Covaxin Deal: ಮುರಿದುಬಿತ್ತು ಭಾರತ್ ಬಯೋಟೆಲ್-ಬ್ರೆಜಿಲ್ ಕೊವ್ಯಾಕ್ಸಿನ್ ಒಡಂಬಡಿಕೆ: ಎಲ್ಲಿ ತಪ್ಪಾಯ್ತು? ಮುಂದೇನು?
ಬ್ರೆಜಿಲ್ ಸರ್ಕಾರವು ಶನಿವಾರ ಭಾರತೀಯ ವ್ಯಾಕ್ಸಿನ್ ತಯಾರಿಕಾ ಕಂಪನಿ ನಡೆಸುತ್ತಿದ್ದ ಎಲ್ಲ ಕ್ಲಿನಿಕಲ್ ಟ್ರಯಲ್ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಕೊವ್ಯಾಕ್ಸಿನ್ ಲಸಿಕೆ ಸರಬರಾಜಿಗಾಗಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಬ್ರೆಜಿಲ್ ಸರ್ಕಾರವು ರದ್ದುಪಡಿಸಿದೆ. ಅವ್ಯವಹಾರ ನಡೆದಿರಬಹುದು ಎಂಬ ಶಂಕೆ ಬ್ರೆಜಿಲ್ ಸರ್ಕಾರದ ನಡೆಗೆ ಕಾರಣ. ಈ ಬೆಳವಣಿಗೆಯ ನಂತರ ಭಾರತ್ ಬಯೊಟೆಕ್ ಸಹ ಬ್ರಿಜಿಲ್ನ ಎರಡು ಕಂಪನಿಗಳೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ರದ್ದುಪಡಿಸಿದೆ. ಬ್ರೆಜಿಲ್ ಸರ್ಕಾರವು ಶನಿವಾರ ಭಾರತೀಯ ವ್ಯಾಕ್ಸಿನ್ ತಯಾರಿಕಾ ಕಂಪನಿ ನಡೆಸುತ್ತಿದ್ದ ಎಲ್ಲ ಕ್ಲಿನಿಕಲ್ ಟ್ರಯಲ್ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಬ್ರೆಜಿಲ್ ಸರ್ಕಾರವು ಭಾರತ್ ಬಯೋಟೆಕ್ನೊಂದಿಗೆ 2 ಕೋಟಿ ಲಸಿಕೆಗಳ ಪೂರೈಕೆಗೆ ಮಾಡಿಕೊಂಡಿದ್ದ ಒಪ್ಪಂದ ರದ್ದುಪಡಿಸಿದ ನಂತರ ನಡೆದ ಸರಣಿ ಬೆಳವಣಿಗೆಗಳ ಭಾಗವಾಗಿ ಈ ವಿದ್ಯಮಾನಗಳು ವರದಿಯಾಗಿವೆ.
ಭಾರತ್ ಬಯೋಟೆಕ್ ಮತ್ತು ಬ್ರೆಜಿಲ್ ಸರ್ಕಾರದ ನಡುವಣ ಒಪ್ಪಂದದಲ್ಲಿ ಈವರೆಗೆ ಏನೆಲ್ಲಾ ಆಯ್ತು ಎಂಬ ವಿವರಗಳು ಇಲ್ಲಿವೆ.
ನವೆಂಬರ್ 2020ರಲ್ಲಿ ಭಾರತ್ ಬಯೋಟೆಕ್ ಬ್ರೆಜಿಲ್ನ ಪ್ರೆಕಿಸಾ ಮೆಡಿಕಮೆಂಟೊಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸಿಟಿಕಲ್ಸ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಬ್ರೆಜಿಲ್ನಲ್ಲಿ 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಸಲು ಸಹಕಾರ, ಮಾರ್ಗದರ್ಶನ ನೀಡಲು ಹಾಗೂ ಅಲ್ಲಿನ ಔಷಧ ನಿಯಂತ್ರಕರಿಂದ ಲಸಿಕೆಗೆ ಅನುಮೋದನೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಹಕಾರ ಪಡೆದುಕೊಳ್ಳುವುದು ಈ ಒಪ್ಪಂದ ಮುಖ್ಯ ಉದ್ದೇಶವಾಗಿತ್ತು.
