ವಾಲ್ಮೀಕಿ ನಿಗಮದ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಪಾಟೀಲ್ ಯತ್ನಾಳ್

|

Updated on: Jul 01, 2024 | 2:52 PM

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಧಾರಕರೆಂದು ಪೋಸು ನೀಡುವ ಕಾಂಗ್ರೆಸ್, ಬಿಜೆಪಿಯನ್ನು ಸಂವಿಧಾನ ವಿರೋಧಿ ಎನ್ನುತ್ತದೆ ಮತ್ತು ಕೇಂದ್ರದಲ್ಲಿ ಬಿಜೆಪಿಗೆ 400ಕ್ಕಿಂತ ಹೆಚ್ಚು ಸ್ಥಾನ ಸಿಕ್ಕರೆ ಸಂವಿಧಾನ ಬದಲಾಯಿಸುತ್ತಾರೆ ಅಂತ ಅಪಪ್ರಚಾರ ಮಾಡುತ್ತದೆ. ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಧ್ವನಿಯಾಗಿದ್ದ ದಲಿತ ಸಮುದಾಯದ ಹಣ ಲೂಟಿ ಮಾಡುವ ಕಾಂಗ್ರೆಸ್ ಗೆ ಸಂವಿಧಾನದ ಬಗ್ಗೆ ಮಾತಾಡುವ ನೈತಿಕತೆಯಿದೆಯೇ ಎಂದು ಯತ್ನಾಳ್ ಪ್ರಶ್ನಿಸಿದರು.

ವಿಜಯಪುರ: ಯಾವುದೇ ಪಕ್ಷ ಅಧಿಕಾರಕ್ಕೆ ಬಂದಿರಲಿ, ಮುಖ್ಯಮಂತ್ರಿಯನ್ನು ಪಕ್ಷದ ವರಿಷ್ಠರು, ಹೈಕಮಾಂಡ್ ಮಾಡುತ್ತದೆ, ಅದು ಸ್ವಾಮೀಜಿಗಳ ಕೆಲಸವಲ್ಲ, ಅವರು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಗರಣದಲ್ಲಿ ಕೇವಲ ಬಿ ನಾಗೇಂದ್ರ ರಾಜೀನಾಮೆ ನೀಡಿದರೆ ಸಾಲದು. ಯಾಕೆಂದರೆ ಈ ದುರ್ವ್ಯವಹಾರ ಹಣಕಾಸು ಸಚಿವರೂ ಅಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ ನಡೆದಿರುವುದಿಲ್ಲ, ಅವರೂ ಇದಕ್ಕೆ ಹೊಣೆಗಾರರು, ಆ 187ಕೋಟಿ ರೂ. ತೆಲಂಗಾಣದ ಬಾರ್ ಗಳಲ್ಲಿ ಖರ್ಚಾಗಿದೆ, ಅಲ್ಲಿನ ಚಿನ್ನಾಭರಣಗಳ ಅಂಗಡಿಗಳಿಗೆ ಹೋಗಿದೆ ಎಂದು ಯತ್ನಾಳ್ ಹೇಳಿದರು. ವಾಲ್ಮೀಕಿ ನಿಗಮ ಹಗರಣದ ಲಿಂಕ್ ದೆಹಲಿವರೆಗೂ ಇದೆ, ಹಾಗಾಗಿ ಇದರ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕೆಂದು ತಾನು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಆಗ್ರಹಿಸುತ್ತೇನೆ ಎಂದು ಅವರು ಹೇಳಿದರು. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದ ಹಣದ ಲೂಟಿಯಾಗಿದ್ದರೂ ಈ ಪಂಗಡವನ್ನು ಪ್ರತಿನಿಧಿಸುವ ಮಂತ್ರಿಗಳು ಶಾಸಕರು ಯಾಕೆ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ ಅಂತ ಅರ್ಥವಾಗಲ್ಲ ಎಂದು ಯತ್ನಾಳ್ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಒಕ್ಕಲಿಗರ ಏಕಮೇವಾದ್ವಿತೀಯ ನಾಯಕನಾಗಲು ಡಿಸಿಎಂ ಹಲ್ಕಾ ಕೆಲಸ ಮಾಡಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್