ಇಂಡೋನೇಷ್ಯಾ ಸಂಸತ್​​ನಲ್ಲಿ ಭಾರತದ ಬಿಜು ಪಟ್ನಾಯಕ್ ಸಾಹಸಗಾಥೆ ಬಿಚ್ಚಿಟ್ಟ ಪ್ರಧಾನಿ ಮೋದಿ; ಏನಿದು ಕತೆ?

ಒಡಿಶಾದ ಮುಖ್ಯಮಂತ್ರಿಯಾಗುವ ಮುನ್ನ ಬಿಜು ಪಟ್ನಾಯಕ್ ಅವರು ಅತ್ಯಂತ ನುರಿತ ಪೈಲಟ್ ಆಗಿದ್ದರು. 1946 ರಲ್ಲಿ ಡಚ್ ಪಡೆಗಳು ಜಾವಾ ದ್ವೀಪದ ಮೇಲೆ ಆಕ್ರಮಣ ಮಾಡಿದಾಗ, ಇಂಡೋನೇಷ್ಯಾದ ನಾಯಕರನ್ನು ರಕ್ಷಿಸಲು ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರು ಪಟ್ನಾಯಕ್ ಅವರ ಸಹಾಯ ಕೋರಿದ್ದರು. ಆ ವೇಳೆ ಅಪ್ರತಿಮ ಧೈರ್ಯ ಪ್ರದರ್ಶಿಸಿದ ಪಟ್ನಾಯಕ್ ಮತ್ತು ಅವರ ಪತ್ನಿ ಇಬ್ಬರೂ ಯುದ್ಧ ಪೀಡಿತ ಪ್ರದೇಶಕ್ಕೆ ವಿಮಾನ ಹಾರಿಸಿ ಇಂಡೋನೇಷ್ಯಾದ ಆಗಿನ ಪ್ರಧಾನಿ ಸುತನ್ ಸಜಹ್ರೀರ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ಹಟ್ಟಾ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದರು. ಈ ಸಾಹಸಗಾಥೆಯನ್ನು ಜಕಾರ್ತಾದ ಸಂಸತ್ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಚ್ಚಿಟ್ಟಿದ್ದಾರೆ.  ಇಂಡೋನೇಷ್ಯಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜು ಪಟ್ನಾಯಕ್ ವಹಿಸಿದ ಅದ್ವಿತೀಯ ಪಾತ್ರವನ್ನು ಪ್ರಧಾನಿ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇಂಡೋನೇಷ್ಯಾ ಸಂಸತ್​​ನಲ್ಲಿ ಭಾರತದ ಬಿಜು ಪಟ್ನಾಯಕ್ ಸಾಹಸಗಾಥೆ ಬಿಚ್ಚಿಟ್ಟ ಪ್ರಧಾನಿ ಮೋದಿ; ಏನಿದು ಕತೆ?
Pm Modi In Jakarta Parliament

Updated on: Jul 07, 2026 | 7:34 PM

ಮುಖ್ಯಾಂಶಗಳು

  • ಇಂಡೋನೇಷ್ಯಾದ ಸ್ವಾತಂತ್ರ್ಯ ಸಂಗ್ರಾಮ ನೆನಪಿಸಿಕೊಂಡ ಮೋದಿ
  • ಇಂಡೋನೇಷ್ಯಾಗೆ ಭಾರತದ ಬಿಜು ಪಟ್ನಾಯಕ್ ಕೊಡುಗೆ ಬಗ್ಗೆ ಶ್ಲಾಘನೆ
  • ಬಿಜು ಪಟ್ನಾಯಕ್ ಯಾರು? ಏನಿವರ ಕತೆ?

ಜಕಾರ್ತ, ಜುಲೈ 7: ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi in Indonesia) ಇಂದು ಜಕಾರ್ತದ ಸಂಸತ್​​ನಲ್ಲಿ ಮಾತನಾಡುವಾಗ ಒಡಿಶಾದ ಮಾಜಿ ಮುಖ್ಯಮಂತ್ರಿ ಮತ್ತು ಖ್ಯಾತ ಪೈಲಟ್ ದಿವಂಗತ ಬಿಜು ಪಟ್ನಾಯಕ್ ಅವರ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂಡೋನೇಷ್ಯಾದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಡಚ್ ವಸಾಹತುಶಾಹಿ ಪಡೆಗಳ ಕಣ್ಣು ತಪ್ಪಿಸಿ, ಇಂಡೋನೇಷ್ಯಾದ ಪ್ರಮುಖ ನಾಯಕರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರುವಲ್ಲಿ ಬಿಜು ಪಟ್ನಾಯಕ್ ವಹಿಸಿದ್ದ ಸಾಹಸಮಯ ಪಾತ್ರವನ್ನು ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಜಕಾರ್ತಾದಲ್ಲಿ ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಬಿಜು ಪಟ್ನಾಯಕ್ ಅವರು ಅಂದು ತೋರಿದ ಧೈರ್ಯವೇ ಭಾರತ ಮತ್ತು ಇಂಡೋನೇಷ್ಯಾವನ್ನು ಭೌಗೋಳಿಕವಾಗಿ ಹಾಗೂ ರಾಜತಾಂತ್ರಿಕವಾಗಿ ಅತ್ಯಂತ ಹತ್ತಿರ ತಂದಿತು” ಎಂದು ನೆನಪಿಸಿಕೊಂಡಿದ್ದಾರೆ.

