ಸ್ನೇಹಿತ ತಪ್ಪು ಮಾಡಿದರೆ ಬುದ್ಧಿ ಹೇಳಬೇಕು; ರಷ್ಯಾ ಕುರಿತು ವಿಶ್ವ ಸಂಸ್ಥೆ ನಿರ್ಣಯದಿಂದ ಭಾರತ ದೂರ ಉಳಿದಿದ್ದಕ್ಕೆ ಕಾಂಗ್ರೆಸ್ ಅಸಮಾಧಾನ
ನಮ್ಮ ಕಷ್ಟಗಳಲ್ಲಿ ರಷ್ಯಾ ನಮ್ಮ ಬೆಂಬಲಕ್ಕೆ ನಿಂತಿದೆ ಎಂಬುದು ಸತ್ಯ. ಆದರೆ ಸ್ನೇಹಿತ ತಪ್ಪು ಮಾಡಿದರೆ, ನಾವು ಅವರನ್ನು ಸರಿಪಡಿಸಬೇಕು ಎಂದು ಮನೀಶ್ ತಿವಾರಿ ಹೇಳಿದ್ದಾರೆ.
ನವದೆಹಲಿ: ಉಕ್ರೇನ್ (Ukraine) ವಿರುದ್ಧ ರಷ್ಯಾದ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ನಿರ್ಣಯದಿಂದ ದೂರವಿರಲು ಭಾರತ ನಿರ್ಧರಿಸಿರುವುದನ್ನು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟೀಕಿಸಿದ್ದಾರೆ. “ಸ್ನೇಹಿತರು ತಪ್ಪು ಮಾಡಿದರೆ, ನಾವು ಅವರನ್ನು ಸರಿಪಡಿಸಬೇಕು” ಎಂದು ಅವರು ಹೇಳಿದ್ದಾರೆ. ಭಾರತ ಮತ್ತು ಇತರ ಎರಡು ದೇಶಗಳು ಶುಕ್ರವಾರ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ವಿರುದ್ಧದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ನಿರ್ಣಯದಿಂದ ದೂರವಿದ್ದವು. ಕೌನ್ಸಿಲ್‌ನ 15 ಸದಸ್ಯರಲ್ಲಿ, ಹನ್ನೊಂದು ಮಂದಿ ನಿರ್ಣಯದ ಪರವಾಗಿ ಮತ ಚಲಾಯಿಸಿದರು ಮತ್ತು ಚೀನಾ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈ ನಿರ್ಣಯದಿಂದ ದೂರ ಉಳಿದವು. ಐದು ರಾಷ್ಟ್ರಗಳಾದ ಅಮೆರಿಕಾ, ಇಂಗ್ಲೆಂಡ್, ರಷ್ಯಾ, ಚೀನಾ ಮತ್ತು ಫ್ರಾನ್ಸ್ ಕೌನ್ಸಿಲ್‌ನ ಖಾಯಂ ಸದಸ್ಯರಾಗಿದ್ದಾರೆ ಮತ್ತು ಈ ರಾಷ್ಟ್ರಗಳು ವೀಟೋ ಅಧಿಕಾರವನ್ನು ಹೊಂದಿವೆ. ಭಾರತವು ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿದೆ ಮತ್ತು ಅದರ ಎರಡು ವರ್ಷಗಳ ಅವಧಿಯು ಈ ವರ್ಷ ಮುಕ್ತಾಯಗೊಳ್ಳುತ್ತದೆ.
ಭಾರತದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮನೀಶ್ ತಿವಾರಿ, “ಭಾರತದ ಅಲಿಪ್ತ ಚಳವಳಿ (NAM) ನೀತಿಯನ್ನು 1991ರಿಂದ ಕ್ರಮೇಣ ಕೊನೆಗೊಳಿಸಲಾಗಿದೆ. ಇಂದು ಭಾರತವು ಅದೇ ನೀತಿಗೆ ಮರಳಲು ಯೋಚಿಸಿದರೆ ಅದು ತಪ್ಪಾಗುತ್ತದೆ” ಎಂದು ಹೇಳಿದ್ದಾರೆ.