ಈವರೆಗೆ ಬ್ರೆಜಿಲ್ನಲ್ಲಿ ಪ್ರೆಕಿಸಾ ಕಂಪನಿಯು ಭಾರತ್ ಬಯೊಟೆಕ್ನ ಪ್ರತಿನಿಧಿಯಾಗಿತ್ತು. ಆದರೆ ಇದೀಗ ಭಾರತ್ ಬಯೊಟೆಕ್ ಈ ಒಪ್ಪಂದ ರದ್ದುಪಡಿಸಿಕೊಂಡಿರುವುದರಿಂದ ಸಹಜವಾಗಿಯೇ ಮುಂದಿನ ದಿನಗಳಲ್ಲಿ ಭಾರತ್ ಬಯೊಟೆಕ್ ಪರವಾಗಿ ಪ್ರೆಕಿಸಾ ಕ್ಲಿನಿಕಲ್ ಟ್ರಯಲ್ಸ್ ನಡೆಸಲು ಸಾಧ್ಯವಾಗುವುದಿಲ್ಲ.
ಆರೋಪ ಕಾರಣವೇ ಅಥವಾ ಪಾಲುದಾರಿಕೆ ಸಮಸ್ಯೆಯೇ? ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೊ ನೇತೃತ್ವದ ಸರ್ಕಾರವು ಭಾರತ್ ಬಯೊಟೆಕ್ನೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಹಲವು ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದವು. ಬ್ರೆಜಿಲ್ ಆರೋಗ್ಯ ಇಲಾಖೆಯ ವಿಷಲ್ ಬ್ಲೋಯರ್ ಒಬ್ಬರು ಭಾರತ್ ಬಯೊಟೆಕ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಉನ್ನತ ಹಂತದಿಂದ ಒತ್ತಡ ಬಂದಿತ್ತು ಎಂದು ಹೇಳಿದ್ದರು. ಫಿಜರ್ ಕಂಪನಿಯು ಬ್ರೆಜಿಲ್ಗೆ ಕಡಿಮೆ ಮೊತ್ತದಲ್ಲಿ ಲಸಿಕೆಗಳನ್ನು ನೀಡುತ್ತಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈ ಬೆಳವಣಿಗೆಯ ನಂತರ ಬ್ರೆಜಿಲ್ ಸರ್ಕಾರವು ಒಪ್ಪಂದವನ್ನು ರದ್ದುಪಡಿಸಿಕೊಂಡಿತ್ತು. ಭಾರತ್ ಬಯೊಟೆಕ್ಗೆ ಈವರೆಗೆ ಯಾವುದೇ ಹಣ ಪಾವತಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಭಾರತ್ ಬಯೊಟೆಕ್ ಸಹ ಈ ಬಗ್ಗೆ ಸ್ಪಷ್ಟನೆ ನೀಡಿ ಬ್ರೆಜಿಲ್ ಸರ್ಕಾರದಿಂದ ಲಸಿಕೆ ಪೂರೈಕೆಗಾಗಿ ಮುಂಗಡ ಹಣ ಪಡೆದುಕೊಂಡಿರಲಿಲ್ಲ ಎಂದು ಹೇಳಿತ್ತು.
ಈ ಎರಡೂ ಕಂಪನಿಗಳಿಂದ ಭಾರತ್ ಬಯೋಟೆಕ್ ಇದೀಗ ಅಂತರ ಕಾಪಾಡಿಕೊಂಡಿದೆ. ಯಾರ ಬಗ್ಗೆಯೂ ಬೊಟ್ಟು ಮಾಡಿ ತೋರಿಸದಿದ್ದರೂ ಕೆಲ ಆರೋಪಗಳನ್ನು ಪರೋಕ್ಷವಾಗಿ ಮಾಡಿದೆ. ‘ನಮ್ಮ ಕಂಪನಿಯ ಅಧಿಕಾರಿಯೊಬ್ಬರದ್ದು ಎನ್ನಲಾದ ಪತ್ರವೊಂದು ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಈ ದಾಖಲೆಗಳೊಂದಿಗೆ ನಮಗಾಗಲಿ, ನಮ್ಮ ಕಂಪನಿಯ ಪ್ರತಿನಿಧಿಗಳಿಗಾಗಲಿ ಸಂಬಂಧವಿಲ್ಲ. ನಾವು ಈ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸುತ್ತೇವೆ’ ಎಂದು ಭಾರತ್ ಬಯೊಟೆಕ್ ಶುಕ್ರವಾರ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ತಿಳಿಸಿತ್ತು.