“ನಮ್ಮ ಎರಡೂ ರಾಷ್ಟ್ರಗಳು ಸರಿಸುಮಾರು ಒಂದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದವು. ಇಂಡೋನೇಷ್ಯಾ 1945ರಲ್ಲಿ ಮತ್ತು ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆಯಿತು. ಸ್ವತಂತ್ರ ರಾಷ್ಟ್ರಗಳ ಸಾರ್ವಭೌಮತ್ವದ ವಿಷಯ ಬಂದಾಗ ವಿಶ್ವಸಂಸ್ಥೆಯಲ್ಲಿ ಇಂಡೋನೇಷ್ಯಾದ ಸ್ವಾತಂತ್ರ್ಯ ಚಳುವಳಿಯ ಪರವಾಗಿ ಭಾರತ ಪ್ರಬಲ ಧ್ವನಿಯಾಗಿ ನಿಂತಿತು. ಆ ಅವಧಿಯಲ್ಲಿ ಬಿಜು ಪಟ್ನಾಯಕ್ ವಹಿಸಿದ ಪಾತ್ರ, ಅವರು ಇಂಡೋನೇಷ್ಯಾದ ಆಗಿನ ಪ್ರಧಾನಿ ಸುತನ್ ಸಜಹ್ರೀರ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ಹಟ್ಟಾ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ರೀತಿ ಎರಡೂ ದೇಶಗಳನ್ನು ಪರಸ್ಪರ ಹತ್ತಿರ ತಂದಿತು” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಬಿಂಟಾಂಗ್ ಆದಿಪೂರ್ಣ’ ಪ್ರದಾನ

ಉಭಯ ದೇಶಗಳ ನಡುವಿನ ಐತಿಹಾಸಿಕ ಸಮುದ್ರ ಸಂಪರ್ಕದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ಭಾರತ ಮತ್ತು ಇಂಡೋನೇಷ್ಯಾ ದೇಶಗಳ ಪಾಲಿಗೆ ಸಮುದ್ರ ಎಂದಿಗೂ ದೂರವನ್ನು ಪ್ರತಿನಿಧಿಸಿಲ್ಲ. ಅದು ಯಾವಾಗಲೂ ನಮ್ಮ ದೇಶಗಳ ನಡುವಿನ ಸೇತುವೆಯಾಗಿದೆ ಮತ್ತು ನಮ್ಮ ಹಂಚಿಕೆಯ ಭವಿಷ್ಯದ ಕೇಂದ್ರಬಿಂದುವಾಗಿ ಮುಂದುವರಿಯುತ್ತದೆ” ಎಂದು ಅಭಿಪ್ರಾಯಪಟ್ಟರು.

ಇಂಡೋನೇಷ್ಯಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜು ಪಟ್ನಾಯಕ್ ಪಾತ್ರವೇನು?:

1947ರಲ್ಲಿ ಡಚ್ ವಸಾಹತುಶಾಹಿ ಆಡಳಿತದ ವಿರುದ್ಧ ನಡೆದ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಾಂತಿಯಲ್ಲಿ ಬಿಜು ಪಟ್ನಾಯಕ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಎರಡನೇ ಮಹಾಯುದ್ಧದ ನಂತರ ಇಂಡೋನೇಷ್ಯಾವನ್ನು ಮರು ವಸಾಹತು ಮಾಡಿಕೊಳ್ಳಲು ಯತ್ನಿಸಿದ ಡಚ್ ಪಡೆಗಳು ಭಾರಿ ಮಿಲಿಟರಿ ದಾಳಿ ನಡೆಸಿ, ಅಲ್ಲಿನ ಪ್ರಧಾನಿ ಸುತನ್ ಸಜಹ್ರೀರ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ಹಟ್ಟಾ ಅವರನ್ನು ಜಕಾರ್ತಾದಲ್ಲಿ ಗೃಹಬಂಧನದಲ್ಲಿರಿಸಿದ್ದವು. ಜಗತ್ತಿಗೆ ಈ ವಿಷಯ ತಿಳಿಯದಂತೆ ಎಲ್ಲಾ ನಿರ್ಗಮನ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಆಗ ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಡಚ್ ಪಡೆಗಳ ವಿರುದ್ಧ ಅಂತಾರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಆ ನಾಯಕರನ್ನು ಅಲ್ಲಿಂದ ರಕ್ಷಿಸುವ ರಹಸ್ಯ ಕಾರ್ಯಾಚರಣೆಯ ಜವಾಬ್ದಾರಿಯನ್ನು 31 ವರ್ಷದ ಯುವ ಪೈಲಟ್ ಬಿಜು ಪಟ್ನಾಯಕ್ ಅವರಿಗೆ ವಹಿಸಿದ್ದರು.


