1979ರಿಂದ ಇಲ್ಲಿಯವರೆಗೆ ಜನಸಂದಣಿಯಿಂದ ನಡೆದ 30 ಭೀಕರ ವಿಪತ್ತುಗಳು ಇಲ್ಲಿವೆ
ಹಬ್ಬ, ಪಾರ್ಟಿ, ಯಾತ್ರೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಜನಸಂಧಣಿ ಉಂಟಾಗಿ ದುರ್ಘಟನೆಗಳು ಸಂಭವಿಸುತ್ತವೆ. ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿದ್ದು, ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಜನರು ಒಂದೆಡೆ ಸೇರುವುದು ಸಾಮಾನ್ಯವಾಗಿದೆ. ಆದರೆ ವಿಶ್ವದಲ್ಲಿ ನಡೆಯುವ ಕೆಲವೊಂದು ಹಬ್ಬಗಳು ವಿಶ್ವ ಖ್ಯಾತಿ ಗಳಿಸಿದೆ. ಇಂತಹ ಹಬ್ಬಗಳಿಗೆ ಅಥವಾ ಪಾರ್ಟಿ ಅಥವಾ ಕಾರ್ಯಕ್ರಮಗಳಿಗೆ ಬರುವ ಸಂಖ್ಯೆ ಸಹಸ್ರಾರು. ಒಂದಷ್ಟು ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಿದರೆ ಇನ್ನೊಂದಷ್ಟು ಕಾರ್ಯಕ್ರಮಗಳು ದುರ್ಘಟನೆಯಿಂದ ಅಂತ್ಯಗೊಳ್ಳುತ್ತವೆ. ನಿನ್ನೆಯಷ್ಟೇ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಹ್ಯಾಲೋವೀನ್ ಹಬ್ಬದ ಪಾರ್ಟಿಯಲ್ಲಿ ಜನಸಂಧಣಿ ಹೆಚ್ಚಾಗಿ ನಡೆದ ಕಾಲ್ತುಳಿತ ಘಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೇ ರೀತಿ ಈ ಹಿಂದೆಯೂ ಹಲವಾರು ಘಟನೆಗಳು ನಡೆದಿವೆ. ಈ ಸುದ್ದಿಯಲ್ಲಿ 1979 ಮತ್ತು ಅದರ ನಂತರ ಜನಸಂದನಿಯಿಂದ ವಿಶ್ವದಲ್ಲಿ ಸಂಭವಿಸಿದ ವಿಪತ್ತುಗಳು ಇಲ್ಲಿವೆ ನೋಡಿ.
- 1979 ಡಿಸೆಂಬರ್ 3ರಂದು ಸಿನ್ಸಿನಾಟಿಯ ರಿವರ್‌ಫ್ರಂಟ್ ಕೊಲಿಸಿಯಂನಲ್ಲಿ ನಡೆದ ದಿ ಹೂ ಅವರ ಸಂಗೀತ ಕಚೇರಿಯಲ್ಲಿ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಅಭಿಮಾನಿಗಳು ಒಮ್ಮಿಂದೊಮ್ಮೆಲೆ ನುಗ್ಗಿದ್ದರಿಂದ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದರು.
- 1980ರ ಜನವರಿ 20ರಂದು ಕೊಲಂಬಿಯಾದ ಸಿನ್ಸಿಲೆಜೊದಲ್ಲಿ ಗೂಳಿ ಕಾಳಗ ಆಯೋಜಿಸಲಾಗಿತ್ತು. ಅದರಂತೆ ವೀಕ್ಷಕರಿಗಾಗಿ ತಾತ್ಕಾಲಿಕ ನಾಲ್ಕು ಅಂತಸ್ತಿನ ಮರದ ಗ್ಯಾಲರಿ ನಿರ್ಮಾಣ ಮಾಡಲಾಗಿತ್ತು. ಇದರ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತಿದ್ದರಿಂದ ಮರದ ಗ್ಯಾಲರಿ ಕುಸಿದು ಸುಮಾರು 200 ವೀಕ್ಷಕರು ಸಾವನ್ನಪ್ಪಿದ್ದರು.
