ತುಳುನಾಡ ಸಿರಿ ಸೊಗಡಿನ ಸ್ವರಮಾಣಿಕ್ಯ ದಿನೇಶ್ ಸುವರ್ಣ ರಾಯಿ
ನಿರೂಪಣೆ ಎಂದರೆ ತಕ್ಷಣ ನೆನಪಿಗೆ ಬರುವುದು ದಕ್ಷಿಣ ಕನ್ನಡದ ಖ್ಯಾತ ನಿರೂಪಕರಲ್ಲಿ ಒಬ್ಬರು ದಿನೇಶ್ ಸುವರ್ಣ ರಾಯಿ. ತುಳುನಾಡಿನ ಸಿರಿ ಸೊಗಡ ಗರಿಮೆಯ ಸ್ವರಮಾಣಿಕ್ಯ, ಬಲು ಬೇಡಿಕೆಯ ಬಿಡುವಿಲ್ಲದ ಅಪ್ರತಿಮ ನಿರೂಪಕ ದಿನೇಶ್ ಸುವರ್ಣ.
“ಮಾತೇ ಮುತ್ತು- ಮಾತೇ ಮಾಣಿಕ್ಯ”ಎಂಬ ನೈತಿಕತೆಯ ಮೌಲ್ಯಭರಿತ ನಾಣ್ಣುಡಿ ಅಕ್ಷರಶಃ ಇವರ ಮೇರುವ್ಯಕ್ತಿತ್ವಕ್ಕೆ ಎತ್ತಿ ಹಿಡಿದ ಕೈಗನ್ನಡಿಗೆ ನಿದರ್ಶನ. ತುಳುನಾಡ ಇತಿಹಾಸದ ಮಾತೃ ಭಾಷೆಗೆ ನವಮುನ್ನುಡಿ ಬರೆದ, ಅದ್ಭುತ ಕಂಚಿನ ಕಂಠದೀ ಧ್ವನಿವರ್ಧಕದ ಪ್ರತಿಧ್ವನಿಯಿಂದ ಆಲಿಸುವವರ ಪ್ರೇಕ್ಷಕ ಕರ್ಣಧಾರೆಗೆ ನಿರೂಪಣೆ ಮುಖೇನ ತುಳುನಾಡಿನ ಸಂಸ್ಕೃತಿ,ಆಚಾರ ವಿಚಾರ ಸಂಪ್ರದಾಯ ,ಪರಂಪರೆ, ಪೌರಾಣಿಕ ,ಐತಿಹಾಸಿಕ, ಧಾರ್ಮಿಕ, ಸಾಮಾಜಿಕ ಚಿಂತನೆದೀ ನೆಚ್ಚಿನ ಕಲಾರಸಿಕರಿಗೆ ಸ್ಪಷ್ಟ ಉಚ್ಚಾರ_ಧ್ವನಿಗಳ ಏರಿಳಿತದೀ ಮೋಡಿ ಮಾಡಿದ ಮಾಂತ್ರಿಕ, ಮಾತಿನ ಮೋಡಿಗಾರ. ಅವಿಭಜಿತ ದಕ್ಷಿಣ ಕನ್ನಡದ ಕಲಾಭಿಮಾನಿಗಳ ಒಲವಿನ ಮಾತಿನ ಮಲ್ಲ, ರಾಜ್ಯದ ವಿವಿಧೆಡೆ ಯಶಸ್ವಿಯಾಗಿ ಕಾರ್ಯಕ್ರಮ ನಿರ್ವಹಿಸಿದ ಖ್ಯಾತ ನಿರೂಪಕ, ಅಂತಾರಾಷ್ಟ್ರೀಯ ನಿರೂಪಣಾ ನೆಲೆಯ ಸಾಧಕ, ನಾಟಕ ರಂಗಭೂಮಿಯ ಕಲಾವಿದ, ನಿರ್ದೇಶಕ, ಸಂಘ-ಸಂಸ್ಥೆಗಳ ಸಂಘಟಕ, ಧಾರ್ಮಿಕ- ಸಾಮಾಜಿಕ ಹಿತಚಿಂತಕ-ಯುವ ಪ್ರತಿಭೆಗಳ ಕಲಾ ಪ್ರೋತ್ಸಾಹಕ, ಮಾರ್ಗದರ್ಶಕ, ಸಮಾಜ ಸೇವಾಕರ್ತ, ಸ್ನೇಹ ಜೀವಿ, ಸರಳ ಸಜ್ಜನಿಕೆಯ ಆದರ್ಶವ್ಯಕ್ತಿ, ಸಾಹಿತಿ, ಕೊಲ್ತಿರಿ ಅಂಕಣ ಬರಹಗಾರ, ಭಜಕರು ಸಂಪನ್ಮೂಲ ವ್ಯಕ್ತಿ, ವಾಗ್ಮಿ, ತುಳು ಭಾಷಣಕಾರ, ವಿನೂತನ ಕಾರ್ಯಕ್ರಮದ ರೂವಾರಿ, ಧಾರ್ಮಿಕ ಉಪನ್ಯಾಸಕ, ಅಸಾಮಾನ್ಯ ಬಹುರಂಗ ಸಾಧಕ, ತುಳುನಾಡಿನ ನಿರೂಪಣೆ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಮೂಲ್ಯತಾರೆ ದಿನೇಶ್ ಸುವರ್ಣ ರಾಯಿ
