Covid-19 Insurance: ಏಪ್ರಿಲ್ 1ರಿಂದ ಮೇ 14ರ ಮಧ್ಯೆ 44 ದಿನದಲ್ಲಿ 8,385 ಕೋಟಿ ರೂ. ಕೋವಿಡ್- 19 ಇನ್ಷೂರೆನ್ಸ್ ಕ್ಲೇಮ್
ಕೊರೊನಾ ಎರಡನೇ ಅಲೆಯ ಭೀಕರತೆಯನ್ನು ತೆರೆದಿಡುವ ಅಂಕಿ- ಅಂಶ ಇಲ್ಲಿದೆ. ಏಪ್ರಿಲ್ 1, 2021ರಿಂದ ಮೇ 14ನೇ ತಾರೀಕಿನ ಮಧ್ಯೆ 44 ದಿನದಲ್ಲಿ 8,385 ಕೋಟಿ ರೂಪಾಯಿ ಕೋವಿಡ್ಗೆ ಸಂಬಂಧಿಸಿದ ಕ್ಲೇಮ್ಗಳಾಗಿವೆ.
ಮುಂಬೈ: ಏಪ್ರಿಲ್ 1, 2021ರಿಂದ ಈಚೆಗೆ ಕೋವಿಡ್ ಕಾರಣಕ್ಕೆ ಆಗಿರುವ ಆರೋಗ್ಯ ವಿಮೆ ಕ್ಲೇಮ್ಗಳನ್ನು ಕಳೆದ ಒಂದು ವರ್ಷಕ್ಕೆ, ಅಂದರೆ ಏಪ್ರಿಲ್ 1, 2020ರಿಂದ ಮಾರ್ಚ್ 31, 2021ಕ್ಕೆ ಹೋಲಿಸಲಾಗಿದೆ. ಈ ಒಂದೂವರೆ ತಿಂಗಳಲ್ಲಿ ಇಡೀ ಒಂದು ವರ್ಷದ ಒಟ್ಟು ಮೊತ್ತದ ಶೇ 57ರಷ್ಟು ಕ್ಲೇಮ್ಗಳು ಬಂದಿದೆ. ನಾನ್ ಲೈಫ್ ಇನ್ಷೂರೆನ್ಸ್ ಕಂಪೆನಿಗಳ ಕ್ಲೇಮ್ಗಳಲ್ಲಿ ಭಾರೀ ಏರಿಕೆ ಆಗಿದೆ. ಒಂದು ವೇಳೆ ಇದೇ ಟ್ರೆಂಡ್ ಮುಂದುವರಿದಲ್ಲಿ ಬ್ಯಾಲೆನ್ಸ್ಶೀಟ್ ಮೇಲೆ ಪರಿಣಾಮ ಆಗುತ್ತದೆ. ಮಾರ್ಚ್ 31ಕ್ಕೆ ಆರೋಗ್ಯ ವಿಮೆ ಕಂಪೆನಿಗಳೂ ಸೇರಿದಂತೆ ನಾನ್ ಲೈಫ್ ಇನ್ಷೂರೆನ್ಸ್ ಕಂಪೆನಿಗಳಿಗೆ 9.8 ಲಕ್ಷ ಕ್ಲೇಮ್ಗಳು 14,560 ಕೋಟಿ ರೂಪಾಯಿಗೆ ಬಂದಿದೆ. ಇದು ಕೋವಿಡ್- 19 ಚಿಕಿತ್ಸೆಗಾಗಿ ಬಂದಿರುವ ಕ್ಲೇಮ್. ಇದೀಗ ಮೇ 14, 2021ರ ಹೊತ್ತಿಗೆ 14.8 ಲಕ್ಷ ಕ್ಲೇಮ್ಗಳಿಗೆ ಏರಿಕೆ ಆಗಿದ್ದು, ಒಟ್ಟು ಮೌಲ್ಯ 22,955 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.
