ಸುಮಾರು ಎರಡು ನೂರು ವರ್ಷಗಳ ಇತಿಹಾಸ ಹೊಂದಿರುವ ಅಮೇರಿಕಾದ ವೈಜ್ಞಾನಿಕ ಪತ್ರಿಕೆ ‘ಸೈಂಟಿಫಿಕ್ ಅಮೇರಿಕನ್’ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರ್ಯಾಟಿಕ್ ಪಕ್ಷದ ಉಮೇದುವಾರ ಜೊ ಬಿಡೆನ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. ಪತ್ರಿಕೆ ಪ್ರಕಾಶನ ಶುರುವಾದ ನಂತರ ಇದೇ ಮೊದಲ ಬಾರಿಗೆ ಒಬ್ಬ ಉಮೇದುವಾರನನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸೈಂಟಿಫಿಕ್ ಅಮೇರಿಕನ್ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿರುವ ಲೌರಾ ಹೆಲ್ಮುತ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಪತ್ರಿಕೆಯು ಸಭೆಯೊಂದನ್ನು ನಡೆಸಿ ಬಿಡೆನ್ ಆವರನ್ನು ಬೆಂಬಲಿಸುವ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಉಂಟಾದ ಕಾಳ್ಗಿಚ್ಚು ಮತ್ತು ಪ್ರಸ್ತುತವಾಗಿ ದೇಶದಾದ್ಯಂತ ಹರಡಿರುವ ಕೊವಿಡ್-19 ಸೋಂಕನ್ನು ತಡೆಯಲು ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು ವೈಜ್ಞಾನಿಕ ತಳಹದಿಯ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದೇ ನಮ್ಮ ತೀರ್ಮಾನಕ್ಕೆ ಕಾರಣವೆಂದು ಹೆಲ್ಮುತ್ ಹೇಳಿದ್ದಾರೆ.
‘‘ನಮ್ಮದು ಪಕ್ಷಪಾತಿ ಧೋರಣೆಯ ಪತ್ರಿಕೆ ಖಂಡಿತ ಅಲ್ಲ. ನಮಗೆ ರಿಪಬ್ಬಲಿಕನ್ಗಳ ಬಗ್ಗೆಯಾಗಲೀ ಅಥವಾ ಡೆಮೊಕ್ರ್ಯಾಟ್ಗಳ ಬಗ್ಗೆಯಾಗಲೀ ಒಲವಿಲ್ಲ. ನಮ್ಮ ಉದ್ದೇಶವೇನೆಂದರೆ, ನೀತಿಗಳನ್ನು ಯೋಗ್ಯ ಸಾಕ್ಷ್ಯಾಧಾರಗಳ ಆಧಾರದಲ್ಲಿ ರೂಪಿಸಬೇಕು, ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ವಿಜ್ಞಾನ ಅಂಥ ಪುರಾವೆ ಒದಗಿಸುತ್ತದೆ,’’ ಎಂದಿದ್ದಾರೆ ಹೆಲ್ಮುತ್.
‘‘ಡೊನಾಲ್ಡ್ ಟ್ರಂಪ್ ಅವರು ಪದೇಪದೆ ಸಾಕ್ಷ್ಯ ಮತ್ತು ವಿಜ್ಞಾನವನ್ನು ಕಡೆಗಣಿಸಿ ಈ ದೇಶಕ್ಕೆ ಮತ್ತು ಅದರ ಜನತೆಗೆ ತೀವ್ರ ಸ್ವರೂಪದ ಹಾನಿಯನ್ನುಂಟು ಮಾಡಿದ್ದಾರೆ. ಕೊವಿಡ್—19 ಪಿಡುಗಿಗೆ ಅವರು ಪ್ರತಿಕ್ರಿಯಿಸಿದ ರೀತಿ ಹೇವರಿಕೆ ಹುಟ್ಟಿಸುತ್ತದೆ. ಅವರ ಉಡಾಫೆ ಧೋರಣೆಯಿಂದಾಗಿ ಅಮೇರಿಕ, ಸೆಪ್ಟೆಂಬರ್ ಮಧ್ಯಭಾಗದವರೆಗೆ 1,90,000 ಜನರನ್ನು ಕಳೆದುಕೊಂಡಿದೆ. ನಾವು ತೆಗೆದುಕೊಂಡಿರುವ ತೀರ್ಮಾನಕ್ಕೆ ಇದೊಂದೇ ಕಾರಣವಲ್ಲ. ದುರ್ಬಲಗೊಂಡಿರುವ ಹೆಲ್ತ್ ಕೇರ್ ವ್ಯವಸ್ಥೆ, ಪರಿಸರ ಸಂರಕ್ಷಣೆಯನ್ನು ತೊಲಗಿಸುವ ಪ್ರಯತ್ನಗಳು, ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಬಗ್ಗೆ ನಿರ್ಲಕ್ಷ್ಯ ಧೋರಣೆ ಮೊದಲಾದವುಗಳನ್ನು ಸಹ ನಾವು ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಟ್ರಂಪ್ ಅವರ ನಿರ್ಣಯಗಳು ಮಾರಕವಾಗಿ ಸಾಬೀತಾಗಿವೆ ಮತ್ತು ಅಮೇರಿಕಾವನ್ನು ದುರಂತದೆಡೆ ಕೊಂಡೊಯ್ಯುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಬಿಡೆನ್ ಅವರ ಪಾಲಿಸಿಗಳು ಈಗಿರುವ ಸ್ಥಿತಿಯನ್ನು ಉಲ್ಟಾ ಮಾಡುವ ಎಲ್ಲ ಸಾಧ್ಯತೆಗಳಿವೆ. ಅವರು ವೈಜ್ಞಾನಿಕ ತಳಹದಿಯ ಮೇಲೆ ಪಾಲಿಸಿಗಳನ್ನು ರೂಪಿಸಿ ಜನರ ಆರೋಗ್ಯದಲ್ಲಿ ಸುಧಾರಣೆ ತರುವುದರೊಂದಿಗೆ ಕುಸಿದಿರುವ ಆರ್ಥಿಕತೆಯನ್ನು ಸಹ ಮೇಲೆತ್ತುವ ಭರವಸೆ ಮೂಡಿಸುತ್ತಾರೆ,’’ ಎಂದು ಹೆಲ್ಮುತ್ ಹೇಳಿದ್ದಾರೆ.