ನಾನೆಂದೂ ಒಸಾಮಾ ಬಿನ್ ಲಾಡೆನ್ನನ್ನು ಭೇಟಿ ಮಾಡಿಲ್ಲ; ಅಲ್ಖೈದಾ ನಂಟನ್ನು ತಳ್ಳಿ ಹಾಕಿದ ಜಾಗತಿಕ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿ
Abdul Rehman Makki: ಅಬ್ದುಲ್ ರೆಹಮಾನ್ ಮಕ್ಕಿಯನ್ನು 2019ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಲಾಯಿತು. ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪದ ಮೇಲೆ 2020ರಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು.
ಮುಂಬೈ: ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ಲಷ್ಕರ್-ಎ-ತೊಯ್ಬಾ (LeT)ದ ಉಪನಾಯಕ ಅಬ್ದುಲ್ ರೆಹಮಾನ್ ಮಕ್ಕಿ (Abdul Rehman Makki) ತನಗೂ, ಅಲ್-ಖೈದಾ ಸಂಘಟನೆಗೂ ಯಾವುದೇ ಸಂಬಂಧವಿಲ್ಲ. ನಾನು ಎಂದೂ ಒಸಾಮಾ ಬಿನ್ ಲಾಡೆನ್ನನ್ನು (Osama Bin Laden) ಭೇಟಿ ಮಾಡಿಲ್ಲ ಎಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ.
ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ನ ಸೋದರ ಮಾವ ಅಬ್ದುಲ್ ರೆಹಮಾನ್ ಮಕ್ಕಿ 166 ಜನರನ್ನು ಬಲಿತೆಗೆದುಕೊಂಡ 26/11 ದಾಳಿಯ ಬಗ್ಗೆ ಏನೂ ಮಾತನಾಡಿಲ್ಲ. ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ 1267 ISIL (ದಯೆಶ್) ಮತ್ತು ಅಲ್ ಖೈದಾ ನಿರ್ಬಂಧಗಳ ಸಮಿತಿಯು ಸೋಮವಾರ ತನ್ನ ಜಾಗತಿಕ ಭಯೋತ್ಪಾದಕರ ಪಟ್ಟಿಗೆ 68 ವರ್ಷದ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಸೇರಿಸಿತ್ತು. ಆತನ ಆಸ್ತಿ ಫ್ರೀಜ್, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಡಿಸಿತ್ತು.
ಇದನ್ನೂ ಓದಿ: ಬಂಧಿತ ಎಲ್ಇಟಿ ಉಗ್ರರ ಪೈಕಿ ಓರ್ವ ಮಾಜಿ ಬಿಜೆಪಿ ವ್ಯಕ್ತಿ, ಜಮ್ಮು ಕಾಶ್ಮೀರದ ರಾಜಕೀಯ ವಲಯಗಳಲ್ಲಿ ಗದ್ದಲ
ನಾನು ಒಸಾಮಾ ಬಿನ್ ಲಾಡೆನ್, ಅಯ್ಮನ್ ಅಲ್-ಜವಾಹಿರಿ ಅಥವಾ ಅಬ್ದುಲ್ಲಾ ಅಜಮ್ ಅವರನ್ನು ಭೇಟಿಯಾಗಿದ್ದೇನೆ ಎಂದು ಕೆಲವು ವರದಿಗಳು ಹರಿದಾಡುತ್ತಿವೆ. ಆದರೆ, ನಾನು ಅವರ್ಯಾರನ್ನೂ ಭೇಟಿಯಾಗಿಲ್ಲ. ನಾನು ಇಸ್ಲಾಮಿಕ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿಲ್ಲ ಅಥವಾ ಕಲಿಸಿಲ್ಲ. ಹಾಗೇ, ಅಬ್ದುಲ್ಲಾ ಅಜಮ್, ಅಮಾನ್ ಅಲ್ ಜವಾಹಿರಿ ಅಥವಾ ಒಸಾಮಾ ಬಿನ್ ಲಾಡೆನ್ ಅವರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಆತ ಹೇಳಿದ್ದಾನೆ.
ಅಬ್ದುಲ್ ರೆಹಮಾನ್ ಮಕ್ಕಿಯನ್ನು 2019ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಲಾಯಿತು. ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪದ ಮೇಲೆ 2 ಪ್ರತ್ಯೇಕ ಪ್ರಕರಣಗಳಲ್ಲಿ ನವೆಂಬರ್ ಮತ್ತು ಡಿಸೆಂಬರ್ 2020ರಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು. ಅಲ್-ಖೈದಾ ಮತ್ತು ಐಸಿಸ್‌ನ ದೃಷ್ಟಿಕೋನಗಳು ಮತ್ತು ಕ್ರಮಗಳು ನನ್ನ ನಂಬಿಕೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಮಕ್ಕಿ ಹೇಳಿದ್ದಾರೆ.
ಇದನ್ನೂ ಓದಿ: ಪಾಕ್ ಮೂಲದ ಅಬ್ದುಲ್ ಮಕ್ಕಿ ಈಗ ಜಾಗತಿಕ ಉಗ್ರ: ಚೀನಾ ತಡೆಯ ನಂತರವೂ ವಿಶ್ವಸಂಸ್ಥೆಯಿಂದ ಘೋಷಣೆ
ಕಳೆದ ವರ್ಷ ಜೂನ್‌ನಲ್ಲಿ, ವಿಶ್ವಸಂಸ್ಥೆ ಸೆಕ್ಯುರಿಟಿ ಕೌನ್ಸಿಲ್‌ನ 1267 ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಮಕ್ಕಿಯನ್ನು ಪಟ್ಟಿಗೆ ಸೇರಿಸುವ ಭಾರತ ಮತ್ತು ಅಮೆರಿಕಾದ ಜಂಟಿ ಪ್ರಸ್ತಾವನೆಯನ್ನು ಚೀನಾ ಕೊನೆಯ ಕ್ಷಣದಲ್ಲಿ ತಡೆಹಿಡಿದಿತ್ತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಲ್ಪುರದಲ್ಲಿ ಜನಿಸಿದ ಅಬ್ದುಲ್ ರೆಹಮಾನ್ ಮಕ್ಕಿ ಎಲ್ ಇಟಿ ಉಗ್ರಗಾಮಿ ಸಂಘಟನೆಯ ಉಪ ಮುಖ್ಯಸ್ಥ ಮತ್ತು ಜೆಯುಡಿ/ಎಲ್ ಇಟಿ ಸಂಘಟನೆಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥನಾಗಿದ್ದಾನೆ. ಮಕ್ಕಿಯನ್ನು ಮೇ 15, 2019 ರಂದು ಪಾಕಿಸ್ತಾನ ಸರ್ಕಾರವು ಬಂಧಿಸಿ ಲಾಹೋರ್‌ನಲ್ಲಿ ಗೃಹಬಂಧನದಲ್ಲಿರಿಸಲಾಗಿತ್ತು. 2020 ರಲ್ಲಿ, ಪಾಕಿಸ್ತಾನಿ ನ್ಯಾಯಾಲಯವು ಮಕ್ಕಿಯನ್ನು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಅಪರಾಧಿ ಎಂದು ಘೋಷಿಸಿ ಅವನಿಗೆ ಜೈಲು ಶಿಕ್ಷೆ ವಿಧಿಸಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:30 am, Fri, 20 January 23