ಕ್ಯಾಪಿಟಲ್ ಗೇನ್ನಿಂದ ಟ್ಯಾಕ್ಸ್ ರಿಬೇಟ್ವರೆಗೆ…. ಹಿಂದಿನ ಬಜೆಟ್ಗಳಲ್ಲಿ ತಂದ ಪ್ರಮುಖ ಬದಲಾವಣೆಗಳು
Past budget reforms: ಇವತ್ತು ಮೋದಿ 3.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗುತ್ತಿದೆ. ಈ ಬಜೆಟ್ನಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಹಿಂದಿನ ಬಜೆಟ್ಗಳಲ್ಲಿ ಸರ್ಕಾರದಿಂದ ಒಂದಷ್ಟು ಸುಧಾರಣೆಗಳಿಗೆ ಪ್ರಯತ್ನ ಮಾಡಲಾಗಿತ್ತು. ಹೊಸ ಟ್ಯಾಕ್ಸ್ ರಿಜೈಮ್ ಮೂಲಕ ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಪ್ರಯತ್ನ ಮಾಡಲಾಯಿತು. ಕ್ಯಾಪಿಟಲ್ ಗೇನ್ ಟ್ಯಾಕ್ಸ್ ರಚನೆಯನ್ನು ಸರಳಗೊಳಿಸುವ ಪ್ರಯತ್ನವಾಗಿದೆ.

ನವದೆಹಲಿ, ಫೆಬ್ರುವರಿ 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ತಮ್ಮ ಎಂಟನೇ ಬಜೆಟ್ ಮಂಡಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮಂಡಿಸಲಾಗುತ್ತಿರುವ ಪ್ರತೀ ಬಜೆಟ್ನಲ್ಲೂ ಕೆಲ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ನಿರ್ಮಲಾ ಸೀತಾರಾಮನ್ ಅವರೂ ಕೂಡ ತಮ್ಮ ಹಿಂದಿನ ಬಜೆಟ್ಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ. ಹೊಸ ಟ್ಯಾಕ್ಸ್ ರಿಜೈಮ್ ಅನ್ನು ಜಾರಿಗೆ ತಂದಿದ್ದರಿಂದ ಹಿಡಿದು, ಕ್ಯಾಪಿಟಲ್ ಗೇನ್ ಟ್ಯಾಕ್ಸ್, ಸ್ಟಾಂಡರ್ಡ್ ಡಿಡಕ್ಷನ್ ಇತ್ಯಾದಿಯಲ್ಲಿ ಕೆಲ ಸುಧಾರಣೆಗಳು ಮತ್ತು ಬದಲಾವಣೆಗಳನ್ನು ತರಲಾಗಿದೆ. ಈ ಬಗ್ಗೆ ಒಂದು ಸಂಕ್ಷಿಪ್ತ ನೋಟ…
ಹೊಸ ಟ್ಯಾಕ್ಸ್ ರಿಜೈಮ್
2020ರ ಬಜೆಟ್ನಲ್ಲಿ ಹೊಸ ಆದಾಯ ತೆರಿಗೆ ಸಿಸ್ಟಂ ಅನ್ನು ಜಾರಿಗೆ ತರಲಾಯಿತು. ಹಿಂದೆ ಇದ್ದ ಹಳೆಯ ಟ್ಯಾಕ್ಸ್ ರಿಜೈಮ್ ಅನ್ನೂ ಉಳಿಸಿಕೊಂಡು ಹೊಸ ಟ್ಯಾಕ್ಸ್ ರಿಜೈಮ್ ಅನ್ನು ತರಲಾಯಿತು. ಇದರಲ್ಲಿ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ. ಓಲ್ಡ್ ಟ್ಯಾಕ್ಸ್ ರಿಜೈಮ್ನಲ್ಲಿದ್ದ ಕೆಲ ಡಿಡಕ್ಷನ್ ಇತ್ಯಾದಿ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ. ಐಟಿ ಪಾವತಿದಾರರು ಬೇಕಾದಲ್ಲಿ ಹಳೆಯ ಟ್ಯಾಕ್ಸ್ ರಿಜೈಮ್ನಲ್ಲೇ ಐಟಿ ರಿಟರ್ನ್ ಫೈಲ್ ಮಾಡಬಹುದು.
ಇದನ್ನೂ ಓದಿ: ಕೇಂದ್ರ ಬಜೆಟ್: ಕರ್ನಾಟಕಕ್ಕೆ ಬೆಟ್ಟದಷ್ಟು ನಿರೀಕ್ಷೆ, ಏನೇನು ಸಿಗಬಹುದು?
ಕ್ಯಾಪಿಟಲ್ ಗೇನ್ ಟ್ಯಾಕ್ಸ್
ಕಳೆದ ವರ್ಷದ ಬಜೆಟ್ನಲ್ಲಿ (2024ರದ್ದು) ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಸಿಸ್ಟಂನಲ್ಲಿ ಒಂದಷ್ಟು ಬದಲಾವಣೆ ತರಲಾಯಿತು. ಕಿರು ಅವಧಿ ಲಾಭ ಹೆಚ್ಚಳ ತೆರಿಗೆಯನ್ನು (ಎಸ್ಟಿಸಿಜಿ) ಶೇ. 15ರಿಂದ ಶೇ. 20ಕ್ಕೆ ಹೆಚ್ಚಿಸಲಾಯಿತು.
