ವೈದ್ಯರಿಂದ ಕ್ರೂರ ಸರ್ವಾಧಿಕಾರಿಯವರೆಗೆ; ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್ ನಡೆದುಬಂದ ಹಾದಿಯಿದು
ಬಂಡುಕೋರರು ಸಿರಿಯಾದ ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ನಂತರ ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸಾದ್ ರಷ್ಯಾದ ಮಾಸ್ಕೋಗೆ ಪಲಾಯನ ಮಾಡಿದ್ದಾರೆ. ಅಸಾದ್ ಮತ್ತು ಅವರ ಕುಟುಂಬಕ್ಕೆ ಮಾಸ್ಕೋದಲ್ಲಿ ಆಶ್ರಯ ನೀಡಲಾಗಿದೆ ಎಂದು ರಷ್ಯಾದ ಮಾಧ್ಯಮಗಳು ಖಚಿತ ಪಡಿಸಿವೆ. ಸಿರಿಯಾದ ಸರ್ವಾಧಿಕಾರಿಯಾಗಿದ್ದ ಅಸ್ಸಾದ್ ನಡೆದುಬಂದ ಹಾದಿಯ ಬಗ್ಗೆ ಮಾಹಿತಿ ಇಲ್ಲಿದೆ.
ಡಮಾಸ್ಕಸ್: ಹಯಾತ್ ತಹ್ರೀರ್ ಅಲ್ ಶಾಮ್ ಸಂಘಟನೆ ಭಾನುವಾರ ಸಿರಿಯಾದ ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ಬಳಿಕ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಮತ್ತು ಅವರ ಕುಟುಂಬಸ್ಥರು ಸಿರಿಯಾ ಬಿಟ್ಟು ಪರಾರಿಯಾಗಿದ್ದಾರೆ. ಅವರು ರಷ್ಯಾಗೆ ತೆರಳಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಕಣ್ಣಿನ ವೈದ್ಯರಾಗಿದ್ದ ಅಸ್ಸಾದ್ ಸಿರಿಯಾ ಸರ್ವಾಧಿಕಾರಿಯಾಗುವವರೆಗಿನ ಅವರ ಏಳಿಗೆ ಮತ್ತು ಪತನದ ಬಗ್ಗೆ ಮಾಹಿತಿ ಇಲ್ಲಿದೆ.
ಅಸ್ಸಾದ್ 24 ವರ್ಷಗಳ ಕಾಲ ಸಿರಿಯಾದ ಅಧ್ಯಕ್ಷರಾಗಿದ್ದರು. ಅಸ್ಸಾದ್ ತಮ್ಮ ತಂದೆ ಹಫೀಜ್ ಅವರ ಉತ್ತರಾಧಿಕಾರಿಯಾದರು. ಕ್ರೂರತೆಗೆ ಇನ್ನೊಂದು ಹೆಸರೇ ಅಸ್ಸಾದ್. ಸ್ವಲ್ಪ ಸಮಯದವರೆಗೆ ಲಂಡನ್‌ನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ, ನಂತರ ಜೆಪಿ ಮೋರ್ಗಾನ್‌ನಲ್ಲಿ ಹೂಡಿಕೆ ಬ್ಯಾಂಕರ್ ಆಗಿದ್ದ ಬ್ರಿಟಿಷ್ ಸಿರಿಯನ್ ಪತ್ನಿ ಅಸ್ಮಾ ಅವರನ್ನು ವಿವಾಹವಾದ ಮಾಜಿ ನೇತ್ರ ತಜ್ಞ ಅಸ್ಸಾದ್ ಸಿರಿಯಾ ತನ್ನ ನಾಯಕತ್ವದಲ್ಲಿ ವಿಭಿನ್ನ ಮಾರ್ಗವನ್ನು ಅನುಸರಿಸಬಹುದು ಎಂದು ಜಗತ್ತಿಗೆ ತೋರಿಸಲು ಉತ್ಸುಕರಾಗಿದ್ದರು.