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ಕುದ್ಕೋಳಿ ಸುವರ್ಣ ಕೇದಗೆಯಲ್ಲಿ ವಾಸ್ತವ್ಯ ಹೂಡಿರುವ ದಿ.ಮೋನಪ್ಪ ಪೂಜಾರಿ ಹಾಗೂ ಶ್ರೀಮತಿ ಕುಸುಮಾವತಿ ದಂಪತಿಗಳ ದ್ವಿತೀಯ ಸುಪುತ್ರ. ರಾಯಿ ಕೊಯಿಲದಲ್ಲಿ ಪ್ರಾಥಮಿಕ-ಫ್ರೌಢಶಿಕ್ಷಣವನ್ನು ವ್ಯಾಸಂಗ ಮಾಡಿದ್ದು ಮೂಡುಬಿದಿರೆ ಎಸ್.ಎನ್.ಎಮ್.ಪಿ ಕಾಲೇಜಿನ ಎಲೆಕ್ಟ್ರೀಕಲ್ಸ್ & ಎಲೆಕ್ಟ್ರಾನಿಕ್ಸ್ ಡಿಪ್ಲೋಮಾ ಪದವಿಧರರು. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್, ಗ್ರಾಫಿಕ್ ಡಿಸೈನರ್, ಸುವರ್ಣ ಇವೆಂಟ್ಸ್ ಮ್ಯಾನೆಜ್‌ಮೆಂಟ್ ಮೂಲಕ ಕಾರ್ಯಕ್ರಮಗಳಿಗೆ ಹೊಸ ಸ್ಪರ್ಶ ನೀಡುತ್ತಿರುವವರು, ಪ್ರವೃತ್ತಿಯಲ್ಲಿ ನಿರೂಪಕರು. ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ಮಿಂಚುವ ಕಲಾಚತುರ, ರಂಗಭೂಮಿ ಕಲಾವಿದ, ಷಣ್ಮುಖ ಕಲಾತಂಡ ಕೊಯಿಲದ ನಿರ್ದೇಶಕ, ಕಲಾಭಿಮಾನಿಗಳ ಹೃದಯ ಪಟ್ಟದೀ ಅಲಂಕರಿಸಿಕೊಂಡ ಅಪರೂಪದ ಕಲಾರತ್ನ ದಿನೇಶ್ ಸುವರ್ಣ ರಾಯಿ . ಇವರ ಸಹೋದರರಾದ ಸುರೇಶ್ ಸುವರ್ಣ ರಾಯಿಯವರು ಸಹ ಖ್ಯಾತ ನಾಟಕ ರಂಗಭೂಮಿ ಕಲಾವಿದ ಹಾಗೇ ವಿಭಿನ್ನ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಬಹುಮುಖ ಪ್ರತಿಭಾ ಕೂಡ ಹೌದು.
ತುಳುನಾಡ ಸಿರಿ ಸೊಗಡಿನ ಸ್ವರಮಾಣಿಕ್ಯ
ಬಲ್ಲವರು ಮಾತ್ರ ಬಲ್ಲರು ಬೆಲ್ಲದ ಸವಿಯ#ಎಂಬ ನುಡಿಗಟ್ಟಿನ ಊಹೆಗೆ ನಿಲುಕದ ಸ್ವರಕ್ಕೆ …ಸಾಕ್ಷಾತ್ ಸಾಕ್ಷಿ ಎಂಬಂತೆ ಅಪಾರವಾದ ಜ್ಞಾನ ಭಂಡಾರವಿದ್ದು ಅಷ್ಟೇ ಅಲ್ಲದೇ ದೇವರ ವರದಾನವಾದ ವಿಶೇಷ ಸ್ವರದಿಂದ ಕಾರ್ಯಕ್ರಮ ಸಂಯೋಜನೆಗೊಳಿಸಿ ಜನ ಮಾನಸದ ಹೃದಯದೀ ಶೋಭಿಸುತ್ತಿಹ ಅನರ್ಘ್ಯರತ್ನ ಸುವರ್ಣರ ಸ್ವರಕ್ಕೆ. ಸುವರ್ಣರೇ ..ಸರಿಸಾಟಿ. ದಿನೇಶ್ ರಾಯಿ ಸುವರ್ಣರವರ ವಾಕ್ಚಾತುರ್ಯಕ್ಕೆ ಬೆರಗಾಗಿ ಎದೆ ತುಂಬಿ ಗೌರವ ಅಭಿಮಾನದಿಂದ ಎದ್ದು ನಿಂತು ಕೈ ಮುಗಿದು ಚಪ್ಪಾಳೆ ತಟ್ಟಿದ ಅದೆಷ್ಟೋ ಅಭಿಮಾನಿಗಳಿರಬಹುದು! ಮಾತು ಒಬ್ಬ ವ್ಯಕ್ತಿಯ ಸಂಸ್ಕಾರವನ್ನು ತಿಳಿಸಿಕೊಡುತ್ತದೆ. ಮಾತು ಒಬ್ಬ ವ್ಯಕ್ತಿಯನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡು ಹೋದರೆ.. ಅದೇ ಮಾತು ಎಡವಿದರಂತೂ ಅಷ್ಟೇ ನಿತ್ಕೃಷ್ಟ ಮಟ್ಟಕ್ಕೂ ಇಳಿಸ ಬಹುದು ..ಅಂದರೆ ನಿರೂಪಕರಿಗೆ ಮಾತೇ ಪ್ರಧಾನ. ನಿರೂಪಕರ ಪ್ರತಿ ಮಾತಿನಲ್ಲೂ ಸ್ಪಷ್ಟತೆ, ನಿಖರತೆ, ನೈತಿಕ ಮೌಲ್ಯ , ಜಾಣ್ಮೆಯೊಂದಿಗೆ ಜಾಗೃತರಾದರೆ ಮಾತ್ರ ನಿರೂಪಣೆ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ.
