ಭಾರತದ ಕೊವಿಶೀಲ್ಡ್ ಕೊರೊನಾ ಲಸಿಕೆಗೆ ಮಾನ್ಯತೆ ನೀಡಿದ ಆಸ್ಟ್ರೇಲಿಯಾ ಸರ್ಕಾರ
ಆಸ್ಟ್ರೇಲಿಯಾ ಈಗಾಗಲೇ ಫಿಜರ್, ಆಸ್ಟ್ರಾಜೆನೆಕಾ, ಮಾಡರ್ನಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಲಸಿಕೆಗಳನ್ನು ಮಾನ್ಯ ಮಾಡಿತ್ತು. ಇದೀಗ ಭಾರತದ ಕೊವಿಶೀಲ್ಡ್ ಮತ್ತು ಚೀನಾದ ಕೊರೊನಾವ್ಯಾಕ್ಗಳು ಆ ಸಾಲಿಗೆ ಸೇರಿದಂತಾಗಿವೆ.
ಭಾರತದ ಸೀರಂ ಇನ್ಸ್ಟಿಟ್ಯೂಟ್ನ ಕೊವಿಶೀಲ್ಡ್ (Covishield) ಕೊರೊನಾ ಲಸಿಕೆ (Coronavaccine)ಯನ್ನು ಆಸ್ಟ್ರೇಲಿಯಾ ಮಾನ್ಯ ಮಾಡಿದೆ. ಆನ್ಲೈನ್ ಮೂಲಕ ಭಾರತೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ (Australian Prime Minister Scott Morrison) ಈ ವಿಷಯವನ್ನು ದೃಢಪಡಿಸಿದ್ದಾರೆ. ಆಸ್ಟ್ರೇಲಿಯಾ ಚಿಕಿತ್ಸಕ ಸರಕು ಆಡಳಿತ (TGA) ಭಾರತದ ಕೊವಿಶೀಲ್ಡ್ ಕೊರೊನಾ ಲಸಿಕೆಗೆ ಮಾನ್ಯತೆ ನೀಡಿದೆ. ಆಸ್ಟ್ರೇಲಿಯಾಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಸೂಕ್ತ ಕೊರೊನಾ ಲಸಿಕೆ ಪಡೆದಿರಬೇಕು. ಇದೀಗ ಚೀನಾದ ಕೊರೊನಾವ್ಯಾಕ್ (ಸಿನೋವ್ಯಾಕ್) ಮತ್ತು ಭಾರತದ ಕೊವಿಶೀಲ್ಡ್ ಲಸಿಕೆಗಳನ್ನೂ ಮಾನ್ಯ ಮಾಡುವಂತೆ ಟಿಜಿಎ ಸಲಹೆ ನೀಡಿದೆ ಎಂದು ಮಾರಿಸನ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಈಗಾಗಲೇ ಫಿಜರ್, ಆಸ್ಟ್ರಾಜೆನೆಕಾ, ಮಾಡರ್ನಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಲಸಿಕೆಗಳನ್ನು ಮಾನ್ಯ ಮಾಡಿತ್ತು. ಇದೀಗ ಕೊವಿಶೀಲ್ಡ್, ಕೊರೊನಾವ್ಯಾಕ್ಗಳು ಆ ಸಾಲಿಗೆ ಸೇರಿದಂತಾಗಿವೆ. ಕೊವಿಡ್ 19 ಸ್ಥಿತಿಗತಿಯಿಂದಾಗಿ ಅಂತಾರಾಷ್ಟ್ರೀಯ ಪ್ರಯಾಣ ಸ್ಥಗಿತಗೊಂಡಿದ್ದು ಗೊತ್ತೇ ಇದೆ. ಆಸ್ಟ್ರೇಲಿಯಾದ ಹಲವು ಪ್ರಜೆಗಳೂ ಕೂಡ ಭಾರತ ಸೇರಿ ಕೆಲವು ರಾಷ್ಟ್ರಗಳಲ್ಲೇ ಉಳಿದುಕೊಂಡಿದ್ದಾರೆ. ಅಂಥವರು ತಾವು ಇದ್ದಲ್ಲೇ, ಆಯಾ ದೇಶಗಳ ಕೊವಿಡ್ 19 ಲಸಿಕೆ ಪಡೆಯುತ್ತಿದ್ದಾರೆ. ಅಂಥವರಿಗೆ ಆಸ್ಟ್ರೇಲಿಯಾ ಈಗ ಕೊವಿಶೀಲ್ಡ್ ಮತ್ತು ಕೊರೊನಾವ್ಯಾಕ್ ಲಸಿಕೆಗಳಿಗೂ ಮಾನ್ಯತೆ ನೀಡಿದ್ದರಿಂದ ಅನುಕೂಲವಾಗಲಿದೆ. ಭಾರತದಲ್ಲಿದ್ದು, ಕೊವಿಶೀಲ್ಡ್ ಲಸಿಕೆ ಪಡೆದವರು ಇದೀಗ ತಮ್ಮ ದೇಶಕ್ಕೆ ಹೋಗಬಹುದು.
