ಮೊಸರನ್ನ ದಕ್ಷಿಣ ಭಾರತದಲ್ಲಿ ಅತಿ ಪ್ರಿಯವಾದ, ಹೆಚ್ಚು ಸೇವಿಸುವ ಹಾಗೂ ಸರಳವಾದ ಆಹಾರ. ವಿವಿಧ ಬಗೆಯ ಎಷ್ಟೇ ರುಚಿಕರವಾದ ಖಾದ್ಯ ಗಳಿದ್ದರೂ, ಎರಡು ತುತ್ತು ಮೊಸರನ್ನ ತಿಂದರೆ ಮಾತ್ರವೇ ಊಟ ಸಂಪೂರ್ಣ, ಸಂತೃಪ್ತಿ ಆಗುವುದು ಎಂಬ ಭಾವನೆ ಬಹುತೇಕರಿಗೆ ಇದೆ. ಮೊಸರನ್ನ ಎಲ್ಲಾ ಕಾಲಕ್ಕೂ ಸರಳವಾಗಿ ಮಾಡಬಹುದಾದ ಪದಾರ್ಥ ಅಲ್ಲದೆ ಇದು ಆರೋಗ್ಯಕ್ಕೂ ಉತ್ತಮವಾದ ಖಾದ್ಯ ಎಂದು ವಿದೇಶಿಯರು ಕಂಡುಕೊಂಡಿದ್ದಾರೆ.
ಮೊಸರನ್ನ ಹಿಂದಿದೆ ವೈಜ್ಞಾನಿಕ ಕಾರಣ: ಅಮ್ಮ ಮಾಡಿದ್ದಾರೆ ತಿನ್ನಲೇಬೇಕು ಎಂದು ನಾನು ನೀವು ತಿನ್ನುವ ಮೊಸರನ್ನದ ಹಿಂದೆ ವಿಸ್ಮಯಕಾರಿ ವೈಜ್ಞಾನಿಕ ಸತ್ಯವಿದೆ. ಅಮ್ಮ ಮಾಡಿದ ಮೊಸರನ್ನದ ರುಚಿಯಲ್ಲಿ ಆರೋಗ್ಯಕ್ಕೆ ಬೇಕಾದ ಶಕ್ತಿಯ ಅಂಶಗಳಿವೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಸಂಶೋಧನಾ ವರದಿಯಲ್ಲಿ ಮೊಸರನ್ನ ಸಂತೋಷವನ್ನು ಹೆಚ್ಚಿಸುವ ಅನೇಕ ಗುಣಗಳನ್ನು ಹೊಂದಿದೆ ಹಾಗೂ ಮೆದುಳಿಗೆ ಸಂತೃಪ್ತಿ ಭಾವ ಮೂಡಿಸುತ್ತದೆ. ರುಚಿ ಇದೆ ಎಂದು ಹೆಚ್ಚು ಸೇವಿಸಿದರೆ ನಿದ್ದೆಯೂ ಬರುತ್ತದೆ ಎಂದೂ ಹೇಳಿದ್ದಾರೆ. ಸೋ ಜಾಗ್ರತೆಯಿರಲಿ!
ಮೊಸರನ್ನದ ಪ್ರಯೋಜನಗಳು ಒಂದಾ ಎರಡಾ!:
ಕರ್ಡ್ ರೈಸ್ ಅಥವಾ ದಹೀ ಖಾನಾದಲ್ಲಿ ಟ್ರೈಪ್ರೊಫನ್ ಎಂಬ ವಿಶಿಷ್ಟವಾದ ಅಮೈನೋ ಆಮ್ಲವಿದೆ. ಇದು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶ. ಇದು ಸಂತೃಪ್ತಿಯ ಭಾವ ಮೂಡಿಸುತ್ತದೆ. ನಮ್ಮ ದೇಹದಲ್ಲಿ ಈ ಆಮ್ಲ ಉತ್ಪತ್ತಿಯಾಗುವುದಿಲ್ಲ, ಇದನ್ನು ಆಹಾರದ ಮೂಲಕವೇ ಪಡೆದುಕೊಳ್ಳಬೇಕು. ಇದು ಟ್ರೈಪ್ರೊಫನ್ ಸೆರೊಟನಿನ್ ಎಂಬ ರಾಸಾಯನಿಕ ವಸ್ತುವಿನಿಂದ ರೂಪುಗೊಂಡಿದೆ. ಇದು ಜ್ಞಾಪಕ ಶಕ್ತಿ ಹೆಚ್ಚಿಸುವ, ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುವ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಪಾತ್ರ ವಹಿಸುತ್ತೆ. ಸಂತೋಷ ಭಾವನೆ ಬರಿಸುತ್ತದೆ, ಭಾವನೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ, ಆತಂಕ ದೂರ ಮಾಡುತ್ತದೆ, ನೆಮ್ಮದಿ ನೀಡುತ್ತದೆ ಮತ್ತು ದೇಹದಲ್ಲಿ ಚೈತನ್ಯ ತುಂಬುತ್ತದೆ, ಮೆದುಳಿನ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ವರದಿ ವಿವರಿಸಿದೆ.
