ಬಜೆಟ್​ನಲ್ಲಿ ತೆರಿಗೆ ಪಾವತಿದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸುವ ಸಾಧ್ಯತೆ; ಏನಿದು ಡಿಡಕ್ಷನ್?

Union Budget 2024, standard deduction: ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ತೆರಿಗೆ ಪರಿಷ್ಕರಣೆ ಮಾಡಬಹುದು ಎನ್ನುವ ಸುದ್ದಿ ಮಧ್ಯೆ ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸಬಹುದು ಎನ್ನುವ ಸುದ್ದಿ ದಟ್ಟವಾಗಿದೆ. ಟ್ಯಾಕ್ಸ್ ಸ್ಲ್ಯಾಬ್​ನಲ್ಲಿ ಬದಲಾವಣೆ ತರದೆಯೇ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಮಾತ್ರವೇ ಬದಲಾಯಿಸಬಹುದು ಎನ್ನಲಾಗುತ್ತಿದೆ. ಸದ್ಯಕ್ಕೆ 50,000 ರೂನಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ನೀಡಲಾಗುತ್ತಿದೆ. ತೆರಿಗೆಗೆ ಅರ್ಹವಾದ ಆದಾಯವನ್ನು ಈ ಸ್ಟ್ಯಾಂಡರ್ಡ್ ಡಿಡಕ್ಷನ್ ಕಡಿಮೆ ಮಾಡುತ್ತದೆ.

ಬಜೆಟ್​ನಲ್ಲಿ ತೆರಿಗೆ ಪಾವತಿದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸುವ ಸಾಧ್ಯತೆ; ಏನಿದು ಡಿಡಕ್ಷನ್?
ಬಜೆಟ್
Follow us
|

Updated on:Jun 24, 2024 | 6:20 PM

ನವದೆಹಲಿ, ಜೂನ್ 24: ಮಧ್ಯಮ ವರ್ಗದವರಿಗೆ ಸ್ವಲ್ಪ ಖುಷಿ ಸಿಗುವ ರೀತಿಯಲ್ಲಿ ಆದಾಯ ತೆರಿಗೆ ಕ್ರಮದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಮುಂಬರುವ ಬಜೆಟ್​ನಲ್ಲಿ (Union Budget 2024) ಇದನ್ನು ಘೋಷಿಸಬಹುದು ಎನ್ನಲಾಗುತ್ತಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ನ್ಯೂ ಟ್ಯಾಕ್ಸ್ ರೆಜಿಮೆಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction) ಮಿತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಬದಲಾವಣೆ ಮಾಡದೇ ಇರಲು ಹಣಕಾಸು ಸಚಿವಾಲಯ ನಿರ್ಧರಿಸಿದೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ (New Tax Regime) ಸದ್ಯ 50,000 ರೂನಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಲಭ್ಯ ಇದೆ. ಇದನ್ನು ಎಷ್ಟು ಹೆಚ್ಚಿಸಲಾಗುತ್ತದೆ ಎಂಬುದು ಗೊತ್ತಾಗಿಲ್ಲ.

ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದರೆ ಏನು?

ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಡಿಡಕ್ಷನ್ ಪದಬಳಕೆ ಕೇಳಿರಬಹುದು. ತೆರಿಗೆಗೆ ಅರ್ಹವಾದ ಆದಾಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಈ ಡಿಡಕ್ಷನ್. ನಿಮ್ಮ ವಾರ್ಷಿಕ ಆದಾಯ 8,00,000 ರೂ ಇದೆ ಎಂದಿಟ್ಟುಕೊಳ್ಳಿ. ಇದರಲ್ಲಿ 50,000 ರೂನಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಕಳೆದರೆ ಉಳಿಯುವ 7,50,000 ರೂ ಮೊತ್ತವು ಟ್ಯಾಕ್ಸಬಲ್ ಇನ್ಕಮ್ ಆಗುತ್ತದೆ.

