ಮಾರ್ಗಮಧ್ಯೆ ಕೈಕೊಟ್ಟ ಹೆಡ್‌ಲೈಟ್: ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಲ್ಲೇ 15 ಕಿ.ಮೀ ಬಸ್ ಓಡಿಸಿದ ಚಾಲಕ
ಹುಬ್ಬಳ್ಳಿಯಿಂದ ಅತ್ತಿಗೇರಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ ಹೆಡ್‌ಲೈಟ್ ಸಂಶಿ ಬಳಿ ಕೆಟ್ಟಿತು. ಚಾಲಕ ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಸುಮಾರು 15-20 ಕಿ.ಮೀ. ದೂರ ಚಲಾಯಿಸಿ, ಎಲ್ಲರನ್ನೂ ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸಿದರು. ಗ್ರಾಮೀಣ ಭಾಗದಲ್ಲಿ ಹಳೆಯ ಬಸ್‌ಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಇದು ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ, ಸೆಪ್ಟೆಂಬರ್ 05: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ನ ಹೆಡ್‌ಲೈಟ್ ಮಾರ್ಗಮಧ್ಯೆ ಕೆಟ್ಟ ಪರಿಣಾಮ, ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಚಾಲಕ ಸುಮಾರು 15 ಕಿ.ಮೀ. ದೂರ ಬಸ್ ಚಲಾಯಿಸಿ, ಎಲ್ಲರನ್ನು ಸುರಕ್ಷಿತವಾಗಿ ತಲುಪಿಸಿದ ಘಟನೆ ಹುಬ್ಬಳ್ಳಿ ಸಮೀಪ ನಡೆದಿದೆ. ನಿನ್ನೆ ರಾತ್ರಿ 8 ಗಂಟೆಗೆ ಹುಬ್ಬಳ್ಳಿಯಿಂದ ಅತ್ತಿಗೇರಿಗೆ ಹೊರಟಿದ್ದ ಬಸ್ ಕುಂದಗೋಳ ತಾಲೂಕಿನ ಸಂಶಿ ಬಳಿ ತಾಂತ್ರಿಕ ದೋಷದಿಂದ ಹೆಡ್‌ಲೈಟ್ ಬಂದಾಗಿದೆ. ಪ್ರಯಾಣಿಕರನ್ನು ಅರ್ಧಕ್ಕೆ ಇಳಿಸಲು ಸಾಧ್ಯವಾಗದ ಕಾರಣ, ಬಸ್‌ನಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಟಾರ್ಚ್‌ಗಳನ್ನು ಆನ್ ಮಾಡಿ ಬೆಳಕು ನೀಡಿದರು. ಈ ಬೆಳಕಿನಲ್ಲಿ ಚಾಲಕ ಸಂಶಿಯಿಂದ ಗುಡಗೇರಿ, ಅತ್ತಿಗೇರಿವರೆಗೆ ಬಸ್ ಚಲಾಯಿಸಿದರು. ಸಾಮಾನ್ಯವಾಗಿ 15-20 ನಿಮಿಷಗಳಲ್ಲಿ ತಲುಪುವ ಈ ಮಾರ್ಗವನ್ನು, ಚಾಲಕ ಒಂದೂವರೆ ಗಂಟೆ ನಿಧಾನವಾಗಿ ಚಲಾಯಿಸಿ, ಪ್ರತಿಯೊಬ್ಬ ಪ್ರಯಾಣಿಕರನ್ನು ಅವರ ಗ್ರಾಮಗಳಿಗೆ ಸುರಕ್ಷಿತವಾಗಿ ತಲುಪಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಗ್ರಾಮೀಣ ಭಾಗದಲ್ಲಿ ಓಡಾಡುವ ಹಳೆಯ ಬಸ್‌ಗಳ ಕುರಿತು ಸಾರ್ವಜನಿಕರ ಆಕ್ರೋಶಕ್ಕೆ ಮತ್ತೊಮ್ಮೆ ಕಾರಣವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

