ಬ್ಯಾಂಕ್ ಆಫ್ ಬರೋಡಾ ವಿರುದ್ಧ ಕೋರ್ಟ್ ಕಟೆಕಟೆ ಹತ್ತಿದ ಬಿ.ಆರ್. ಶೆಟ್ಟಿ; ಕನ್ನಡಿಗ ಉದ್ಯಮಿಯಿಂದ 1.44 ಲಕ್ಷ ಕೋಟಿ ರೂ ಮೊಕದ್ದಮೆ

ಯುಎಇ ದೇಶದ ಎನ್‌ಎಂಸಿ ಹೆಲ್ತ್‌ಕೇರ್ ಕಂಪನಿಯ ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಬೃಹತ್ ಮೊತ್ತದ ಮೊಕದ್ದಮೆ ಹೂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾ ವಿರುದ್ಧ ಅವರು 15 ಬಿಲಿಯನ್ ಡಾಲರ್ (ಸುಮಾರು ₹1.44 ಲಕ್ಷ ಕೋಟಿ) ಮೊತ್ತದ ಪರಿಹಾರ ಕೋರಿದ್ದಾರೆ. ಇದರ ಬೆನ್ನಲ್ಲೇ ಈ ಸರ್ಕಾರಿ ಬ್ಯಾಂಕ್​ನ ಷೇರುಬೆಲೆ ಬುಧವಾರ ಶೇ. 3ರಷ್ಟು ಕುಸಿದಿದೆ.

ಬ್ಯಾಂಕ್ ಆಫ್ ಬರೋಡಾ ವಿರುದ್ಧ ಕೋರ್ಟ್ ಕಟೆಕಟೆ ಹತ್ತಿದ ಬಿ.ಆರ್. ಶೆಟ್ಟಿ; ಕನ್ನಡಿಗ ಉದ್ಯಮಿಯಿಂದ 1.44 ಲಕ್ಷ ಕೋಟಿ ರೂ ಮೊಕದ್ದಮೆ
ಬ್ಯಾಂಕ್ ಆಫ್ ಬರೋಡಾ
Image Credit source: Getty Images

Updated on: Oct 14, 2026 | 1:48 PM

ಮುಂಬೈ, ಅಕ್ಟೋಬರ್ 14: ಎನ್‌ಎಂಸಿ ಹೆಲ್ತ್‌ಕೇರ್ (NMC Healthcare) ಸಂಸ್ಥಾಪಕ ಬಿ.ಆರ್. ಶೆಟ್ಟಿ (BR Shetty) ಅವರು ಬಾಂಬೆ ಹೈಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಬರೋಡಾ ಮತ್ತಿತರರ ವಿರುದ್ಧ 15 ಬಿಲಿಯನ್ ಡಾಲರ್ (ಸುಮಾರು 1.44 ಲಕ್ಷ ಕೋಟಿ ರೂ) ಮೊಕದ್ದಮೆ ಹೂಡಿದ್ದಾರೆ. ಇದರ ಬೆನ್ನಲ್ಲೇ ಈ ಸರ್ಕಾರಿ ಬ್ಯಾಂಕ್​ನ (Bank of Baroda) ಷೇರು ಮೌಲ್ಯವು ಇವತ್ತಿನ ವಹಿವಾಟಿನಲ್ಲಿ ಶೇ. 3ರಷ್ಟು ಕುಸಿದಿದೆ. ನಿನ್ನೆ 238 ರೂ ಬೆಲೆಯಲ್ಲಿ ಅಂತ್ಯಗೊಂಡಿದ್ದ ಬ್ಯಾಂಕ್ ಆಫ್ ಬರೋಡಾದ ಶೇರುಬೆಲೆ ಇವತ್ತು 229 ರೂ ಇದೆ.

ಕರ್ನಾಟಕ ಮೂಲದವರಾದ ಮತ್ತು ಯುಎಇಯಲ್ಲಿ ಅತಿದೊಡ್ಡ ಉದ್ಯಮಿಗಳಲ್ಲಿ ಒಬ್ಬರೆನಿಸುವ ಮಟ್ಟಕ್ಕೆ ಏರಿದ, ಹಾಗೂ ಎನ್​ಎಂಸಿ ಹೆಲ್ತ್​ಕೇರ್ ಮತ್ತು ಯುಎಇ ಎಕ್ಸ್​ಚೇಂಜ್​ನ ಸಂಸ್ಥಾಪಕರಾದ ಬಿ.ಆರ್. ಶೆಟ್ಟಿ ಅವರು ತಮಗಾದ ನಷ್ಟಗಳಿಗೆ ಪರಿಹಾರ ಕೋರಿ ಈ ಬೃಹತ್ ಮೊತ್ತದ ಮೊಕದ್ದಮೆ ದಾಖಲಿಸಿದ್ದಾರೆ.