- 1982ರ ಅಕ್ಟೋಬರ್ 20ರಂದು ಮಾಸ್ಕೋದ ಲುಜ್ನಿಕಿ ಸ್ಟೇಡಿಯಂನಲ್ಲಿ ಸ್ಪಾರ್ಟಕ್ ಮಾಸ್ಕೋ ಮತ್ತು ನೆದರ್ಲ್ಯಾಂಡ್ಸ್‌ನ ಹಾರ್ಲೆಮ್ ನಡುವಿನ UEFA ಕಪ್ ಪಂದ್ಯದ ವೇಳೆ ನಡೆದ ದುರ್ಘಟನೆಯಲ್ಲಿ 66 ಜನರು ಸಾವನ್ನಪ್ಪಿದ್ದರು.
- 1985ರ ಮೇ 28ರಂದು ಬ್ರಸೆಲ್ಸ್‌ನ ಹೇಸೆಲ್ ಸ್ಟೇಡಿಯಂನಲ್ಲಿ ಲಿವರ್‌ಪೂಲ್ ಮತ್ತು ಜುವೆಂಟಸ್ ನಡುವಿನ 1985 ಯುರೋಪಿಯನ್ ಕಪ್ ಫೈನಲ್ ಪಂದ್ಯದಲ್ಲಿ ನಡೆದ ಅಭಿಮಾನಿಗಳ ಹಿಂಸಾಚಾರದಲ್ಲಿ 39 ಜನರು ಸಾವನ್ನಪ್ಪಿದ್ದರು.
- 1988ರ ಮಾರ್ಚ್ 13ರಂದು ನೇಪಾಳದ ಕಠ್ಮಂಡುವಿನಲ್ಲಿ ಹಠಾತ್ ಆಲಿಕಲ್ಲು ಮಳೆಯಿಂದ ತಪ್ಪಿಸಿಕೊಳ್ಳಲು ಸಾವಿರಾರು ಸಾಕರ್ ಅಭಿಮಾನಿಗಳು ಬೀಗ ಹಾಕಿದ ಕ್ರೀಡಾಂಗಣಕ್ಕೆ ನುಗ್ಗಿದಾಗ ಪರಿಣಾಮ ನಡೆದ ಕಾಲ್ತುಳಿತ ಪ್ರಕರಣದಲ್ಲಿ 93 ಜನರು ಸಾವನ್ನಪ್ಪಿದ್ದರು.
- 1989ರ ಏಪ್ರಿಲ್ 15ರಂದು ಇಂಗ್ಲೆಂಡ್‌ನ ಶೆಫೀಲ್ಡ್‌ನಲ್ಲಿ ಕಿಕ್ಕಿರಿದ ಹಿಲ್ಸ್‌ಬರೋ ಕ್ರೀಡಾಂಗಣದಲ್ಲಿ ನಡೆದ ದುರ್ಘಟನೆಯಲ್ಲಿ 97 ಜನರು ಸಾವನ್ನಪ್ಪಿ ನೂರಾರು ಜನರು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಓರ್ವ 2021 ರಲ್ಲಿ ಮೃತಪಟ್ಟಿದ್ದನು.
- 1990ರ ಜುಲೈ 2ರಂದು ಸೌದಿ ಅರೇಬಿಯಾದಲ್ಲಿ ನಡೆದ ವಾರ್ಷಿಕ ಹಜ್ ಸಮಯದಲ್ಲಿ 1,426 ಮುಸ್ಲಿಂ ಯಾತ್ರಿಕರು ಮೃತಪಟ್ಟಿದ್ದರು.