ನಿರೂಪಣೆ ಎಂದರೆ ತಕ್ಷಣ ನೆನಪಿಗೆ ಬರುವುದು ದಕ್ಷಿಣ ಕನ್ನಡದ ಖ್ಯಾತ ನಿರೂಪಕರಲ್ಲಿ ಒಬ್ಬರು ದಿನೇಶ್ ಸುವರ್ಣ ರಾಯಿ. ತುಳುನಾಡಿನ ಸಿರಿ ಸೊಗಡ ಗರಿಮೆಯ ಸ್ವರಮಾಣಿಕ್ಯ, ಬಲು ಬೇಡಿಕೆಯ ಬಿಡುವಿಲ್ಲದ ಅಪ್ರತಿಮ ನಿರೂಪಕ ದಿನೇಶ್ ಸುವರ್ಣ. ಮುಗಿಲೆತ್ತರಕ್ಕೆ ಸ್ವರ ಸಿಂಚನವಾಗುತ್ತಿದ್ದು ಕ್ಷಣಕ್ಷಣಕ್ಕೂ ಆ ನಿರೂಪಕನ ಮುಖ ಚರ್ಯೆಯನ್ನೊಮ್ಮೆ ನೋಡಬೇಕೆಂಬ ತವಕ ಹೆಚ್ಚಾದಾಗ. ಅಂತೂ ಇಂತೂ. ಹೇಗಾದರೂ ಧಾರ್ಮಿಕ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ವಿಶಾಲ, ಮನೋಹರವಾದ ಸಭಾ ವೇದಿಕೆಯ ಕೆಳಗೆ ಎಡಬದಿ ಕಣ್ಣಾಡಿಸಿದಾಗ ಕಾರ್ಯಕ್ರಮ ನಿರ್ವಹಣಾ ನೆಲೆಯಲ್ಲಿ ನನ್ನ ತಂದೆ ಮತ್ತು ಪ್ರಧಾನ ನಿರೂಪಕರಾಗಿ ಮತ್ತೊರ್ವ ಇದ್ದಂಗೆ ಭಾಸವಾದರೂ ಮೊಗವಂತೂ ದರ್ಶನವಾಗಿರಲಿಲ್ಲ . ತುಂಬು ಸಭೆಯ ಬೃಹತ್ ಸಮಾರಂಭದ ವೇದಿಕೆಯಡಿ ಅತಿಥಿ-ಗಣ್ಯಾತಿ ಅಭಾಗ್ಯತರು ಆಸೀನರಾಗಿದ್ದು ಭಾಷಣದ ಸಂದರ್ಭದೀ ಅಂತಿಮವಾಗಿ… ಅತಿಥಿಯಾದ ಖ್ಯಾತ ಕನ್ನಡ ಚಲನಚಿತ್ರ ನಟ ವಿಜಯರಾಘವೇಂದ್ರ ಮತ್ತು ಅವರ ತಂದೆ ಬೆಂಗಳೂರಿನ ಚಿನ್ನಸ್ವಾಮಿ ಗೌಡರು ಭಾಷಣದ ಮಧ್ಯೆ ಕನ್ನಡದಲ್ಲಿ ಮಾತನಾಡುತ್ತಾ “ಯಾರಪ್ಪ ಅವರು, ಆ ನಿರೂಪಕನ ತುಳು ಮಾತುಗಳು ತನಗೆ ಅರ್ಥವಾಗುತ್ತಿಲ್ಲ ಆದರೂ ಮಾತಿನ ಧಾಟಿ ಒಳ್ಳೆ ಮಳೆ ಬಂದಂತೆ .
ಸಿಕ್ಕಾಪಟ್ಟೆ ಸರಾಗವಾಗಿ ಮಾತನಾಡುತ್ತಿದ್ದಾರೆ ಯಾವ ಹೀರೋಗು ಕಮ್ಮಿ ಇಲ್ಲ, ಅಂದರೆ ಮಾತಿನ ಧಾಟಿ, ಮಾತಿನ ಸೆಳೆತ, ಗುಣಮಟ್ಟ, ಅರ್ಥಗರ್ಭಿತವಾದ ನುಡಿಗಟ್ಟು ,ನಿರಗರ್ಳತೆ ಶ್ರೇಷ್ಠ ಮಟ್ಟದ್ದು ಅಂತ ಹೇಳಿ ಅವರನ್ನು ಸಭಾ ಚಾವಡಿಗೆ ಆಹ್ವಾನಿಸಿದ ಆಗಂತೂ ತನ್ನ ಸಂಭ್ರಮಕ್ಕೆ ಸಾಟಿಯಿಲ್ಲ.”ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ” ನುಡಿ ಎಂಬಂತೆ ಅವರ ಪೂರ್ಣ ಪರಿಚಯ, ಮುಖಪರಿಚಯ ತಿಳಿದು ಬಹು ಸಂತುಷ್ಟಳಾದರೂ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನುಡಿಗಟ್ಟಿಗೆ ಸಾರಿಸಾಟಿ ಅನ್ನುವಂತಹ ಮಾತಿನ ವೈಶಿಷ್ಟ್ಯತೆ , ಪರಿಪಕ್ವತೆ ಶೈಲಿಯ ಕಂಚಿನ ಗಡುಸಾದ ಸ್ವರವಿರಲು ಅದ್ಹೇಗೆ ಸಾಧ್ಯ?ಎಂಬ ಪರಮಾಶ್ಚರ್ಯದೊಂದಿಗೆ ಕೂತೂಹಲ ಭರಿತವಾದ ಪ್ರಶ್ನೆ ಬೇರೆ. ಪ್ರಾಯಶಃ ಪ್ರಬುದ್ಧ ಮಾತುಗಾರಿಕೆ, ವಿಭಿನ್ನ ಸ್ವರವನ್ನು ಕಲಾಮಾತೆಯು ವರಪ್ರಸಾದ ಎಂಬಂತೆ ಧಾರೆ ಎರೆದಿದ್ದಾರೆ. ಸಾಕ್ಷಾತ್. ಸುವರ್ಣರ ಮಾತನ್ನು ಕಿವಿಯಾಗಿಸಿದ ಪ್ರೇಕ್ಷಕರಂತೂ ತುಟಿಕ್ ಪಿಟಿಕ್ ಎನ್ನದೇ ಏಕಚಿತ್ತದೀ ಆಲಿಸಿ ಸಬ್ದರಾನ್ನಾಗಿಸುವುದಂತೂ ನಿಶ್ಚಿತ…ಅದು ಅವರ ಸಾಮರ್ಥ್ಯವೂ ಕೂಡ ಹೌದು. ಇಂತಹ ಸವಿರಸ ಸುವರ್ಣ ಘಳಿಗೆಯಿಂದ ದಿನೇಶ್ ಸುವರ್ಣ ರಾಯಿ ತನ್ನ ಜೀವನದ ನೆಚ್ಚಿನ ನಿರೂಪಕರಾಗಿ, ಅಷ್ಟೇ ಅಲ್ಲದೆ ಅಪ್ಪ ಅಭಿಮಾನಿಯಾನ್ನಾಗಿಸಿದೆ.
