ED Raids Paytm: ಪೇಟಿಎಂ, ರೇಜರ್ಪೇ, ಕ್ಯಾಶ್ಫ್ರೀ ಕಂಪನಿಗಳ ಬೆಂಗಳೂರು ಕಚೇರಿಗಳ ಮೇಲೆ ಇಡಿ ದಾಳಿ
ಚೀನೀ ಪ್ರಜೆಗಳ ಮಾಲೀಕತ್ವದಲ್ಲಿರುವ ಕಂಪನಿಗಳು ನಡೆಸುತ್ತಿರುವ ಮೋಸಜಾಲಕ್ಕೆ ಸಂಬಂಧಿಸಿದಂತೆ ಇಡಿ ನಡೆಸುತ್ತಿರುವ ತನಿಖೆಯ ಭಾಗವಾಗಿ ಅಧಿಕಾರಿಗಳು ಈ ಕಂಪನಿಗಳ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.
ಬೆಂಗಳೂರು: ಆನ್ಲೈನ್ ಪೇಮೆಂಟ್ ಗೇಟ್ವೇ ಸೇವೆ ಒದಗಿಸುವ ಪೇಟಿಎಂ (Paytm), ರೇಜರ್ಪೇ (Razorpay) ಮತ್ತು ಕ್ಯಾಶ್ಫ್ರೀ (Cashfree) ಕಂಪನಿಗಳ 9 ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (Enforcement Directorate – ED) ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ಚೀನೀ ಪ್ರಜೆಗಳ ಮಾಲೀಕತ್ವದಲ್ಲಿರುವ ಕಂಪನಿಗಳು ನಡೆಸುತ್ತಿರುವ ಮೋಸಜಾಲಕ್ಕೆ ಸಂಬಂಧಿಸಿದಂತೆ ಇಡಿ ನಡೆಸುತ್ತಿರುವ ತನಿಖೆಯ ಭಾಗವಾಗಿ ಅಧಿಕಾರಿಗಳು ಈ ಕಂಪನಿಗಳ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್ಪ್ರೆಸ್’ ಜಾಲತಾಣ ವರದಿ ಮಾಡಿದೆ. ಈ ಪೈಕಿ ಕೆಲ ಕಂಪನಿಗಳು ಬೆಟಿಂಗ್ ದಂಧೆಗೆ ಕುಮ್ಮಕ್ಕು ನೀಡುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಂಥ ದಂಧೆ ನಡೆಸುವ ಆ್ಯಪ್ಗಳಿಗೆ ಈ ಕಂಪನಿಗಳು ಗೇಟ್ವೇ ಮೂಲಕ ನೆರವಾಗುತ್ತಿದ್ದವು ಎಂದು ದೂರಲಾಗಿದೆ. ದಾಳಿಯ ವೇಳೆ ಚೀನೀ ಪ್ರಜೆಗಳ ನಿಯಂತ್ರಣದಲ್ಲಿರುವ ಮರ್ಚೆಂಡ್ ಐಡಿ ಮತ್ತು ಬ್ಯಾಂಕ್ ಅಕೌಂಟ್ಗಳಲ್ಲಿದ್ದ ₹ 17 ಕೋಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.