- 1991ರ ಜನವರಿ 13ರಂದು ದಕ್ಷಿಣ ಆಫ್ರಿಕಾದ ಓಪನ್‌ಹೈಮರ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ನಡುವೆ ಜಗಳ ನಡೆದಿದೆ. ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನದಲ್ಲಿ ನಡೆದ ಕಾಲ್ತುಳಿತದಲ್ಲಿ 42 ಜನರು ಸಾವನ್ನಪ್ಪಿದ್ದರು.
- 1994ರ ಮೇ 23ರಂದು ಹಜ್‌ನಲ್ಲಿ ನಡೆದ ಕಾಲ್ತುಳಿದಲ್ಲಿ 270 ಮುಸ್ಲಿಂ ಯಾತ್ರಿಕರು ಮೃತಪಟ್ಟಿದ್ದರು.
- 1994ರ ನವೆಂಬರ್ 23ರಂದು ಭಾರತದ ನಾಗ್ಪುರದಲ್ಲಿ ರಾಜಕೀಯ ಪ್ರತಿಭಟನೆಯ ಸಂದರ್ಭದಲ್ಲಿ 113 ಮಂದಿ ಸಾವನ್ನಪ್ಪಿದ್ದರು.
- 1996ರ ಅಕ್ಟೋಬರ್ 16ರಂದು ಗ್ವಾಟೆಮಾಲಾ ಸಿಟಿಯಲ್ಲಿ ಗ್ವಾಟೆಮಾಲಾ ಮತ್ತು ಕೋಸ್ಟರಿಕಾ ನಡುವಿನ ವಿಶ್ವಕಪ್ ಅರ್ಹತಾ ಪಂದ್ಯದ ಮೊದಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಜನಸಂದಣಿ ಹೆಚ್ಚಾದ ಪರಿಣಾಮ 84 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದರೆ 147 ಮಂದಿ ಗಾಯಗೊಂಡಿದ್ದರು.
- 1998ರ ಏಪ್ರಿಲ್ 9ರಂದು ಮೆಕ್ಕಾದ ಸೇತುವೆಯ ಮೇಲೆ ಯಾತ್ರಾರ್ಥಿಗಳ ಜನಸಂದಣಿಯಿಂದಾಗಿ 118 ಹಜ್ ಯಾತ್ರಿಕರು ಸಾವನ್ನಪ್ಪಿದ್ದರು.
- 2001ರ ಏಪ್ರಿಲ್ 11ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿರುವ ಎಲ್ಲಿಸ್ ಪಾರ್ಕ್‌ನಲ್ಲಿ ನಡೆದ ಸಾಕರ್ ಪಂದ್ಯದ ವೇಳೆ ಕನಿಷ್ಠ 43 ಜನರು ಸಾವನ್ನಪ್ಪಿದ್ದರು.
- 2001ರ ಮೇ 9ರಂದು ಘಾನಾದ ರಾಜಧಾನಿ ಅಕ್ರಾದಲ್ಲಿನ ಕ್ರೀಡಾಂಗಣದಲ್ಲಿ ಪೊಲೀಸರು ಅಶ್ರುವಾಯು ಗುಂಡು ಹಾರಿಸಿದಾಗ 120ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
- 2003ರ ಫೆಬ್ರವರಿ 17ರಂದು ಚಿಕಾಗೊದ ನೈಟ್ ಕ್ಲಬ್ ಇ 2ಗೆ ಹೋಗುವ ಮೆಟ್ಟಿಲುಗಳಲ್ಲಿ ನಡೆದ ಕಾಲ್ತುಳಿತದಲ್ಲಿ 21 ಮಂದಿ ಮೃತಪಟ್ಟಿದ್ದರು.
