ಭಾರತ ಸಕಾಲದಲ್ಲಿ ಸ್ಪಂದಿಸದಿದ್ದರೆ ಮುಂದಿನ ಕ್ರಮ; ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದೇಶ ಒತ್ತಡ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರಕ್ಕೆ ಈಗಾಗಲೇ ಬಾಂಗ್ಲಾ ಪತ್ರ ರವಾನಿಸಿದೆ. ಅದಾದ ಒಂದು ದಿನದ ನಂತರ, ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ನಿಗದಿತ ಸಮಯದೊಳಗೆ ಭಾರತ ಆ ಪತ್ರಕ್ಕೆ ಪ್ರತಿಕ್ರಿಯೆಯನ್ನು ನೀಡದಿದ್ದರೆ ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದೆ.
ಢಾಕಾ: ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾಕ್ಕೆ ಹಸ್ತಾಂತರಿಸಬೇಕೆಂದು ಭಾರತಕ್ಕೆ ಔಪಚಾರಿಕ ಪತ್ರವೊಂದನ್ನು ಕಳುಹಿಸಿದೆ. ಈ ಪತ್ರಕ್ಕೆ ನಿರ್ದಿಷ್ಟ ಸಮಯದಲ್ಲಿ ಭಾರತ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂಬ ವಿಶ್ವಾಸವಿದೆ ಎಂದಿರುವ ಮುಹಮ್ಮದ್ ಯೂನಸ್ ಒಂದು ವೇಳೆ ಭಾರತ ಪ್ರತಿಕ್ರಿಯಿಸದಿದ್ದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಸೋಮವಾರ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ನವದೆಹಲಿಯಲ್ಲಿನ ತನ್ನ ಮಿಷನ್ ಮೂಲಕ ಬಾಂಗ್ಲಾದೇಶದ ನ್ಯಾಯಾಂಗ ಪ್ರಕ್ರಿಯೆಗಳಿಗಾಗಿ ಶೇಖ್ ಹಸೀನಾ ಅವರನ್ನು ವಾಪಸು ಕಳುಹಿಸುವಂತೆ ಕೋರಿ ಭಾರತ ಸರ್ಕಾರಕ್ಕೆ ಸಂದೇಶವನ್ನು ಕಳುಹಿಸಿತ್ತು. ಭಾರತ ಮತ್ತು ಬಾಂಗ್ಲಾದೇಶವು 2013ರಲ್ಲಿ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಿತ್ತು. ನಂತರ ಅದನ್ನು 2016ರಲ್ಲಿ ತಿದ್ದುಪಡಿ ಮಾಡಲಾಯಿತು ಎಂಬುದು ಗಮನಾರ್ಹ.
ಇದನ್ನೂ ಓದಿ: Temple Vandalised: ಬಾಂಗ್ಲಾದೇಶದಲ್ಲಿ ಮೂರು ಹಿಂದೂ ದೇವಾಲಯಗಳ ಮೇಲೆ ದಾಳಿ, ವಿಗ್ರಹಗಳ ಧ್ವಂಸ
ಆಗಸ್ಟ್ 5ರಂದು ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರದ ವಿರುದ್ಧದ ಸಾಮೂಹಿಕ ದಂಗೆಯ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ್ದರು. ಬಳಿಕ ಮಿಲಿಟರಿ ವಿಮಾನದಲ್ಲಿ ಭಾರತೀಯ ವಾಯುಪಡೆಯ ನೆಲೆಗೆ ಬಂದಿಳಿದಿದ್ದರು. ಅವರು ದೆಹಲಿಯಲ್ಲಿ ಆಶ್ರಯ ಪಡೆದಿದ್ದರು.
ಢಾಕಾ ಟ್ರಿಬ್ಯೂನ್‌ನ ವರದಿಯ ಪ್ರಕಾರ, ಶೇಖ್ ಹಸೀನಾ ಅವರು 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಜುಲೈ ದಂಗೆಯ ಸಮಯದಲ್ಲಿ ಕೊಲೆ, ಸಾಮೂಹಿಕ ಹತ್ಯೆ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳು ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಆಗಸ್ಟ್ 5ರಂದು ಬಾಂಗ್ಲಾದಿಂದ ಭಾರತಕ್ಕೆ ಪಲಾಯನ ಮಾಡಿದ್ದರು.
ಇದನ್ನೂ ಓದಿ: ಶೇಖ್ ಹಸೀನಾ ಹಸ್ತಾಂತರ ಕೋರಿ ಭಾರತಕ್ಕೆ ಬಾಂಗ್ಲಾದೇಶದಿಂದ ಪತ್ರ ರವಾನೆ
ನವೆಂಬರ್ 26ರಂದು ಅವಾಮಿ ಲೀಗ್ ಸರ್ಕಾರದ ವಿರುದ್ಧ ಜುಲೈ-ಆಗಸ್ಟ್ ಪ್ರತಿಭಟನೆಯ ಸಮಯದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಶೇಖ್ ಹಸೀನಾ ಮತ್ತು 45 ಇತರರ ವಿರುದ್ಧ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಬಂಧನ ವಾರಂಟ್ ಹೊರಡಿಸಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