AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಪರ ಬೇಹುಗಾರಿಕೆ ಶಂಕೆ: ಅಮೆರಿಕದಲ್ಲಿ ಭಾರತ ಮೂಲದ ಖ್ಯಾತ ರಕ್ಷಣಾ ತಜ್ಞ ಆಶ್ಲೆ ಟೆಲ್ಲಿಸ್ ಬಂಧನ

ಭಾರತೀಯ ಮೂಲದ ಯುಎಸ್ ರಕ್ಷಣಾ ತಜ್ಞ ಆಶ್ಲೇ ಟೆಲ್ಲಿಸ್ ಅಮೆರಿಕದಲ್ಲಿ ಬಂಧನವಾಗಿದ್ದಾರೆ. ಚೀನಾ ಪರ ಬೇಹುಗಾರಿಕೆ ಹಾಗೂ ಸಾವಿರಕ್ಕೂ ಹೆಚ್ಚು ರಹಸ್ಯ ಸೇನಾ ದಾಖಲೆಗಳನ್ನು ಅಕ್ರಮವಾಗಿ ಹೊಂದಿದ ಆರೋಪದ ಮೇಲೆ ಅವರನ್ನು ಬಂಧನ ಮಾಡಲಾಗಿದೆ. ಸಿಸಿಟಿಟಿ ದೃಶ್ಯಾವಳಿಗಳು ಮತ್ತು ಚೀನಾ ಅಧಿಕಾರಿಗಳೊಂದಿಗಿನ ಸಭೆಗಳನ್ನು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ ತಂಡ ಸಾಕ್ಷ್ಯಗಳನ್ನಾಗಿ ಇಟ್ಟುಕೊಂಡಿದೆ.

ಚೀನಾ ಪರ ಬೇಹುಗಾರಿಕೆ ಶಂಕೆ: ಅಮೆರಿಕದಲ್ಲಿ ಭಾರತ ಮೂಲದ ಖ್ಯಾತ ರಕ್ಷಣಾ ತಜ್ಞ ಆಶ್ಲೆ ಟೆಲ್ಲಿಸ್ ಬಂಧನ
ಆಶ್ಲೇ ಟೆಲ್ಲಿಸ್
ಅಕ್ಷಯ್​ ಪಲ್ಲಮಜಲು​​
| Edited By: |

Updated on:Oct 15, 2025 | 9:52 AM

Share

ವಾಷಿಂಗ್ಟನ್, ಅಕ್ಟೋಬರ್ 15: ಭಾರತೀಯ ಮೂಲದ ಖ್ಯಾತ ಯುಎಸ್ ರಕ್ಷಣಾ ತಜ್ಞ ಆಶ್ಲೇಟೆಲ್ಲಿಸ್ (Ashley Tellis) ಅವರನ್ನು ಬಂಧಿಸಲಾಗಿದೆ. ಕಾನೂನುಬಾಹಿರವಾಗಿ ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಅವರನ್ನು ಅಮೆರಿಕದಲ್ಲಿ ಬಂಧನ ಮಾಡಲಾಗಿದೆ. 64 ವರ್ಷದ ಟೆಲ್ಲಿಸ್ ಅವರು ತಮ್ಮ ವಿಯೆನ್ನಾ, ವರ್ಜೀನಿಯಾದ ಮನೆಯಲ್ಲಿ ವಾಯುಪಡೆಯ ತಂತ್ರಗಳು ಮತ್ತು ವಿಧಾನಗಳಿಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ರಹಸ್ಯ ದಾಖಲೆಗಳನ್ನು ಗುಪ್ತವಾಗಿ ಇರಿಸಿಕೊಂಡಿದ್ದರು ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ ತನಿಖೆಯಲ್ಲಿ ಕಂಡುಕೊಂಡಿದೆ. ಶನಿವಾರದಂದು ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು. ಸೋಮವಾರದಂದು ಅಮೆರಿಕ ಕೋರ್ಟ್​​ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.

ಯಾವುದೇ ಕಾರಣಕ್ಕೂ ರಕ್ಷಣಾ ಸಂಬಂಧಿತ ದಾಖಲೆಗಳನ್ನು ತಮ್ಮಲ್ಲಿ ಅನಧಿಕೃತವಾಗಿ ಹೊಂದಿರುವುದು ಅಥವಾ ಉಳಿಸಿಕೊಳ್ಳುವುದನ್ನು ಅಮೆರಿಕದ ಕಾನೂನು ಒಪ್ಪಿಕೊಳ್ಳುವುದಿಲ್ಲ. ಟೆಲ್ಲಿಸ್ ಅವರು ಈ ಎಲ್ಲ ದಾಖಲೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೀಗ 1,000 ಪುಟಗಳಿಗೂ ಹೆಚ್ಚು ವರ್ಗೀಕೃತ ದಾಖಲೆಗಳು ಸೇರಿದಂತೆ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಅಕ್ರಮವಾಗಿ ಹೊಂದಿರುವ ಕಾರಣ ಅವರನ್ನು ಬಂಧಿಸುವಂತೆ ಅಮೆರಿಕದ ಕೋರ್ಟ್​​ ಆದೇಶ ನೀಡಿದೆ. ಟೆಲ್ಲಿಸ್ ಅವರನ್ನು ಅಮೆರಿಕ-ಭಾರತದ ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಯೋಜನೆ ಮಾಡಲಾಗಿತ್ತು. ಇದರ ಜತೆಗೆ ಟೆಲ್ಲಿಸ್ ಅವರು ಅನೇಕ ಆಡಳಿತ್ಮಕ ವಿಚಾರದಲ್ಲಿ ಸೇವೆಗಳನ್ನು ಸಲ್ಲಿಸಿದ್ದಾರೆ.

