AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯ್ಕರ ಬೆವರ ಶ್ರಮಕ್ಕೆ ಭಾಗೀರಥಿ ಒಲಿದಳು, ಇದೀಗ ಶ್ರಮದ ಬದುಕಿಗೆ ಪದ್ಮಶ್ರೀ ಗೌರವ!

‘ಬದುಕೇ ಛಲ’ವಾಗಿ, ಬೋಳು ಗುಡ್ಡದಲ್ಲಿ ಹಸಿರೆಬ್ಬಿಸಿದ, ನೀರುಕ್ಕಿಸಿದ, ಇದ್ದ ಉತ್ಪತ್ತಿಯಲ್ಲಿ ನಗುನಗುತ್ತಾ ಬದುಕುವ ನಾಯ್ಕರ ಕುಟುಂಬದ ‘ಸ್ವಾವಲಂಬಿ ಜೀವನ’ಕ್ಕೆ ಈಗ ಪದ್ಮಶ್ರೀ ಪ್ರಶಸ್ತಿಯ ಬಾಗಿನ.

ನಾಯ್ಕರ ಬೆವರ ಶ್ರಮಕ್ಕೆ ಭಾಗೀರಥಿ ಒಲಿದಳು, ಇದೀಗ ಶ್ರಮದ ಬದುಕಿಗೆ ಪದ್ಮಶ್ರೀ ಗೌರವ!
ಮಹಾಲಿಂಗ ನಾಯ್ಕರು
TV9 Web
| Edited By: |