ಸುವರ್ಣರ ಗುರುಗಳಾದ ಪ್ರಪ್ರಥಮವಾಗಿ ತುಳು ಭಾಷೆಯಲ್ಲಿ ನಿರೂಪಣೆ ಪ್ರಾರಂಭಿಸಿದ ಹೆಗ್ಗಳಿಕೆಯ ತುಳುವ ಬೊಳ್ಳಿ ಎಚ್ಕೆ ನಯನಾಡು ಅವರ ಆಶೀರ್ವಾದ ಹಾಗೂ ಆದರ್ಶ ಮಾರ್ಗದರ್ಶನದ ಅಡಿಪಾಯದಲ್ಲಿ ಸುಂದರ ಮೂರ್ತಿಯಾಗಿ ಕಂಗೊಳಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಹಾಗೆಂದು ಸುವರ್ಣರು ನಿರೂಪಣೆಯ ಪಯಣ ಅನಿರೀಕ್ಷಿತವಾದುದು. ಸ್ಥಳೀಯ ಕೊಯಿಲ ಶಾರದೋತ್ಸವದಲ್ಲಿ ರಮಾನಾಥ ರಾಯಿಯವರು ಅನಿರೀಕ್ಷಿತವಾಗಿ ನಿರೂಪಣೆಗೆ ಅವಕಾಶವಿತ್ತು ವೇದಿಕೆ ಒದಗಿಸಿದಾಗ. ನಿರೂಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾದಾಗ ಸಭಾಸದರು ನೀಡಿದ ಹೊಗಳಿಕೆ, ಪ್ರೋತ್ಸಾಹದ ಮಾತು ಮುಂದಕ್ಕೆ ನಿರಂತರವಾಗಿ ಧ್ವನಿವರ್ಧಕವನ್ನು ಹಿಡಿಯುವಂತಾಯಿತು. ಸುವರ್ಣರವರ ನಿರೂಪಣೆ ಅನುಭವ ಪ್ರಕಾರ ತುಳುಭಾಷೆ ನಿರೂಪಣೆಗೆ ಪೂರ್ವಾವಧಿಯಲ್ಲಿ ಜನಬೆಂಬಲವಿಲ್ಲದೆ ವಿರೋಧವೂ ಎದುರಾಗಿತ್ತು. ಕಾಲಕ್ರಮೇಣ ತುಳು ನಿರೂಪಣೆಗೆ ಕಲಾಭಿಮಾನಿಗಳ ಪೂರ್ಣ ಪ್ರಮಾಣದ ಅಭಿಮಾನ, ಒಲವು, ಪ್ರೋತ್ಸಾಹ ದೊರಕಿತು. ಇವರ ನಿರೂಪಣೆ ಕ್ಷೇತ್ರದ ಆಳ ಸರಿ ಸುಮಾರು ಏಳು - ಎಂಟು ವರ್ಷ ಕಾಲ ಕಳೆಯಿತು.