- 2003ರ ಫೆಬ್ರವರಿ 20ರಂದು ರೋಡ್ ಐಲೆಂಡ್‌ನ ವಾರ್ವಿಕ್‌ನಲ್ಲಿರುವ ಸ್ಟೇಷನ್ ನೈಟ್‌ಕ್ಲಬ್‌ನಲ್ಲಿ ಗ್ರೇಟ್ ವೈಟ್ ಕನ್ಸರ್ಟ್ ಸಮಯದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ 100 ಮಂದಿ ಸಾವನ್ನಪ್ಪಿದ್ದರೆ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
- 2004ರ ಫೆಬ್ರವರಿ 1ರಂದು ಹಜ್ ಆಚರಣೆಯ ಸಂದರ್ಭದಲ್ಲಿ ಮೆಕ್ಕಾ ಬಳಿಯ ಜಮಾರತ್ ಸೇತುವೆಯಲ್ಲಿ ನಡೆದ ಕಾಲ್ತುಳಿತದಲ್ಲಿ 251 ಜನರು ಸಾವನ್ನಪ್ಪಿದ್ದರು.
- 2005ರ ಜನವರಿ 25ರಂದು ಭಾರತದ ಮಹಾರಾಷ್ಟ್ರದ ಮಾಂಧ್ರದೇವಿ ದೇವಸ್ಥಾನದ ಬಳಿ ನಡೆದ ಕಾಲ್ತುಳಿತದಲ್ಲಿ 265 ಹಿಂದೂ ಯಾತ್ರಿಕರು ಮೃತಪಟ್ಟಿದ್ದರು.
- 2005ರ ಆಗಸ್ಟ್ 31ರಂದು ಬಾಗ್ದಾದ್‌ನಲ್ಲಿ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಸೇತುವೆಯ ಮೇಲಿನ ರೇಲಿಂಗ್ ಕುಸಿದು ಕನಿಷ್ಠ 640 ಶಿಯಾ ಮುಸ್ಲಿಂ ಯಾತ್ರಿಕರು ಸಾವನ್ನಪ್ಪಿದರು.
- 2006 ಜನವರಿ 12ರಂದು ಮೆಕ್ಕಾ ಬಳಿ ಹಜ್ ಸಮಾರಂಭದ ಸಂದರ್ಭದಲ್ಲಿ ಕಾಲ್ತುಳಿತದಿಂದ 345 ಮುಸ್ಲಿಂ ಯಾತ್ರಿಕರು ಮೃತಪಟ್ಟಿದ್ದರು.
- 2006ರ ಫೆಬ್ರವರಿ 4ರಂದು ಫಿಲಿಪೈನ್ಸ್‌ನ ಮನಿಲಾದಲ್ಲಿನ ಫಿಲ್‌ಸ್ಪೋರ್ಟ್ಸ್ ಅರೆನಾ ಸ್ಟಾಂಪೀಡ್‌ನಲ್ಲಿ ಸಂಭವಿಸಿದ ಭಯಭೀತ ದುರ್ಘಟನೆಯಲ್ಲಿ 78 ಮಂದಿ ಸಾವನ್ನಪ್ಪಿದ್ದರು. ಅವರು ಟಿವಿ ವೈವಿಧ್ಯಮಯ ಕಾರ್ಯಕ್ರಮದ ಆಡಿಷನ್‌ಗಾಗಿ ಕಾಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
- 2008ರ ಸೆಪ್ಟೆಂಬರ್ 30ರಂದು ಭಾರತದ ಜೋಧ್‌ಪುರದ ದೇವಸ್ಥಾನವೊಂದರಲ್ಲಿ ಸಾವಿರಾರು ಹಿಂದೂ ಯಾತ್ರಿಕರು ಆಗಮಿಸಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 168 ಯಾತ್ರಿಕರು ಸಾವನ್ನಪ್ಪಿ 100 ಜನರು ಗಾಯಗೊಂಡಿದ್ದರು.