ದಾಳಿ ಕುರಿತು ಪ್ರತಿಕ್ರಿಯಿಸಿರುವ ರೇಜರ್ಪೇ ಕಂಪನಿಯ ವಕ್ತಾರರು, ‘ನಮ್ಮ ಕೆಲ ಗ್ರಾಹಕರ ಬಗ್ಗೆ ಇಡಿ ತನಿಖೆ ನಡೆಯುತ್ತಿತ್ತು. ತನಿಖೆಯ ಭಾಗವಾಗಿ ಅಧಿಕಾರಿಗಳು ಕೆವೈಸಿ ಸೇರಿದಂತೆ ಕೆಲ ಮಾಹಿತಿ ಕೋರಿದ್ದರು. ಅಧಿಕಾರಿಗಳು ಕೋರಿದ ಎಲ್ಲ ಮಾಹಿತಿ ಒದಗಿಸಿದ್ದೇವೆ. ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದೇವೆ’ ಎಂದು ತಿಳಿಸಿದ್ದಾರೆ. ಪೇಟಿಎಂ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿ, ‘ಇಡಿ ಅಧಿಕಾರಿಗಳ ವಿನಂತಿಯಂತೆ, ಅವರು ಕೋರಿರುವ ಎಲ್ಲ ಮಾಹಿತಿ ಒದಗಿಸಿದ್ದೇವೆ. ಮುಂದೆಯೂ ನಾವು ನೆಲದ ಕಾನೂನುಗಳಿಗೆ ಬದ್ಧರಾಗಿರುತ್ತೇವೆ. ತನಿಖೆಗೆ ಸಹಕರಿಸುತ್ತೇವೆ’ ಎಂದು ಹೇಳಿದ್ದಾರೆ. ದಾಳಿ ಕುರಿತು ಪ್ರತಿಕ್ರಿಯಿಸಿರುವ ಕ್ಯಾಶ್ಫ್ರೀ ವಕ್ತಾರರು, ‘ನಾವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಯಮಗಳನ್ನು ಪಾಲಿಸುತ್ತಿದ್ದೇವೆ. ಇಡಿ ಅಧಿಕಾರಿಗಳು ಕೋರಿರುವ ಎಲ್ಲ ವಿವರಗಳನ್ನೂ ಒದಗಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ತನಿಖೆಗೆ ಸಹಕರಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಮಾರ್ಗಸೂಚಿ ಉಲ್ಲಂಘಿಸಿ ಒತ್ತಾಯದಿಂದ ಸಾಲ ನೀಡುವ, ಸಾಲ ವಸೂಲಿಗೆ ಅಕ್ರಮ ಮಾರ್ಗಗಳನ್ನು ಅನುಸರಿಸುವ ಕೆಲ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (Non-Banking Financial Companies – NBFCs) ಕಾರ್ಯಚಟುವಟಿಕೆ ಮೇಲೆ ಜಾರಿ ನಿರ್ದೇಶನಾಲಯವು ಕಣ್ಣಿಟ್ಟಿತ್ತು. ಈ ಸಂಬಂಧ ಇಡಿ ತನಿಖೆ ಆರಂಭವಾದ ನಂತರ ಹಲವ ಕಂಪನಿಗಳು ಕಾರ್ಯಚಟುವಟಿಕೆ ಸ್ಥಗಿತಗೊಳಿಸಿ, ಹಣವನ್ನು ಫಿನ್ಟೆಕ್ ಕಂಪನಿಗಳ ಮೂಲಕ ಕ್ರಿಪ್ಟೊಕರೆನ್ಸಿ ಖರೀದಿಸುವ ಮೂಲಕ ಹೊರದೇಶಕ್ಕೆ ರವಾನಿಸಿದ್ದವು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇದೀಗ ಕ್ರಿಪ್ಟೊ ಎಕ್ಸ್ಚೇಂಜ್ ವಾಝಿರ್ಎಕ್ಸ್ ಕಚೇರಿಯ ಮೇಲೆ ದಾಳಿ ನಡೆಸಿ, ವಿವಿಧ ಖಾತೆಗಳಲ್ಲಿದ್ದ ₹ 64 ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಎನ್ಬಿಎಫ್ಸಿಗಳು ಗ್ರಾಹಕರಿಂದ ಅತಿಹೆಚ್ಚಿನ ಬಡ್ಡಿದರ ವಸೂಲು ಮಾಡಲು ಅಕ್ರಮ ಮಾರ್ಗ ಅನುಸರಿಸಿವೆ. ಕಳೆದ ಆಗಸ್ಟ್ 2020ರಲ್ಲಿ ಏಜೆನ್ಸಿಯು ಚೀನಾದ ಕಂಪನಿಗಳಿಗೆ ಸೇರಿದ್ದ ₹ 47 ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಕಂಪನಿಗಳು ಅಕ್ರಮ ಬೆಟಿಂಗ್ ಮತ್ತು ಲೋನ್ ಆ್ಯಪ್ಗಳನ್ನು ನಡೆಸುತ್ತಿದ್ದವು. ಕಂಪನಿಗೆ ಸೇರಿದ್ದ 15 ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಇಡಿ ದೆಹಲಿ, ಗುರುಗ್ರಾಮ, ಮುಂಬೈ ಮತ್ತು ಪುಣೆಯಲ್ಲಿದ್ದ ಕಂಪನಿಯ ನಿರ್ದೇಶಕರು, ಸಿಎಗಳನ್ನು ವಿಚಾರಣೆಗೆ ಒಳಪಡಿಸಿತ್ತು.