ಬ್ಯಾಂಕ್ ಆಫ್ ಬರೋಡಾ ಹಾಗೂ ಅದರ ಕೆಲವು ಅಧಿಕಾರಿಗಳು ತಮ್ಮ ಗ್ರೂಪ್ ಕಂಪನಿಗಳಿಗೆ ಸಂಬಂಧಿಸಿದ ವಂಚನೆಯ ವಹಿವಾಟುಗಳಿಗೆ ಸಹಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಪ್ಲೈಯರ್​ಗಳೆನ್ನಲಾದವರಿಗೆ ಸಂಬಂಧಿಸಿದ ಅಕೌಂಟ್​ಗಳ ಮೂಲಕ ಅಕ್ರಮವಾಗಿ ಫಂಡ್​ಗಳನ್ನು ವರ್ಗಾಯಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ ಎಂಬ ದೂರುಗಳನ್ನು ಸರಿಯಾಗಿ ವಿಚಾರಿಸಲು ಬ್ಯಾಂಕ್ ವಿಫಲವಾಯಿತು ಎಂಬುದು ಬಿಆರ್ ಶೆಟ್ಟಿ ಅವರ ಆರೋಪ.

ಇದನ್ನೂ ಓದಿ: ಶಾಲಾ ಟೀಚರ್ ಮಗ ಕಟ್ಟಿದ ರಿಲಯನ್ಸ್ ಸಾಮ್ರಾಜ್ಯ; ಭಾರತದ ಮೊದಲ ಐಪಿಒದಿಂದ ಅತಿದೊಡ್ಡ ಐಪಿಒವರೆಗೆ ರೋಚಕ ಪ್ರಯಾಣ

ಅಷ್ಟೇ ಅಲ್ಲ, ತಮ್ಮ ಸಹಿಯನ್ನು ನಕಲುಗೊಳಿಸಿ ನೀಡಲಾದ ಪರ್ಸನಲ್ ಗ್ಯಾರಂಟಿಗಳನ್ನು ಬಳಸಿ ಸಾಲಗಳನ್ನು ಪಡೆಯಲಾಗಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ. ಸಂಬಂಧಪಟ್ಟ ಬ್ಯಾಂಕ್ ದಾಖಲೆಗಳು ಹಾಗೂ ಆಂತರಿಕ ನಿಯಮಗಳ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ.

ಈ ಅಕ್ರಮ ವಹಿವಾಟುಗಳಿಂದ ತಮಗೆ ಹಾಗೂ ತಮ್ಮ ಸಂಸ್ಥೆಗಳಿಗೆ ಆಗಿರುವ ನೇರ ನಷ್ಟಕ್ಕೆ 5 ಬಿಲಿಯನ್ ಡಾಲರ್, ವ್ಯಾಪಾರ ಅವಕಾಶಗಳ ನಷ್ಟಕ್ಕೆ 5 ಬಿಲಿಯನ್ ಡಾಲರ್, ಹಾಗೂ ಮಾರುಕಟ್ಟೆಯಲ್ಲಿ ಉಂಟಾದ ಅಪಕೀರ್ತಿಗೆ ಪರಿಹಾರವಾಗಿ 5 ಬಿಲಿಯನ್ ಡಾಲರ್, ಹೀಗೆ ಒಟ್ಟು 15 ಬಿಲಿಯನ್ ಡಾಲರ್ ಮೊತ್ತದ ನಷ್ಟ ಪರಿಹಾರ ಕೊಡಿಸಬೇಕು, ಈ ಮೊತ್ತಕ್ಕೆ ವಾರ್ಷಿಕ ಶೇ. 18 ಬಡ್ಡಿಯನ್ನೂ ಒಳಗೊಳ್ಳಬೇಕು ಎಂದು ಕೋರಿ ಬಿಆರ್ ಶೆಟ್ಟಿ ಅವರು ಬಾಂಬೆ ಕೋರ್ಟ್​ನಲ್ಲಿ ಮೊಕದ್ದಮೆ ಹಾಕಿದ್ದಾರೆ.

