ಜುಲೈ 1ರಿಂದ ಫೋನ್ ಪೆ, ಕ್ರೆಡ್​ನಲ್ಲಿ ಕೆಲ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಆಗಲ್ಲ; ಕಾರಣ ಇದು…

|

Updated on: Jun 24, 2024 | 5:25 PM

Credit card bill payments in PhonePe, Cred: ಕ್ರೆಡ್, ಫೋನ್​ಪೆ, ಬಿಲ್​ಡೆಸ್ಕ್ ಇತ್ಯಾದಿ ಫಿನ್​ಟೆಕ್ ಕಂಪನಿಗಳ ಪೆಮೆಂಟ್ ಪ್ಲಾಟ್​ಫಾರ್ಮ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಜುಲೈ 1ರಿಂದ ಕಷ್ಟವಾಗಬಹುದು. ಜುಲೈ 1ರಿಂದ ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್​ಗಳು ಬಿಬಿಪಿಎಸ್ ಸಿಸ್ಟಂ ಮುಖಾಂತರ ಆಗಬೇಕು ಎಂದು ಆರ್​ಬಿಐ ನಿರ್ದೇಶನ ಹೊರಡಿಸಿದೆ. ಎಚ್​ಡಿಎಫ್​ಸಿ, ಎಕ್ಸಿಸ್ ಇತ್ಯಾದಿ ಪ್ರಮುಖ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಈ ಸಿಸ್ಟಂ ಅಳವಡಿಸಿಕೊಂಡಿಲ್ಲ. ಹೀಗಾಗಿ, ಫೋನ್ ಪೆ ಮೊದಲಾದವುಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಆಗುವುದಿಲ್ಲ.

ಜುಲೈ 1ರಿಂದ ಫೋನ್ ಪೆ, ಕ್ರೆಡ್​ನಲ್ಲಿ ಕೆಲ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಆಗಲ್ಲ; ಕಾರಣ ಇದು...
ಫೋನ್ ಪೆ
Follow us on

ನವದೆಹಲಿ, ಜೂನ್ 24: ಬಿಬಿಪಿಎಸ್ ಅಥವಾ ಭಾರತ್ ಬಿಲ್ ಪೇಮೆಂಟ್ ಸಿಸ್ಟಂ (Bharat bill payment system) ಮೂಲಕವೇ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಆಗಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮ ತಂದಿದೆ. ಜುಲೈ 1ಕ್ಕೆ ಇದು ಜಾರಿಗೆ ಬರಲಿದೆ. ಫೋನ್​ಪೆ, ಕ್ರೆಡ್ ಇತ್ಯಾದಿ ಫಿನ್​ಟೆಕ್ ಕಂಪನಿಗಳ ಬಿಸಿನೆಸ್​ಗೆ ತುಸು ಹೊಡೆತ ಬೀಳುವ ನಿರೀಕ್ಷೆ ಇದೆ. ಕೆಲ ಪ್ರಮುಖ ಕ್ರೆಡಿಟ್ ಕಾರ್ಡ್ ಕಂಪನಿಗಳು ಬಿಬಿಪಿಎಸ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲದಿರುವುದು ಇದಕ್ಕೆ ಕಾರಣ.

ಸದ್ಯ 34 ಕ್ರೆಡಿಟ್ ಕಾರ್ಡ್ ಸಂಸ್ಥೆಗಳ ಪೈಕಿ ಎಸ್​ಬಿಐ, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೀಂದ್ರ ಬ್ಯಾಂಕ್, ಇಂಡಸ್​ಇಂಡ್, ಫೆಡರಲ್ ಬ್ಯಾಂಕ್ ಸೇರಿದಂತೆ ಎಂಟು ಮಾತ್ರವೇ ಬಿಬಿಪಿಎಸ್ ಅನ್ನು ಸಕ್ರಿಯಗೊಳಿಸಿವೆ. ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ, ಎಕ್ಸಿಸ್ ಬ್ಯಾಂಕ್ ಮೊದಲಾದವು ಬಿಬಿಪಿಎಸ್ ಅನ್ನು ಅಳವಡಿಸಿಲ್ಲ. ಈ ಸಂಸ್ಥೆಗಳ 5 ಕೋಟಿಗೂ ಅಧಿಕ ಕ್ರೆಡಿಟ್ ಕಾರ್ಡ್​ಗಳು ಗ್ರಾಹಕರ ಬಳಿ ಇವೆ.

ಇದನ್ನೂ ಓದಿ: 15 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಕಡಿತಗೊಳಿಸಲಾಗುತ್ತಾ? ಇಲ್ಲಿದೆ ಡೀಟೇಲ್ಸ್

ಇಲ್ಲಿ ಸಮಸ್ಯೆ ಆಗಿರುವುದು ಫೋನ್ ಪೆ, ಕ್ರೆಡ್ ಮೊದಲಾದ ಫಿನ್​ಟೆಕ್ ಕಂಪನಿಗಳು ಭಾರತ್ ಬಿಲ್ ಪೇ ಸಿಸ್ಟಂ ಅನ್ನು ಅಳವಡಿಸಿವೆ. ಈಗ ಬಿಬಿಪಿಎಸ್ ಅಳವಡಿಸದ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಬಿಲ್​ಗಳನ್ನು ಫೋನ್ ಪೆ, ಕ್ರೆಡ್ ಮೊದಲಾದೆಡೆ ಪಾವತಿಸಲು ಆಗುವುದಿಲ್ಲ.

ಬಿಬಿಪಿಎಸ್ ಅನ್ನು ಅಳವಡಿಸಿಕೊಳ್ಳಲು ಇನ್ನೂ 90 ದಿನ ಕಾಲಾವಕಾಶ ಕೊಡುವಂತೆ ಪೇಮೆಂಟ್ ಉದ್ಯಮ ಮನವಿ ಮಾಡಿದೆ. ಆರ್​ಬಿಐನಿಂದ ಇದಕ್ಕೆ ಒಪ್ಪಿಗೆ ಸಿಕ್ಕರೂ ಸಿಗಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಆರ್​ಬಿಐ ಒಪ್ಪದಿದ್ದರೆ ಜುಲೈ 1ರಿಂದ ಎಚ್​ಡಿಎಫ್​ಸಿ, ಎಕ್ಸಿಸ್ ಬ್ಯಾಂಕ್ ಮೊದಲಾದ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಬಿಲ್​ಗಳನ್ನು ಫೋನ್ ಪೆ, ಕ್ರೆಡ್ ಪ್ಲಾಟ್​ಫಾರ್ಮ್​ಗಳಲ್ಲಿ ಪಾವತಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: 53ನೇ ಜಿಎಸ್​ಟಿ ಕೌನ್ಸಿಲ್ ಸಭೆ ಮುಖ್ಯಾಂಶಗಳು; ಬದಲಾದ ತೆರಿಗೆಗಳ ಪಟ್ಟಿ

ಕುತೂಹಲ ಎಂದರೆ ಭಾರತ್ ಬಿಲ್ ಪೇ ಸಿಸ್ಟಂ ಮುಖಾಂತರ ನಡೆಯುವ ಹಣ ಪಾವತಿ ಮೊತ್ತದಲ್ಲಿ ಕ್ರೆಡಿಟ್ ಕಾರ್ಡ್ ಪಾಲು ಶೇ. 1.5ರಷ್ಟು ಮಾತ್ರ. ವಿದ್ಯುತ್ ಬಿಲ್, ಫಾಸ್​ಟ್ಯಾಗ್ ಮೊದಲಾದವುಗಳ ಪಾವತಿಯೇ ಅತಿ ಹೆಚ್ಚು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