ಈ ಟ್ಯಾಕ್ಸಬಲ್ ಇನ್ಕಮ್​ಗೆ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ತೆರಿಗೆಗಳು ಅನ್ವಯ ಆಗುತ್ತದೆ. ಟ್ಯಾಕ್ಸಬಲ್ ಇನ್ಕಮ್ 7 ಲಕ್ಷ ರೂಗಿಂತ ಕಡಿಮೆ ಇದ್ದರೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಅಂದರೆ ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ನಿಮ್ಮ ವಾರ್ಷಿಕ ಆದಾಯ ಏಳೂವರೆ ಲಕ್ಷ ರೂ ಇದ್ದಲ್ಲಿ ತೆರಿಗೆ ಕಟ್ಟುವ ಅಗತ್ಯ ಬರುವುದಿಲ್ಲ.

ಇದನ್ನೂ ಓದಿ: 15 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಕಡಿತಗೊಳಿಸಲಾಗುತ್ತಾ? ಇಲ್ಲಿದೆ ಡೀಟೇಲ್ಸ್

ತೆರಿಗೆಗೆ ಅರ್ಹವಾದ ಆದಾಯ ಏಳು ಲಕ್ಷಕ್ಕಿಂತ ಮೇಲ್ಪಟ್ಟು ಇದ್ದಲ್ಲಿ ಹೊಸ ಟ್ಯಾಕ್ಸ್ ರೆಜಿಮೆ ಪ್ರಕಾರ ಈ ಕೆಳಗಿನಂತೆ ಟ್ಯಾಕ್ಸ್ ಸ್ಲ್ಯಾಬ್ ದರಗಳು ಅನ್ವಯ ಆಗುತ್ತದೆ:

  • ಮೂರು ಲಕ್ಷ ರೂವರೆಗೆ ತೆರಿಗೆ ವಿನಾಯಿತಿ
  • 3ರಿಂದ 6 ಲಕ್ಷ ರೂವರೆಗಿನ ಆದಾಯ: ಶೇ. 5 ತೆರಿಗೆ
  • 6ರಿಂದ 9 ಲಕ್ಷ ರೂವರೆಗಿನ ಆದಾಯ: ಶೇ. 10
  • 9ರಿಂದ 12 ಲಕ್ಷ ರೂವರೆಗಿನ ಆದಾಯ: ಶೇ. 15
  • 12ರಿಂದ 15 ಲಕ್ಷ ರೂವರೆಗಿನ ಆದಾಯ: ಶೇ. 20
  • 15 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ: ಶೇ. 30ರಷ್ಟು ತೆರಿಗೆ

ಇದನ್ನೂ ಓದಿ: Budget Glossary: ಎಕ್ಸೆಸ್ ಗ್ರಾಂಟ್, ಇನ್​ಫ್ಲೇಶನ್, ಡೆಫಿಸಿಟ್ ಇತ್ಯಾದಿ ಬಜೆಟ್ ಪದಗಳ ಅರ್ಥ ತಿಳಿಯಿರಿ

ಉದಾಹರಣೆಗೆ, ಟ್ಯಾಕ್ಸಬಲ್ ಇನ್ಕಮ್ 8 ಲಕ್ಷ ರೂ ಇದ್ದಲ್ಲಿ ಹೀಗೆ ದರಗಳಿರುತ್ತವೆ…

  • ಮೂರು ಲಕ್ಷ ರೂವರೆಗೆ: ಶೂನ್ಯ ತೆರಿಗೆ
  • 3ರಿಂದ 6 ಲಕ್ಷ ರೂ ಶೇ. 5 ತೆರಿಗೆ: 15,000 ರೂ
  • 6ರಿಂದ 8 ಲಕ್ಷ ರೂ ಶೇ. 10 ತೆರಿಗೆ: 20,000 ರೂ

ನಿಮ್ಮ ಟ್ಯಾಕ್ಸಬಲ್ ಇನ್ಕಮ್ 8 ಲಕ್ಷ ರೂ ಆಗಿದ್ದರೆ ಒಟ್ಟು ನೀವು 35,000 ರೂ ತೆರಿಗೆ ಬಾಧ್ಯತೆ ಹೊಂದಿರುತ್ತೀರಿ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Mon, 24 June 24

ತಾಜಾ ಸುದ್ದಿ