ಆಸ್ಟ್ರೇಲಿಯಾದಲ್ಲಿ ಮಂದಿರ ಮೇಲೆ ದಾಳಿ ಘಟನೆಗಳು: ಭಾರತೀಯ ರಾಯಭಾರ ಕಚೇರಿಯಿಂದ ಖಂಡನೆ
ಆಸ್ಟ್ರೇಲಿಯಾದಲ್ಲಿನ ಹಿಂದೂ ಮಂದಿರಗಳ ಮೇಲೆ ನಡೆದಿರುವ ದಾಳಿ ಘಟನೆಗಳು ಆತಂಕಕಾರಿಯಾಗಿದೆ. ಶಾಂತಿಯುತ ಬಹು ಸಂಸ್ಕೃತಿಯ ಭಾರತೀಯ ಆಸ್ಟ್ರೇಲಿಯನ್ ಸಮುದಾಯದ ಮಧ್ಯೆ ಧ್ವೇಷ ಬಿತ್ತುವ ಉದ್ದೇಶದಿಂದ ಈ ಘಟನೆಗಳು ಸಂಭವಿಸಿವೆ ಎಂದು ಭಾರತೀಯ ರಾಯಭಾರ ಕಚೇರಿ ಅಭಿಪ್ರಾಯಪಟ್ಟಿದೆ.
ನವದೆಹಲಿ: ಆಸ್ಟ್ರೇಲಿಯಾದಲ್ಲಿ ಹಿಂದೂ ಮಂದಿರಗಳ ಮೇಲೆ ಇತ್ತೀಚೆಗೆ ಸಂಭವಿಸುತ್ತಿರುವ ದಾಳಿ ಘಟನೆಗಳ (Attack on Hindu Temples) ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ. ಆಸ್ಟ್ರೇಲಿಯಾದ ಭಾರತೀಯ ರಾಯಭಾರ ಕಚೇರಿ (Indian High Commission) ಇಂದು ಗುರುವಾರ ಈ ಘಟನೆಗಳನ್ನು ಖಂಡಿಸಿದೆ.
ಹಿಂದೂ ಮಂದಿರಗಳ ಮೇಲೆ ನಡೆದಿರುವ ದಾಳಿ ಘಟನೆಗಳು ಆತಂಕಕಾರಿಯಾಗಿದೆ. ಶಾಂತಿಯುತ ಬಹು ಸಂಸ್ಕೃತಿಯ ಭಾರತೀಯ ಆಸ್ಟ್ರೇಲಿಯನ್ ಸಮುದಾಯದ ಮಧ್ಯೆ ಧ್ವೇಷ ಬಿತ್ತುವ ಉದ್ದೇಶದಿಂದ ಈ ಘಟನೆಗಳು ಸಂಭವಿಸಿವೆ ಎಂದು ಭಾರತೀಯ ರಾಯಭಾರ ಕಚೇರಿ ಅಭಿಪ್ರಾಯಪಟ್ಟಿದೆ.
ಈ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಹಿಂದೂ ಮಂದಿರಗಳ ಮೇಲೆ ದಾಳಿಯಾದ 3 ಘಟನೆಗಳು ಬೆಳಕಿಗೆ ಬಂದಿವೆ. ಜನವರಿ 12ರಂದು ಮೆಲ್ಬೋರ್ನ್ನ ಸ್ವಾಮಿನಾರಾಯಣ ಮಂದಿರದ ದುಷ್ಕರ್ಮಿಗಳು ಮಾಡಿ ವಿರೂಪಗೊಳಿಸಿದ್ದರು. ಅದಾಗಿ ನಾಲ್ಕು ದಿನಗಳ ಬಳಿಕ, ಜನವರಿ 16ರಂದು ವಿಕ್ಟೋರಿಯಾ ರಾಜ್ಯದ ಪ್ರಸಿದ್ಧ ಶ್ರೀ ಶಿವ ವಿಷ್ಣು ಮಂದಿರದ ಮೇಲೂ ಇಂಥದ್ದೇ ರೀತಿಯಲ್ಲಿ ಭಾರತ ವಿರೋಧಿ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಜನವರಿ 23ರಂದು ಇದೇ ವಿಕ್ಟೋರಿಯಾ ರಾಜ್ಯದಲ್ಲಿ ಖಲಿಸ್ತಾನೀ ಪ್ರತ್ಯೇಕತಾವಾದಿ ಬೆಂಬಲಿಗರು ಹಿಂದೂ ಮಂದಿರವೊಂದನ್ನು ವಿರೂಪಗೊಳಿಸಿದ ಘಟನೆ ವರದಿಯಾಗಿದೆ.
