ನವದೆಹಲಿ, ಡಿಸೆಂಬರ್ 2: ಮಹತ್ವದ ಬೆಳವಣಿಗೆಯೊಂದರಲ್ಲಿ ಇಪಿಎಫ್ಒ ಸಂಸ್ಥೆಯ ಕೇಂದ್ರೀಯ ಟ್ರಸ್ಟೀ ಮಂಡಳಿ (ಸಿಬಿಟಿ) ಹೊಸ ಹೂಡಿಕೆ ನೀತಿಗೆ ಅನುಮೋದನೆ ನೀಡಿದೆ. ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳಲ್ಲಿ (ಇಟಿಎಫ್) ಮಾಡಿದ ಹೂಡಿಕೆಯನ್ನು ರಿಟರ್ನ್ ಪಡೆಯುವಾಗಿನ ನೀತಿಯಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಇಟಿಫ್ಗಳಿಂದ ಬಂದ ಹಣದಲ್ಲಿ ಶೇ. 50ರಷ್ಟು ಮೊತ್ತವನ್ನು ಕೇಂದ್ರದ ಸರ್ಕಾರಿ ಉದ್ದಿಮೆಗಳಲ್ಲಿ ಮತ್ತು ಭಾರತ್ 22 ಫಂಡ್ಗಳಲ್ಲಿ ಮರು ಹೂಡಿಕೆ ಮಾಡಬೇಕೆನ್ನುವುದು ಸೇರಿದಂತೆ ವಿವಿಧ ಮಾರ್ಗಸೂಚಿಗಳಿಗೆ ಇಪಿಎಫ್ಒನ ಸೆಂಟ್ರಲ್ ಬೋರ್ಡ್ ಅಫ್ ಟ್ರಸ್ಟೀಸ್ ಅನುಮೋದನೆ ನೀಡಿರುವುದು ತಿಳಿದುಬಂದಿದೆ.
ಶೇ. 50ರಷ್ಟನ್ನು ಸಿಪಿಎಸ್ಇ ಮತ್ತು ಭಾರತ್ 22 ಫಂಡ್ಗಳಿಗೆ ಹಾಕಿದಲ್ಲಿ ಅಲ್ಲಿ ಕನಿಷ್ಠ ಹೂಡಿಕೆ ಅವಧಿ 5 ವರ್ಷ ಇರಬೇಕು. ಹಾಗೆಯೇ, ಉಳಿದ ಶೇ. 50ರಷ್ಟು ಹಣವನ್ನು ಗವರ್ನ್ಮೆಂಟ್ ಬಾಂಡ್, ಕಾರ್ಪೊರೇಟ್ ಬಾಂಡ್ ಇತ್ಯಾದಿ ಇತರ ಹಣಕಾಸು ಸಾಧನಗಳನ್ನು ಹೂಡಿಕೆ ಮಾಡಲಾಗುತ್ತದೆ ಎಂದು ಫೈನಾನ್ಷಿಯಲ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಕ್ಯೂಐಪಿ ಮೂಲಕ ಈ ವರ್ಷ ಒಂದು ಲಕ್ಷ ಕೋಟಿ ರೂ ದಾಟಿದ ಕಾರ್ಪೊರೇಟ್ ಫಂಡಿಂಗ್; ಇತಿಹಾಸದಲ್ಲೇ ಇದು ದೊಡ್ಡ ಮೊತ್ತ
1952ರ ಇಪಿಎಫ್ ಸ್ಕೀಮ್ಗೆ ಮಹತ್ವದ ತಿದ್ದುಪಡಿ ತರುವ ಕಾರ್ಯಕ್ಕೂ ಸಿಬಿಟಿಯಿಂದ ಅನುಮೋದನೆ ಸಿಕ್ಕಿದೆ. ಈಗಿರುವ ನಿಯಮದ ಪ್ರಕಾರ ಯಾವುದೇ ತಿಂಗಳಲ್ಲಿ 24ನೇ ತಾರೀಖಿನವರೆಗೆ ಸೆಟಲ್ ಆದ ಕ್ಲೇಮ್ಗಳಲ್ಲಿ ಹಿಂದಿನ ತಿಂಗಳವರೆಗೆ ಮಾತ್ರವೇ ಬಡ್ಡಿ ನೀಡಲಾಗುತ್ತದೆ. ಉದಾಹರಣೆಗೆ, ಜುಲೈ 24ಕ್ಕೆ ನಿಮ್ಮ ಕ್ಲೇಮ್ ಸೆಟಲ್ ಆಗಿದ್ದಲ್ಲಿ ಜೂನ್ವರೆಗೆ ಮಾತ್ರ ಬಡ್ಡಿ ಸಿಗುತ್ತದೆ. ಜುಲೈ ತಿಂಗಳು ಲೆಕ್ಕಕ್ಕೆ ಇರುವುದಿಲ್ಲ.
