AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Comparison Review: ಹೋಂಡಾ ಸಿಟಿ vs ಫೋಕ್ಸ್ ವ್ಯಾಗನ್ ವರ್ಟಸ್.. ಯಾವುದು ಬೆಸ್ಟ್?

ಸೆಡಾನ್ ಕಾರುಗಳ ವಿಭಾಗದಲ್ಲಿ ಪ್ರಮುಖ ಮಾದರಿಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದ್ದು, ಇತ್ತೀಚೆಗೆ ಹಲವು ಹೊಸ ಕಾರು ಮಾದರಿಗಳು ಈ ವಿಭಾಗಕ್ಕೆ ಲಗ್ಗೆಯಿಟ್ಟಿವೆ. ಹೋಂಡಾ ಸಿಟಿ ಸದ್ಯ ಮಧ್ಯಮ ಕ್ರಮಾಂಕದ ಸೆಡಾನ್ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದು, ಸಿಟಿ ಕಾರಿಗೆ ಪೈಪೋಟಿಯಾಗಿ ಫೋಕ್ಸ್ ವ್ಯಾಗನ್ ಹೊಸ ವರ್ಟಸ್ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

Praveen Sannamani
|

Updated on:Mar 13, 2023 | 9:24 PM

Share

ಸೆಡಾನ್ ಕಾರುಗಳ ವಿಭಾಗದಲ್ಲಿ ಈ ಹಿಂದೆ ಹಲವಾರು ಕಾರು ಮಾದರಿಗಳು ಭಾರೀ ಬೇಡಿಕೆ ಪಡೆದುಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದವು. ಸದ್ಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ(Honda City) ಆವೃತ್ತಿಯು ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಳಲ್ಲಿ ಮುಂಚೂಣಿಯಲ್ಲಿದ್ದು, ಇತ್ತೀಚೆಗೆ ಈ ಕಾರು ಮತ್ತಷ್ಟು ಬದಲಾವಣೆ ಪಡೆದುಕೊಂಡಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಹೊಸ ಸಿಟಿ ಕಾರಿಗೆ ಪೈಪೋಟಿಯಾಗಿ ಫೋಕ್ಸ್ ವ್ಯಾಗನ್ ವರ್ಟಸ್(Volkswagen Virtus) ಕಾರು ಕೂಡಾ ಗಮನಸೆಳೆಯುತ್ತಿದೆ. ಹೊಸ ವರ್ಟಸ್ ಕಾರು ಸಿಟಿ ಕಾರಿಗೆ ಸಮನಾದ ಹಲವಾರು ತಾಂತ್ರಿಕ ಸೌಲಭ್ಯಗಳನ್ನ ಹೊಂದಿದ್ದು, ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

2023ರ ಸಿಟಿ ಸೆಡಾನ್ ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ಎಸ್ ವಿ, ವಿ, ವಿಎಕ್ಸ್ ಮತ್ತು ಜೆಡ್ಎಕ್ಸ್ ಎನ್ನುವ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರೊಂದಿಗೆ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 11.49 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದರಲ್ಲಿ ಟಾಪ್ ಎಂಡ್ ಮಾದರಿಯು ರೂ. 20.39 ಲಕ್ಷ ಬೆಲೆ ಹೊಂದಿದೆ. ಹೊಸ ಸಿಟಿ ಕಾರಿನಲ್ಲಿ ಹೋಂಡಾ ಕಂಪನಿಯು ಸದ್ಯ 1.5 ಲೀಟರ್ ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಆವೃತ್ತಿಯನ್ನ ಮಾತ್ರ ಮಾರಾಟಮಾಡುತ್ತಿದ್ದು, ಹೊಸ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನ ಸ್ಥಗಿತಗೊಳಿಸಿದೆ.

ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ರಿಯಲ್ ಡ್ರೈವಿಂಗ್ ಎಮಿಷನ್ ಪರಿಣಾಮ ಪೆಟ್ರೋಲ್ ಕಾರುಗಳಿಂತಲೂ ಡೀಸೆಲ್ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಹೋಂಡಾ ಕಂಪನಿಯು ಹೊಸ ಸಿಟಿ ಕಾರಿನಲ್ಲಿದ್ದ ಡೀಸೆಲ್ ಮಾದರಿಯನ್ನ ಸ್ಥಗಿತಗೊಳಿಸಿದ್ದು, ಕೇವಲ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆ ಮಾತ್ರ ನೀಡಿದೆ. ಇದರಲ್ಲಿ ಪೆಟ್ರೋಲ್ ಮಾದರಿಯು 6 ಸ್ಪೀಡ್ ಮ್ಯಾನುವಲ್ ಮತ್ತು ಸಿಟಿವಿ ಗೇರ್ ಆಯ್ಕೆಯೊಂದಿಗೆ 121 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ ಹೊಸ ಸಿಟಿ ಕಾರಿನ ಹೈಬ್ರಿಡ್ ಮಾದರಿಯು ಆಟ್ಕಿನ್ಸನ್ ಹೈಬ್ರಿಡ್ ಎಂಜಿನ್ ನೊಂದಿಗೆ ಇಸಿವಿಟಿ ಗೇರ್ ಬಾಕ್ಸ್ ಹೊಂದಿದ್ದು, ಇದು 126 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 26.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇದರೊಂದಿಗೆ ಹೊಸ ಸಿಟಿ ಕಾರಿನಲ್ಲಿ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್ ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೈನ್ ಸೆನ್ಸಿಂಗ್ ವೈಪರ್, ಆಂಬಿಯೆಂಟ್ ಲೈಟಿಂಗ್, ವೈರ್ ಲೆಸ್ ಚಾರ್ಜರ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯಗಳಿವೆ. ಹಾಗೆಯೇ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ನೀಡಿದ್ದು, ಇದಕ್ಕೆ ಪೈಪೋಟಿಯಾಗಿ ಫೋಕ್ಸ್ ವ್ಯಾಗನ್ ವರ್ಟಸ್ ಕಾರು ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ವರ್ಟಸ್ ಕಾರು ಸದ್ಯ ಡೈನಾಮಿಕ್ ಲೈನ್ ಮತ್ತು ಪರ್ಫಾರ್ಮೆನ್ಸ್ ಲೈನ್ ಎಂಬ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಡೈನಾಮಿಕ್ ಲೈನ್‌ನಲ್ಲಿ ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್ ಎಂಬ ಮೂರು ರೂಪಾಂತರಗಳನ್ನು ಮತ್ತು ಪರ್ಫಾಮೆನ್ಸ್ ಲೈನ್‌ನಲ್ಲಿ ಜಿಟಿ ಪ್ಲಸ್ ವೆರಿಯೆಂಟ್ ಮಾಡಲಾಗುತ್ತಿದೆ.

ವರ್ಟಸ್ ಕಾರು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 11.32 ಲಕ್ಷದಿಂದ ರೂ. 18.42 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ ಕಂಪನಿಯು 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಪರ್ಫಾಮೆನ್ಸ್ ನಲ್ಲಿ ಗಮನಸೆಳೆಯುತ್ತದೆ. ಆದರೆ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಸಿಟಿ ಕಾರಿನಲ್ಲಿ ಹೆಚ್ಚಿನ ಮೈಲೇಜ್ ನೀಡುವ ಹೈಬ್ರಿಡ್ ಆವೃತ್ತಿಯಿದೆ. ಹೀಗಾಗಿ ಬೆಲೆಯಲ್ಲಿ ಮಾತ್ರ ಎಂಜಿನ್ ಆಯ್ಕೆಯಲ್ಲಿ ವರ್ಟಸ್ ಕಾರಿಗೆ ಪೈಪೋಟಿ ನೀಡುವ ಹಲವು ಅಂಶಗಳು ಹೋಂಡಾ ಸಿಟಿ ಕಾರಿನಲ್ಲಿವೆ. ಜೊತೆಗೆ ಫೀಚರ್ಸ್ ನಲ್ಲೂ ಗಮನಸೆಳೆಯುವ ಹೋಂಡಾ ಸಿಟಿ ಕಾರು ಎಡಿಎಎಸ್ ಸೌಲಭ್ಯದೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯುತ್ತಿದ್ದು, ಸಹಜವಾಗಿಯೇ ಸಿಟಿ ಕಾರಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದೆ.

Published On - 9:18 pm, Mon, 13 March 23