Agriculture, Horticulture Budget 2023: ಸಿದ್ಧರಾಮಯ್ಯ ಬಜೆಟ್ನಲ್ಲಿ ರೈತರ ಜೀವಾಳ ಕೃಷಿ ಮತ್ತು ತೋಟಗಾರಿಕೆಗೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ
ಕೃಷಿ ಮತ್ತು ತೋಟಗಾರಿಕೆ ಬಜೆಟ್: ಸಿಎಂ ಸಿದ್ಧರಾಮಯ್ಯ ಅವರು ವಿಧಾನಸಭೆಯಲ್ಲಿ ಇಂದು ದಾಖಲೆಯ 14ನೇ ಬಜೆಟ್ನ್ನು ಮಂಡಿಸಿದ್ದಾರೆ. ಹಾಗಾದರೆ ಈ ಬಜೆಟ್ನಲ್ಲಿ ಕೃಷಿ ಮತ್ತು ತೋಟಗಾರಿಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಕುರಿತಾದ ಪ್ರಮುಖ ಘೋಷಣೆಗಳು ಹೀಗಿವೆ.
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು ವಿಧಾನಸಭೆಯಲ್ಲಿ ಇಂದು ದಾಖಲೆಯ 14ನೇ ಬಜೆಟ್ (Karnataka Budget 2023) ನ್ನು ಮಂಡಿಸಿದ್ದಾರೆ. ಎತ್ತೆಮ್ಮೆ ಹೂಡುವುದು, ಉತ್ತೊಮ್ಮೆ ಹರಗುವುದು. ಬಿತ್ತೊಮ್ಮೆ ಹರಗಿ, ಕಳೆತೆಗೆದರಾ ಬೆಳೆಯು, ಎತ್ತುಗೈಯುದ್ದ ಸರ್ವಜ್ಞ ವಚನ ಹೇಳಿದ ಸಿಎಂ ಸಿದ್ಧರಾಮಯ್ಯ 2023-24ರ ಬಜೆಟ್ನಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಒಟ್ಟು 5,743.68 ಕೋಟಿ ರೂ. ಮೀಸಲಿಡುವ ಮೂಲಕ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಕುರಿತಾದ ಪ್ರಮುಖ ಘೋಷಣೆಗಳು ಹೀಗಿವೆ.
ನಮ್ಮ ಸರ್ಕಾರ ಹಿಂದೆ ಜಾರಿಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯು ಅತ್ಯಂತ ಜನಪ್ರಿಯ ಹಾಗೂ ಉಪಯುಕ್ತವಾಗಿತ್ತು. ಈ ಯೋಜನೆಯನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿಗೊಳಿಸುವುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಇದನ್ನೂ ಓದಿ: Karnataka Budget 2023: ಸಿದ್ದರಾಮಯ್ಯ ಬಜೆಟ್ನಲ್ಲಿ ಯಾವುದಕ್ಕೆಲ್ಲ ತೆರಿಗೆ ಹೆಚ್ಚಳ? ಇಲ್ಲಿದೆ ವಿವರ
- ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ʻನವೋದ್ಯಮʼ ಎಂಬ ಹೊಸ ಯೋಜನೆಯಡಿ 10 ಕೋಟಿ ರೂ. ಒದಗಿಸಲಾಗುವುದು.
- ರೈತರು ಬೆಳೆದ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ʻನಂದಿನಿʼ ಮಾದರಿಯಲ್ಲಿ ರೈತ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಲು 10 ಕೋಟಿ ರೂ. ಒದಗಿಸುವುದು.
- ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ತಲಾ 20 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.4 ರ ಬಡ್ಡಿ ಸಹಾಯಧನ ಸೌಲಭ್ಯ.
