದೆ-1989 ಅಡಿಯಲ್ಲಿ) ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ’ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:18 am, Thu, 9 November 23