ಇನ್ನು ಮುಂದೆ ಅಪ್ಪ- ಅಮ್ಮ ಪದ ಬಳಸುವ ಹಾಗಿಲ್ಲ! ನ್ಯೂಯಾರ್ಕ್ ಅಲ್ಲಿ ಈ ಹೊಸ ರೂಲ್ ಯಾಕೆ ಗೊತ್ತಾ?
ಅಮೆರಿಕದ ನ್ಯೂಯಾರ್ಕ್ ರಾಜ್ಯದಲ್ಲಿ ಆಡಳಿತಾರೂಢ ಡೆಮೋಕ್ರಾಟ್ ನಾಯಕರು ತಂದೆ-ತಾಯಿ ಪದಗಳನ್ನು ಕೌಟುಂಬಿಕ ಕಾನೂನಿನಿಂದ ತೆಗೆದುಹಾಕಲು ಹೊಸ ವಿಧೇಯಕ ಮಂಡಿಸಿದ್ದಾರೆ. ಇನ್ಮುಂದೆ ತಾಯಿಯ ಬದಲಿಗೆ 'ಗರ್ಭ ಧರಿಸಿದ ಪೋಷಕರು' ಹಾಗೂ ತಂದೆಯ ಬದಲಿಗೆ 'ಗರ್ಭ ಧರಿಸದ ಪೋಷಕರು' ಎಂಬ ಲಿಂಗ-ತಟಸ್ಥ ಪದಗಳನ್ನು ಬಳಸಲು ಉದ್ದೇಶಿಸಲಾಗಿದ್ದು, ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನ್ಯೂಯಾರ್ಕ್, ಜೂನ್ 06: ಅಮೆರಿಕದ ಪ್ರಸಿದ್ಧ ನ್ಯೂಯಾರ್ಕ್ ರಾಜ್ಯದಲ್ಲಿ ಆಡಳಿತಾರೂಢ ಡೆಮೋಕ್ರಾಟ್ ಪಕ್ಷದ ನಾಯಕರು ಜಾರಿಗೆ ತರಲು ಹೊರಟಿರುವ ಹೊಸ ಮಸೂದೆಯೊಂದು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ರಾಜ್ಯದ ಮಕ್ಕಳ ಪಾಲನೆ ಮತ್ತು ಕೌಟುಂಬಿಕ ಕಾನೂನುಗಳಿಂದ ‘ತಾಯಿ’ (Mother) ಮತ್ತು ‘ತಂದೆ’ (Father) ಎಂಬ ಸಾಂಪ್ರದಾಯಿಕ ಹಾಗೂ ಭಾವನಾತ್ಮಕ ಪದಗಳನ್ನು ತೆಗೆದುಹಾಕಲು ಆಡಳಿತ ಪಕ್ಷ ಮುಂದಾಗಿದೆ. ತಾಯಿ-ತಂದೆ ಪದಗಳ ಬದಲಿಗೆ ಲಿಂಗ-ತಟಸ್ಥ (Gender-Neutral) ಪದಗಳನ್ನು ಬಳಸುವ ಈ ವಿಧೇಯಕವು ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದು, ಈಗ ಗವರ್ನರ್ ಅವರ ಅಂಕಿತಕ್ಕಾಗಿ ಕಾಯುತ್ತಿದೆ.
ಮುಖ್ಯಾಂಶಗಳು
- ನ್ಯೂಯಾರ್ಕ್ ಕೌಟುಂಬಿಕ ಕಾನೂನಿನಿಂದ ‘ತಾಯಿ’ ಮತ್ತು ‘ತಂದೆ’ ಪದಗಳ ಮುಕ್ತಾಯಕ್ಕೆ ತಿದ್ದುಪಡಿ.
- ‘ತಾಯಿ’ ಪದದ ಬದಲು ‘ಗರ್ಭ ಧರಿಸಿದ ಪೋಷಕರು’ ಎಂದು ಬಳಸಲು ಡೆಮೋಕ್ರಾಟ್‌ಗಳ ವಿಧೇಯಕ.
- ರಿಪಬ್ಲಿಕನ್ ನಾಯಕರಿಂದ ತೀವ್ರ ವಿರೋಧ; ‘ಇದು ವೋಕ್ ಸಂಸ್ಕೃತಿಯ ಹುಚ್ಚುತನ’ ಎಂದು ಆಕ್ರೋಶ.
ಹೊಸ ಕಾನೂನಿನ ಬದಲಾವಣೆಗಳೇನು?
