ಚೀನಾ ಜನರ ಬದುಕನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ ಷಿ ಜಿನ್‌ಪಿಂಗ್
ದೇಶಾದ್ಯಂತ ವೈದ್ಯಕೀಯ ಕಾರ್ಯಕರ್ತರು ದೇಶದಲ್ಲಿ ಹೊಸ ಸೋಂಕುಗಳನ್ನು ನಿಭಾಯಿಸಲು ಪರದಾಡುತ್ತಿರುವಾಗಲೂ ಚೀನಾದ ನಗರಗಳ ನಿವಾಸಿಗಳು ಕೋವಿಡ್‌ನೊಂದಿಗೆ ಬದುಕಲು ಒಗ್ಗಿಕೊಂಡಿರುವ ಹೊತ್ತಲ್ಲೇ ಷಿ ಈ ಹೇಳಿಕೆ ನೀಡಿದ್ದಾರೆ.
ಜನರ ಬದುಕನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಚೀನಾ ತನ್ನ ಕಠಿಣವಾದ ‘ಶೂನ್ಯ-ಕೋವಿಡ್ ನೀತಿ’ಯನ್ನು (Zero-Covid policy) ಸಡಿಲಗೊಳಿಸಿದ ನಂತರ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ (Covid 19) ಪ್ರಕರಣಗಳ ನಡುವೆ ಮಾತನಾಡಿದ ಜಿನ್‌ಪಿಂಗ್, ನಾವು ಆರೋಗ್ಯ ಅಭಿಯಾನವನ್ನು ಹೆಚ್ಚು ಉದ್ದೇಶಿತ ರೀತಿಯಲ್ಲಿ ಪ್ರಾರಂಭಿಸಬೇಕು. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮುದಾಯದ ರಕ್ಷಣಾ ಮಾರ್ಗವನ್ನು ಬಲಪಡಿಸಬೇಕು. ಜನರ ಜೀವನ, ಸುರಕ್ಷತೆ ಮತ್ತು ಆರೋಗ್ಯವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಸುಮಾರು ಒಂದು ಮಿಲಿಯನ್ ಜನರು ಸಾಯಬಹುದು ಎಂದು ಅಧ್ಯಯನಗಳು ಅಂದಾಜಿಸಿದ್ದು, ಜಗತ್ತಿನಲ್ಲಿ ಅತೀ ಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ದೇಶವಾಗಿದೆ ಚೀನಾ. ದೇಶಾದ್ಯಂತ ವೈದ್ಯಕೀಯ ಕಾರ್ಯಕರ್ತರು ದೇಶದಲ್ಲಿ ಹೊಸ ಸೋಂಕುಗಳನ್ನು ನಿಭಾಯಿಸಲು ಪರದಾಡುತ್ತಿರುವಾಗಲೂ ಚೀನಾದ ನಗರಗಳ ನಿವಾಸಿಗಳು ಕೋವಿಡ್‌ನೊಂದಿಗೆ ಬದುಕಲು ಒಗ್ಗಿಕೊಂಡಿರುವ ಹೊತ್ತಲ್ಲೇ ಷಿ ಈ ಹೇಳಿಕೆ ನೀಡಿದ್ದಾರೆ.
ಚೀನಾದ ಆಸ್ಪತ್ರೆಗಳು ಸಾಮಾನ್ಯಕ್ಕಿಂತ ಐದರಿಂದ ಆರು ಪಟ್ಟು ಹೆಚ್ಚು ರೋಗಿಗಳಿಂದ ತುಂಬಿವೆ ಎಂದು ವರದಿಗಳು ಹೇಳಿವೆ. ಹೆಚ್ಚಾಗಿ ವಯಸ್ಸಾದವರು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ದೇಶದ ಎಲ್ಲಾ ಹಂತದ ಸರ್ಕಾರಗಳು ಔಷಧಿಗಳು ಮತ್ತು ಇತರ ಸರಬರಾಜುಗಳ ಬೇಡಿಕೆಯನ್ನು ಪೂರೈಸುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿವೆ.