ಸ್ವರ ಸುವರ್ಣ
ಅಪ್ಪಟ ಅಭಿಮಾನಿಯಾಗಿ ಸುವರ್ಣರ ನಿರೂಪಣೆ ಕೇಳಬೇಕೆಂದು ನಾವು ಬಯಸಿದರೆ ತನಗೆ ಸಿಕ್ಕಿದ ಅವಕಾಶವನ್ನು ಬೇರೆಯವರಿಗೆ ಬಿಟ್ಟುಕೊಡುವ ತ್ಯಾಗ ಮನೋಭಾವದವರು. ನವ ಪ್ರತಿಭಾನ್ವಿತರಿಗೆ ಸ್ಪೂರ್ತಿ ಸೆಲೆಯಾಗಿ ಸದಾ ಧೈರ್ಯ ತುಂಬುವ ಪ್ರೋತ್ಸಾಹದಾಯಕರು… ಹೊಸಬರಿಗೂ ಸಭಾವೇದಿಕೆ ಲಭಿಸಲಿ.. ಯುವ ಪ್ರತಿಭೆಗಳು ಅವಕಾಶವಂಚಿತರಾಗದೆ ಬೆಳೆಯಲಿ ಎಂಬ ಆದರ್ಶ ವ್ಯಕ್ತಿತ್ವದ ಆಶಾಕಿರಣರು. ಯಾವುದೇ ಒಂದು ಕಾರ್ಯಕ್ರಮ ಸರಾಗವಾಗಿ ವಿಘ್ನವಿಲ್ಲದೆ ಸುಸೂತ್ರವಾಗಿ ನಡೆಯಬೇಕಾದರೆ ನಿರೂಪಕನ ಪಾತ್ರ ಅತ್ಯಮೂಲ್ಯ. ಸಣ್ಣ ಕಾರ್ಯಕ್ರಮದಿಂದ ಹಿಡಿದು ಅದೆಷ್ಟೋ ಐದಾರು ಸಾವಿರಕ್ಕೂ… ಮಿಕ್ಕಿ ಪ್ರಬಲ ಮಟ್ಟದ ಕಾರ್ಯಕ್ರಮವನ್ನು ನಿರ್ವಹಿಸಿದ ಜಾಣ್ಮೆ, ಹೆಗ್ಗಳಿಕೆ ಇವರದ್ದು. ಇವರು ಕೇವಲ ದಕ್ಷಿಣ ಕನ್ನಡ, ಉಡುಪಿ ಅಲ್ಲದೆ, ಬೆಂಗಳೂರು, ಮುಂಬಯಿ ಹಾಗೇ ಸಪ್ತ ಸಾಗರದಾಚೆಗಿನ ವಿದೇಶದಲ್ಲೂ ತನ್ನ ನಿರೂಪಣೆಯ ಕಂಪನ್ನು ಸೂಸಿದವರು. ಮೊಗವೀರ್ ಬಹ್ರೈನ್ ದೇಶದಲ್ಲೂ ನಿರೂಪಣೆ ಹಾಗೂ ಇನಿ ಇತಿಲೆಕ್ಕ ಎಲ್ಲೆ ಉಪ್ಪಂದ್ ಎಂಬ ತುಳು ನಾಟಕದಲ್ಲಿ ಅಭಿನಯಿಸಿದ ಕಲಾವಿದ. ಮೊಗವೀರ್ಸ್ ಬಹ್ರೈನ್ ಯವರು ಸುವರ್ಣರ ನಿರೂಪಣೆಯ ಪ್ರಾವೀಣ್ಯತೆಯನ್ನು ಮೆಚ್ಚಿ ಸ್ವರ ಸುವರ್ಣ ಎಂಬ ಬಿರುದನ್ನು ನೀಡಿ ಅಭಿನಂದಿಸಿದ್ದಾರೆ.
ಪ್ರಸ್ತುತ ಸುವರ್ಣ ಕೇದಗೆ ಎಂಬ ಹೆಸರಿನಲ್ಲಿ ಇತ್ತೀಚೆಗೆಷ್ಟೇ ಗೃಹಪ್ರವೇಶ ಮಾಡಿದ್ದು ಅಲ್ಲಿ ತುಳುನಾಡ ಮಣ್ಣಿನ ಸಂಸ್ಕೃತಿ-ಕಲೆ ಎತ್ತಿ ತೋರುತ್ತಿತ್ತು. ಇವರಿಗೆ ಮಾತೃಭಾಷೆ ವ್ಯಾಮೋಹ ಎಷ್ಟಿತ್ತೆಂದರೆ ಅಲ್ಲಲ್ಲಿ ತುಳುವಿನ ಫಲಕಗಳು ಎತ್ತಿ ಕಾಣುತ್ತಿತ್ತು. ತುಳುನಾಡ ಆಚಾರ-ವಿಚಾರ ವೆಂಬಂತೆ ಅಂಗಳದಲ್ಲಿ ತುಳಸಿ ಕಟ್ಟೆ ಆಕೃತಿಯು ಭತ್ತ, ಅಕ್ಕಿ ಅಳೆಯುವ ಕಳಸೆ ಮತ್ತು ಸೇರು ರೂಪದಲ್ಲಿದ್ದು ಗೃಹಪ್ರವೇಶಕ್ಕೆ ಆಗಮಿಸಿದ ಅತಿಥಿಗಳ ಕಣ್ಮನ ಸೆಳೆದಿತ್ತು. ನೂತನ ಗೃಹದ ವಿಶಿಷ್ಟ ನಾಮಧೇಯವಾದ ಸುವರ್ಣ ಕೇದಗೆ ಎಂಬ ಸುಂದರ ನಾಮ ಫಲಕ ಅರ್ಥಾತ್ ಸುವರ್ಣ ಎಂಬ ಮನೆತನದ ಹುಟ್ಟು ಹಾಗೆ ತುಳುನಾಡಿನ ಅನರ್ಘ್ಯ ರತ್ನವಾದ ದೈವೀಶಕ್ತಿಯುಳ್ಳ ದೇಯಿ ಬೈದಿತಿಯ ಮೊದಲ ಹೆಸರಾದ ಸ್ವರ್ಣ ಕೇದಗೆ, ಸುವರ್ಣ ಕೇದಗೆ. ಮತ್ತೊಂದು ವಿಶೇಷವೇನೆಂದರೆ ಒಂದು ಕೋಣೆಯ ಗೋಡೆಯಲ್ಲಿ ಜೀವನಾಡಿಯಾಗಿರುವ ಧ್ವನಿವರ್ಧಕದ ಚಿತ್ರಣ ಶೋಭಿಸುತ್ತಿತ್ತು. ಲೆಕ್ಕವಿಲ್ಲದಷ್ಟು ಪ್ರಶಸ್ತಿ-ಪುರಸ್ಕಾರ, ಫಲಕಗಳ ಸಾಲುಗಳನ್ನೂ ಸುಂದರವಾಗಿ ಜೋಡಿಸಿದ್ದು ಇವರ ಜೀವನದ ಹಾದಿಯ. ಸಾಧನೆಯ ಮೆಟ್ಟಿಲುಗಳು.. ಎದ್ದು ಕಾಣುತ್ತಿತ್ತು.