ಇದರ ಲೆಕ್ಕಾಚಾರ ಏನೆಂದರೆ 2021- 22ರ ಹಣಕಾಸು ವರ್ಷದ ಮೊದಲ 44 ದಿನದಲ್ಲಿ 8,385 ಕೋಟಿ ರೂಪಾಯಿ ಕೋವಿಡ್ಗೆ ಸಂಬಂಧಿಸಿದ ಕ್ಲೇಮ್ಗಳಾಗಿವೆ. ಅಲ್ಲಿಗೆ 2020-21ರ ಹಣಕಾಸು ವರ್ಷದಲ್ಲಿ ಬಂದ ಒಟ್ಟಾರೆ ಕ್ಲೇಮ್ನ ಶೇ 57ರಷ್ಟು ಮೊತ್ತ ಕೇವಲ 44 ದಿನದಲ್ಲೇ ಬಂದಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಅಂಕಿ-ಅಂಶಗಳ ಸಮೇತ ವರದಿ ಮುಂದಿಟ್ಟಿದೆ. ನ್ಯೂ ಇಂಡಿಯಾ ಅಶ್ಯೂರೆನ್ಸ್ನ ಅಧ್ಯಕ್ಷರಾದ ಅತುಲ್ ಸಹೈ ಮಾತನಾಡಿ, ನಮ್ಮ ಕಂಪೆನಿಯಿಂದ 2,200 ಕೋಟಿ ರೂಪಾಯಿ ತನಕ ಕ್ಲೇಮ್ ಪಾವತಿಸಿದ್ದೇವೆ ಎಂದಿದ್ದಾರೆ. ಕಳೆದ ವರ್ಷ ಕೂಡ ಕ್ಲೇಮ್ಗಳು ಇದ್ದವು. ಆದರೆ ನಾವು ಬ್ಯಾಲೆನ್ಸ್ ಶೀಟ್ ಬಗ್ಗೆ ಯೋಚಿಸಿರಲಿಲ್ಲ. ಆದರೆ ಈ ವರ್ಷ ಆ ಹಂತವನ್ನು ತಲುಪಿದೆ ಎಂದಿದ್ದಾರೆ.
ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಕೊರೊನಾ ಕವಚ್ ಪಾಲಿಸಿಗಳಿಂದ ನಷ್ಟವಾಗಲಿದೆ. ಸಾರ್ವಜನಿಕ ವಲಯದ ಇನ್ಷೂರೆನ್ಸ್ ಕಂಪೆನಿಗಳು ದರ ಪರಿಷ್ಕರಣೆ ಕಡೆ ನೋಡುತ್ತಿಲ್ಲ ಎಂದು ಹೇಳಿದ್ದಾರೆ. ಹೋದ ವರ್ಷ ಇನ್ಷೂರೆನ್ಸ್ ಕಂಪೆನಿಗಳಿಗೆ ಪ್ರೀಮಿಯಂ ದರ ಪರಿಷ್ಕರಣೆ ಮಾಡುವ ಅನುಕೂಲ ಇತ್ತು. ಇನ್ನು ಲಾಕ್ಡೌನ್ ಇದ್ದುದರಿಂದ ಮೊದಲರ್ಧದಲ್ಲಿ ಹೆಲ್ತ್ ಕ್ಲೇಮ್ಗಳು ಕೂಡ ಕಡಿಮೆ ಇದ್ದವು ಮತ್ತು ಬಹುತೇಕ ಚಿಕಿತ್ಸೆ ಸರ್ಕಾರಿ ವ್ಯವಸ್ಥೆಯಲ್ಲಿ ನಡೆಯುತ್ತಿತ್ತು ಎಂದಿದ್ದರು.