ಏತನ್ಮಧ್ಯೆ, ಚೀನಾವು ಕಳೆದ ಆರು ದಿನಗಳಿಂದ ಭಾನುವಾರದವರೆಗೆ ಯಾವುದೇ ಕೋವಿಡ್ ಸಾವುಗಳನ್ನು ವರದಿ ಮಾಡಿಲ್ಲ ಎಂದು ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ. ಸ್ಮಶಾನಗಳು ತುಂಬಿ ತುಳುಕುತ್ತಿವೆ ಎಂದು ವರದಿಗಳು ಹೇಳಿವೆ. ಕೋವಿಡ್-ಸಂಬಂಧಿತ ಸಾವುಗಳನ್ನು ವರ್ಗೀಕರಿಸಲು ಚೀನಾ ತನ್ನ ವ್ಯಾಖ್ಯಾನವನ್ನು ಸಂಕುಚಿತಗೊಳಿಸಿದೆ. ಈಗ ಕೋವಿಡ್-ಉಂಟುಮಾಡುವ ನ್ಯುಮೋನಿಯಾ ಅಥವಾ ಉಸಿರಾಟದ ವೈಫಲ್ಯವನ್ನು ಒಳಗೊಂಡಿರುವವರನ್ನು ಮಾತ್ರ ಎಣಿಸುತ್ತಿದೆ.
ಇದನ್ನೂ ಓದಿ: ಗುಜರಾತ್: ಮಗಳ ಅಶ್ಲೀಲ ವಿಡಿಯೊ ಪ್ರಸಾರ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಬಿಎಸ್ಎಫ್ ಯೋಧನನ್ನು ಹೊಡೆದು ಕೊಂದರು
ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಮತ್ತು ರಾಜ್ಯ ಕೌನ್ಸಿಲ್ ಸಹ “ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳ ಸುಗಮ ಮತ್ತು ಕ್ರಮಬದ್ಧ ಹೊಂದಾಣಿಕೆ ಮತ್ತು ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು” ಅಧಿಕಾರಿಗಳಿಗೆ ಕರೆ ನೀಡುವ ಸೂಚನೆಯನ್ನು ನೀಡಿತು ಎಂದು ಎಎಫ್ಪಿ ವರದಿ ಮಾಡಿದೆ.
ಚೀನಾದ ಜನಸಂಖ್ಯೆಯ ಸುಮಾರು 18% ರಷ್ಟಿರುವ ಸುಮಾರು 248 ಮಿಲಿಯನ್ ಜನರು ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯು ಬಹಿರಂಗಪಡಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಶಾಂಘೈ ಬಳಿಯ ದೊಡ್ಡ ಕೈಗಾರಿಕಾ ಪ್ರಾಂತ್ಯವಾದ ಝೆಜಿಯಾಂಗ್ ಪ್ರತಿದಿನ ಸುಮಾರು 1 ಮಿಲಿಯನ್ ಕೋವಿಡ್ ಪ್ರಕರಣಗಳನ್ನು ದಾಖಲಿಸುತ್ತಿದೆ ಮತ್ತು ಮುಂದಿನ ವಾರದ ವೇಳೆಗೆ ಸಂಖ್ಯೆಗಳು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರಾಂತೀಯ ಸರ್ಕಾರ ಗಮನಿಸಿದೆ. ‘ ಝೆಜಿಯಾಂಗ್‌ನಲ್ಲಿ ಪ್ರಕರಣಗಳು ಉಲ್ಬಣವಾಗಲಿದ್ದು, ಹೊಸ ವರ್ಷದ ದಿನದಂದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ದೈನಂದಿನ ಹೊಸ ಸೋಂಕಿನ ಸಂಖ್ಯೆ ಎರಡು ಮಿಲಿಯನ್‌ನಷ್ಟಿರುತ್ತದೆ’ಎಂದು ಝೆಜಿಯಾಂಗ್ ಸರ್ಕಾರವು ಹೇಳಿಕೆಯಲ್ಲಿ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:47 pm, Mon, 26 December 22