ಭಾರತೀಯ ರಾಯಭಾರ ಕಚೇರಿ ಹೇಳಿಕೆ
“ದುಷ್ಕರ್ಮಿಗಳು ಇಷ್ಟು ಅಂತರದಲ್ಲಿ ದಾಳಿಗಳನ್ನು ಮಾಡುತ್ತಿರುವುದು ಮತ್ತು ಭಾರತ ವಿರೋಧಿ ಉಗ್ರರನ್ನು ವೈಭವೀಕರಿಸುವ ಘೋಷಣೆಗಳನ್ನು ಮಾಡುತ್ತಿರುವುದು ಚಿಂತಾಜನಕ ಸಂಗತಿ. ಬಹು ಸಂಸ್ಕೃತಿಯ ಮತ್ತು ಬಹು ಧರ್ಮೀಯ ಶಾಂತಿಯುತ ಭಾರತೀಯ ಆಸ್ಟ್ರೇಲಿಯನ್ ಸಮುದಾಯದ ಮಧ್ಯೆ ಈ ಘಟನೆಗಳು ದ್ವೇಷದ ಕಿಡಿ ಹಚ್ಚುವ ಸ್ಪಷ್ಟ ಪ್ರಯತ್ನದಂತೆ ಕಾಣುತ್ತವೆ” ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ಗುರುವಾರ ಹೇಳಿಕೆ ನೀಡಿ ಖಂಡಿಸಿದೆ.
ಈ ಘಟನೆಗಳ ಹಿಂದೆ ಖಲಿಸ್ತಾನೀ ಪ್ರತ್ಯೇಕತಾವಾದಿ ಶಕ್ತಿಗಳ (Pro-Khalistani Organisations) ಕೈವಾಡ ಇರಬಹುದು ಎಂದೂ ಭಾರತೀಯ ಅಧಿಕಾರಿಗಳು ಇದೇ ವೇಳೆ ಶಂಕಿಸಿದ್ದಾರೆ.
“ಆಸ್ಟ್ರೇಲಿಯಾದಲ್ಲಿ ಖಲಿಸ್ತಾನೀ ಪರ ಶಕ್ತಿಗಳ ಚಟುವಟಿಕೆ ಹೆಚ್ಚುತ್ತಿರುವುದು ದ್ಯೋತಕವಾಗಿದೆ. ಸಿಖ್ ಫಾರ್ ಜಸ್ಟೀಸ್ (ಎಸ್ಎಫ್ಜೆ– Sikh For Justice) ಇತ್ಯಾದಿ ಭಯೋತ್ಪಾದಕ ಸಂಘಟನೆಗಳು ಹಾಗೂ ಆಸ್ಟ್ರೇಲಿಯಾ ಹೊರಗಿನ ವಿಛಿದ್ರಕಾರಕ ಶಕ್ತಿಗಳಿಂದ ಇಂಥ ದಾಳಿಗಳಿಗೆ ಕುಮ್ಮಕ್ಕು ಸಿಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ವೇದ್ಯವಾಗಿದೆ” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿರುವ ಭಾರತೀಯ ರಾಯಭಾರ ಕಚೇರಿ, ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಮೂಲಕ ಈ ಆತಂಕವನ್ನು ಭಾರತ ತೋಡಿಕೊಂಡಿದೆ. ದೆಹಲಿಯಲ್ಲಿರುವ ಆಸ್ಟ್ರೇಲಿಯನ್ ರಾಯಭಾರ ಕಚೇರಿಯೊಂದಿಗೂ ಭಾರತ ಸರ್ಕಾರ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಎಂದು ತಿಳಿಸಿದೆ.