Updated on: Feb 17, 2022 | 9:43 AM

Share

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುದ್ದುಪದವು ಸನಿಹದ ‘ಅಮೈ’ ಹಳ್ಳಿಯೀಗ ರಾಷ್ಟ್ರೀಯ  ಸುದ್ದಿ. ಕೃಷಿಕ ಮಹಾಲಿಂಗ ನಾಯ್ಕರಿಗೆ ದೇಶದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯ ಗೌರವ. ಇದು ಅವರ ಬೆವರಿನ ಶ್ರಮ ಮತ್ತು ಸ್ವಾವಲಂಬಿ ಬದುಕಿಗೆ ಸಂದ ಮಾನ, ಸಂಮಾನ. ನಾಯ್ಕರು ಚಿಕ್ಕವರಿದ್ದಾಗ ತಂದೆ ವಿಧಿವಶರಾಗಿದ್ದರು. ಕುಟುಂಬದ ಜವಾಬ್ದಾರಿ ಹೆಗಲೇರಿತು. ಅಮೈ ಮಹಾಬಲ ಭಟ್ಟರಲ್ಲಿ ಶ್ರಮದ ಕೆಲಸಗಳನ್ನು ಮಾಡುತ್ತಾ ಹೊಟ್ಟೆ ತಂಪು ಮಾಡಿಕೊಳ್ಳುತ್ತಿದ್ದರು. ಇವರ ಕಾಯಕಷ್ಟವನ್ನು ನೋಡಿದ ಭಟ್ಟರು ಎರಡೆಕ್ರೆ ಗುಡ್ಡವನ್ನು ದರ್ಖಾಸ್ತು ಮೂಲಕ ನೀಡಿದರು. ಮುಳಿಹುಲ್ಲು (ಕರಡ) ತುಂಬಿದ ಇಳಿಜಾರು ಭೂಮಿ. ಮೊದಲಿಗೆ ಗುಡ್ಡದ ತುದಿಯಲ್ಲಿ ಚಿಕ್ಕ ಸೂರು ಮಾಡಿದರು. ಅಡಿಕೆ, ತೆಂಗು ಸಸಿಗಳನ್ನು ನೆಟ್ಟರು. ಅರ್ಧ ಕಿಲೋಮೀಟರ್ ದೂರದಿಂದ ನೀರನ್ನು ಹೊತ್ತು ತಂದು ಗಿಡಗಳಿಗೆ ಉಣಿಸಿದರು. ಬದುಕಿಗಾಗಿ ಅರ್ಧ ದಿವಸ ಕೂಲಿ, ಉಳಿದರ್ಧ ದಿವಸ ಗುಡ್ಡವನ್ನು ಸಮತಟ್ಟು ಮಾಡುವ ಕೆಲಸ. ಅಗೆದ ಮಣ್ಣು ಮಳೆಗಾಲದಲ್ಲಿ ಕೊಚ್ಚಿ ಹೋಗದಂತೆ ಕಲ್ಲಿನ ‘ಕಟ್ಟಪುಣಿ’ಯ (ತಡೆಗಟ್ಟ) ರಚನೆ. ಕೂಲಿಗಾಗಿ ಕೆಳಭಾಗಕ್ಕೆ ದಿನಕ್ಕೊಮ್ಮೆ ಇಳಿಯಬೇಕಾಗಿತ್ತು. ಕೆಲಸ ಮುಗಿಸಿ ಮರಳುವಾಗ ತಪ್ಪಲಲ್ಲಿದ್ದ ಕಲ್ಲುಗಳನ್ನು ಹೊತ್ತು ಗುಡ್ಡವೇರುತ್ತಿದ್ದರು. ದಿನಕ್ಕೆರಡರಂತೆ ಕಲ್ಲುಗಳು ಮೇಲೇರುತ್ತಿದ್ದುವು. ಐವತ್ತೋ ಅರುವತ್ತೋ ಕಲ್ಲುಗಳಾದಾಗ ಕಟ್ಟಪುಣಿ ರಚನೆ ಮಾಡುತ್ತಾ ಬಂದರು. ಏಳು ತಟ್ಟುಗಳಲ್ಲಿ (ಟೆರೇಸ್) ಕಟ್ಟಿದ ಕಟ್ಟಪುಣಿಯ ಉದ್ದ ಸುಮಾರು ಇನ್ನೂರೈವತ್ತು ಮೀಟರ್! ಶ್ರಮ ನಗದಾದರೆ ಎರಡೂವರೆ ಲಕ್ಷ ರೂಪಾಯಿ! ಅಲ್ಲ, ಅದಕ್ಕೂ ಮಿಕ್ಕಿ. ನನ್ನ ಭೂಮಿಯಲ್ಲೇ ನೀರು ಪಡೆಯಬೇಕೆಂಬ ಛಲ. ಆಗ ಯೋಚನೆ ಬಂತು, ‘ಸುರಂಗದ’ ಕೊರೆತ’. ಇಲ್ಲೂ ಅರ್ಧ ದಿವಸ ಕೂಲಿ, ಉಳಿದರ್ಧ ಸುರಂಗದ ಕೆಲಸ. ಹಸಿವು ಲೆಕ್ಕಿಸದೆ ದಿನಕ್ಕೆ ಆರೇಳು ಗಂಟೆಗಳಿಗೂ ಮಿಕ್ಕಿದ ಶ್ರಮ. ಸುರಂಗವು ನಾಯ್ಕರ ಬದುಕಿನೊಂದಿಗೆ ಚೆಲ್ಲಾಟವಾಡಿತು! ಮೂರೂ ಕೈಕೊಟ್ಟುವು. ಯಾವ ಧೈರ್ಯವೋ ಏನೋ, ನಾಲ್ಕರದ್ದಕ್ಕೆ ಸಜ್ಜಾದರು.