ಮೊಸರಿನ ಜೊತೆ ಅನ್ನದ ಕಾಂಬಿನೇಷನ್: ಮೊಸರಿನಲ್ಲಿರುವ ಟ್ರೈಪ್ಟೊಫನ್ ಎಂಬ ಅಂಶದ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದರೆ ಅದು ಮಿದುಳಿಗೆ ತಲುಪಬೇಕು. ಇದಾಗಬೇಕಿದ್ದರೆ ಅದು ಬ್ಲಡ್ ಬ್ರೈನ್ ಬ್ಯಾರಿಯರ್ ಎಂಬ ಅಂಗವನ್ನು ದಾಟಬೇಕು. ಇತರ ಅಮಿನೊ ಆಮ್ಲಗಳು ಕೂಡಾ ಈ ಅಂಗ ದಾಟಲು ಪ್ರಯತ್ನಿಸುವ ಕಾರಣ ಟ್ರೈಪ್ಟೊಫನ್‌ಗೆ ಈ ಕೆಲಸ ಸುಲಭವಲ್ಲ. ಆಗ ಅನ್ನದ ಸಹಾಯ ಅತಿ ಮುಖ್ಯ.
ಕಾರ್ಬೊಹೈಡ್ರೇಟ್ಸ್ ಸಮೃದ್ಧವಾಗಿರುವ ಆಹಾರಗಳು ಟ್ರೈಪ್ಟೊಫನ್ ಅನ್ನು ಮೆದುಳಿಗೆ ಸುಲಭವಾಗಿ ಸಾಗಿಸುತ್ತದೆ. ಆದ್ದರಿಂದ ಟ್ರೈಪ್ಟೊಫನ್ ಸಮೃದ್ಧವಾಗಿರುವ ಮೊಸರು ಮತ್ತು ಕಾರ್ಬೊಹೈಡ್ರೇಟ್ಸ್ ಭರಿತ ಅನ್ನದ ಅದ್ಭುತ ಕಾಂಬಿನೇಷನ್ ಆಗಿರುವ ಮೊಸರನ್ನ ಸೆರೊಟನಿನ್ ಉತ್ಪಾದನೆಯನ್ನು ಹೆಚ್ಚಿಸಿ ಮಿದುಳಿನ ಚಟುವಟಿಕೆಯನ್ನು ವರ್ಧಿಸುತ್ತದೆ. ಕೇವಲ ಮೊಸರು ತಿಂದರೆ ಮಾತ್ರ ಸಾಲದು. ಅದರೊಂದಿಗೆ ಅನ್ನ ತಿಂದರೆ ಮಾತ್ರ ಮೊಸರಿನ ಪ್ರಯೋಜನ ಪಡೆಯಲು ಸಾಧ್ಯ.
ಈ ಎಲ್ಲಾ ವಿಶೇಷತೆಗಳನ್ನು ತಿಳಿದಿದ್ದ ನಮ್ಮ ಭಾರತೀಯರು ಈ ಮೊದಲೇ ಊಟದ ಕೊನೆಗೆ ಮೊಸರನ್ನ ತಿನ್ನುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು, ಅಲ್ವಾ!?