- 2010ರ ಜುಲೈ 24ರಂದು ಜರ್ಮನಿಯ ಡ್ಯೂಸ್‌ಬರ್ಗ್‌ನಲ್ಲಿ ನಡೆದ ಲವ್ ಪರೇಡ್ ಸಂಗೀತ ಉತ್ಸವದಲ್ಲಿ ಜನಸಂದಣಿಯಿಂದ ಸಂಭವಿಸಿದ ದುರ್ಘಟನೆಯಲ್ಲಿ 21 ಜನರು ಸಾವನ್ನಪ್ಪಿ 650 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
- 2010ರ ನವೆಂಬರ್ 22ರಂದು ಕಾಂಬೋಡಿಯಾದ ರಾಜಧಾನಿ ನಾಮ್ಪೆನ್ನಲ್ಲಿ ನಡೆದ ಉತ್ಸವದಲ್ಲಿ ನಡೆದ ದುರ್ಘಟನೆಯಲ್ಲಿ 340 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ನೂರಾರು ಜನರು ಗಾಯಗೊಂಡಿದ್ದರು.
- 2013ರ ಜನವರಿ 27ರಂದು ಬ್ರೆಜಿಲ್‌ನ ಸಾಂಟಾ ಮಾರಿಯಾದಲ್ಲಿರುವ ಕಿಸ್ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 200 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
- 2015ರ ಸೆಪ್ಟೆಂಬರ್ 24ರಂದು ಹಜ್ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಕನಿಷ್ಠ 2,411 ಮುಸ್ಲಿಂ ಯಾತ್ರಿಕರು ಸಾವನ್ನಪ್ಪಿದ್ದರು.
- 2021ರ ಏಪ್ರಿಲ್ 30ರಂದು ಇಸ್ರೇಲ್‌ನ ವಾರ್ಷಿಕ ಮೌಂಟ್ ಮೆರಾನ್ ತೀರ್ಥಯಾತ್ರೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ 45 ಯಾತ್ರಿಕರು ಮೃತಪಟ್ಟಿದ್ದರು. ಅನೇಕರು ಗಾಯಗೊಂಡಿದ್ದರು.
- 2021ರ ನವೆಂಬರ್ 5ರಂದು ಹೂಸ್ಟನ್ ಸಂಗೀತ ಉತ್ಸವದಲ್ಲಿ ರಾಪರ್ ಟ್ರಾವಿಸ್ ಸ್ಕಾಟ್ ಅವರ ಸಂಗೀತ ಪ್ರದರ್ಶನದ ವೇಳೆ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ 10 ಮಂದಿ ಸಾವನ್ನಪ್ಪಿದ್ದಲ್ಲದೆ ಅನೇಕರು ಗಾಯಗೊಂಡಿದ್ದರು.
- 2022ರ ಅಕ್ಟೋಬರ್ 1ರಂದು ಇಂಡೋನೇಷ್ಯಾ ಸಾಕರ್ ಪಂದ್ಯದ ನಂತರ ಹಿಂಸಾಚಾರ ಭುಗಿಲೆದ್ದ ನಂತರ ಪೊಲೀಸರು ಅಶ್ರುವಾಯುವನ್ನು ಪ್ರಯೋಗಿಸಿದ್ದರು. ಈ ವೇಳೆ ಜನರು ದಿಕ್ಕಾಪಾಲಾಗಿ ಓಡಿದಾಗ ಕಾಲ್ತುಳಿತಕ್ಕೆ ಒಳಗಾಗಿ ಕನಿಷ್ಠ 125 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
- 2022ರ ಅಕ್ಟೋಬರ್ 29ರಂದು ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಹ್ಯಾಲೋವೀನ್ ಹಬ್ಬ ಸಂದರ್ಭದಲ್ಲಿ ಕಿರಿದಾದ ಬೀದಿಯಲ್ಲಿ ನೂಕುನುಗ್ಗಲಿನಲ್ಲಿ 149 ಮಂದಿ ಸಾವನ್ನಪ್ಪಿದ್ದು, 150 ಮಂದಿ ಗಾಯಗೊಂಡಿದ್ದಾರೆ.
Published On - 8:38 am, Sun, 30 October 22