ಕಂಬಳ ,ಕೋಲ, ದೈವ ನೇಮೋತ್ಸವ, ಬ್ರಹ್ಮಕಲಶೋತ್ಸವ ,ಭಜನೆ ಧಾರ್ಮಿಕ ಆಚಾರ ವಿಚಾರ, ಸಾಮಾಜಿಕ ಕಾರ್ಯಕ್ರಮಗಳ ನಿರೂಪಣೆ ಗೈದ ಚಾಕಚಕ್ಯತೆ ಇವರದ್ದು. ಅಷ್ಟೇ ಅಲ್ಲದೇ ಯುವವಾಹಿನಿ ಬಂಟ್ವಾಳ ಘಟಕದ(ರಿ.) ಸಕ್ರಿಯ ಸದಸ್ಯರಾಗಿದ್ದು ಪ್ರಸ್ತುತ ವಿದ್ಯಾನಿಧಿ ನಿರ್ದೇಶಕರಾಗಿರುವ ಸೇವೆ ಸಲ್ಲಿಸುತ್ತಿರುವ ಯುವವಾಹಿನಿ ಸಂಘಟನೆಯ ಒಡನಾಟ ನಿರಂತರ 13 ವರ್ಷದ್ದು. ಯುವವಾಹಿನಿಯ ಬೃಹತ್ ವೇದಿಕೆಯ ವಾರ್ಷಿಕ ಸಮಾವೇಶದ ನಿರೂಪಣೆ ಸುವರ್ಣರನ್ನೂ ಮತ್ತಷ್ಟು ಕೀರ್ತಿಗೊಳಿಸಿರುವುದು ಸುಳ್ಳಲ್ಲ. ಅದೆಷ್ಟೋ ಗಣ್ಯಾತಿಗಣ್ಯರು ಇರುವಂತಹ ಆರು ಸಾವಿರಕ್ಕೂ ಮಿಕ್ಕಿದ ಘನ ವೇದಿಕೆಯಲ್ಲಿ ನಿರೂಪಣ ಹಾದಿಯಲ್ಲಿ ಪ್ರದರ್ಶನಗೈದು ಸೈ ಎನಿಸಿಕೊಂಡ ಬಿಡುವಿಲ್ಲದ ಪ್ರಖ್ಯಾತ ಮಾತಿನ ಮಲ್ಲ ಅಪರೂಪದ ಯುವತಾರೆ.
ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತಿ ಪ್ರಶಸ್ತಿ
ಮಂಗಳೂರು ಪುರಭವನದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ಸಂಸ್ಥೆಯ ಉದಯೊನ್ಮುಖ ಯುವ ಸಾಹಿತಿಗಳಿಗಾಗಿ ಕೊಡ ಮಾಡುವ 2018 ನೇ ಸಾಲಿನ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತ್ಯ ಪ್ರಶಸ್ತಿ ತುಳುನಾಡ ಸ್ವರ ಮಾಣಿಕ್ಯನೆಂದು ಖ್ಯಾತರಾದ ತುಳುಭಾಷಾ ಪರಿಪಕ್ವ ಬರಹಗಾರ ಸುವರ್ಣರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬಂಟ್ವಾಳ ಕೊಯಿಲ ಬದನಡಿ ಷಣ್ಮುಖ ಕಲಾ ತಂಡದ ನಿರ್ದೇಶಕರಾಗಿರುವ ಇವರ ವಿನೂತನವಾದ ತಂಡವು ಪೌರಾಣಿಕ, ಐತಿಹಾಸಿಕ, ಸಾಮಾಜಿಕ , ಸಾಂಸ್ಕೃತಿಕ, ಧಾರ್ಮಿಕ ,ರಾಷ್ಟ್ರೀಯ ಚಿಂತನೆಗಳ ನಾದ-ನೃತ್ಯ ಗಾನ ಮಿಲನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇಶದ ಪ್ರಾದೇಶಿಕ ಕಲೆ ಸಂಸ್ಕೃತಿಯನ್ನು ಅನಾವರಣಗೊಳಿಸಿ ಹಲವಾರು ವರ್ಷಗಳಿಂದ ಪ್ರೇಕ್ಷಕರೆಲ್ಲರ ಗಮನಸೆಳೆದಿರುವುದು ಇವರ ಕಲಾತಂಡದ ವೈಶಿಷ್ಟತೆಗೆ ಸಾಕ್ಷಿ. ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳು ಸಾಮಾಜಿಕ, ನೈತಿಕ ಮೌಲ್ಯದ ಹಿತಚಿಂತನೆ, ಧನಾತ್ಮಕತೆಯಿಂದ ಕೂಡಿದ್ದು ಪರರಿಗೆ ಹಿತವನ್ನು ಬಯಸುತ್ತ ಆದರ್ಶಪ್ರಿಯರಾಗಿದ್ದಾಗ ಮಾತ್ರ ಯಾವುದೇ ಪ್ರತಿಭೆ ಸಹ ಸಾಧನೆಯ ಮೆಟ್ಟಲೇರಿ ಉತ್ತುಂಗದ ಕೀರ್ತಿ ಕಲಶವಾಗಿ ಮಾರ್ಪಡಿಸಬಹುದು ಎಂಬುವುದಕ್ಕೆ ಸಾಕ್ಷಿ ದಿನೇಶ್ ಸುವರ್ಣ ರಾಯಿ.
