ನೂರು ಕೋಟಿ ರೂ ಸ್ಟಾಕಲ್ ಹಗರಣ; ಹೂಡಿಕೆದಾರರಿಗೆ ಗೊತ್ತಿಲ್ಲದೇ ಆಪಲ್, ಎನ್​ವಿಡಿಯೋ ಷೇರು ಮಾರಿ ನಷ್ಟ ತಂದಿತ್ತ ಆರೋಪ

ಬೆಂಗ್ಳೂರು ಮೂಲದ 'ಸ್ಟಾಕಲ್' ಎನ್ನುವ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ನಲ್ಲಿ ಸುಮಾರು 30 ಭಾರತೀಯ ಹೂಡಿಕೆದಾರರು ವಂಚನೆಗೆ ಒಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅವಕಾಶ ಇರುವ ಈ ಪ್ಲಾಟ್​ಫಾರ್ಮ್​ನಲ್ಲಿ ಹೂಡಿಕೆದಾರರಿಗೆ ನೂರಾರು ಕೋಟಿ ರೂ ನಷ್ಟವಾಗಿರುವ ಆರೋಪ ಇದೆ. ಹೂಡಿಕೆದಾರರಿಗೆ ಸೇರಿದ ನಿರ್ದಿಷ್ಟ ಕಂಪನಿಗಳ ಷೇರುಗಳನ್ನು ಅವರಿಗೆ ಅರಿವಿಲ್ಲದಂತೆ ಮಾರಿ ಬೇರೆ ಷೇರುಗಳನ್ನು ಖರೀದಿಸಲಾಗಿದೆ. ಆ ಷೇರು ಕುಸಿತ ಪರಿಣಾಮ ಹೂಡಿಕೆದಾರರಿಗೆ ನಷ್ಟ ಏರ್ಪಟ್ಟಿದೆ.

ನೂರು ಕೋಟಿ ರೂ ಸ್ಟಾಕಲ್ ಹಗರಣ; ಹೂಡಿಕೆದಾರರಿಗೆ ಗೊತ್ತಿಲ್ಲದೇ ಆಪಲ್, ಎನ್​ವಿಡಿಯೋ ಷೇರು ಮಾರಿ ನಷ್ಟ ತಂದಿತ್ತ ಆರೋಪ
ಷೇರು ಮಾರುಕಟ್ಟೆ
Image Credit source: Getty Images

Updated on: Nov 04, 2026 | 7:27 PM

ನವದೆಹಲಿ, ನವೆಂಬರ್ 4: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಭಾರತೀಯರಿಗೆ ಅವಕಾಶ ಕಲ್ಪಿಸುವ ಬೆಂಗಳೂರು ಮೂಲದ ‘ಸ್ಟಾಕಲ್’ (Stockal) ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಮಟ್ಟದ ಹಣಕಾಸು ವಂಚನೆ ನಡೆದಿರುವ ಆರೋಪ ಕೇಳಿಬಂದಿದೆ. ಹೂಡಿಕೆದಾರರ ಗಮನಕ್ಕೆ ಅಥವಾ ಅನುಮತಿಯಿಲ್ಲದೆ ಅವರ ಬ್ಲೂ-ಚಿಪ್ ಷೇರುಗಳನ್ನು ಮಾರಾಟ ಮಾಡಿ, ಆ ಹಣದಿಂದ ಚೀನಾದ ಕಂಪನಿಯೊಂದರ ಷೇರುಗಳನ್ನು ಖರೀದಿಸಲಾಗಿದೆ. ಇದರಿಂದ ಹೂಡಿಕೆದಾರರಿಗೆ ನೂರು ಕೋಟಿ ರೂಗೂ ಅಧಿಕ ಮೊತ್ತದಷ್ಟು ನಷ್ಟಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ.

ಆಪಲ್, ಎನ್‌ವಿಡಿಯಾ (Nvidia), ಅಮೆಜಾನ್, ಟೆಸ್ಲಾ ಮತ್ತು ಆಲ್ಫಾಬೆಟ್‌ನಂತಹ ಪ್ರಮುಖ ಅಮೆರಿಕನ್ ಟೆಕ್ನಾಲಜಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದ ಸುಮಾರು 30 ಭಾರತೀಯ ಹೂಡಿಕೆದಾರರ ಷೇರುಗಳನ್ನು ಅಕ್ಟೋಬರ್ 15 ರಂದು ಅವರ ಯಾವುದೇ ಒಪ್ಪಿಗೆಯಿಲ್ಲದೆ ಮಾರಾಟ ಮಾಡಲಾಗಿದೆ. ಅದರಿಂದ ಬಂದ ಹಣವನ್ನು ಬಳಸಿ ಅಮೆರಿಕದ ನಾಸ್ಡಾಕ್‌ನಲ್ಲಿ (Nasdaq) ಲಿಸ್ಟ್ ಆಗಿರುವ ಮತ್ತು ಹೆಚ್ಚು ಹೆಸರುವಾಸಿ ಇಲ್ಲದ ಅಲ್ಪಚಲಾವಣೆಯ ಚೀನಾದ ಕಂಪನಿಯಾದ ‘ಝಿಬಾವೊ ಟೆಕ್ನಾಲಜಿ’ (Zhibao Technology) ಷೇರುಗಳನ್ನು ಖರೀದಿಸಲಾಗಿದೆ.