ನ್ಯೂಯಾರ್ಕ್‌ನ ಡೆಮೋಕ್ರಾಟ್ ಶಾಸಕರು ಮಂಡಿಸಿರುವ ಈ ಹೊಸ ಕಾನೂನಿನ ಪ್ರಕಾರ, ಇನ್ಮುಂದೆ ಫ್ಯಾಮಿಲಿ ಕೋರ್ಟ್, ಶಿಕ್ಷಣ ಇಲಾಖೆ ಹಾಗೂ ಕೌಟುಂಬಿಕ ದಾಖಲೆಗಳಲ್ಲಿ ತಾಯಿ (Mother) ಎಂಬ ಪದದ ಜಾಗದಲ್ಲಿ ಗರ್ಭ ಧರಿಸಿದ ಪೋಷಕರು (Gestating Parent) ಎಂದು ಬಳಸಲಾಗುತ್ತದೆ. ತಂದೆ (Father) ಎಂಬ ಪದದ ಬದಲಿಗೆ ಗರ್ಭ ಧರಿಸದ ಪೋಷಕರು (Non-gestating Parent) ಅಥವಾ ಕೇವಲ ‘ಪೋಷಕರು’ ಎಂದು ಉಲ್ಲೇಖಿಸಲಾಗುತ್ತದೆ. ಮಗುವಿನ ಜೈವಿಕ ತಂದೆಯನ್ನು ಗುರುತಿಸುವ ಪ್ರಕ್ರಿಯೆಯಾದ ‘ಪಿತ್ರಾರ್ಜಿತ’ (Paternity) ವಿಚಾರಣೆಗಳನ್ನು ಇನ್ಮುಂದೆ ‘ಪೇರೆಂಟೇಜ್’ (Parentage – ಪೋಷಕತ್ವ) ಎಂದು ಕರೆಯಲಾಗುತ್ತದೆ.
ವಿರೋಧ ಪಕ್ಷಗಳ ತೀವ್ರ ಆಕ್ರೋಶ
ಡೆಮೋಕ್ರಾಟ್‌ಗಳ ಈ ‘ವೋಕ್ ಕಲ್ಚರ್’ ನಿರ್ಧಾರದ ವಿರುದ್ಧ ರಿಪಬ್ಲಿಕನ್ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ಅತಿರೇಕದ ವರ್ತನೆ. ನ್ಯೂಯಾರ್ಕ್‌ನ ಸಾಮಾನ್ಯ ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಬಿಲ್ ಹಾಗೂ ಸುರಕ್ಷತೆಯ ಸಮಸ್ಯೆಗಳಿಂದ ತತ್ತರಿಸುತ್ತಿದ್ದರೆ, ಆಡಳಿತ ಪಕ್ಷವು ಅಮ್ಮ-ಅಪ್ಪ ಎಂಬ ಪವಿತ್ರ ಪದಗಳನ್ನು ಬದಲಾಯಿಸುವ ಅಪ್ರಸ್ತುತ ವಿಷಯಗಳಿಗೆ ಸಮಯ ವ್ಯಯಿಸುತ್ತಿದೆ ಎಂದು ರಿಪಬ್ಲಿಕನ್ ಸೆನೆಟರ್ ಪ್ಯಾಟ್ರಿಸಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಯಕ ಬ್ರೂಸ್ ಬ್ಲೇಕ್‌ಮನ್ ಮಾತನಾಡಿ, ಡೆಮೋಕ್ರಾಟ್‌ಗಳು ನ್ಯೂಯಾರ್ಕ್‌ನ ಕುಟುಂಬಗಳ ಸೌಹಾರ್ದತೆಯ ವಿರುದ್ಧ ಯುದ್ಧ ಸಾರಿದ್ದಾರೆ. ನಾನು ಗವರ್ನರ್ ಆದ ತಕ್ಷಣ ಈ ಹುಚ್ಚುತನಕ್ಕೆ ಬ್ರೇಕ್ ಹಾಕುತ್ತೇನೆ ಎಂದಿದ್ದಾರೆ.
ಕಾನೂನು ತಿದ್ದುಪಡಿಗೆ ಡೆಮೋಕ್ರಾಟ್‌ಗಳ ಸಮರ್ಥನೆ ಏನು?
ಈ ವಿಧೇಯಕವನ್ನು ಬೆಂಬಲಿಸಿರುವ ಸೆನೆಟರ್ ಲೂಯಿಸ್ ಸೆಪುಲ್ವೆಡಾ, ಪ್ರಸ್ತುತ ಸಮಾಜದಲ್ಲಿ ಸಲಿಂಗಕಾಮಿ ದಂಪತಿಗಳು (Same-sex parents) ಹಾಗೂ ಸರೋಗಸಿ (Surrogacy) ಪ್ರಕರಣಗಳು ಹೆಚ್ಚುತ್ತಿವೆ. ಇಬ್ಬರು ತಾಯಂದಿರು ಅಥವಾ ಇಬ್ಬರು ತಂದೆಯಂದಿರು ಇರುವ ಕುಟುಂಬಗಳ ಕಾನೂನು ಪ್ರಕ್ರಿಯೆಗಳನ್ನು ಸರಳಗೊಳಿಸಲು ಮತ್ತು ಸದ್ಯದ ನ್ಯಾಯಾಲಯದ ವ್ಯವಸ್ಥೆಗೆ ಪೂರಕವಾಗಿರಲು ಈ ಲಿಂಗ-ತಟಸ್ಥ ಪದಬಳಕೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರ ಸಹಿ ಬಿದ್ದ ತಕ್ಷಣ ಈ ವಿಧೇಯಕವು ಅಧಿಕೃತ ಕಾನೂನಾಗಿ ಜಾರಿಗೆ ಬರಲಿದ್ದು, ಮುಂಬರುವ ದಿನಗಳಲ್ಲಿ ಅಮೆರಿಕದ ಇತರ ರಾಜ್ಯಗಳ ಮೇಲೂ ಇದು ಪ್ರಭಾವ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