ಇದನ್ನೂ ಓದಿ: ಅಧ್ಯಕ್ಷ ಬಶರ್ ದೇಶದಿಂದ ಪಲಾಯನ ಮಾಡುತ್ತಿದ್ದಂತೆ ಸಿರಿಯಾದ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ
24 ವರ್ಷಗಳ ಸರ್ವಾಧಿಕಾರದ ನಂತರ ಬಶರ್ ಅಸ್ಸಾದ್ ಸಿರಿಯಾದಲ್ಲಿ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಅಲ್-ಖೈದಾ ಶಾಖೆಯಿಂದ ಅಧಿಕಾರದಿಂದ ಹೊರಹಾಕಲ್ಪಟ್ಟರು. ಅಸ್ಸಾದ್ ಆಳ್ವಿಕೆಯ ನಾಟಕೀಯ ಅಂತ್ಯದೊಂದಿಗೆ ಮಧ್ಯಪ್ರಾಚ್ಯದ ನಕ್ಷೆಯ ಪ್ರಮುಖ ವಿಭಾಗವನ್ನು ಸಂಪೂರ್ಣವಾಗಿ ಪುನಃ ರಚಿಸಲಾಗಿದೆ. ಇಸ್ಲಾಮಿ ಒಕ್ಕೂಟದ ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಬಂಡುಕೋರ ಪಡೆಗಳು ಭಾನುವಾರ ಸಿರಿಯಾ ರಾಜಧಾನಿ ಡಮಾಸ್ಕಸ್ ನಗರವನ್ನು ವಶಕ್ಕೆ ಪಡೆದ ನಂತರ ಇಸ್ರೇಲ್ ದೇಶದ ಸೇನಾ ಪಡೆಗಳು ಡಮಾಸ್ಕಸ್ ಬಳಿಯ ವಾಯು ರಕ್ಷಣಾ ನೆಲೆಗಳು ಮತ್ತು ಯುದ್ಧ ಸಾಮಗ್ರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಹಯಾತ್ ತಹ್ರೀರ್ ಅಲ್ ಶಾಮ್ ಇಸ್ಲಾಮಿಸ್ಟ್ ಸಂಘಟನೆ ನೇತೃತ್ವದಲ್ಲಿ ಬಂಡುಕೋರರ ಪಡೆ ಸಿರಿಯಾ ರಾಜಧಾನಿ ಡಮಾಸ್ಕಸ್ ಅನ್ನು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಿದೆ. ಈ ಮೂಲಕ ಸಿರಿಯಾದಲ್ಲಿ ಅಸ್ಸಾದ್ ಕುಟುಂಬದ ವಂಶಾಡಳಿತ ಕೊನೆಯಾಗಿದೆ. ಪ್ರಧಾನಿ ಮೊಹಮ್ಮದ್ ಘಾಜಿ ಆಲಿ ಜಲಾಲಿ ಅವರನ್ನು ಕೂಡ ಆಡಳಿತ ಕಚೇರಿಯಿಂದ ಹೊರಹಾಕಲಾಗಿದೆ. ಬಂಡುಕೋರರಿಗೆ ಹೆದರಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸಾದ್ ಸಿರಿಯಾದಿಂದ ಪರಾರಿಯಾಗಿದ್ದಾರೆ. ಅವರು ರಷ್ಯಾದಲ್ಲಿ ನೆಲೆ ಪಡೆದಿದ್ದಾರೆ ಎನ್ನಲಾಗಿದೆ.
ಮಾಜಿ ಸಿರಿಯನ್ ಆಡಳಿತಗಾರ ಹಫೀಜ್ ಅಸ್ಸಾದ್ ಅವರ ಎರಡನೇ ಮಗ ಬಶರ್ ಅಸ್ಸಾದ್ ನೇತ್ರತಜ್ಞನಾಗಲು ಯೋಜಿಸಿದ್ದರು. ಅವರು ಸಿರಿಯಾದಲ್ಲಿ ಅಧ್ಯಯನ ಮಾಡಿದರು. ನಂತರ ಲಂಡನ್‌ನಲ್ಲಿ ಕಣ್ಣಿನ ವೈದ್ಯರಾಗಿ ವೃತ್ತಿಜೀವನ ಶುರು ಮಾಡುವ ಮೊದಲು 1994ರಲ್ಲಿ ಅವರ ಹಿರಿಯ ಸಹೋದರ ಬಾಸೆಲ್ ಕಾರು ಅಪಘಾತದಿಂದ ಸಾವನ್ನಪ್ಪಿದರು. ಹೀಗಾಗಿ, ಅಸ್ಸಾದ್ ರಾಜಕೀಯಕ್ಕೆ ಬರಬೇಕಾಯಿತು. ಬಳಿಕ ಪ್ರಬಲ ನಾಯಕನಾಗಿ, ನಿರಂಕುಶ ಅಧಿಕಾರಿಯಾಗಿ ಬೆಳೆದರು.
ಇದನ್ನೂ ಓದಿ: Video: ದೇಶ ಬಿಟ್ಟು ಓಡಿ ಹೋದ ಸಿರಿಯಾ ಅಧ್ಯಕ್ಷರ ಬಳಿ ಎಂತೆಂಥಾ ಕಾರುಗಳಿವೆ ನೋಡಿ
ಅಸ್ಸಾದ್ ಆಡಳಿತವು 2012ರಲ್ಲಿ 5,000ಕ್ಕೂ ಹೆಚ್ಚು ನಾಗರಿಕರು ಮತ್ತು ನೂರಾರು ಮಕ್ಕಳನ್ನು ಕೊಂದಿತ್ತು. 2013ರ ಆಗಸ್ಟ್ ತಿಂಗಳಲ್ಲಿ ಸಿರಿಯಾವು ಅಂತರ್ಯುದ್ಧದಲ್ಲಿ ಸಂಪೂರ್ಣವಾಗಿ ಮುಳುಗಿದಾಗ ಅಸ್ಸಾದ್ ಅವರ ಪಡೆಗಳು ಡಮಾಸ್ಕಸ್ ರಾಜಧಾನಿಯ ಹೊರಗಿನ ಪ್ರದೇಶಗಳಿಗೆ ಮಾರಣಾಂತಿಕ ಸರಿನ್ ಅನಿಲವನ್ನು ಒಳಗೊಂಡಿರುವ ರಾಕೆಟ್‌ಗಳನ್ನು ಕಳುಹಿಸಿದವು. ಇದು 1,700 ಜನರನ್ನು ಕೊಂದಿತು.
ಅಸ್ಸಾದ್ ತನ್ನ ಸ್ವಂತ ಜನರ ಮೇಲೆ ಅನಿಲವನ್ನು ಹೊಡೆದದ್ದು ಆತನ ವಿರುದ್ಧ ವಿರೋಧವನ್ನು ಹೆಚ್ಚಿಸುವಷ್ಟು ಕೋಲಾಹಲವನ್ನು ಸೃಷ್ಟಿಸಿತು. ಅವನ ಜನಪ್ರಿಯತೆ ಅಂತಿಮವಾಗಿ ಅವನನ್ನು ಬಾಹ್ಯ ಬೆಂಬಲದ ಮೇಲೆ ಅವಲಂಬಿಸುವಂತೆ ಮಾಡಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