ಐವತ್ತಡಿ ಕೊರೆತ ಸಾಗುತ್ತಿದ್ದಂತೆ ಬೆವರ ಶ್ರಮಕ್ಕೆ ಭಾಗೀರಥಿ ಒಲಿದಳು. ಸುರಂಗದ ಮೇಲ್ಬದಿಯಲ್ಲಿ ನೀರಿನ ಒರತೆ ಕಂಡಿತು. ಅಲ್ಲೂ ಸುರಂಗವನ್ನು ಕೊರೆದರು. ಯಥೇಷ್ಟ ನೀರು. ಸನಿಹವೇ ರಚಿಸಿದ ಮಣ್ಣಿನ ಟ್ಯಾಂಕಿಯಲ್ಲಿ ಸಂಗ್ರಹ. ಇಷ್ಟೆಲ್ಲಾ ರಚನೆಯಾಗುವಾಗ ಕೆಲವು ವರ್ಷಗಳು ಸಂದುಹೋದುವು.ಮನೆಯ ಹಿಂಬದಿಯಲ್ಲೂ ಸುರಂಗ ಕೊರೆದರು. ಆ ನೀರನ್ನು ಫೆರೋಸಿಮೆಂಟ್ ಟ್ಯಾಂಕಿಯಲ್ಲಿ ಸಂಗ್ರಹಿಸಿದರು. ಎರಡು ತಟ್ಟುಗಳಲ್ಲಿ ಎಬ್ಬಿಸಿದ ತೋಟಕ್ಕೆ ಗ್ರಾವಿಟಿಯಲ್ಲಿ ತುಂತುರು ನೀರಾವರಿ ವ್ಯವಸ್ಥೆ. ಐದು ತಟ್ಟುಗಳ ನಾಲ್ಕರಲ್ಲಿ ಅಡಿಕೆ, ಇನ್ನೊಂದರಲ್ಲಿ ತೆಂಗು ತೋಟ. ಸುಮಾರು ಮುನ್ನೂರು ಅಡಿಕೆ ಮರಗಳು. ಹಟ್ಟಿ ಗೊಬ್ಬರ, ಕಾಂಪೋಸ್ಟ್ ಹೊರತು ಮತ್ಯಾವ ಗೊಬ್ಬರವೂ ನಾಯ್ಕರಿಗೆ ಗೊತ್ತಿಲ್ಲ!  ಫಸಲು ನೀಡುವ ಅಡಿಕೆ ಮರಗಳು, ತೆಂಗಿನ ಮರಗಳ ಉತ್ಪತ್ತಿ, ಕಾಳುಮೆಣಸು, ಗೇರು.. ಹೀಗೆ ವೈವಿಧ್ಯ ಬೆಳೆಗಳು. ಮನೆ ಬಳಕೆಗೆ ತರಕಾರಿ ಬೆಳೆಯುತ್ತಾರೆ. “ನನ್ನ ಜೀವನಕ್ಕೆ ತೊಂದರೆಯಿಲ್ಲ. ಯಾರಿಂದಲೂ ಸಾಲ ಮಾಡಿಲ್ಲ. ನಾನು ಮತ್ತು ನನ್ನ ಹೆಂಡತಿ ಅವಿರತ ದುಡಿದಿದ್ದೇವೆ. ಅದರ ಪ್ರತಿಫಲ ಈಗ ಉಣ್ಣುತ್ತಿದ್ದೇವೆ.” ಎಂಬ ಸಂತೋಷ ನಾಯ್ಕರದು.

2001ರಲ್ಲಿ ಸ್ವಂತ ಮನೆ ಕಟ್ಟಿದರು. ಸನಿಹವೇ ಪಶು ಸಂಸಾರ. ಮನೆ ವರೆಗೆ ರಸ್ತೆ, ದೂರವಾಣಿ, ಟಿವಿ.. ಹೀಗೆ ಬದುಕಿಗೆ ಬೇಕಾದ ಎಲ್ಲವನ್ನೂ ನಾಯ್ಕರಿಗೆ ‘ದುಡಿಮೆ’ ಸಂಪಾದಿಸಿಕೊಟ್ಟಿದೆ. ಮಡದಿ ಲಲಿತಾ. ಗಂಡನ ಶ್ರಮಕ್ಕೆ ಗೌರವ ನೀಡಿದ ಗೃಹಿಣಿ. ಮೂವರು ಮಕ್ಕಳು. ಎಲ್ಲರೂ ವಿವಾಹಿತರು. ಬೋಳು ಗುಡ್ಡದ ಮೇಲೆ ನೀರಿನ ಸಂಪನ್ಮೂಲವನ್ನು ನೋಡಲು ಬರುವ ರೈತರಿಗೆ ನಾಯ್ಕರು ಹೇಳುವುದು ಒಂದೇ ಮಾತು – ‘ಮಳೆ ನೀರನ್ನು ಇಂಗಿಸಿ’. ಇದು ಅವರಿಗೆ ಅನುಭವ ಹೇಳಿ ಕೊಟ್ಟ ಮಾತು.