ಪಟ್ನಾಯಕ್ ದಂಪತಿಯ ಸಾಹಸ ಅಂತಿಂಥದ್ದಲ್ಲ:

1947ರ ಜುಲೈನಲ್ಲಿ ಬಿಜು ಪಟ್ನಾಯಕ್ ಮತ್ತು ಅವರ ಸಹ-ಪೈಲಟ್ ಆಗಿದ್ದ ಪತ್ನಿ ಜ್ಞಾನವತಿ ಪಟ್ನಾಯಕ್ ಇಬ್ಬರೂ ‘ಡೌಗ್ಲಾಸ್ ಸಿ-47 ಡಕೋಟಾ’ (Douglas C-47 Dakota) ಮಿಲಿಟರಿ ಸಾರಿಗೆ ವಿಮಾನವನ್ನು ಭಾರತದಿಂದ ಇಂಡೋನೇಷ್ಯಾ ವೈಮಾನಿಕ ವಲಯಕ್ಕೆ ಹಾರಿಸಿದರು. ಮೂಲತಃ ಲಾಹೋರ್‌ನವರಾದ ಜ್ಞಾನವತಿ ಪಟ್ನಾಯಕ್ ಅವರು ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದ ಮೊದಲ ಭಾರತೀಯ ಮಹಿಳೆಯಾಗಿದ್ದರು. ವಿಶೇಷವೆಂದರೆ, ತಮ್ಮ ಮಗ ಹುಟ್ಟಿದ ಕೇವಲ 14 ದಿನಗಳಲ್ಲೇ ಈ ದಂಪತಿ ಈ ಅಪಾಯಕಾರಿ ಕಾರ್ಯಾಚರಣೆಗೆ ಹೊರಟಿದ್ದರು.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ರಾಮಾಯಣದ ತೊಗಲು ಬೊಂಬೆಯಾಟ ನೋಡಿ ಅಚ್ಚರಿಗೊಂಡ ಮೋದಿ

ಈ ವೇಳೆ ಡಚ್ ಪಡೆಗಳು “ನಿಮ್ಮ ವಿಮಾನವನ್ನು ಹೊಡೆದು ಉರುಳಿಸುತ್ತೇವೆ” ಎಂದು ನೇರ ಬೆದರಿಕೆ ಹಾಕಿದವು. ಆದರೆ ಅದಕ್ಕೆ ಕಿಂಚಿತ್ತೂ ಹೆದರದ ಬಿಜು ಪಟ್ನಾಯಕ್, “ನಮ್ಮ ವಿಮಾನದ ಮೇಲೆ ದಾಳಿ ನಡೆದರೆ ಅದಕ್ಕೆ ಪ್ರತಿಯಾಗಿ ಭಾರತದ ಆಕಾಶದಲ್ಲಿ ಹಾರಾಡುವ ಡಚ್ ವಿಮಾನಗಳನ್ನು ಹೊಡೆದು ಉರುಳಿಸಲಾಗುತ್ತದೆ” ಎಂದು ಕೌಂಟರ್ ವಾರ್ನಿಂಗ್ ನೀಡಿದರು.