- ರೈತ ಉತ್ಪಾದಕ ಸಂಸ್ಥೆಗಳ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಗೋದಾಮು, ಶೀತಲಗೃಹ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಸೃಜನೆಗೆ ಯೋಜನಾ ವೆಚ್ಚದ ಗರಿಷ್ಠ ಶೇ. 20ರಷ್ಟು, ಒಂದು ಕೋಟಿ ರೂ. ಮೀರದಂತೆ ಬೀಜ ಬಂಡವಾಳ (Seed Capital) ಒದಗಿಸುವುದು.
- ರಾಜ್ಯದಲ್ಲಿ ಬೆಳೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಕೆಪೆಕ್ ಸಂಸ್ಥೆಯ ಮೂಲಕ ರೈತ ಉತ್ಪಾದಕ ಸಂಸ್ಥೆಗಳು, ನವೋದ್ಯಮಿಗಳು (Startups) ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಬೆಂಬಲ ನೀಡಲು ಐದು ಕೋಟಿ ರೂ. ನೆರವು ನೀಡುವುದು.
- ಕೃಷಿ ಯಾಂತ್ರೀಕರಣಕ್ಕೆ ಪ್ರೋತ್ಸಾಹ: ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು 100 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ 50 ಕೋಟಿ ರೂ. ಅನುದಾನ ನೀಡಲಾಗಿದೆ.
ತೋಟಗಾರಿಕಾ ವಲಯ
- ರೈತರ ಆದಾಯವನ್ನು ಹೆಚ್ಚಿಸುವುದರಲ್ಲಿ ತೋಟಗಾರಿಕಾ ಬೆಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ತೋಟಗಾರಿಕಾ ವಲಯದಲ್ಲಿನ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ, ಮಾವು ಮತ್ತಿತರ ಹಣ್ಣು, ತರಕಾರಿ, ಹೂವುಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು.
- 2023-24ನೇ ಸಾಲಿನಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು. ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆಗಾಗಿ ಎಂಟು ಶೀತಲ ಘಟಕಗಳ ನಿರ್ಮಾಣ.
- ಅನನ್ಯವಾದ ರುಚಿ ಮತ್ತು ಕಂಪನ್ನು ಹೊಂದಿರುವ ಚಿಕ್ಕಮಗಳೂರು, ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯಗಳು GI Tag ಹೊಂದಿವೆ. ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚುರಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೋ ಟೂರಿಸಂ ಅನ್ನು ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರಾಂಡಿಂಗ್ ಮಾಡಲು ಕ್ರಮ ವಹಿಸಲಾಗುವುದು.
- ವಿಶೇಷ ಕಂಪು, ರುಚಿ ಮತ್ತು ಸೊಗಡಿನಿಂದ ಜನಮನದಲ್ಲಿ ನೆಲೆಸಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಗಳು GI Tag ಗಳನ್ನು ಪಡೆದಿವೆ. ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮವನ್ನು ರೂಪಿಸಲಾಗುವುದು.
- ವಾಣಿಜ್ಯ ಹೂವಿನ ರಫ್ತಿನಲ್ಲಿ ಕರ್ನಾಟಕ ಅಗ್ರಸ್ಥಾನ ಹೊಂದುವ ಸಾಮರ್ಥ್ಯ ಹೊಂದಿದ್ದು, ಇವುಗಳ ತಳಿಗಳ ಕೊರತೆ ನಿವಾರಿಸಲು ಅಂತಹ ತಳಿಗಳನ್ನು ಆಮದು ಮಾಡಿಕೊಂಡು ರೈತರಿಗೆ ಕೈಗೆಟಕುವ ದರದಲ್ಲಿ ಒದಗಿಸಲು ಕ್ರಮವಹಿಸಲಾಗುವುದು.
- ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ʻವಿದ್ಯಾರ್ಥಿಗಳಿಗಾಗಿ ತೋಟಗಾರಿಕೆʼ ಯೋಜನೆಯನ್ನು ಜಾರಿಗೊಳಿಸಲಾಗುವುದು.
ಇನ್ನಷ್ಟು ಕರ್ನಾಟಕ ಬಜೆಟ್ 2023 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Fri, 7 July 23