ಆದರೆ, ಈ ಸಲ ಹಲವು ರೀತಿಯಲ್ಲಿ ವೆಚ್ಚ ಕಡಿಮೆ ಆಗಿದೆ. ಆದರೂ ಕ್ಲೇಮ್ಗಳು ಹೆಚ್ಚಾಗಿದೆ. ಕಳೆದ ವರ್ಷ 9 ದಿನ ಆಸ್ಪತ್ರೆಯಲ್ಲಿ ಇರುತ್ತಿದ್ದರೆ, ಈ ಸಲ ಅದು ಆರು ದಿನಕ್ಕೆ ಇಳಿದಿದೆ. ಏಕೆಂದರೆ, ಅದಕ್ಕಾಗಿ ಪ್ರೋಟೋಕಾಲ್ ತರಲಾಗಿದೆ. ಬೆಡ್ಗಳು ಕಡಿಮೆ ಇರುವುದರಿಂದ ಮನೆಯಲ್ಲಿ ಐಸೋಲೇಷನ್ಗೆ ಸಲಹೆ ಮಾಡುತ್ತಿದ್ದಾರೆ. ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಜಾಜ್ ಹೆಲ್ತ್ ಇನ್ಷೂರೆನ್ಸ್ ಹೆಲ್ತ್ ಕ್ಲೇಮ್ಸ್ನ ಮುಖ್ಯಸ್ಥ ಭಾಸ್ಕರ್ ನೆರುಕರ್ ಹೇಳಿದ್ದಾರೆ. ಹೆಚ್ಚಿನ ಕ್ಲೇಮ್ಗಳು ಟಯರ್ 2 ಹಾಗೂ 3 ನಗರಗಳಿಂದ ಬರುತ್ತಿವೆ. ಸೆಪ್ಟೆಂಬರ್ ತನಕ ಕೊರೊನಾ ಕವಚ್ ಪಾಲಿಸಿ ನೀಡುವಂತೆ ಐಆರ್ಡಿಎಐ ಸೂಚಿಸಿದೆ. ಆದರೆ ಕಂಪೆನಿ ವೆಬ್ಸೈಟ್ಗಳಲ್ಲಿ ಖರೀದಿಸಲು ಆಗುತ್ತಿಲ್ಲ ಎಂದು ಖರೀದಿಸಲು ಬಯಸುವವರು ದೂರುತ್ತಾರೆ.
ಇನ್ಷೂರೆನ್ಸ್ ಪಾಲಿಸಿ ಇದೆ ಎಂದಾಕ್ಷಣ ಎಲ್ಲ ಕವರ್ ಆಗಿಬಿಡುತ್ತದೆ ಎಂದೇನಲ್ಲ. ಇನ್ಷೂರೆನ್ಸ್ ಮಾಡಿಸಿದವರು ಮೊದಲಿಗೆ ಖರ್ಚನ್ನು ಭರಿಸಿ, ಆ ನಂತರ ರೀಎಂಬರ್ಸ್ಮೆಂಟ್ಗೆ ಹಾಕಿಕೊಳ್ಳಬೇಕು. ಜಿಐ ಕೌನ್ಸಿಲ್ ದತ್ತಾಂಶದ ಪ್ರಕಾರ, 9.8 ಲಕ್ಷ ಕ್ಲೇಮ್ಗಳು ಬಂದಿವೆ. ಅದರಲ್ಲಿ ಶೇ 86ರಷ್ಟು, ಅಂದರೆ 8.5 ಲಕ್ಷ ಪ್ರಕರಣಗಳು ವಿಲೇವಾರಿ ಆಗಿವೆ. ಬಾಕಿ 1.37 ಲಕ್ಷ ಪ್ರಕರಣಗಳು ಹಾಗೇ ಉಳಿದುಕೊಂಡಿವೆ.
ಇದನ್ನೂ ಓದಿ: ಕೊರೊನಾ ವಿರುದ್ಧ ಹೊಸ ಅಸ್ತ್ರ: ಡಿಆರ್ಡಿಓ ಅಭಿವೃದ್ಧಿಪಡಿಸಿದ 2ಡಿಜಿ ಔಷಧ ಬಿಡುಗಡೆ
(Covid 19 insurance claims between April 1 to May 14, 2021 amounted to Rs 8385 crore. Last year that is from April 1, 2020 to March 31, 2021 for 12 months amounted to Rs 14,560 crores)
Published On - 10:07 pm, Mon, 17 May 21