ಬಾಲ್ಯದಿಂದಲೂ ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಂಡು ರಂಗಭೂಮಿ ಕಲಾವಿದರಾಗಿ ಬೆಳಕಿಗೆ ಬಂದವರು. ಹಾಗೇ ಪ್ರಪ್ರಥಮವಾಗಿ ನಾಟಕರಂಗದಲ್ಲಿ ಗುರುತಿಸಿಗೊಂಡು ತದನಂತರ ರವೀಂದ್ರ ಪೂಜಾರಿ ಬದನಡಿಯವರ ಸಂಚಾಲಕತ್ವದಲ್ಲಿ ಷಣ್ಮುಖ ಕಲಾತಂಡಗಳ ನಿರ್ದೇಶಕರಾಗಿ, ರಚನೆಕಾರರಾಗಿ ಕಲಾವಿದರನ್ನು ಬೆಳೆಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿದ ಅಮೋಘ ಸಾಧನೆ ನಿಜಕ್ಕೂ ಶ್ಲಾಘನೀಯ. ಈ ಮುಖೇನ ತುಳುನಾಡಿನ ಸಂಸ್ಕೃತಿ ಸಂಪ್ರದಾಯ ಪರಂಪರೆ ಪೌರಾಣಿಕ- ಐತಿಹಾಸಿಕ ರಾಷ್ಟ್ರೀಯ ಚಿಂತನೆಗಳನ್ನು ಯುವಜನತೆಗೆ ಕಾರ್ಯಕ್ರಮದ ಮುಖೇನ ಪ್ರಸ್ತುತಿ ಪಡಿಸಿರುವುದು ಅನನ್ಯತೆಗೆ ಸಾಕ್ಷಿಯಾಗಿದೆ. ಇಷ್ಟೇ ಅಲ್ಲದೆ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ಅನುಭವದ ಸಾರ ಇವರದು. ಭಜನೆ ಅಂದರೆ ಸರಳವಾಗಿ ದೇವರನ್ನು ಸ್ತುತಿಸುತ್ತಾ ದೇವರೊಂದಿಗೆ ಸಂಪೂರ್ಣವಾಗಿ ಲೀನವಾಗುವ ಪರಿ. ಅಂದರೆ ಮೊದಲೇ ಧಾರ್ಮಿಕತೆಯಲ್ಲಿ ಅಪಾರ ಒಲವಿರುವ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಬದನಡಿ ಕೊಯಿಲ ಇದರ ಭಜಕರು, ಮಾಜಿ ಅಧ್ಯಕ್ಷರು, ಹನ್ನೆರಡು ವರ್ಷಗಳಿಂದ ಕುಣಿತ ಭಜನೆ ತಂಡದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡುವರು.
ಹಲವಾರು ಸಮಾಜಮುಖಿ ಕ್ಷೇತ್ರಗಳಲ್ಲಿ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತ ತಮ್ಮನ್ನು ತಾವು ತೊಡಗಿಸಿ ಕೊಂಡಿರುವಂತಹ ಸಂಪನ್ಮೂಲ ವ್ಯಕ್ತಿ. ಸೂರ್ಯೋದಯ ಪೆರಂಪಳ್ಳಿ ಅವರ ರಾಜ್ಯ ಪ್ರಶಸ್ತಿ ಪಡೆದ ದೇಯಿ ಬೈದಿತಿ ತುಳು ಚಿತ್ರದಲ್ಲಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಐನ್ನೂರು ವರ್ಷ ಇತಿಹಾಸವುಳ್ಳ ಹಿಂದಿನ ಸನ್ನಿವೇಶಗಳನ್ನು ಮನಸ್ಸಿಗೆ ಮುಟ್ಟುವಂತೆ ನಿರ್ದೇಶಿಸಿದ ಕಲೆಗಾರ. ತನ್ನ ದೈನಂದಿನ ಬದುಕಿನಲ್ಲಿ ಸಾಮಾಜಿಕ , ಶೈಕ್ಷಣಿಕ ,ಆರೋಗ್ಯ ಸೇವೆಗಳಿಗಾಗಿ# ಜವನೆರ್ ತುಡರ್# ಟ್ರಸ್ಟ್ ಹುಟ್ಟುಹಾಕಿದ ಸಂಸ್ಥಾಪಕರು. ಖತಾರ್ನಾಕ್ ಗ್ಯಾಂಗ್ ಕಿರು ಚಿತ್ರದ ಕಲಾವಿದರು ತುಳು ಭಾಷೆ ಸಾಹಿತ್ಯದ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಪೂರ್ವಜರ ಕಟ್ಟು ಪಾಡು, ಬದುಕುತ್ತಿದಂತಹ ರೀತಿ, ನೀತಿ ತುಳುನಾಡಿನ ನಂಬಿಕೆ ನಡಾವಳಿ, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರ, ಪರಿಮಳವನ್ನು ಕೊಲ್ತಿರಿ ಎಂಬ ಅಂಕಣ ಬರವಣಿಗೆಯನ್ನು ಬರೆದು ಯುವಜನತೆಗೆ ಜ್ಞಾಪಿಸುವಂತಹ ನೈತಿಕತೆಯ ಸಂದೇಶವನ್ನು ಬಲು ಆಕರ್ಷಣಿಯವಾಗಿ ಎಳೆ ಎಳೆಯಾಗಿ ಸಂಚಿಕೆಗಳ ಮುಖಾಂತರ ಬರೆದು ಯುವವಾಹಿನಿ ಮುಖವಾಣಿಯಾದ ಯುವ ಸಿಂಚನದಲ್ಲಿ ಪ್ರಕಟಿಸಿರುವ ವೈಖರಿ ಇವರದ್ದು ಹಾಗೇ ಕೆಲವೊಂದು ಕಾವ್ಯ ಸಂದೇಶವನ್ನು ರಾದಿಸು ಕಾವ್ಯ ನಾಮದೊಂದಿಗೆ ಪ್ರಕಟಿಸುತ್ತಾ ಇರುತ್ತಾರೆ. ಇಂದಿನ ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗ ಬಾರದೆಂಬ ದೃಷ್ಟಿಯಿಂದ ಸುದೃಢ ಸ್ವಸ್ಥ, ಸಮಾಜದ ಸಂಕಲ್ಪಕ್ಕೆ ಯುವವಾಹಿನಿ ಜೊತೆಗೂಡಿ ಮಧ್ಯಮುಕ್ತ ಮೆಹಂದಿ ಕಾರ್ಯಕ್ರಮ ಆಯೋಜಿಸಿ ಹಿಂದಿನ ಸಂಪ್ರದಾಯವನ್ನು ತಿಳಿ ಹೇಳಿ ಉಳಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುತ್ತಾರೆ.