ತಿದ್ದುಪಡಿ ಬಳಿಕ ಬರಲಿರುವ ಹೊಸ ನಿಯಮ ಪ್ರಕಾರ ನಿಮಗೆ ಕ್ಲೇಮ್ ದಿನದವರೆಗೂ ಬಡ್ಡಿ ಸಿಗುತ್ತದೆ. ಇದರಿಂದ ಇಪಿಎಫ್ ಸದಸ್ಯರಿಗೆ ತುಸು ಅನುಕೂಲವಾಗುತ್ತದೆ.
ಇದನ್ನೂ ಓದಿ: ಆದಾಯ ತೆರಿಗೆ ಪಾವತಿ: ಮಹಿಳೆಯರ ಸಂಖ್ಯೆಯಲ್ಲಿ ಶೇ. 25ರಷ್ಟು ಏರಿಕೆ; ಎರಡು ಕೋಟಿಗೂ ಅಧಿಕ ಮಹಿಳೆಯರಿಂದ ಐಟಿಆರ್ ಸಲ್ಲಿಕೆ
ಮತ್ತೊಂದು ಮಹತ್ವದ ಕ್ರಮದಲ್ಲಿ ಇಪಿಎಫ್ಒನ ಸಿಬಿಟಿಯು ಅಮ್ನೆಸ್ಟಿ ಸ್ಕೀಮ್ ಜಾರಿಗೊಳಿಸಲು ಶಿಫಾರಸು ಮಾಡಿದೆ. ಅಮ್ನೆಸ್ಟಿ ಎಂದರೆ ಕ್ಷಮಾದಾನ. ಇಪಿಎಫ್ಒನ ನಿಯಮಗಳನ್ನು ಉಲ್ಲಂಘಿಸಿದ ಅಥವಾ ಹಿಂದಿನ ತಪ್ಪುಗಳನ್ನು ಸರಿಪಡಿಸಲು ಮುಂದಾಗುವ ಕಂಪನಿಗಳಿಗೆ (ಉದ್ಯೋಗದಾತರು) ಸ್ವಯಂ ಆಗಿ ಆ ಮಾಹಿತಿ ಅಥವಾ ವಿವರ ಬಹಿರಂಗಪಡಿಸಲು ಅವಕಾಶ ನೀಡಬೇಕು. ತಪ್ಪು ತಿದ್ದುಕೊಳ್ಳಲು ಮುಂದಾಗುವ ಇಂಥ ಕಂಪನಿಗಳ ಮೇಲೆ ಕಾನೂನು ಕ್ರಮ ಜರುಗಿಸಬಾರದು ಅಥವಾ ದಂಡ ವಿಧಿಸಬಾರದು. ಇದು ಸಿಬಿಟಿ ಶಿಫಾರಸು ಮಾಡಿರುವ 2024ರ ಇಪಿಎಫ್ಒ ಅಮ್ನೆಸ್ಟಿ ಸ್ಕೀಮ್ನ ಉದ್ದೇಶವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