Loading...

ಇದನ್ನೂ ಓದಿ: ಕ್ಯಾನ್ವಾ ಸಂಸ್ಥೆಯಿಂದ ಭಾರೀ ಉದ್ಯೋಗ ಕಡಿತ; ಶೇ. 22ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ

ಕುಸಿದುಬಿದ್ದ ಚೀನೀ ಕಂಪನಿ ಷೇರುಗಳು

ಹೂಡಿಕೆದಾರರ ಒಪ್ಪಿಗೆಯಿಲ್ಲದೆ ಖರೀದಿಸಲಾದ ಝಿಬಾವೊ ಕಂಪನಿಯ ಷೇರುಗಳ ಬೆಲೆ ಶೇಕಡ 60ಕ್ಕಿಂತ ಹೆಚ್ಚು ಕುಸಿದ ಕಾರಣ, ಹೂಡಿಕೆದಾರರಿಗೆ ಒಟ್ಟು 100 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿರುವ ಪ್ರಾಥಮಿಕ ಅಂದಾಜು ಮಾಡಲಾಗಿದೆ. ಒಬ್ಬೊಬ್ಬ ಹೂಡಿಕೆದಾರರು ಕೋಟ್ಯಂತರ ರೂ. ಮೌಲ್ಯದ ತಮ್ಮ ಪೋರ್ಟ್‌ಫೋಲಿಯೊವನ್ನು ನಷ್ಟ ಮಾಡಿಕೊಂಡಿದ್ದಾರೆ. ಮನಿಕಂಟ್ರೋಲ್ ವೆಬ್​ಸೈಟ್​ನಲ್ಲಿ ಪ್ರಕಟವಾಗಿರುವ ಈ ವರದಿಯಲ್ಲಿ ನೂರು ಕೋಟಿ ರೂ ನಷ್ಟ ಎಂದು ಹೇಳಿಕೊಂಡಿದ್ದು ಇಬ್ಬರು ಹೂಡಿಕೆದಾರರು. ಇತರರಿಗೆ ಎಷ್ಟು ನಷ್ಟವಾಗಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.

ಸ್ಟಾಕಲ್ ಮತ್ತು ಡ್ರೈವ್‌ವೆಲ್ತ್ ಸ್ಪಷ್ಟನೆ

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸ್ಟಾಕಲ್ ಸೆಕ್ಯೂರಿಟೀಸ್​ನ ಮಾತೃ ಸಂಸ್ಥೆಯಾದ ‘ಬಾರ್ಡರ್‌ಲೆಸ್’, ಯಾರೂ ಹಣವನ್ನು ಡ್ರಾ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಬೇರೆಡೆ ಸೋರಿಕೆಯಾದ ಲಾಗಿನ್ ವಿವರಗಳನ್ನು ಬಳಸಿ ಸೈಬರ್ ಕಳ್ಳರು ಈ ಕೃತ್ಯ ಎಸೆಗಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಯುಎಸ್ ಬ್ರೋಕರೇಜ್ ಮತ್ತು ಕಸ್ಟಡಿ ಪಾಲುದಾರರಾದ ‘ಡ್ರೈವ್‌ವೆಲ್ತ್’ (DriveWealth) ಹಾಗೂ ಸ್ಟಾಕಲ್ ಪರಸ್ಪರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ ಎನ್ನುವ ಆರೋಪ ಇದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಈ ವರ್ಷದ ವಿಶೇಷ ಮುಹೂರ್ತ ಟ್ರೇಡಿಂಗ್; ದಿನಾಂಕ, ಸಮಯ ಪ್ರಕಟಿಸಿದ ಎನ್​ಎಸ್​ಇ, ಬಿಎಸ್​ಇ

ಈ ಅಧೀಕೃತವಲ್ಲದ ವಹಿವಾಟುಗಳ ವಿರುದ್ಧ ಬಾಧಿತ ಹೂಡಿಕೆದಾರರು ಭಾರತದಲ್ಲಿ ಎಫ್‌ಐಆರ್ ದಾಖಲಿಸುವುದರ ಜೊತೆಗೆ, ಸೆಬಿ (SEBI) ಮತ್ತು ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್‌ಗೆ (SEC) ಅಧಿಕೃತ ದೂರುಗಳನ್ನು ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us