ಮಕ್ಕಳ ಶಿಕ್ಷಣಕ್ಕಾಗಿ ಪಿಎಂ-ಇ ವಿದ್ಯಾ ಯೋಜನೆಯಡಿ 200 ಟಿವಿ ಚಾನಲ್ಗಳ ಪ್ರಾರಂಭ , ಡಿಜಿಟಲ್ ಯೂನಿವರ್ಸಿಟಿ ತೆರೆಯುವುದಾಗಿ ಘೋಷಣೆ
ವಿದ್ಯಾರ್ಥಿಗಳಿಗೆ ಹಬ್ ಆ್ಯಂಡ್ ಸ್ಪೋಕ್ ಮಾದರಿಯಲ್ಲಿ ಶಿಕ್ಷಣ ನೀಡುವ ಸಲುವಾಗಿ ಡಿಜಿಟಲ್ ಯೂನಿವರ್ಸಿಟಿಗಳನ್ನು ತೆರೆಯಲಾಗುತ್ತಿದೆ. ಈ ಯೂನಿವರ್ಸಿಟಿಗಳು ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕಾ ಅನುಭವ ನೀಡುವ ಜತೆಗೆ, ಸಾರ್ವತ್ರಿಕ ಶಿಕ್ಷಣವನ್ನು ನೀಡುತ್ತವೆ.
ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಅತ್ಯಂತ ಮುಖ್ಯವಾಗಿ ಪಿಎಂ ಇ-ವಿದ್ಯಾ ಯೋಜನೆಯ ವಿಸ್ತರಣೆ. ಡಿಜಿಟಲ್ ವಿಶ್ವವಿದ್ಯಾಲಯ ತೆರೆಯುವ ಮೂಲಕ ಪ್ರಧಾನಿ ಇ ವಿದ್ಯಾ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ, ಅದರಡಿಯಲ್ಲಿ 200 ಟಿವಿ ಚಾನಲ್ಗಳನ್ನು ಹೊರತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಕೊರೊನಾ ಕಾರಣಗಳಿಂದ ಶಾಲೆಗಳೆಲ್ಲ ಮುಚ್ಚುತ್ತಿವೆ. ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸ ಮಾಡಲು ತುಂಬ ಕಷ್ಟವಾಗಿದೆ. ಅದೂ ಕೂಡ ಸರ್ಕಾರಿ ಶಾಲೆ ಮಕ್ಕಳೇ ಪರದಾಡುತ್ತಿದ್ದಾರೆ. ಈ ತೊಡಕನ್ನು ಹೋಗಲಾಡಿಸಲು ಒಂದು ತರಗತಿ-ಒಂದು ಟಿವಿ ಚಾನೆಲ್ (One Class-One Tv Channel) ಎಂಬ ಕಾರ್ಯಕ್ರಮ ರೂಪಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಒಂದು ತರಗತಿ-ಒಂದು ಟಿವಿ ಚಾನಲ್ ಪರಿಕಲ್ಪನೆಯು ಎಲ್ಲ ರಾಜ್ಯಗಳ 1-12ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ, ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಶಿಕ್ಷಣ ಪಡೆಯಲು ಅನುಕೂಲ ಒದಗಿಸುತ್ತದೆ. ಆನ್ಲೈನ್ ಮೂಲಕ ಬೋಧನೆ ಮಾಡುವ ಶಿಕ್ಷಕರಿಗೆ, ಮೊಬೈಲ್ ಫೋನ್ಗಳಲ್ಲಿ, ಟಿವಿ, ರೇಡಿಯೋಗಳ ಮೂಲಕ ಶಿಕ್ಷಣ ನೀಡುವ ಬೋಧಕರಿಗೆ ತುಂಬ ಸುಲಲಿತವಾಗುವಂತೆ ಉತ್ತಮ ಗುಣಮಟ್ಟದ ಡಿಜಿಟಲ್ ಕಂಟೆಂಟ್ಗಳನ್ನು ಅಭಿವೃದ್ಧಿಪಡಿಸಲಗುವುದು. ಎಲ್ಲ ರೀತಿಯ ಆಡು ಭಾಷೆಗಳನ್ನೂ ಒಳಗೊಂಡು ಈ ಡಿಜಟಲೀಕರಣ ಮಾಡುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಡಿಜಿಟಲ್ ಯೂನಿವರ್ಸಿಟಿಗಳ ಪ್ರಸ್ತಾಪ ವಿಶ್ವ ದರ್ಜೆಯ ಡಿಜಿಟಲ್ ವಿಶ್ವವಿದ್ಯಾನಿಲಯಗಳ ಸ್ಥಾಪನೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಇಂದು ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಹಬ್ ಆ್ಯಂಡ್ ಸ್ಪೋಕ್ ಮಾದರಿಯಲ್ಲಿ ಶಿಕ್ಷಣ ನೀಡುವ ಸಲುವಾಗಿ ಡಿಜಿಟಲ್ ಯೂನಿವರ್ಸಿಟಿಗಳನ್ನು ತೆರೆಯಲಾಗುತ್ತಿದೆ. ಈ ಯೂನಿವರ್ಸಿಟಿಗಳು ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕಾ ಅನುಭವ ನೀಡುವ ಜತೆಗೆ, ಸಾರ್ವತ್ರಿಕ ಶಿಕ್ಷಣವನ್ನು ನೀಡುತ್ತವೆ. ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ (ICT) ಮಾದರಿಯಲ್ಲಿ ಇರಲಿವೆ. ಹಾಗೇ, ಡಿಜಿಟಲ್ ಯೂನಿವರ್ಸಿಟಿಗಳು, ತಮಗೆ ಅಗತ್ಯವಿರುವ ಮೂಲಸೌಕರ್ಯ ಮತ್ತು ತರಬೇತಿಗಾಗಿ ಇತರ ಕೇಂದ್ರೀಯ ವಿಶ್ವವಿದ್ಯಾಲಯಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದು ಸಚಿವರು ವಿವರಿಸಿದರು. (ಇಲ್ಲಿ ಹಬ್ ಆ್ಯಂಡ್ ಸ್ಪೋಕ್ ಮಾದರಿ ಎಂದರೆ, ಅಸ್ತಿತ್ವದಲ್ಲಿರುವ ಕೇಂದ್ರ (Hub) ಮೂಲಕ ಡಿಜಿಟಲ್ ರೂಪದಲ್ಲಿ ಶಿಕ್ಷಣವನ್ನು ವಿತರಿಸುವುದು. ಅದರ ಫಲಾನುಭವಿಗಳನ್ನು ಸ್ಪೋಕ್ಗಳೆಂದು ಉಲ್ಲೇಖಿಸಲಾಗುತ್ತದೆ).
Published On - 3:13 pm, Tue, 1 February 22