ಮುಲ್ಲಾ ಬರಾದಾರ್ ಹತ್ಯೆ ಸುದ್ದಿಯನ್ನು ಅಲ್ಲಗಳೆದ ತಾಲಿಬಾನ್; ಪುರಾವೆಗೆ ಆಡಿಯೋ ಮೆಸೇಜ್ ಬಿಡುಗಡೆ

ಮುಲ್ಲಾ ಬರಾದಾರ್ ಹತ್ಯೆ ಸುದ್ದಿಯನ್ನು ಅಲ್ಲಗಳೆದ ತಾಲಿಬಾನ್; ಪುರಾವೆಗೆ ಆಡಿಯೋ ಮೆಸೇಜ್ ಬಿಡುಗಡೆ
ಮುಲ್ಲಾ ಅಬ್ದುಲ್ ಘನಿ ಬರಾದಾರ್

Afghanistan Updates: ಕಂದಹಾರ್​ನ ದಕ್ಷಿಣದ ನಗರದಲ್ಲಿ ಮುಲ್ಲಾ ಬರಾದಾರ್ ಸಭೆಯಲ್ಲಿ ಭಾಗವಹಿಸುತ್ತಿರುವ ವಿಡಿಯೋ ಫೂಟೇಜ್ ಒಂದನ್ನು ಕೂಡ ತಾಲೀಬಾನ್ ಬಿಡುಗಡೆಗೊಳಿಸಿದೆ. ಅದನ್ನು ರಾಯ್ಟರ್ಸ್ ತಕ್ಷಣ ದೃಢೀಕರಿಸಲು ಸಾಧ್ಯವಾಗಿಲ್ಲ.

TV9kannada Web Team

| Edited By: ganapathi bhat

Sep 14, 2021 | 5:41 PM

ಕಾಬೂಲ್: ವಿರೋಧಿಗಳ ಜೊತೆಗಿನ ಶೂಟೌಟ್​ನಲ್ಲಿ ತಾಲಿಬಾನ್ ಪ್ರಮುಖ ನಾಯಕನೊಬ್ಬ ಸಾವನ್ನಪ್ಪಿದ್ದಾನೆ ಎಂಬ ಸುದ್ದಿಯನ್ನು ತಾಲಿಬಾನ್ ಅಲ್ಲಗಳೆದಿದೆ. ಅಫ್ಘಾನಿಸ್ತಾನದ ಕಾಬೂಲ್​ನಿಂದ ಅಮೆರಿಕಾ ಹಿಂತೆರಳಿದ ಬಳಿಕ, ಒಂದು ತಿಂಗಳ ಅವಧಿಯಲ್ಲಿ ತಾಲಿಬಾನ್​ನಲ್ಲಿ ಆಂತರಿಕ ಬಿರುಕು ಮೂಡಿದೆ ಎಂಬ ವದಂತಿಗಳು ಕೇಳಿಬಂದಿತ್ತು. ಈ ಬಗ್ಗೆ ತಾಲಿಬಾನ್ ವಕ್ತಾರ ಸುಲೈಲ್ ಶಹೀನ್ ಸ್ಪಷ್ಟೀಕರಣ ನೀಡಿದ್ದಾರೆ.

ತಾಲಿಬಾನ್​ನ ಮಾಜಿ ರಾಜಕೀಯ ಮುಖ್ಯಸ್ಥ ಹಾಗೂ ಕಳೆದ ವಾರ ತಾಲಿಬಾನ್ ಸರ್ಕಾರದ ಉಪ ಪ್ರಧಾನಿ ಎಂದು ನೇಮಕ ಆಗಿರುವ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿಯನ್ನು ಸುಲೈಲ್ ಶಹೀನ್ ತಳ್ಳಿ ಹಾಕಿದ್ದಾನೆ. ಘನಿ ಬರಾದಾರ್ ವಾಯ್ಸ್ ಮೆಸೇಜ್ ಒಂದನ್ನು ಇದಕ್ಕೆ ಪುರಾವೆ ಎಂಬಂತೆ ನೀಡಿದ್ದಾನೆ.

ಕಂದಹಾರ್​ನ ದಕ್ಷಿಣದ ನಗರದಲ್ಲಿ ಮುಲ್ಲಾ ಬರಾದಾರ್ ಸಭೆಯಲ್ಲಿ ಭಾಗವಹಿಸುತ್ತಿರುವ ವಿಡಿಯೋ ಫೂಟೇಜ್ ಒಂದನ್ನು ಕೂಡ ತಾಲೀಬಾನ್ ಬಿಡುಗಡೆಗೊಳಿಸಿದೆ. ಅದನ್ನು ರಾಯ್ಟರ್ಸ್ ತಕ್ಷಣ ದೃಢೀಕರಿಸಲು ಸಾಧ್ಯವಾಗಿಲ್ಲ.

ಹಕ್ಕಾನಿ ನೆಟ್​ವರ್ಕ್​ನ ಮುಖ್ಯಸ್ಥ ಸಿರಾಜುದೀನ್ ಹಕ್ಕಾನಿ ಜೊತೆಗೆ ಮುಲ್ಲಾ ಬರಾದಾರ್​ಗೆ ಬಿರುಕು ಮೂಡಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದ ವದಂತಿಗಳು ಹಬ್ಬಿದ್ದವು. ಆ ಬಳಿಕ ಮುಲ್ಲಾ ಬರಾದಾರ್ ಮರಣಿಸಿರುವ ಬಗ್ಗೆಯೂ ಮಾಹಿತಿ ಹರಿದಾಡಿತ್ತು. ಅದನ್ನು ತಾಲಿಬಾನ್ ಸುಳ್ಳು ಎಂದಿದೆ.