ಜಗತ್ತಿನೆದುರು ಬಯಲಾಯ್ತು ಡಚ್ಚರ ಪಿತೂರಿ:

ಕೊನೆಗೂ ಡಚ್ ಪಡೆಗಳ ಕಣ್ತಪ್ಪಿಸಿ ಯಶಸ್ವಿಯಾಗಿ ಆ ಇಬ್ಬರೂ ಇಂಡೋನೇಷ್ಯನ್ ನಾಯಕರನ್ನು ವಿಮಾನದಲ್ಲಿ ಹತ್ತಿಸಿಕೊಂಡ ಪಟ್ನಾಯಕ್ ದಂಪತಿ, ಸಿಂಗಾಪುರ ಮಾರ್ಗವಾಗಿ 1947ರ ಜುಲೈ 24ರಂದು ನವದೆಹಲಿಗೆ ಬಂದು ತಲುಪಿದರು. ಈ ಯಶಸ್ವಿ ಕಾರ್ಯಾಚರಣೆಯು ಇಂಡೋನೇಷ್ಯಾದ ಸ್ವಾತಂತ್ರ್ಯದ ಹೋರಾಟದ ಕಥೆಯನ್ನು ಜಗತ್ತಿನ ವೇದಿಕೆಗೆ ತಲುಪಿಸಿತು. ಜುಲೈ 24, 1947ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಜಹ್ರೀರ್ ಮತ್ತು ಹಟ್ಟಾ, ಇಂಡೋನೇಷ್ಯಾದ ದುಸ್ಥಿತಿಯನ್ನು ಜಗತ್ತಿನ ಮುಂದೆ ತೆರೆದಿಟ್ಟರು. ಅದೇ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ವಿಶ್ವಸಂಸ್ಥೆಯಲ್ಲಿ ಡಚ್ ಆಕ್ರಮಣದ ವಿರುದ್ಧ ನಿರ್ಣಯವನ್ನು ತಂದವು. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಡಚ್ ಪಡೆಗಳು ಹಿಂದೆ ಸರಿಯಲಾರಂಭಿಸಿದವು.


ಅಂದಿನಿಂದ ಇಂಡೋನೇಷ್ಯಾ ಬಿಜು ಪಟ್ನಾಯಕ್ ಅವರ ಈ ಮಹತ್ತರ ಪಾತ್ರವನ್ನು ಮರೆತಿಲ್ಲ. ಇಂದು ಕೂಡ ದೆಹಲಿಯಲ್ಲಿರುವ ಇಂಡೋನೇಷ್ಯಾ ರಾಯಭಾರ ಕಚೇರಿಯಲ್ಲಿ ಬಿಜು ಪಟ್ನಾಯಕ್ ಅವರಿಗಾಗಿಯೇ ಒಂದು ವಿಶೇಷ ಕೊಠಡಿಯನ್ನು ಮೀಸಲಿಡಲಾಗಿದೆ. ಇದೇ ಕಾರಣಕ್ಕೆ ಇಂಡೋನೇಷ್ಯಾ ಸರ್ಕಾರವು ಬಿಜು ಪಟ್ನಾಯಕ್ ಅವರಿಗೆ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭೂಮಿ ಪುತ್ರ’ ಪ್ರಶಸ್ತಿ ನೀಡಿ ಗೌರವಿಸಿದೆ.


ಇಂಡೋನೇಷ್ಯಾ ಅಧ್ಯಕ್ಷರ ಮಗಳಿಗೆ ಹೆಸರಿಟ್ಟಿದ್ದರು ಪಟ್ನಾಯಕ್:

ಪಟ್ನಾಯಕ್ ಅವರ ಈ ಸಾಹಸದ ನಂತರ, ಆಗಿನ ಇಂಡೋನೇಷ್ಯಾ ಅಧ್ಯಕ್ಷ ಸುಕರ್ಣೋ ಅವರು ಪಟ್ನಾಯಕ್ ದಂಪತಿಯ ಬಳಿ ತಮ್ಮ ಹೆಣ್ಣು ಮಗಳಿಗೆ ನೀವೇ ಹೆಸರಿಡಬೇಕೆಂದು ಕೋರಿದರು. ಆಗ ಪಟ್ನಾಯಕ್ ದಂಪತಿ ಆ ಮಗುವಿಗೆ ‘ಮೇಘಾವತಿ’ ಎಂದು ಹೆಸರಿಟ್ಟರು. ಅದೇ ಮೇಘಾವತಿ ಸುಕರ್ಣೋಪುತ್ರಿ ಮುಂದೆ 2001ರಲ್ಲಿ ಇಂಡೋನೇಷ್ಯಾದ ಮೊದಲ ಮಹಿಳಾ ಅಧ್ಯಕ್ಷರಾದರು. 1997ರಲ್ಲಿ ಬಿಜು ಪಟ್ನಾಯಕ್ ನಿಧನರಾದಾಗ ಇಂಡೋನೇಷ್ಯಾ ಸರ್ಕಾರವು ಅವರ ಗೌರವಾರ್ಥವಾಗಿ ದೇಶಾದ್ಯಂತ 7 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಿ ತನ್ನ ಕೃತಜ್ಞತೆಯನ್ನು ಸಲ್ಲಿಸಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:17 pm, Tue, 7 July 26

Follow Us