Karachi Blast: ಪಾಕಿಸ್ತಾನದ ಕರಾಚಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 15ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ
ಕರಾಚಿಯ ಶೇರ್ಷಾ ಪ್ರದೇಶದಲ್ಲಿ ಶನಿವಾರ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ ಬ್ಯಾಂಕ್‌ನ ಕಟ್ಟಡವೊಂದು ಭಾಗಶಃ ಕುಸಿದು ಬಿದ್ದಿರುವ ವಿಡಿಯೋಗಳು ವೈರಲ್ ಆಗಿವೆ.
ಸಿಂಧ್: ಪಾಕಿಸ್ತಾನದ ಕರಾಚಿಯಲ್ಲಿ ಉಂಟಾದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈ ಘಟನೆಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದಾರೆ. ಬಾಂಬ್ ಸ್ಫೋಟದ ನಂತರ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕರಾಚಿಯ ಶೇರ್ಷಾ ಪ್ರದೇಶದಲ್ಲಿ ಶನಿವಾರ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ ಬ್ಯಾಂಕ್‌ನ ಕಟ್ಟಡವೊಂದು ಭಾಗಶಃ ಕುಸಿದು ಬಿದ್ದಿರುವ ವಿಡಿಯೋಗಳು ವೈರಲ್ ಆಗಿವೆ.
ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ತಿಳಿಸಿದೆ. ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸ್ಫೋಟದ ಸ್ವರೂಪವನ್ನು ನಿರ್ಧರಿಸುತ್ತಿದ್ದಾರೆ. ಗ್ಯಾಸ್ ಸೋರಿಕೆ ಅಥವಾ ಬಾಂಬ್ ಸ್ಫೋಟದಿಂದಾಗಿ ಘಟನೆ ಸಂಭವಿಸಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.
ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಶಾಸಕ ಅಲಂಗೀರ್ ಖಾನ್ ಅವರ ತಂದೆ ದಿಲಾವರ್ ಖಾನ್ ಕೂಡ ನಿನ್ನೆ ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ರಾಜಕೀಯ ಸಂವಹನದ ವಿಶೇಷ ಸಹಾಯಕ ಶಹಬಾಜ್ ಗಿಲ್ ಹೇಳಿದ್ದಾರೆ.
ನಿನ್ನೆ ನಡೆದ ಸ್ಫೋಟ ಪ್ರಕರಣಕ್ಕೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದು, ಕರಾಚಿಯ ಶೇರ್ ಷಾ ಪರಾಚಾ ಚೌಕ್‌ನಲ್ಲಿ ನಡೆದ ಅವಳಿ ಸ್ಫೋಟದಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಆ ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪಗಳು. ನಮ್ಮ ಎಂಎನ್‌ಎ ಅಲಂಗೀರ್ ಖಾನ್ ಅವರ ತಂದೆಯೂ ಸ್ಫೋಟದಲ್ಲಿ ಸಾವನ್ನಪ್ಪಿದ ಬಗ್ಗೆ ಕೇಳಿ ನನಗೆ ಬಹಳ ದುಃಖವಾಗಿದೆ. ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಅಲ್ಲಾಹ್ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
My heartfelt prayers & condolences go to all the families of victims of the twin blasts at Sher Shah Paracha Chowk, Karachi. I am especially saddened to hear of the loss of our MNA Alamgir Khan’s father who also perished in the blast. May Allah give him strength to bear this loss
— Imran Khan (@ImranKhanPTI) December 18, 2021
ನಿನ್ನೆ ಕರಾಚಿಯಲ್ಲಿ ಸ್ಫೋಟವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿದ್ದ ಮಕ್ಕಳು ಸೇರಿದಂತೆ ಸಾಕಷ್ಟು ಜನರ ಮೈಗೆ ಬೆಂಕಿ ಹೊತ್ತಿಕೊಂಡು ಕಣ್ಮುಂದೆಯೇ ಸುಟ್ಟು ಕರಕಲಾದರು, ಇನ್ನು ಕೆಲವರ ಅಂಗಾಂಗಗಳು ತುಂಡಾಗಿ ಬಿದ್ದವು. ಬ್ಯಾಂಕ್‌ನ ಶಾಖೆಯೊಂದು ಬಹುತೇಕ ಬೆಂಕಿಗೆ ಆಹುತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪಾಕಿಸ್ತಾನದ ಡಾನ್ ಪತ್ರಿಕೆಯ ವರದಿಯ ಪ್ರಕಾರ, ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ಈ ಬಾಂಬ್ ಸ್ಫೋಟ ಸಂಭವಿಸಿರಬಹುದು. ಕಳೆದ ವಾರ ಸರ್ಕಾರಿ ನೌಕರರನ್ನು ಹೊತ್ತೊಯ್ಯುತ್ತಿದ್ದ ಬಸ್‌ನ ಬಾಂಬ್ ಸ್ಫೋಟದಿಂದ ನಗರವು ಇನ್ನೂ ತತ್ತರಿಸುತ್ತಿರುವಾಗಲೇ ಈ ಬಾಂಬ್ ಸ್ಫೋಟ ಸಂಭವಿಸಿದೆ. ಕಳೆದ ವಾರ ಚರ್ಚ್ ಸ್ಫೋಟದಲ್ಲಿ 80 ಮಂದಿ ಸಾವನ್ನಪ್ಪಿದರು. ಭಾನುವಾರದ ಚರ್ಚ್ ಬಾಂಬ್ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿತ್ತು. ಆದರೆ, ಶನಿವಾರ ನಡೆದ ಸ್ಫೋಟ ಬಾಂಬ್ ಸ್ಫೋಟವೇ ಎಂಬ ಅನುಮಾನವಿದ್ದು, ಗ್ಯಾಸ್ ಸೋರಿಕೆಯಿಂದಲೂ ಉಂಟಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಅನೇಕ ಜನರು ಹೂತುಹೋಗಿದ್ದರು. ಕಟ್ಟಡದ ಅವಶೇಷಗಳನ್ನು ತೆಗೆದುಹಾಕಲು ಮತ್ತು ಅಲ್ಲಿ ಸಿಲುಕಿರುವ ಯಾವುದೇ ವ್ಯಕ್ತಿಗಳನ್ನು ರಕ್ಷಿಸಲು ಎರಡು ಭಾರೀ ಯಂತ್ರಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು. ಸ್ಫೋಟದ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ಘಟಕ (ಬಿಡಿಯು) ಆಗಮಿಸಿತ್ತು.
ಇದನ್ನೂ ಓದಿ: Pakistan Bomb Blast: ಪಾಕಿಸ್ತಾನದ ಕರಾಚಿಯಲ್ಲಿ ಕಾರ್ ಬಾಂಬ್ ಸ್ಫೋಟ; 10 ಜನ ಸಾವು, 13ಕ್ಕೂ ಹೆಚ್ಚು ಮಂದಿಗೆ ಗಾಯ
Rohini Court Blast: ವಿಜ್ಞಾನಿ vs ವಕೀಲ ಜಗಳ; ದೆಹಲಿ ಕೋರ್ಟ್ನಲ್ಲಿ ಬಾಂಬ್ ಇಟ್ಟವರು ಯಾರು ಗೊತ್ತಾ?