ಖಲಿಸ್ತಾನ್ ರೆಫರೆಂಡಮ್
ಕೆನಡಾದಲ್ಲಿ ಕಳೆದ ವರ್ಷ ಖಲಿಸ್ತಾನೀ ಪ್ರತ್ಯೇಕತಾವಾದಿಗಳು ಪ್ರತ್ಯೇಕ ರಾಷ್ಟ್ರಕ್ಕಾಗಿ ಜನಾಭಿಪ್ರಾಯ ಸಂಗ್ರಹ ಮಾಡಿದ ರೀತಿಯಲ್ಲೇ ಆಸ್ಟ್ರೇಲಿಯಾದಲ್ಲಿ ಪ್ರಯೋಗ ಮಾಡುವ ಪ್ರಯತ್ನದಲ್ಲಿದ್ದಾರೆ. ಜನವರಿ 29ರಂದು ಆಸ್ಟ್ರೇಲಿಯಾದ ಸಿಖ್ ಜನಾಂಗದವರಲ್ಲಿ ಪಂಜಾಬ್ ಸ್ವಾತಂತ್ರ್ಯ ಜನಾಭಿಪ್ರಾಯ ಸಂಗ್ರಹ (Referendum) ಮಾಡುವುದಾಗಿ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಘೋಷಿಸಿದೆ. ಈ ಬೆಳವಣಿಗೆ ಬಗ್ಗೆಯೂ ಭಾರತ ಆತಂಕ ವ್ಯಕ್ತಪಡಿಸಿದೆ.
ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವಂತಹ ಚಟುವಟಿಕೆಗಳನ್ನು ನಡೆಸಲು ಆಸ್ಟ್ರೇಲಿಯಾ ನೆಲದಲ್ಲಿ ಅವಕಾಶ ನೀಡಬಾರದು. ಇಲ್ಲಿನ ಭಾರತೀಯ ಸಮುದಾಯದವರ ಸುರಕ್ಷತೆ ಮತ್ತು ಭದ್ರತೆಗೆ ಆಸ್ಟ್ರೇಲಿಯಾ ಸರ್ಕಾರ ನಿಗಾ ವಹಿಸಬೇಕು ಎಂದೂ ಭಾರತೀಯ ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಖಲಿಸ್ತಾನ್ ಎಂಬ ಪ್ರತ್ಯೇಕ ಪಂಜಾಬೀ ರಾಷ್ಟ್ರ ರಚನೆಗೆ ಹಲವು ದಶಕಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಎಂಬತ್ತರ ದಶಕದಲ್ಲಿ ಇದು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಮತ್ತೆ ಗರಿಗೆದರಿದೆ. ವಿದೇಶಗಳಲ್ಲಿ ನೆಲಸಿರುವ ಭಾರತೀಯ ಸಿಖ್ಖರನ್ನು ಖಲಿಸ್ತಾನ್ ಪ್ರತ್ಯೇಕತೆಗೆ ಮನವೊಲಿಸುವ ಪ್ರಯತ್ನಗಳು ಅವಿರತವಾಗಿ ನಡೆಯುತ್ತಿವೆ. ಇವೆಲ್ಲವೂ ಪಾಕಿಸ್ತಾನದ ಐಎಸ್ಐ ಪ್ರಾಯೋಜಿತ ಪ್ರಯತ್ನಗಳು ಎಂಬುದು ಭಾರತದ ಆರೋಪ. ಭಾರತದಲ್ಲಿರುವ ಸಿಖ್ಖರು ಖಲಿಸ್ತಾನೀ ಪ್ರತ್ಯೇಕತಾ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲ ನೀಡಿರುವುದು ಅಷ್ಟಾಗಿ ವೇದ್ಯವಾಗಿಲ್ಲ.