ಬ್ಯಾಂಕ್ ಆಫ್ ಬರೋಡಾದ ಸ್ಪಷ್ಟನೆ ಮತ್ತು ಕಾನೂನು ಹೋರಾಟ

ಬಿಆರ್ ಶೆಟ್ಟಿ ಅವರ ಈ ಆರೋಪಗಳನ್ನು ಬ್ಯಾಂಕ್ ಆಫ್ ಬರೋಡಾ ಸಾರಾಸಗಟಾಗಿ ತಿರಸ್ಕರಿಸಿದೆ. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಬರೋಡಾ, ತಮಗೆ ಈವರೆಗೆ ಅಧಿಕೃತವಾಗಿ ಯಾವುದೇ ಮೊಕದ್ದಮೆಯ ಪ್ರತಿ ತಲುಪಿಲ್ಲ. ಅವರು ಮಾಡಿರುವ ಎಲ್ಲಾ ಆರೋಪಗಳಿಗೆ ಕೋರ್ಟ್​ನಲ್ಲಿ ಸಮರ್ಥವಾಗಿ ಉತ್ತರ ಕೊಡುವುದಾಗಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಎಲ್​ಟಿಸಿಜಿ, ಎಸ್​ಟಿಟಿ ತೆರಿಗೆ ಕುರಿತು ಸಾರ್ವಜನಿಕರ ಅಭಿಪ್ರಾಯ ಆಲಿಸಲು ಸರ್ಕಾರ ಸಿದ್ಧ: ನಿರ್ಮಲಾ ಸೀತಾರಾಮನ್

ಈ ಆರೋಪಗಳು ಯಾವುದೇ ಕೋರ್ಟ್​ನಲ್ಲಿ ಚರ್ಚಿತವಾಗಿಲ್ಲ. ಹೀಗಾಗಿ, ಅವುಗಳ ಬಗ್ಗೆ ಸದ್ಯ ಪ್ರತಿಕ್ರಿಯೆ ನೀಡುವುದಿಲ್ಲ. ತಮಗೆ ಮೊಕದ್ದಮೆಯ ದಾಖಲೆ ತಲುಪಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ತಿಳಿಸಿದೆ.

2024ರ ಜುಲೈನಲ್ಲಿ ನ್ಯೂಯಾರ್ಕ್​ನಲ್ಲಿ ಬಿ.ಆರ್. ಶೆಟ್ಟಿ ಅವರು ಸಲ್ಲಿಸಿದ ಮೊಕದ್ದಮೆ ವಜಾಗೊಂಡಿತ್ತು. ಆ ಮೊಕದ್ದಮೆಯಲ್ಲಿ ಇದೇ ರೀತಿಯ ಆರೋಪಗಳಿದ್ದವು. ಹೀಗಾಗಿ, ಬಾಂಬೆ ಹೈಕೋರ್ಟ್​ನಲ್ಲೂ ತಮಗೆ ಗೆಲುವು ಸಿಗುವ ವಿಶ್ವಾಸ ಇದೆ ಎಂದು ಬ್ಯಾಂಕ್ ಆಫ್ ಬರೋಡಾ ನಿರೀಕ್ಷೆ ಇಟ್ಟುಕೊಂಡಿದೆ.

ಬಿಆರ್ ಶೆಟ್ಟಿಯಿಂದ 2,800 ರೂ ಬಾಕಿ ವಸೂಲಿಯಲ್ಲಿರುವ ಬ್ಯಾಂಕ್

ಬಿ.ಆರ್. ಶೆಟ್ಟಿ ಅವರಿಂದ ಬ್ಯಾಂಕಿಗೆ ಬರಬೇಕಿರುವ ಸುಮಾರು ₹2,800 ಕೋಟಿಗಳಷ್ಟು ಬಾಕಿ ಹಣದ ವಸೂಲಾತಿಗಾಗಿ ಭಾರತ ಹಾಗೂ ಯುಎಇ (UAE) ದೇಶಗಳಲ್ಲಿ ಕಾನೂನು ಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us