ಹಾಗೇ, ಆಸ್ಟ್ರೇಲಿಯಾಕ್ಕೆ ಹೋಗುವ ಅಂತಾರಾಷ್ಟ್ರೀಯ ಪ್ರಯಾಣಿಕರು ತಾವು ಟಿಜಿಎ ಅನುಮೋದಿತ ಕೊರೊನಾ ಲಸಿಕೆಯನ್ನು ಪಡೆದಿದ್ದೇವೆ ಎಂಬುದಕ್ಕೆ ಸಾಕ್ಷಿಯನ್ನು ಆಡಳಿತಕ್ಕೆ ಒಪ್ಪಿಸಬೇಕಾಗುತ್ತದೆ. ಕೊವಿಡ್ 19 ಸರ್ಟಿಫಿಕೇಟ್ ಹೊಂದಿರಬೇಕಾಗುತ್ತದೆ ಎಂದು ಆಸ್ಟ್ರೇಲಿಯಾ ಹೈಕಮೀಷನ್ನ ವಕ್ತಾರರೊಬ್ಬರು ತಿಳಿಸಿದ್ದಾರೆ. ಅಂದಹಾಗೆ, ಈಗ ಆಸ್ಟ್ರೇಲಿಯಾ ಕೊವಿಶೀಲ್ಡ್ ಲಸಿಕೆಯನ್ನು ಮಾನ್ಯ ಮಾಡಿರುವುದರಿಂದ ಆಸ್ಟ್ರೇಲಿಯಾಕ್ಕೆ ಹೋಗಲಿರುವ ಭಾರತದ ಪ್ರವಾಸಿಗರಿಗೆ ಮತ್ತು ಶಿಕ್ಷಣಕ್ಕಾಗಿ ಹೋಗಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಎಷ್ಟರಮಟ್ಟಿಗೆ ಅನುಕೂಲವಾಗಲಿದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಯಾಕೆಂದರೆ ಪ್ರಧಾನಿ ಸ್ಕಾಟ್ ಮಾರಿಸನ್ ಮಾತನಾಡುತ್ತ, ಇದೀಗ ಕೊವಿಶೀಲ್ಡ್ ಮತ್ತು ಕೊರೊನಾವ್ಯಾಕ್ ಲಸಿಕೆಗೆ ಮಾನ್ಯತೆ ನೀಡಿರುವುದು ಒಂದು ಮೈಲಿಗಲ್ಲಾಗಿದೆ. ಇದರಿಂದ ಬೇರೆ ರಾಷ್ಟ್ರಗಳಲ್ಲಿ ಸಿಲುಕಿರುವ ಆಸ್ಟ್ರೇಲಿಯನ್ನರು ಆದಷ್ಟು ಬೇಗನೇ ತಮ್ಮ ಕುಟುಂಬ ಸೇರಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Air India ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್: ಮಾಧ್ಯಮ ವರದಿ ತಪ್ಪು ಎಂದ ಸರ್ಕಾರ
Conversion Law: ಮತಾಂತರ ವಿರೋಧಿ ಕಾನೂನು ತರುವ ರೀತಿ ಇದಲ್ಲ; ಕಾರಣ ಇಲ್ಲಿದೆ ನೋಡಿ
Published On - 3:23 pm, Fri, 1 October 21