ಹೊಸ ಕೈಲಾಕ್ ಸಬ್ ಕಂಪ್ಯಾಕ್ಟ್ ಎಸ್ ಯುವಿ ಅನಾವರಣಕ್ಕೆ ಡೇಟ್ ಫಿಕ್ಸ್ ಮಾಡಿದ ಸ್ಕೋಡಾ

Skoda Kylaq: ಸ್ಕೋಡಾ ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ತನ್ನ ಹೊಸ ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಭಾರತದಲ್ಲೂ ಭರ್ಜರಿಯಾಗಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಕೈಲಾಕ್ ಸಬ್ ಕಂಪ್ಯಾಕ್ಟ್ ಎಸ್ ಯುವಿ ಅನಾವರಣಕ್ಕೆ ಡೇಟ್ ಫಿಕ್ಸ್ ಮಾಡಿದ ಸ್ಕೋಡಾ
ಸ್ಕೋಡಾ ಕೈಲಾಕ್
Follow us
|

Updated on: Sep 23, 2024 | 10:28 PM

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ ಇಂಡಿಯಾ (Skoda India) ಕಂಪನಿಯು ತನ್ನ ಹೊಸ ಯೋಜನೆ ಅಡಿಗಳಲ್ಲಿ ವಿವಿಧ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಸ್ಕೋಡಾ ಹೊಸ ಕಾರುಗಳಲ್ಲಿ ಸಬ್ ಕಂಪ್ಯಾಕ್ಟ್ ಎಸ್​ಯುವಿ ಮಾದರಿಯಾದ ಕೈಲಾಕ್ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಆಕರ್ಷಕ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ.

ಹೊಸ ಕಾರನ್ನು ಸ್ಕೋಡಾ ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ಪರಿಚಯಿಸುತ್ತಿದ್ದು, ಮುಂಬರುವ ನವೆಂಬರ್ 6ರಂದು ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸುತ್ತಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಹೊಸ ಕಾರನ್ನು ಸ್ಕೋಡಾ ಕಂಪನಿಯು ಭಾರತದಲ್ಲಿಯೇ ಉತ್ಪಾದಿಸಿ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ರಫ್ತು ಮಾಡುವ ಗುರಿಹೊಂದಿದೆ.

kylaq

ಕೈಲಾಕ್ ಕಂಪ್ಯಾಕ್ಟ್ ಎಸ್ ಯುವಿ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕುಶಾಕ್ ಮಾದರಿಗಿಂತಲೂ ಕೆಳಗಿನ ಸ್ಥಾನದಲ್ಲಿ ಮಾರಾಟಗೊಳ್ಳಲಿದ್ದು, ಇದು ಸ್ಪರ್ಧಾತ್ಮಕ ಬೆಲೆಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್ ಯುವಿ 3ಎಕ್ಸ್ಓ ಮತ್ತು ಕಿಯಾ ಸೊನೆಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಕಾರುಗಳನ್ನು ಬಜೆಟ್ ಬೆಲೆಯಲ್ಲಿ ಮಾರಾಟಕ್ಕಾಗಿ ಸ್ಕೋಡಾ ಕಂಪನಿಯು ಪೋಕ್ಸ್ ವ್ಯಾಗನ್ ಜೊತೆಗೂಡಿ ಇಂಡಿಯಾ 2.0 ಯೋಜನೆ ಆರಂಭಿಸಿದ್ದು, ಈ ಹೊಸ ಯೋಜನೆ ಅಡಿ ಗರಿಷ್ಠ ಪ್ರಮಾಣದ ಸ್ಥಳೀಯ ಬಿಡಿಭಾಗಗಳನ್ನು ಉಪಯೋಗಿಸುವ ಗುರಿಹೊಂದಿದೆ. ಹೀಗಾಗಿ ಹೊಸ ಸಬ್ ಕಂಪ್ಯಾಕ್ಟ್ ಎಸ್​ಯುವಿ ಬಿಡುಗಡೆಯ ವೇಳೆಗೆ ಸ್ಕೋಡಾ ಕಂಪನಿಯು ಈ ಬಾರಿ ಶೇ. 75ರಿಂದ ಶೇ.76 ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಕೆ ಮಾಡುವ ಗುರಿ ಹೊಂದಿದ್ದು, ಈ ಮೂಲಕ ಆಕರ್ಷಕ ಬೆಲೆಯಲ್ಲಿ ಹೊಸ ಕಾರನ್ನು ರಸ್ತೆಗಿಳಿಸುವ ಯೋಜನೆ ರೂಪಿಸಿದೆ.

Skoda Kylaq (2)

ಜೊತೆಗೆ ಹೊಸ ಕಾರು ಕುಶಾಕ್ ಕಾರಿನಲ್ಲಿರುವಂತಹ ಎಂಜಿನ್ ಆಯ್ಕೆ ಜೊತೆಗೆ ಹಲವಾರು ಫೀಚರ್ಸ್ ಹೊಂದಿರಲಿದ್ದು, ಇದು ಪ್ರೀಮಿಯಂ ಫೀಚರ್ಸ್ ಹೊಂದಿರುವ ಕಾರುಗಳನ್ನು ಬಜೆಟ್ ಬಜೆಟ್ ಬೆಲೆಯಲ್ಲಿ ಖರೀದಿಸುವ ಗ್ರಾಹಕರಿಗೆ ಸಹಕಾರಿಯಾಗಲಿದೆ. ಸ್ಕೋಡಾ ಕಂಪನಿಯು ಹೊಸ ಕಾರನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆಯೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಕುಶಾಕ್ ಕಾರಿನಂತೆಯೇ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಸುರಕ್ಷತೆಗೆ ಅನುಗುಣವಾಗಿ ಗುಣಮಟ್ಟ ಹೊಂದಿರಲಿದೆ.

ಮಾಹಿತಿಗಳ ಪ್ರಕಾರ, ಸ್ಕೋಡಾ ಹೊಸ ಕಾರು 115 ಹಾರ್ಸ್ ಪವರ್ ಉತ್ಪಾದಿತ 1.0 ಲೀಟರ್, 3-ಸಿಲಿಂಡರ್ ಪ್ರೇರಿತ ಟರ್ಬೊ ಪೆಟ್ರೋಲ್ ಎಂಜಿನ್‌ ನೀಡುವ ಸಾಧ್ಯತೆಗಳಿದ್ದು, ಇದು ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದೆ. ಈ ಮೂಲಕ ಇದು ಉತ್ತಮ ಇಂಧನ ದಕ್ಷತೆ ಮತ್ತು ಪರ್ಫಾಮೆನ್ಸ್ ನಲ್ಲಿ ಗಮನಸೆಳೆಯಲಿದ್ದು, ಇದು 2025ರ ಮೊದಲ ತ್ರೈಮಾಸಿಕ ವೇಳೆಗೆ ರೂ. 8 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.