ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಇದ್ದ ಬ್ಯಾಗ್ ಕಳವು!
ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲೇ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಡೀ ರಾಜ್ಯದಲ್ಲೇ ಅತಿಹೆಚ್ಚು ಭದ್ರತೆ ಇರುವ ಸ್ಥಳದಲ್ಲೇ ಕಳ್ಳತನದ ಕೃತ್ಯ ನಡೆದಿರುವುದು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ. ಅಲ್ಲದೆ, ಭದ್ರತೆಯ ಕುರಿತೂ ಗಂಭೀರ ಕಳವಳ ಹುಟ್ಟುಹಾಕಿದೆ. ಸದ್ಯ ಘಟನೆ ಸಂಬಂಧ ಆರೋಪಿ ಡಿ ಗ್ರೂಪ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 10: ಅತಿಹೆಚ್ಚಿನ ಭದ್ರತೆ ಇರುವ ಸ್ಥಳಗಳಲ್ಲಿ ಒಂದಾದ ವಿಧಾನಸೌಧದಲ್ಲೇ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಕಳವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವೇಳೆ, ಕೈಚೀಲದಲ್ಲಿದ್ದ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ನಗದು ಸಹಿತ ಕಚೇರಿಯಲ್ಲೇ ಮರೆತು ಹೊರಟಿದ್ದರು. ಮಾರನೇ ದಿನ ಕಚೇರಿಗೆ ಬಂದು ಪರಿಶೀಲಿಸಿದಾಗ ಕೈಚೀಲ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಗಾಬರಿಗೊಂಡ ನವೀನ್ ತಕ್ಷಣ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ವೇಳೆ, ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರನೊಬ್ಬ ಕೈಚೀಲವನ್ನು ಹೊತ್ತುಕೊಂಡು ಹೋಗಿರುವುದು ಪತ್ತೆಯಾಗಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ವಿಧಾನಸೌಧ ಪೊಲೀಸರು ಆರೋಪಿ ಡಿ ಗ್ರೂಪ್ ನೌಕರನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಭದ್ರತಾ ವ್ಯವಸ್ಥೆಗಳ ಕುರಿತು ಸಹ ಪ್ರಶ್ನೆಗಳು ಎದ್ದಿವೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
3 ಭರ್ಜರಿ ಸಿಕ್ಸ್, 7 ಫೋರ್: ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ಶಮಿ
ಬೊಲೆರೋಗೆ ಡಿಕ್ಕಿ ಹೊಡೆದು ಅರ್ಧ ಕಿಮೀ ತಳ್ಳಿಕೊಂಡೋಗಿ ಉರುಳಿಬಿದ್ದ ಕಂಟೇನರ್!
ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?
ರಿಷಬ್ ಶೆಟ್ಟಿ-ಪ್ರಗತಿ ದಾಂಪತ್ಯಕ್ಕೆ 9 ವರ್ಷ; ಮುದ್ದಾದ ವಿಡಿಯೋ ವೈರಲ್