ನಮ್ಮ ಕಷ್ಟಗಳಲ್ಲಿ ರಷ್ಯಾ ನಮ್ಮ ಬೆಂಬಲಕ್ಕೆ ನಿಂತಿದೆ ಎಂಬುದು ಸತ್ಯ. ಆದರೆ ಸ್ನೇಹಿತ ತಪ್ಪು ಮಾಡಿದರೆ, ನಾವು ಅವರನ್ನು ಸರಿಪಡಿಸಬೇಕು. ಅದು ಬಿಟ್ಟು ತಪ್ಪು ಮಾಡಿದಾಗಲೂ ಸ್ನೇಹಿತನ ಪರವಾಗಿ ನಿಂತರು ಅದು ಮತ್ತೊಂದು ತಪ್ಪಾಗುತ್ತದೆ. ಯುಎನ್ಎಸ್ಸಿ ನಿರ್ಣಯದಲ್ಲಿ ಭಾರತ ಉಕ್ರೇನ್ ಪರವಾಗಿ ಮತ ಹಾಕಬೇಕಿತ್ತು ಎಂದು ಮನೀಶ್ ತಿವಾರಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಲ್ಲಿ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಯೊಳಗೆ ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಸದಸ್ಯರ ಬದ್ಧತೆಯನ್ನು ಪುನರುಚ್ಚರಿಸಲಾಗಿತ್ತು ಮತ್ತು ಮಿನ್ಸ್ಕ್ ಒಪ್ಪಂದಗಳಿಗೆ ಬದ್ಧವಾಗಿರಲು ಪಕ್ಷಗಳಿಗೆ ಕರೆ ನೀಡಲಾಗಿತ್ತು.
ನಿರ್ಣಯದ ಪರ ಮತ ಹಾಕಿದ ದೇಶಗಳು: ಫ್ರಾನ್ಸ್, ಬ್ರಿಟನ್, ಅಮೇರಿಕಾ, ಅಲ್ಬೇನಿಯಾ, ಬ್ರೆಜಿಲ್, ಗ್ಯಾಬೊನ್, ಘಾನಾ, ಐರ್ಲೆಂಡ್, ಕೀನ್ಯಾ, ಮೆಕ್ಸಿಕೋ ಮತ್ತು ನಾರ್ವೆ ಈ ನಿರ್ಣಯವನ್ನು ಅಂಗೀಕರಿಸಲು ಮತ ಹಾಕಿದ ದೇಶಗಳಾಗಿವೆ.
ಮತದಾನದಿಂದ ದೂರ ಉಳಿದ ದೇಶಗಳು: ಚೀನಾ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತದಾನದಿಂದ ದೂರವುಳಿದವು. ವಿಶ್ವಸಂಸ್ಥೆಯ ಚೀನಾದ ಖಾಯಂ ಪ್ರತಿನಿಧಿ ಜಾಂಗ್ ಜುನ್ ಅವರು ಕೌನ್ಸಿಲ್‌ಗೆ ತಿಳಿಸುತ್ತಾ, ‘‘ಎಲ್ಲಾ ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು. ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಉದ್ದೇಶಗಳು ಮತ್ತು ತತ್ವಗಳನ್ನು ಎತ್ತಿಹಿಡಿಯಬೇಕು’’ ಎಂದು ಹೇಳಿದರು.
ಇದನ್ನೂ ಓದಿ: ನಿಮಗಿದು ಗೊತ್ತೇ?; ಭಾರತದ ಸಹಾಯ ಬೇಡುತ್ತಿರುವ ಇದೇ ಉಕ್ರೇನ್ ವಿಶ್ವಸಂಸ್ಥೆಯಲ್ಲಿ 1998ರ ಅಣ್ವಸ್ತ್ರ ಪರೀಕ್ಷೆಯನ್ನು ಖಂಡಿಸಿತ್ತು