ಆಪ್ತ ಸ್ನೇಹಿತ ಚೇತನ್ ಮುಂಡಾಜೆ ಜೊತೆಗೂಡಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅದೆಷ್ಟೋ ಪ್ರಭಾವಿ ಜನಪ್ರಿಯ ಕಾರ್ಯಕ್ರಮಗಳಾದ ವಿಚಾರ ಗೋಷ್ಠಿ, ಚಿಂತನೆ ಮಂಥನ, ಆಯೋಜಿಸದವರು , ಕಾಲುದಾರಿಯ ಕವಿತೆಗಳು ಇವರ ಸಂಪಾದಕತ್ವದಲ್ಲಿ ಪ್ರಕಟಿತವಾಗಿದೆ ಹಾಗೇ ಅನೇಕ ಸ್ಪರ್ಧೆಗಳಿಗೆ ಸಮರ್ಥ ತೀರ್ಪುಗಾರರಾಗಿ ಪಾಲು ಪಡೆದವರು. ಹಲವು ಸಂಘ ಸಂಸ್ಥೆಗಳಾದ ಜವನೆರ್ ತುಡರ್ ರೋಟರಿ ಕ್ಲಬ್, ಪುಣ್ಯ ಭೂಮಿ ತುಳುನಾಡ ಸೇವಾ ಫೌಂಡೇಶನ್, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ, ವಿಶ್ವ ಬಿಲ್ಲವರ ಸೇವಾ ಚಾವಡಿ, ಗುರುಬೆಳದಿಂಗಳು ಸಂಘಗಳೊಂದಿಗೆ ಸಕ್ರಿಯರಾಗಿದ್ದು ಸದಾ ತನ್ನನ್ನು ಸೇವಾ ಚಟುವಟಿಕೆಗಳಲ್ಲಿ ಮುಡಿಪಾಗಿಸಿ ಕೊಂಡಿರುತ್ತಾರೆ. ಎಳವೇಯ ಪ್ರಾಯದಲ್ಲೆ ಧಾರ್ಮಿಕ ರಂಗದಲ್ಲಿ ತೊಡಗಿಸಿಕೊಂಡು ಹಲವಾರು ಸಂಸ್ಥೆಯ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬದುಕೇ ಒಂದೇ ನಿರೂಪಣೆ ಎಂಬ ನಿತ್ಯ ಬದುಕಿನ ಸತ್ಯಾ ಸತ್ಯತೆಯ ಪರಿಶೋಧನೆಯಲ್ಲಿ ಮುನ್ನುಡಿಗೆ ಮಾದರಿ ಎನ್ನುವ ಜೀವದುಸಿರು ಸದಾ ನಿತ್ಯ ನಿರಂತರ ಹಸಿರಾಗಿರಲಿ. ತುಳುನಾಡಿನ ಸಿರಿ ಸೊಗಡ ಗರಿಮೆಯ ಸ್ವರಮಾಣಿಕ್ಯ ದಿನೇಶ್ ಸುವರ್ಣ ರಾಯಿಯವರ ಬಾಳ ಪಯಣದ ಹಾದಿ ಸುಗಂಧ ಪುಷ್ಪದ ರಾಜತೇರಿನಂತೆ ಸುಗಮವಾಗಿರಲಿ. ವಿಶ್ವಗುರು ಬ್ರಹ್ಮಶ್ರೀ ನಾರಾಯಣಗುರು ಮತ್ತು ಅವಳಿವೀರರಾದ ಕೋಟಿ ಚೆನ್ನಯರ ಆಶೀರ್ವಾದ ಸದಾ ಇರಲಿ ಶುಭಾಶಂಸನೆಗೈಯುತ್ತ ಸ್ವರಮಾಣಿಕ್ಯನಿಗಿದೋ ಪದಪುಂಜದ ಸ್ವರ್ಣಮಾಲೆ.
ಅರ್ಚನಾ.ಎಂ.ಬಂಗೇರ ಕುಂಪಲ