ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾಪ ತಿರಸ್ಕರಿಸಿದ ಟ್ರಂಪ್: ಮಧ್ಯಂತರ ಚುನಾವಣೆಗಳ ಬಳಿಕ ಮತ್ತೆ ಬಾಂಬ್ ದಾಳಿ ಸೂಚನೆ
ಇರಾನ್ ಪ್ರಸ್ತಾಪಿಸಿದ 7 ದಿನಗಳ ಕದನ ವಿರಾಮ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದು, ನವೆಂಬರ್ ಮಧ್ಯಂತರ ಚುನಾವಣೆಗಳ ನಂತರ ಇರಾನ್ ಮೇಲೆ ಬಾಂಬ್ ದಾಳಿ ಪುನರಾರಂಭಿಸುವ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಅಮೆರಿಕವು ಇತರ ತುರ್ತು ಪರಿಸ್ಥಿತಿಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಉಳಿಸಿಕೊಳ್ಳಲು ಬಯಸುತ್ತಿರುವುದರಿಂದ, ದೊಡ್ಡ ಪ್ರಮಾಣದ ಯುದ್ಧ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಟ್ರಂಪ್ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ವಾಷಿಂಗ್ಟನ್, ಸೆಪ್ಟೆಂಬರ್ 26: ಇರಾನ್ ಪ್ರಸ್ತಾಪಿಸಿದ್ದ ಏಳು ದಿನಗಳ ಕದನ ವಿರಾಮ ವಿಚಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದು, ನವೆಂಬರ್ ಮಧ್ಯಂತರ ಚುನಾವಣೆಗಳ ಬಳಿಕ ಇರಾನ್ ಮೇಲೆ ಅಮೆರಿಕದ ಬಾಂಬ್ ದಾಳಿ ಮತ್ತೆ ಆರಂಭವಾಗಬಹುದು ಎಂದು ಸಹಾಯಕರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇರಾನ್ ತನ್ನ ಪ್ರಸ್ತಾಪದ ಭಾಗವಾಗಿ ಹೋರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಹಾಗೂ ಅಮೆರಿಕದೊಂದಿಗೆ ಪರಮಾಣು ಮಾತುಕತೆಗಳನ್ನು ಮರುಪ್ರಾರಂಭಿಸಲು ಮುಂದಾಗಿತ್ತು.
ಅಮೆರಿಕವು ಇರಾನ್‌ನ ಬಂದರುಗಳ ಮೇಲಿನ ನೌಕಾ ನಿರ್ಬಂಧವನ್ನು ತೆರವುಗೊಳಿಸಬೇಕು, ಇರಾನ್‌ನ ತೈಲ ರಫ್ತಿನ ಮೇಲಿನ ನಿರ್ಬಂಧಗಳನ್ನು ಸಡಿಲಿಸಬೇಕು ಹಾಗೂ ಲೆಬನಾನ್ ಒಳಗೊಂಡ ಕದನ ವಿರಾಮವನ್ನು ಪಾಲಿಸಬೇಕು. ಇದಕ್ಕೆ ಪ್ರತಿಯಾಗಿ ಇರಾನ್ ಹೋರ್ಮುಜ್ ಜಲಸಂಧಿಯನ್ನು ಪುನಃ ತೆರೆಯಬೇಕು ಮತ್ತು ತನ್ನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್‌ನೊಂದಿಗೆ ಮಾತುಕತೆಗಳನ್ನು ಮರುಪ್ರಾರಂಭಿಸಬೇಕು ಎಂದು ಇರಾನ್‌ನ ಪ್ರಸ್ತಾಪಿಸಿತ್ತು. ಏತನ್ಮಧ್ಯೆ, ಮಧ್ಯಂತರ ಚುನಾವಣೆಗಳ ಬಳಿಕ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಒಪ್ಪಂದಕ್ಕೆ ಮುಂದಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಪ್ರಕಾರ, ಇರಾನ್ ತನ್ನ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ಬಗ್ಗೆ ಟ್ರಂಪ್ ಖಾಸಗಿಯಾಗಿ ಇನ್ನೂ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮತ್ತೆ ಬಾಂಬ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅವರು ತಮ್ಮ ಸಹಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಮೆರಿಕವು ಇತರ ತುರ್ತು ಪರಿಸ್ಥಿತಿಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಉಳಿಸಿಕೊಳ್ಳಲು ಬಯಸುತ್ತಿರುವುದರಿಂದ, ದೊಡ್ಡ ಪ್ರಮಾಣದ ಯುದ್ಧ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಟ್ರಂಪ್ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ‘ಹಡಗು, ನಾವಿಕರ ಮೇಲಿನ ದಾಳಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’; ವಿಶ್ವಸಂಸ್ಥೆಯಲ್ಲಿ ಸಚಿವ ಜೈಶಂಕರ್ ಖಡಕ್ ಸಂದೇಶ
ಇರಾನ್‌ನ ಏಳು ದಿನಗಳ ಪ್ರಸ್ತಾಪ ಏನು?
ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಹೋರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಮತ್ತು ಪರಮಾಣು ಮಾತುಕತೆಗಳನ್ನು ಮರುಪ್ರಾರಂಭಿಸಲು ಅವಕಾಶ ನೀಡುವ ಏಳು ದಿನಗಳ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಅಗತ್ಯ ಷರತ್ತುಗಳನ್ನು ಪೂರೈಸಿದರೆ, ಏಳು ದಿನಗಳೊಳಗೆ ಜಲಸಂಧಿಯನ್ನು ಪುನಃ ತೆರೆಯಬಹುದು ಮತ್ತು ಸಾಮಾನ್ಯ ಸಮುದ್ರ ಸಂಚಾರವನ್ನು ಪುನಃಸ್ಥಾಪಿಸಬಹುದು. ಈಗ ನಿರ್ಧಾರ ಅಮೆರಿಕದ ಕೈಯಲ್ಲಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕ ಈ ಯೋಜನೆಯನ್ನು ಒಪ್ಪಿಕೊಂಡ ತಕ್ಷಣ ಏಳು ದಿನಗಳ ಅವಧಿ ಆರಂಭವಾಗಲಿದೆ ಎಂದು ಅರಾಘ್ಚಿ ತಿಳಿಸಿದ್ದಾರೆ. ಪ್ರಸ್ತಾಪದ ಪ್ರಕಾರ, ವಾಷಿಂಗ್ಟನ್ ಇರಾನ್‌ನ ಬಂದರುಗಳ ಮೇಲಿನ ನೌಕಾ ನಿರ್ಬಂಧವನ್ನು ತೆರವುಗೊಳಿಸಬೇಕು, ಇರಾನ್‌ನ ತೈಲ ಮಾರಾಟದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಹಾಗೂ ಲೆಬನಾನ್ ಒಳಗೊಂಡ ಕದನ ವಿರಾಮವನ್ನು ಪಾಲಿಸಬೇಕು. ಆರಂಭಿಕ ಕ್ರಮಗಳಿಗೆ ನಾಲ್ಕರಿಂದ ಐದು ದಿನಗಳು ಬೇಕಾಗಲಿದ್ದು, ಆರನೇ ದಿನ ಹೋರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಾಗುವುದು ಎಂದು ಅರಾಘ್ಚಿ ಹೇಳಿದ್ದಾರೆ. ಏಳನೇ ದಿನ, ಅಂತಿಮ ಒಪ್ಪಂದಕ್ಕಾಗಿ ಪರಸ್ಪರ ಒಪ್ಪಿಗೆಯ ವಿಷಯಗಳ ಕುರಿತು ಅಮೆರಿಕದೊಂದಿಗೆ ಮಾತುಕತೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನೌಕಾ ನಿರ್ಬಂಧ ತೆರವುಗೊಳಿಸಲು ಅಮೆರಿಕ ನಿರಾಕರಣೆ
ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್‌ನ ಬಂದರುಗಳ ಮೇಲಿನ ನೌಕಾ ನಿರ್ಬಂಧವನ್ನು ತೆರವುಗೊಳಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಟ್ರಂಪ್ ಆಡಳಿತವು ಇರಾನ್ ಮತ್ತು ಪ್ರಾದೇಶಿಕ ಮಧ್ಯವರ್ತಿಗಳಿಗೆ ತಿಳಿಸಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಗಳು ಹೇಳಿರೋದಾಗಿ ವರದಿಯಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:24 am, Sat, 26 September 26