ಆನ್ಲೈನ್ ಪೇಮೆಂಟ್ ಗೇಟ್ವೇಗಳು ಸಂಶಯಾಸ್ಪದ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಸಕಾಲದಲ್ಲಿ ಮಾಹಿತಿ ಒದಗಿಸುತ್ತಿಲ್ಲ. ಹೀಗಾಗಿಯೇ ಅಕ್ರಮ ಹಣ ವರ್ಗಾವಣೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇಡಿ ಹೇಳಿದೆ. ಕೆಲ ಚೀನಿ ಪ್ರಜೆಗಳು ಭಾರತದಲ್ಲಿ ಇಲ್ಲಿನ ಸಿಎಗಳ ನೆರವಿನಿಂದ ಹಲವು ಕಂಪನಿಗಳನ್ನು ಹುಟ್ಟುಹಾಕಿ, ಬೇನಾಮಿ ನಿರ್ದೇಶಕರನ್ನು ನೇಮಿಸಿದ್ದಾರೆ. ನಂತರ ಅವರು ಭಾರತಕ್ಕೆ ಬಂದು ನಿರ್ದೇಶಕ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ.
ಎಚ್ಎಸ್ಬಿಸಿ ಬ್ಯಾಂಕ್ನಲ್ಲಿ ಖಾತೆಗಳನ್ನು ತೆರೆಯಲು ಕೆಲ ಸ್ಥಳೀಯರನ್ನು ಬಳಸಿಕೊಳ್ಳಲಾಗುತ್ತಿದೆ. ಇವರು ನಂತರ ಪೇಟಿಎಂ, ಕ್ಯಾಶ್ಫ್ರೀ, ರೇಜರ್ಪೇ ಆ್ಯಪ್ಗಳಲ್ಲಿ ಆನ್ಲೈನ್ ವ್ಯಾಲೆಟ್ ತೆರೆದು ವಿದೇಶಗಳಿಗೆ ಹಣ ವರ್ಗಾಯಿಸಲಾಗುತ್ತಿದೆ ಎಂದು ಇಡಿ ಹೇಳಿದೆ. ಇಲ್ಲಿ ಬಡ್ಡಿ ವ್ಯವಹಾರ ನಡೆಸುವ ಚೀನಿ ಕಂಪನಿಗಳು ಲಾಭವನ್ನು ತಮ್ಮ ದೇಶಕ್ಕೆ ಕೊಂಡೊಯ್ಯುತ್ತಿವೆ. ಅಕ್ರಮ ಬೆಟಿಂಗ್ಗೂ ಉತ್ತೇಜನ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಹಲವು ವೆಬ್ಸೈಟ್ಗಳನ್ನು ಆರಂಭಿಸಲಾಗಿದೆ ಎಂದು ಇಡಿ ಹೇಳಿದೆ. ಬೆಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ 18 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Published On - 8:17 am, Sun, 4 September 22