ಯುನೈಟೆಡ್ ಸ್ಟೇಟ್ಸ್ ಜೊತೆಗೆ ಮಾತುಕತೆಯ ಕುರಿತಾಗಿ ತಾಲಿಬಾನ್ ಮಿಲಿಟರಿ ಕಮಾಂಡರ್​ಗಳಾದ ಹಕ್ಕಾನಿ ನೆಟ್​ವರ್ಕ್ ನಾಯಕರು ಹಾಗೂ ತಾಲಿಬಾನ್ ರಾಜಕೀಯ ಮುಖ್ಯಸ್ಥರಾದ ಬರಾದಾರ್ ಮಧ್ಯೆ ವಿರೋಧ ಉಂಟಾಗಿರಬಹುದು ಎಂದು ಹೇಳಲಾಗಿತ್ತು. ಈ ಆಂತರಿಕ ಭಿನ್ನಮತದ ಬಗ್ಗೆಯೂ ಸುದ್ದಿಯನ್ನು ತಾಲಿಬಾನ್ ಅಲ್ಲಗಳೆದಿದೆ.

ತಾಲಿಬಾನ್ ಸರ್ಕಾರದ ಮುಖ್ಯಸ್ಥ ಆಗಿರುವ ಬರಾದಾರ್ ಸಾರ್ವಜನಿಕವಾಗಿ ಇತ್ತೀಚೆಗೆ ಕಾಣಿಸಿಕೊಂಡಿಲ್ಲ. ಕತಾರ್ ವಿದೇಶಾಂಗ ಸಚಿವ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿಯನ್ನು ಕಾಬೂಲ್​ನಲ್ಲಿ ಭೇಟಿ ಮಾಡಿದ ತಾಲಿಬಾನ್ ಮಂತ್ರಿಗಳ ಸಾಲಿನಲ್ಲಿ ಕೂಡ ಬರಾದಾರ್ ಕಾಣಿಸಿರಲಿಲ್ಲ.

ಅಫ್ಘಾನಿಸ್ತಾನದ ಕಾಬೂಲ್ ನಗರವನ್ನು ಆಗಸ್ಟ್ 15 ರಂದು ತಾಲಿಬಾನ್ ವಶಪಡಿಸಿಕೊಂಡ ಬಳಿಕ ತಾಲಿಬಾನ್ ಚಳುವಳಿಯ ಪ್ರಮುಖ ನಾಯಕ ಮುಲ್ಲಾ ಹೈಬತುಲ್ಲಾ ಅಖುಂಡ್​ಜಾಡ ಕೂಡ ಸಾರ್ವಜನಿಕವಾಗಿ ಕಂಡಿಲ್ಲ. ಆದರೆ, ಕಳೆದ ವಾರ ತಾಲಿಬಾನ್ ನೂತನ ಸರ್ಕಾರ ಅಧಿಕಾರ ವಹಿಸಿದ ಬಳಿಕ ಆತ ಸಾರ್ವಜನಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ.

ಈ ಮೊದಲು, ತಾಲಿಬಾನ್ ಪ್ರಮುಖ ನಾಯಕ ಮುಲ್ಲಾ ಓಮರ್ ಮರಣಿಸಿದ ಎರಡು ವರ್ಷಗಳ ಬಳಿಕ, ಆ ವಿಚಾರವನ್ನು ಸಾರ್ವಜನಿಕರಿಗೆ ತಿಳಿಸಲಾಗಿತ್ತು. 2015 ರಲ್ಲಿ ಮುಲ್ಲಾ ಓಮರ್ ಮರತಪಟ್ಟಿರುವುದು ತಿಳಿದುಬಂದಿತ್ತು. ಆ ಹಿನ್ನೆಲೆಯಲ್ಲಿ ತಾಲಿಬಾನ್ ನಾಯಕರ ಸಾವಿನ ಸುದ್ದಿ ವೇಗವಾಗಿ ಹಬ್ಬಿತ್ತು.

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ತಾಲಿಬಾನ್ ಕ್ರೌರ್ಯ; ಪಾಕ್ ವಿರುದ್ಧ ತಿರುಗಿಬಿದ್ದ ಅಮೆರಿಕಾ: ಸಂಪೂರ್ಣ ವಿವರ ಇಲ್ಲಿದೆ

ಇದನ್ನೂ ಓದಿ: Afghan Update: ಅಧಿಕಾರಕ್ಕಾಗಿ ತಾಲಿಬಾನ್-ಹಖ್ಖಾನಿ ಸಂಘರ್ಷ, ಮುಲ್ಲಾ ಬಾರದಾರ್​ಗೆ ತೀವ್ರ ಗಾಯ: ಐಎಸ್​ಐ ಮಧ್ಯಪ್ರವೇಶ

Follow us on

Related Stories

Most Read Stories

Click on your DTH Provider to Add TV9 Kannada