ಬ್ರೆಜಿಲ್ನಲ್ಲಿ ಕೊವ್ಯಾಕ್ಸಿನ್ಗೆ ಅನುಮೋದನೆ ಸಿಕ್ಕಿದೆಯೇ? ಈ ಒಪ್ಪಂದವು ಊರ್ಜಿತದಲ್ಲಿದ್ದಾಗ ಭಾರತ್ ಬಯೊಟೆಕ್ ಕಂಪನಿಯು ಬ್ರೆಜಿಲ್ನ ಆರೋಗ್ಯ ನಿಯಂತ್ರಕರ ಕಚೇರಿ ‘ಅನ್ವಿಸಾ’ದಿಂದ ಅನುಮೋದನೆ ಪಡೆದುಕೊಂಡಿತ್ತು ಎಂದು ಹೇಳಲಾಗಿತ್ತು. ಆದರೆ ನಂತರದ ದಿನಗಳಲ್ಲಿ, ಅಂದರೆ ಜೂನ್ 4ರಂದು ಈ ಕುರಿತು ಸ್ಪಷ್ಟನೆ ನೀಡಿದ ಅನ್ವಿಸಾ, ನಿಯಂತ್ರಿಕ ಪರಿಸರದಲ್ಲಿ ಮಾತ್ರ ಲಸಿಕೆ ಹಂಚಿಕೆಗೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿತ್ತು. ಇದೀಗ ಈ ಒಪ್ಪಂದವು ಅನೂರ್ಜಿತಗೊಂಡಿದೆ. ಅನ್ವಿಸಾ ಜೊತೆಗೆ ಕೆಲಸ ಮಾಡಿ, ಕಾನೂನು ನಿಯಂತ್ರಕರ ಅನುಮೋದನೆಯನ್ನು ಮತ್ತೊಮ್ಮೆ ಪಡೆದುಕೊಳ್ಳಲು ಯತ್ನಿಸಲಾಗುವುದು ಎಂದು ಭಾರತ್ ಬಯೊಟೆಕ್ ಹೇಳಿದೆ.
ಬ್ರೆಜಿಲ್ನಲ್ಲಿ ಕೊವ್ಯಾಕ್ಸಿನ್ ಅನುಮೋದನೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ಪ್ರಕ್ರಿಯೆಗಳು ನಡೆಯುತ್ತಿವೆ. ತುರ್ತು ಬಳಕೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯೊಂದು ಇನ್ನೂ ಬಾಕಿಯಿದೆ. ಕ್ಲಿನಿಕಲ್ ಟ್ರಯಲ್ ನಡೆಸಲು ಶಿಷ್ಟಾಚಾರಗಳನ್ನು ಅಂತಿಮಗೊಳಿಸುವ ಕಾರ್ಯವೂ ಪೂರ್ಣಗೊಂಡಿಲ್ಲ. ಭಾರತ್ ಬಯೊಟೆಕ್ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ ಬ್ರೆಜಿಲ್ ಆರೋಗ್ಯ ಇಲಾಖೆಯು ಈವರೆಗಿನ ಬೆಳವಣಿಗೆಗಳನ್ನು ಕೂಲಂಕಷ ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ.
(Bharat Biotechs Covaxin deal with Brazil What went wrong here is an explainer on All you need to know)
ಇದನ್ನೂ ಓದಿ: Covaxin Vaccine: ಮಾಲೂರಿನಲ್ಲಿ ಕೊವ್ಯಾಕ್ಸಿನ್ ತಯಾರಿ ಆರಂಭ: ತಿಂಗಳಿಗೆ 1 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಉತ್ಪಾದನೆಗೆ ಯೋಜನೆ
ಇದನ್ನೂ ಓದಿ: ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಭರವಸೆ ಹುಸಿ; 10 ಕೋಟಿ ಬದಲು ಕೇವಲ 2.6 ಕೋಟಿ ಡೋಸ್ ಲಸಿಕೆ ಉತ್ಪಾದನೆ
Published On - 7:22 pm, Sat, 24 July 21