ದೀರ್ಘಾವಧಿ ಲಾಭ ಹೆಚ್ಚಳ ತೆರಿಗೆಯನ್ನು (ಎಲ್ಟಿಸಿಜಿ) ಶೇ. 20ರಿಂದ ಶೇ. 12.5ಕ್ಕೆ ಇಳಿಸಲಾಯಿತು. ಹಾಗೆಯೇ, ಕ್ಯಾಪಿಟಲ್ ಗೇನ್ನಿಂದ ಬಂದ ಲಾಭದಲ್ಲಿ ಒಂದು ಲಕ್ಷ ರೂವರೆಗಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ಇತ್ತು. ಅದನ್ನು 1.25 ಲಕ್ಷ ರೂಗೆ ಹೆಚ್ಚಿಸಲಾಯಿತು.
ಸ್ಟಾಂಡರ್ಡ್ ಡಿಡಕ್ಷನ್ ಹೆಚ್ಚಳ
ಕಳೆದ ಬಜೆಟ್ನಲ್ಲಿ ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಅನ್ನು 50,000 ರೂನಿಂದ 75,000 ರೂಗೆ ಏರಿಸಲಾಯಿತು. ಇದು ಸಂಬಳದ ಆದಾಯ ಪಡೆಯುವವರಿಗೆ. ಹಾಗೆಯೇ, ಕುಟುಂಬ ಪಿಂಚಣಿ ಪಡೆಯುವವರಿಗೆ ಸ್ಟಾಂಡರ್ಡ್ ಡಿಡಕ್ಷನ್ ಅನ್ನು 15,000 ರೂನಿಂದ 25,000 ರೂಗೆ ಏರಿಸಲಾಯಿತು. ಸಂಬಳದಾರರಿಗೆ ಸ್ಟಾಂಡರ್ಡ್ ಡಿಡಕ್ಷನ್ ಏರಿಕೆ ಮಾಡಿದ್ದರಿಂದ 7.75 ಲಕ್ಷ ರೂ ವಾರ್ಷಿಕ ಆದಾಯ ಪಡೆಯುತ್ತಿರುವ ಮಂದಿ ತೆರಿಗೆ ಕಟ್ಟುವ ಅವಶ್ಯಕತೆಯೇ ಇಲ್ಲದಂತಾಗುತ್ತದೆ.
ಇದನ್ನೂ ಓದಿ: ಕಂಪನಿಗಳಿಗೆ ಲಾಭ ಹೆಚ್ಚಿದರೂ ಉದ್ಯೋಗಸೃಷ್ಟಿ ಆಗಿಲ್ಲ, ವೇತನ ಹೆಚ್ಚಿಲ್ಲ: ಆರ್ಥಿಕ ಸಮೀಕ್ಷೆ ಆತಂಕ
ಆದಾಯ ತೆರಿಗೆ ಹೊಸ ಸ್ಲಾಬ್ ದರಗಳು
ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ಕಳೆದ ಬಜೆಟ್ನಲ್ಲಿ ಪುಟ್ಟ ಬದಲಾವಣೆ ಮಾಡಲಾಯಿತು. ವಾರ್ಷಿಕ ಮೂರು ಲಕ್ಷ ರೂವರೆಗಿನ ಆದಾಯಕ್ಕೆ ಯಾವ ತೆರಿಗೆಯೂ ಇರುವುದಿಲ್ಲ. 3ರಿಂದ 7 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5 ರಷ್ಟು ತೆರಿಗೆ; 7-10 ಲಕ್ಷ ರೂ ಆದಾಯಕ್ಕೆ ಶೇ. 10ರಷ್ಟು ತೆರಿಗೆ; 10-12 ಲಕ್ಷ ರೂ ಆದಾಯಕ್ಕೆ ಶೇ. 15 ತೆರಿಗೆ; 12-15 ಲಕ್ಷ ರೂ ಆದಾಯಕ್ಕೆ ಶೇ. 20ರಷ್ಟು ತೆರಿಗೆ; 15 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ನಿಗದಿ ಮಾಡಲಾಗಿದೆ.
ಟ್ಯಾಕ್ಸ್ ರಿಬೇಟ್….
2023ರ ಬಜೆಟ್ನಲ್ಲಿ ಟ್ಯಾಕ್ಸ್ ರಿಬೇಟ್ ಸೌಲಭ್ಯ ಕೊಡಲಾಯಿತು. ಇದು ಬಹಳಷ್ಟು ಮಂದಿಗೆ ದೊಡ್ಡ ರಿಲೀಫ್ ತಂದಿತು. ಟ್ಯಾಕ್ಸ್ ರಿಬೇಟ್ ಅಥವಾ ತೆರಿಗೆ ವಿನಾಯಿತಿ ಸೌಲಭ್ಯವನ್ನು 5 ಲಕ್ಷ ರೂ ಆದಾಯ ಗಳಿಸುತ್ತಿರುವವರಿಗೆ ನೀಡಲಾಗಿತ್ತು. ಇದನ್ನು 7 ಲಕ್ಷ ರೂಗೆ ಏರಿಸಲಾಯಿತು. ಅಂದರೆ, ಸ್ಟಾಂಡರ್ಡ್ ಡಿಡಕ್ಷನ್ ಹೊರತುಪಡಿಸಿ ಉಳಿದ 7 ಲಕ್ಷ ರೂವರೆಗಿನ ಆದಾಯಕ್ಕೆ ರಿಬೇಟ್ ನೀಡಲಾಗಿದೆ. ಏಳೂವರೆ ಲಕ್ಷ ರೂವರೆಗೆ ವಾರ್ಷಿಕ ಆದಾಯ ಇರುವವರಿಗೆ ಟ್ಯಾಕ್ಸ್ ಪಾವತಿಯಿಂದ ವಿನಾಯಿತಿ ಸಿಕ್ಕಂತಾಯಿತು.
ಬಜೆಟ್ ಲೈವ್ ಅಪ್ಡೇಟ್ಸ್ಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