ಆಕಸ್ಮಿಕವಾಗಿ ಗಡಿ ದಾಟಿದ ಭಾರತೀಯ ಯೋಧನನ್ನು ಬಂಧಿಸಿದ ಪಾಕಿಸ್ತಾನ
182ನೇ ಬಿಎಸ್‌ಎಫ್ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಪಿ.ಕೆ ಸಿಂಗ್ ಅವರನ್ನು ಆಕಸ್ಮಿಕವಾಗಿ ಪಂಜಾಬ್ ಗಡಿ ದಾಟಿದ ನಂತರ ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದಾರೆ. ಅವರ ಸುರಕ್ಷಿತ ಬಿಡುಗಡೆಗಾಗಿ ಎರಡೂ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದೆ. ಬಿಎಸ್‌ಎಫ್ ಸೈನಿಕ ಸಮವಸ್ತ್ರದಲ್ಲಿದ್ದರು ಮತ್ತು ಅವರ ಸರ್ವಿಸ್ ರೈಫಲ್ ಅನ್ನು ಹೊಂದಿದ್ದರು. ಬಿಸಿಲ ಝಳದಿಂದಾಗಿ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಮುಂದಕ್ಕೆ ಹೋದಾಗ ಅವರು ರೈತರೊಂದಿಗೆ ನಡೆದು ಹೋಗುತ್ತಿದ್ದರು. ಆಗ ರೇಂಜರ್‌ಗಳು ಅವರನ್ನು ಬಂಧಿಸಿದ್ದಾರೆ.

ನವದೆಹಲಿ, ಏಪ್ರಿಲ್ 24: ಭಾರತ ಮತ್ತು ಪಾಕಿಸ್ತಾನದ (Pakistan) ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈಗಾಗಲೇ ಎರಡೂ ದೇಶಗಳು ಕೆಲವು ಒಪ್ಪಂದಗಳನ್ನು ರದ್ದುಗೊಳಿಸುವ ಮೂಲಕ ಪರಸ್ಪರ ದೇಶಗಳ ನಾಗರಿಕರಿಗೆ ವೀಸಾ ಸೇವೆಯನ್ನು ರದ್ದುಗೊಳಿಸಿವೆ. ಈ ನಡುವೆ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ ಭಾರತದ ಬಿಎಸ್‌ಎಫ್ ಯೋಧನನ್ನು ಪಾಕಿಸ್ತಾನ ಬಂಧಿಸಿದೆ. ಪಂಜಾಬ್ ಗಡಿಯನ್ನು ಆಕಸ್ಮಿಕವಾಗಿ ದಾಟಿದ ನಂತರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧನನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದಾರೆ. ಅವರ ಬಿಡುಗಡೆಗಾಗಿ ಎರಡೂ ದೇಶಗಳ ಸೇನಾ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. “ಏಪ್ರಿಲ್ 23ರ ಬುಧವಾರ ಕರ್ತವ್ಯದಲ್ಲಿರುವಾಗ ಪಂಜಾಬ್‌ನ ಫಿರೋಜ್‌ಪುರದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿದ ನಂತರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಜವಾನನನ್ನು ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದ್ದಾರೆ. ಸೈನಿಕನ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ಸಭೆ ಕರೆಯಲಾಗಿದೆ.” ಎಂದು ಅವರು ತಿಳಿಸಿದ್ದಾರೆ.
ಬುಧವಾರ ಫಿರೋಜ್‌ಪುರ ಗಡಿಯುದ್ದಕ್ಕೂ 182ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಪಿ,ಕೆ ಸಿಂಗ್ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆ ಸೈನಿಕ ಸಮವಸ್ತ್ರದಲ್ಲಿದ್ದರು ಮತ್ತು ಅವರ ಸರ್ವಿಸ್ ರೈಫಲ್ ಅನ್ನು ಹೊಂದಿದ್ದರು. ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಮುಂದಕ್ಕೆ ಹೋದಾಗ ರೇಂಜರ್‌ಗಳು ಅವರನ್ನು ಬಂಧಿಸಿದರು. ಅವರ ಬಿಡುಗಡೆಗಾಗಿ ಎರಡೂ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದೆ.
ಇದನ್ನೂ ಓದಿ: ಪಾಕಿಸ್ತಾನಿ ನಾಗರಿಕರಿಗೆ ವೀಸಾ ಸೇವೆ ರದ್ದು, ಏಪ್ರಿಲ್ 27ರೊಳಗೆ ಭಾರತ ಬಿಟ್ಟು ತೆರಳಲು ಆದೇಶ
ಇಂತಹ ಘಟನೆಗಳು ಈ ಹಿಂದೆ ಎರಡೂ ಕಡೆಯ ನಡುವೆ ಸಂಭವಿಸಿವೆ. ಆದರೆ, ಈಗ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಪಾಕಿಸ್ತಾನದ ವಿರುದ್ಧ ಹಲವಾರು ಕ್ರಮಗಳನ್ನು ತೆಗೆದುಕೊಂಡ ನಂತರ ನಡೆದಿರುವ ಈ ಘಟನೆ ಮಹತ್ವ ಪಡೆದಿದೆ. ಈಗಾಗಲೇ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿರುವುದರಿಂದ ಈ ವಿಷಯ ದೊಡ್ಡದಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಪಹಲ್ಗಾಮ್ ಎನ್ನುವ ಸ್ವರ್ಗದಲ್ಲಿ ತೇಲಾಡುವಾಗ ಕಣ್ಣೆದುರೇ ಗಂಡನನ್ನ ಕೊಂದ ಉಗ್ರರ ಭೀಕರತೆ ಬಿಚ್ಚಿಟ್ಟ ಪತ್ನಿ
ಪ್ರಸ್ತುತ ಆ ಸೈನಿಕನ ಬಿಡುಗಡೆಗೆ ಮಾತುಕತೆಗಳು ನಡೆಯುತ್ತಿವೆ. ಆದರೆ ಅವರನ್ನು ಇನ್ನೂ ಹಿಂತಿರುಗಿಸಲಾಗಿಲ್ಲ. ಅವರು ಸುರಕ್ಷಿತವಾಗಿ ಮರಳಲು ಬೇಕಾಗಿರುವ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Thu, 24 April 25