‘ಆದಾಯದಷ್ಟೇ ಖರ್ಚು’ ಇವರ ಶ್ರಮ ಬದುಕಿನ ಯಶಸ್ವೀ ಸೂತ್ರ. ‘ಕನಿಷ್ಠ ಐದು ರೂಪಾಯಿಯಾದರೂ ದಿನದ ಕೊನೆಗೆ ಉಳಿಯಬೇಕು. ಇದಕ್ಕೆ ತಕ್ಕಂತೆ ನಿತ್ಯದ ಆದಾಯ-ಖರ್ಚಿನ ಯೋಜನೆ ರೂಪಿಸುತ್ತಾರೆ’. ಪರರ ಹಂಗು ಬೇಡ. ತನ್ನ ಕಾಲ ಮೇಲೆ ನಿಲ್ಲ್ಲಬೇಕೆಂಬ ಪಾಲಿಸಿ. ಧಾರವಾಡದ ಕೃಷಿ ಮಾಧ್ಯಮ ಕೇಂದ್ರವು (ಲೇ. ಶ್ರೀ ಪಡ್ರೆ) ನಾಯ್ಕರ ಕೃಷಿ ಬದುಕಿನತ್ತ ಚಿಕ್ಕ ಪುಸ್ತಿಕೆಯನ್ನು ಪ್ರಕಟಿಸಿದೆ.

ಅಮೈ ಹಳ್ಳಿಗೆ ತಾಗಿಕೊಂಡಿರುವ ಅಡ್ಯನಡ್ಕದ ವಾರಣಾಸಿ ಸಂಶೋಧನಾ ಪ್ರತಿಷ್ಠಾನವು ೨೦೦೪ರಲ್ಲಿ ನಾಯ್ಕರನ್ನು ಮೊಟ್ಟ ಮೊದಲು ಗುರುತಿಸಿದ ಸಂಸ್ಥೆ. ಅವರಿಗೆ ‘ವಾರಣಾಸಿ ವಾರ್ಷಿಕ ಪ್ರಶಸ್ತಿ’ ನೀಡಿ ಗೌರವಿಸಿದ್ದರು. ನಂತರ ಕರ್ನಾಟಕ ಸರಕಾರದ ‘ಕೃಷಿ ಪಂಡಿತ’ ಪ್ರಶಸ್ತಿ, ಮಂಗಳೂರು ‘ಪ್ರೆಸ್‌ಕ್ಲಬ್’ ಪ್ರಶಸ್ತಿಗಳು ಪ್ರಾಪ್ತವಾಗಿತ್ತು. ‘ಬದುಕೇ ಛಲ’ವಾಗಿ, ಬೋಳು ಗುಡ್ಡದಲ್ಲಿ ಹಸಿರೆಬ್ಬಿಸಿದ, ನೀರುಕ್ಕಿಸಿದ, ಇದ್ದ ಉತ್ಪತ್ತಿಯಲ್ಲಿ ನಗುನಗುತ್ತಾ ಬದುಕುವ ನಾಯ್ಕರ ಕುಟುಂಬದ ‘ಸ್ವಾವಲಂಬಿ ಜೀವನ’ಕ್ಕೆ ಈಗ ಪದ್ಮಶ್ರೀ ಪ್ರಶಸ್ತಿಯ ಬಾಗಿನ.

ನಾ. ಕಾರಂತ ಪೆರಾಜೆ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