ಗೌಪ್ಯ ಕಡತಗಳ ಸಂಗ್ರಹ:

ಟೆಲ್ಲಿಸ್ ಅಮೆರಿಕ ಸೇನಾ ವಿಮಾನಗಳ ಸಾಮರ್ಥ್ಯಕ್ಕೆ ಸಂಬಂಧಿಸಿದ ಗೌಪ್ಯ ಕಡತಗಳನ್ನು ಈ ವರ್ಷದ (2025) ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳ ಕಟ್ಟಡದಿಂದ ರಹಸ್ಯ ಮಾಹಿತಿ ಸಂಗ್ರಹಿಸಿದರು. ಇದಕ್ಕೆ ಸಾಕ್ಷಿಯಾಗಿ ಅವರು ಈ ಕಟ್ಟಡದಿಂದ ಹೊರಗೆ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್​​ ಕೂಡ ಆಗಿದೆ. ಈ ಸಿಸಿಟಿವಿಯ ದೃಶ್ಯಗಳನ್ನು ಆಧಾರವಾಗಿಸಿಕೊಂಡು ಅಧಿಕಾರಿಗಳು ಶನಿವಾರ (ಅ.11)ದಂದು ಟೆಲ್ಲಿಸ್ ನಿವಾಸದ ಮೇಲೆ ದಾಳಿ ನಡೆಸಿ, ಶೋಧಕಾರ್ಯ ನಡೆಸಿದ್ದರು, ಈ ವೇಳೆ ಅನೇಕ ದಾಖಲೆಗಳು ಅಧಿಕಾರಿಗಳಿಗೆ ಸಿಕ್ಕಿದೆ.

ಇನ್ನು ಅಧಿಕಾರಿಗಳು ಅಮೆರಿಕ ಕೋರ್ಟ್​​ಗೆ ಸಲ್ಲಿಸಿದ ಅಫಿಡವಿಟ್​​ನಲ್ಲಿ ಕೆಲವು ವರ್ಷಗಳಿಂದ ಹಲವಾರು ಬಾರಿ ಚೀನಾ ಸರ್ಕಾರದ ಅಧಿಕಾರಿಗಳನ್ನು ಟೆಲ್ಲಿಸ್ ಭೇಟಿಯಾಗಿದ್ದಾರೆ. 2023ರ ಏಪ್ರಿಲ್‌ನಲ್ಲಿ, ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಔತಣಕೂಟವೊಂದರಲ್ಲಿ ಚೀನಾ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಈ ವೇಳೆ ಇರಾನ್-ಚೀನಾ ಸಂಬಂಧಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಶ್ಲೇ ಟೆಲ್ಲಿಸ್ ಯಾರು?

ಟೆಲ್ಲಿಸ್ ಅವರು ಮುಂಬೈನಲ್ಲಿ ಜನಿಸಿ, ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಓದಿದ್ದು, ನಂತರ ಚಿಕಾಗೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. ಚಿಕಾಗೋ ವಿಶ್ವವಿದ್ಯಾಲಯದಿಂದಲೇ ರಾಜಕೀಯ ವಿಜ್ಞಾನದಲ್ಲಿ ಎಂಎ ಪದವಿ ಪಡೆದು, ಅಮೆರಿಕ-ಭಾರತ-ಚೀನಾ ನೀತಿ ವಲಯದಲ್ಲಿ ಗುರುತಿಸಿಕೊಂಡಿದ್ದರು. 2001ರಲ್ಲಿ ಅಮೆರಿಕ ಸರ್ಕಾರದಲ್ಲಿ ಕಾರ್ಯನಿರ್ವಹಿಸಲು ಸೇರಿಕೊಳ್ಳುತ್ತಾರೆ. ಭಾರತ ಮತ್ತು ದಕ್ಷಿಣ ಏಷ್ಯಾದ ಬಗ್ಗೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಆಡಳಿತಗಳಿಗೆ ಸಲಹೆ ನೀಡುತ್ತಿದ್ದರು.

ಇದನ್ನೂ ಓದಿ: ಪಾಕಿಸ್ತಾನ ಪ್ರಧಾನಿಯ ಎದುರೇ ನಿಂತು ಮೋದಿ ನನ್ನ ಉತ್ತಮ ಸ್ನೇಹಿತ ಎಂದ ಟ್ರಂಪ್!

ಜಾರ್ಜ್ ಡಬ್ಲ್ಯೂ ಬುಷ್ ಆಡಳಿತದಲ್ಲೂ ಸೇವೆ ಸಲ್ಲಿಸಿದ್ದ ಟೆಲ್ಲಿಸ್

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಅವರ ಅಧಿಕಾರಾವಧಿಯಲ್ಲಿ ಟೆಲ್ಲಿಸ್ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು. ಇನ್ನು ಎಫ್‌ಬಿಐ (Federal Bureau of Investigation) ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರನ್ನು ವಿದೇಶಾಂಗ ಇಲಾಖೆಯ ಸಲಹೆಗಾರ ಮತ್ತು ಪೆಂಟಗನ್‌ನ ನಿವ್ವಳ ಮೌಲ್ಯಮಾಪನ ಕಚೇರಿಯ ಗುತ್ತಿಗೆದಾರ ಎಂದು ಪಟ್ಟಿ ಮಾಡಲಾಗಿದೆ. ವಾಷಿಂಗ್ಟನ್‌ನ ಚಿಂತಕರ ಚಾವಡಿಯಾದ ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್‌ನಲ್ಲಿ ಹಿರಿಯ ಸಹೋದ್ಯೋಗಿಯೂ ಆಗಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:52 am, Wed, 15 October 25